(ಪತ್ರ ಹತ್ತೊಂಬತ್ತು) ಮಗಳೇ,
Letters to Daughter: ಮಗಳೇ, ನಾವು ಕೊಂಚ ಎಡವಿದರೂ ಬದುಕು ಎಡವುತ್ತದೆ ಅಂತ ಗೊತ್ತು ಮಗೂಶಾಲೆಗೆ ರಜೆಯಿರುವಾಗ ಊರಿಗೆ ಹೋಗುವುದೊಂದು ಸಂಭ್ರಮ. ದೊಡ್ಡಮ್ಮನ ಮನೆಗೆ ಹೋಗಿದ್ದೀ. ಅದೊಂದು ರೀತಿಯಲ್ಲಿ ಅಜ್ಜಿಮನೆಯೇ.. ಬಹುಶಃ ಕಣ್ಮಣಿ ಅಜ್ಜಿ, ಮರೀಲು ಅಜ್ಜಿ ಇಬ್ಬರೂ ಇದ್ದಾಗ ನಿಮಗೆಲ್ಲರಿಗೂ ಅದು ಅಜ್ಜಿಮನೆಯೇ ಆಗಿತ್ತು. ಈಗ ಇಬ್ಬರೂ ಅಜ್ಜಿಯರಿಲ್ಲವಾದರೂ ಅದೇ ನೆನಪಿನಲ್ಲಿ ನೀನು ಪುತ್ತೂರಿಗೆ ಹೋಗುತ್ತೇನೆ ಅಂದಾಗ ಮನಸ್ಸಿಗೆ ಸಮಾಧಾನವಾಯ್ತು.
ಇದನ್ನೂ ಓದಿ: Letters to Daughter: ಮಗಳೇ, ಮಕ್ಕಳ ಸಂಭ್ರಮದ ನಗೆಯಿದ್ದರೆ ಮಾತ್ರ ಮನೆಯೆಲ್ಲ ಬೆಳಕಿರುತ್ತದೆ ಮಗೂ
ಮಗಳೇ, ಈ ಪತ್ರದಲ್ಲಿ(Letters to Daughter) ನಿನಗೆ ಹೇಳಬೇಕಿರುವ ವಿಷಯಗಳು ಸ್ವಲ್ಪ ಗಹನವಾದುದೇ ಹೌದು. ಕೋವಿಡ್ನ ನೆಪದಲ್ಲಿ ಎಲ್ಲ ಮಕ್ಕಳಿಗೂ ಅನಿವಾರ್ಯವಾಗಿ ಅಪ್ಪ ಅಮ್ಮ ಮೊಬೈಲು ಕೊಡಿಸಬೇಕಾಯ್ತು, ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿಕೊಡಬೇಕಾಯ್ತು. ಯಾವುದೇ ಕಾರಣಕ್ಕೂ ನಮ್ಮ ಮಕ್ಕಳಿಗೆ ಕೊರತೆ ಕಾಡಬಾರದು ಎಂಬುದು ನಮ್ಮ ತಲೆಮಾರಿನ ಪೋಷಕರ ಮನಸ್ಥಿತಿ. ಆದರೆ ಮಗೂ, ದಿನಗಳುರುಳಿ ಲಾಕ್ಡೌನ್ ತೆರವಾಗಿ ಶಾಲೆಗೆ ಹೋಗಲಾರಂಭಿಸಿದಾಗಲೂ ಮೊಬೈಲ್ ಬೇಡವೆಂಬ ಪರಿಸ್ಥಿತಿ ಇಲ್ಲ.
ಶಿಕ್ಷಕರಾದ ನಮಗೂ ಮಕ್ಕಳಿಗೆ ತಲುಪಿಸಬೇಕಿರುವ ನೋಟ್ಸ್ಗಳನ್ನು ಪಿಡಿಎಫ್ ರೂಪದಲ್ಲಿ ಆಯಾ ತರಗತಿ ಗ್ರೂಪುಗಳಿಗೆ ಕಳುಹಿಸಿಬಿಡುವುದು ಸುಲಭದ ದಾರಿಯಾಯ್ತು. ಆದರೆ ಮಗೂ ಗೊತ್ತಿಲ್ಲದೆಯೇ ಶಿಕ್ಷಣ ವ್ಯವಸ್ಥೆಯೇ ಮಕ್ಕಳನ್ನು ಮೊಬೈಲ್ ವ್ಯಸನಿಗಳನ್ನಾಗಿ ಮಾಡಿತು. ಕೆಲವು ವರ್ಷಗಳ ಹಿಂದೆ ವಿಡಿಯೋ ಗೇಮ್ ಗಳು ಬಂದಾಗ ಎಲ್ಲರೂ ಆತಂಕ ಪಟ್ಟರು, ಮಕ್ಕಳ ಕಣ್ಣು, ಆರೋಗ್ಯ ಏನಾದೀತು ಅಂತ. ಈಗ ನೋಡಿದರೆ ಮೊಬೈಲಿನದ್ದು ಇನ್ನೂ ಹತ್ತುಪಟ್ಟು ಹೆಚ್ಚಿನ ಸಮಸ್ಯೆ.
ಇದನ್ನೂ ಓದಿ: Letters to Daughter: ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ಹೆತ್ತವರು ಸಣ್ಣವರಾಗುತ್ತಾ ಸಾಗುವ ಪರಿಯಿದು
ನಾವು ಕೊಂಚ ಎಡವಿದರೂ ಬದುಕು ಎಡವುತ್ತದೆ ಅಂತ ಗೊತ್ತು ಮಗೂ. ಅದಕ್ಕೇ ಪದೇಪದೇ ಎಚ್ಚರಿಸುವುದು. ಮಗಳೇ, ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ತಡಕಾಡುವುದು, ಮಲಗುವುದಕ್ಕೆ ಮೊದಲು ಅರ್ಧಗಂಟೆ ಮೊಬೈಲು ನೋಡುವುದು ಎಲ್ಲವೂ ಮೊಬೈಲ್ನ್ನು ನಾವು ಚಟವಾಗಿ ಹಚ್ಚಿಕೊಂಡಿರುವುದರ ಸಂಕೇತವAತೆ. ಎಲ್ಲರೂ ಹೀಗೆಯೇ ಆಗಿದ್ದೇವೆಯೋ ಏನೋ..
ಆದರೆ ಮಗೂ ಅಪ್ಪ ಅಮ್ಮನಿಗೆ ನಾವು ಕೆಲಸ ಮಾಡುವ ಸಂಸ್ಥೆಯಿಂದ ಏನಾದರೂ ಸೂಚನೆಗಳಿವೆಯಾ ಅಂತ ಬೆಳಗ್ಗೆ ನೋಡುವುದು ಅನಿವಾರ್ಯ. ಅದಕ್ಕಾಗಿ ಎರಡು ಮೂರು ನಿಮಿಷಗಳಲ್ಲಿ ಔಪಚಾರಿಕವಾದ ಗ್ರೂಪುಗಳನ್ನು ಚೆಕ್ ಮಾಡಿಕೊಳ್ಳದೇ ವಿಧಿಯಿಲ್ಲ. ಶಾಲೆಯಿರುವ ದಿನಗಳಲ್ಲಿ ನಿಮ್ಮ ತರಗತಿಯ ಗ್ರೂಪುಗಳೂ ಸೇರಿದಂತೆ ಗಮನಿಸಬೇಕಾಗುತ್ತದೆ.
ಹಾಗೆಂದು ಅಷ್ಟು ನೋಡಿದ ಬಳಿಕವೂ ಅದರಲ್ಲೇ ಕಳೆದುಹೋದರೆ ಚಿಂತಿಸಬೇಕಾದ ಸಂಗತಿಯೇ. ಭಯೋತ್ಪಾದನೆ, ರಾಜಕಾರಣ ಅಂತೆಲ್ಲ ಹಿಂದಿನವರು ಮಾತಾಡುತ್ತಿದ್ದ ಹಾಗೆಯೇ ಇಂದು ನಮ್ಮ ತಲೆಮಾರಿನವರು ಮೊಬೈಲೇ ಬಹುದೊಡ್ಡ ಸಮಸ್ಯೆಯಾಗಿ ಎದ್ದುನಿಂತಿರುವುದರ ಬಗ್ಗೆ ಮಾತಾಡುತ್ತೇವೆ.
ಇದನ್ನೂ ಓದಿ: Letters to Daughter: ಮಗಳೇ, ಬಣ್ಣಗಳೊಂದಿಗಿನ ನಿನ್ನ ನಂಟು ಪ್ರಾರಂಭವಾದಾಗ ನಿನಗಿನ್ನೂ ಒಂದೂವರೆ ವರ್ಷ
ನೀವು ಅಂತಲ್ಲ ಮಗೂ, ದೊಡ್ಡವರೇ ಆದರೂ ತಾವು ಮಾಡಬೇಕಾದ ಕೆಲಸ ಮಾಡದೇ, ಜ್ಞಾನಮಾರ್ಗವೆನಿಸಿದ ಪುಸ್ತಕಗಳನ್ನು ಓದದೇ ಮೊಬೈಲಿನ ರೀಲ್ಸುಗಳನ್ನು ನೋಡಿಕೊಂಡು ಸಮಯ ವ್ಯರ್ಥಮಾಡುವುದನ್ನು ಕಾಣುವಾಗ ಮನಸ್ಸಿಗೆ ಸಂಕಟವೆನಿಸುತ್ತದೆ. ಅದರಲ್ಲಿ ಕಲಿಯುವಂತಹ ಅಂಶಗಳು ಕೆಲವಿರಬಹುದು, ಇಲ್ಲವೆಂದಲ್ಲ, ಆದರೆ ಬೇಕಾದ್ದಕ್ಕಿಂತ ಕಳೆಯೇ ಹೆಚ್ಚು ಅಂತ ನನಗೆ ಯಾವಾಗಲೂ ಅನಿಸುತ್ತದೆ. ನಿಮಗಾದರೂ ಪದೇಪದೇ ಎಚ್ಚರಿಸುವುದು ಇದೇ ಭಯಕ್ಕೆ.
ಮತ್ತೆ ಎಷ್ಟೋ ಸಲ ಯಾರಿಗೋ ಅಗತ್ಯ ಕರೆ ಮಾಡಲೆಂದು ಮೊಬೈಲು ಕೈಗೆತ್ತಿಕೊಂಡಿರುತ್ತೇವೆ, ಅಷ್ಟರಲ್ಲಿ ವಾಟ್ಸಾಪ್ ನೋಟಿಫಿಕೇಷನ್ ಕಾಣಿಸುತ್ತದೆ. ಅದನ್ನು ಚೆಕ್ ಮಾಡುವಷ್ಟರಲ್ಲಿ ಫೇಸ್ಬುಕ್ಕಿಂದ ಇನ್ನೇನೋ ಸಂದೇಶ ಬರುತ್ತದೆ. ಅದನ್ನು ನೋಡುತ್ತೇವೆ. ಅಲ್ಲಿಗೆ ನಮಗಿದ್ದ ಬಿಡುವಿನ ಸಮಯ ಮುಗಿದೇ ಹೋಗುತ್ತದೆ. ನಮ್ಮಷ್ಟು ಪ್ರೌಢವಯಸ್ಸಿನವರಿಗೇ ಹೀಗಾಗುವಾಗ ಎಳೆಯ ಮಕ್ಕಳು ನೀವು. ನಿಮ್ಮ ಪರಿಸ್ಥಿತಿಯೇನು ಅಂತ ಯೋಚಿಸುತ್ತೇನೆ.
ಇದನ್ನೂ ಓದಿ: Letters to Daughter: ಮಗಳೇ, ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ
ಮಗೂ, ಒಳ್ಳೆಯ ದಾರಿಯಲ್ಲಿ ಸಾಗಬೇಕಾದರೆ ಅಡ್ಡಿ ಆತಂಕಗಳು ನೂರಾರು ಕಾಡುತ್ತವೆ. ನನ್ನ ಕೆಲವು ವಿದ್ಯಾರ್ಥಿಗಳು ಲಾಕ್ಡೌನ್ನ ಅವಧಿಯಲ್ಲಿ ತಮ್ಮಷ್ಟಕ್ಕೇ ದುಡಿಮೆಯ ದಾರಿ ಕಂಡುಕೊಂಡವರಿದ್ದಾರೆ. ತಿಂಗಳಿಗೆ ಒಂದೆರಡು ಲಕ್ಷ ಆದಾಯ ಬರುವಂತೆ ಅವರ ಯುಟ್ಯೂಬ್ ಚಾನೆಲ್ ಬೆಳೆದಿದೆ. ಸಂತೋಷವೇ. ಆದರೆ ಅಷ್ಟರ ನಡುವೆಯೂ ವಿದ್ಯೆ ಕಳೆದುಹೋಗುವಂಥ ಸ್ಥಿತಿ ಬರಬಾರದು ಎಂಬುದಷ್ಟೇ ಎಚ್ಚರಿಕೆ.
ಮಗಳೇ, ಎಲ್ಲದಕ್ಕಿಂತ ಹೆಚ್ಚು ನಿಮ್ಮ ವಯಸ್ಸಿನ ಮಕ್ಕಳನ್ನು ಸೆಳೆಯುವುದು ರೀಲ್ಸ್ ಗಳು. ಅದನ್ನು ಮಾಡುವವರಿಗೆ ತಮ್ಮನ್ನು ಹೆಚ್ಚು ಮಂದಿ ಫಾಲೋ ಮಾಡಬೇಕು, ಆ ಮೂಲಕ ತಮಗೆ ಆದಾಯ ಬರಬೇಕು ಎಂಬುದಷ್ಟೇ ಗುರಿಯಿರುತ್ತದೆ. ಬೇಕಾದ್ದೋ ಬೇಡದ್ದೋ ಎಲ್ಲವನ್ನೂ ಮಾಡುತ್ತಾರೆ. ಒಂದು ಬಾರಿ ಅಂಥದ್ದೊಂದು ರೀಲ್ ನ ಮೇಲೆ ಕ್ಲಿಕ್ ಮಾಡಿದೆವೋ ಮತ್ತೆ ಅಂಥದ್ದೇ ಅಣಬೆಗಳಂತೆ ಎದ್ದೆದ್ದು ಬರುತ್ತವೆ. ನಮ್ಮನ್ನು ನಾವು ನಿಯಂತ್ರಿಸಿಕೊಳ್ಳದೇ ಹೋದರೆ ನಮ್ಮ ಬದುಕೇ ಅದರಲ್ಲಿ ಕಳೆದುಹೋದೀತು ಎಂಬುದು ನಮ್ಮ ಭಯ.
ನಾನು ಚಿಕ್ಕವಳಿದ್ದಾಗ ಒಮ್ಮೆ ನಮ್ಮಪ್ಪ ಗೃಹಶೋಭಾ ತಂದಿದ್ದರು. ಅದರಲ್ಲಿ ಸಿನೆಮಾತಾರೆಯರ ಚಿತ್ರಗಳಿದ್ದವು. ಅದರಲ್ಲಿ ಒಂದು ಚಿತ್ರ ತುಂಬಾ ಎಕ್ಸ್ಪೋಸ್ ಆಗಿದ್ದದ್ದಾಗಿತ್ತು. ಅದನ್ನು ನೋಡಿ ನಾನು ಅಕ್ಕನಿಗೆ ತೋರಿಸಿ ಮುಸಿಮುಸಿ ನಕ್ಕಿದ್ದೆ. ಅಮ್ಮನಿಗೆ ಅದೆಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ. ‘ಅಂಥ ಕೆಟ್ಟ ಚಿತ್ರಗಳನ್ನು ನೋಡುವುದಕ್ಕೇ ಅದನ್ನು ತರಲು ಹೇಳುವುದಾ?’ ಅಂತ ಬೈದುಬಿಟ್ಟರು. ನನಗೆ ತುಂಬಾ ಅವಮಾನವೆನಿಸಿತ್ತು. ಆದರೆ ಅಮ್ಮನ ಒಂದು ಮಾತು ನನಗೆ ಇಡಿಯ ಬದುಕಿನ ಪಾಠ ಕಲಿಸಿತ್ತು. ಅಮ್ಮ ಬೈಯುತ್ತಿದ್ದುದು ಕಡಿಮೆ, ಆದರೆ ಒಂದು ಮಾತು ಹೇಳಿದರೆಂದರೆ ಅದು ಮನಸ್ಸಿನ ಪ್ರತಿಯೊಂದು ಮೂಲೆಯನ್ನೂ ಬಿಡದಂತೆ ಆವರಿಸುತ್ತಿತ್ತು. ಈಗ ಅಜ್ಜಿಯಿದ್ದು ಈ ಬಗೆಯ ರೀಲ್ಸುಗಳನ್ನು ನೋಡಿದರೆ ಅದೇನನ್ನುತ್ತಿದ್ದರೋ!
ಇದನ್ನೂ ಓದಿ: Letters to Daughter: ಮಗಳೇ, ನನ್ನ ಹೊಟ್ಟೆಯನ್ನೊಮ್ಮೆ ಮೆಲ್ಲಗೆ ಸವರಿ ಅಮ್ಮಾ ಇದು ನಿನ್ನ ಬಾಬೆ ಅಲ್ಲ, ಎನ್ನ ಬಾಬೆ ಎಂದಿದ್ದೆ
ನೀನೇ ಹೇಳುವ ಹಾಗೆ ಜಗತ್ತಿನೊಂದಿಗೆ ಓಡಬೇಕಾಗಿರುವುದು ಸರಿಯೇ..ಸಾಮಾಜಿಕ ಜಾಲತಾಣಗಳು ಬೇಡವೇ ಬೇಡ ಎಂದು ಬಾಳಲಾರೆವು. ಆದರೆ ನಾವು ಬದುಕಬೇಕಾಗಿರುವುದು ನಮ್ಮ ಮನೆಮಂದಿಯೊಂದಿಗೆ ಎಂಬ ಎಚ್ಚರ ನಮಗಿರಬೇಕು. ಮೊಬೈಲುಗೀಳು ಎಂದಿಗೂ ಕೂಡುವುದಿಲ್ಲ, ಕಳೆಯುತ್ತದೆ ಎಂಬುದರ ಅರಿವು ನಮಗಿದ್ದರೆ ಗೆದ್ದೇವು.
ನೀನು ಈಗಿನ್ನೂ ಚಿಕ್ಕವಳು. ಆದರೆ ಇನ್ನೆರಡು ವರ್ಷದಲ್ಲಿ ಈಗಿನ ಮುಗ್ಧತೆಯೇ ಉಳಿಯುವುದಕ್ಕಿಲ್ಲ ಮಗೂ. ಈಗಿನಂತೆ ಡ್ರಾಯಿಂಗ್, ಪೇಂಟಿಂಗ್ ಅಂತಷ್ಟೇ ಮೊಬೈಲು ಬಳಸುವುದು ಅನ್ನುವಂತೆಯೂ ಇರುವುದಿಲ್ಲ. ಪದೇಪದೇ ನಿನ್ನ ಮೊಬೈಲು ತೆಗೆದುಕೊಂಡು ನೀನೇನು ನೋಡುತ್ತಿದ್ದೀ ಅಂತ ನೋಡುವುದು ನನಗೆ ಹಿತವಾದ ಕೆಲಸವಲ್ಲ. ಒಂದು ವೇಳೆ ನೋಡಿದರೂ ಅಮ್ಮ ನನ್ನ ಪ್ರೆöÊವಸಿಗೆ ಧಕ್ಕೆ ತರುತ್ತಿದ್ದಾಳೆ ಅಂತ ಭಾವಿಸಬೇಡ, ದಾರಿಗೊತ್ತಿದ್ದರೂ ಗೂಗಲ್ಮ್ಯಾಪ್ ಹಾಕುವುದ್ಯಾಕೆ ಹೇಳು, ದಾರಿ ತಪ್ಪದಿರಲಿ ಅಂತ ಅಷ್ಟೇ! ಅಮ್ಮಂದಿರು ನಾವು ಮಾಡುವುದೂ ಅಷ್ಟನ್ನೇ.
ನಮ್ಮ ಮೊಬೈಲಿಗೆ ಪಾಸ್ವರ್ಡ್ ಹಾಕಿದರೂ ಮಕ್ಕಳಿಗೆ ಅದನ್ನು ಗೊತ್ತುಪಡಿಸುತ್ತೇವೆ, ಹಾಗಿರುವಾಗ ಮಕ್ಕಳ ಮೊಬೈಲಿನ ಪಾಸ್ವರ್ಡ್ ಹೆತ್ತವರಿಗೂ ಗೊತ್ತಿರಬೇಕಲ್ಲ ಮಗೂ. ನಿನ್ನಂತಹ ಮುದ್ದುಮಕ್ಕಳ ಅಮ್ಮಂದಿರೆಲ್ಲರಿಗೂ ಈ ನೆಮ್ಮದಿಯಿರಲಿ!
ಇಂತೀ ಆಶೀರ್ವಾದಗಳೊಂದಿಗೆ,
ಅಮ್ಮ
