(ಪತ್ರ ಹದಿನಾಲ್ಕು) ಮಗಳೇ,
Letters to Daughter: ಹನ್ನೊಂದು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡೆ. ನಿನಗೆ ತಮ್ಮನೋ ತಂಗಿಯೋ ಬರುವುದು ಖಚಿತವೆಂದಾದಾಗ ನಿನಗಿನ್ನೂ ಎರಡೂವರೆ ವರ್ಷ. ಇಬ್ಬರ ನಡುವೆ ತುಂಬ ಅಂತರ ಬೇಕೆಂದು ನಮಗನ್ನಿಸಲಿಲ್ಲ. ಮೂರು ವರ್ಷಗಳ ಅಂತರವಷ್ಟೇ ಇದ್ದರೆ ಇಬ್ಬರನ್ನೂ ನೋಡಿಕೊಳ್ಳುವುದು ಸುಲಭ, ಇಬ್ಬರೂ ಶಾಲೆಗೆ ಹೋಗುವುದಕ್ಕೆ ಪ್ರಾರಂಭ ಮಾಡಿದ ಮೇಲೆ ನಾನು ಮತ್ತೆ ಕೆಲಸಕ್ಕೆ ಮರಳಿದರಾಯಿತು ಎಂದುಕೊಂಡಿದ್ದೆ. ಸರಿ, ನಿನಗೂ ಈ ಸಂಗತಿ ಗೊತ್ತಾಗಬೇಕಿತ್ತಲ್ಲ, ನಿನ್ನಲ್ಲಿ ಹೇಳಿದಾಗ ನಿನ್ನ ಪ್ರತಿಕ್ರಿಯೆ ಬಹಳ ಮುದ್ದಾಗಿತ್ತು. ಮಂಗಳೂರಲ್ಲಿ ಪ್ರೇಮಜ್ಜಿ ಕೊಟ್ಟ ಬಂಟೀ ಹೆಸರಿನ ಬೊಂಬೆಯನ್ನೇ ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದ ನಿನಗೆ ಮನೆಗೆ ಪುಟ್ಟ ಪಾಪು ಬರುತ್ತದೆ ಎಂಬ ಸಂಗತಿ ಅತ್ಯಂತ ಸಂಭ್ರಮವನ್ನೇ ತಂದಿತ್ತು.
ನನ್ನ ಹೊಟ್ಟೆಯನ್ನೊಮ್ಮೆ ಮೆಲ್ಲಗೆ ಸವರಿ ‘ಅಮ್ಮಾ..ಇದು ನಿನ್ನ ಬಾಬೆ ಅಲ್ಲ, ಎನ್ನ ಬಾಬೆ.. ಎನ್ನ ಹೊಟ್ಟೆ ಪುಟ್ಟದಿದ್ದಲ್ಲ, ಅದಕ್ಕೆ ಚಾಮಿ ನಿನ್ನ ಹೊಟ್ಟೆಲಿ ಮಡುಗಿದ್ದಷ್ಟೇ’ ಅಂದೆ! (ಇದು ನಿನ್ನ ಮಗುವಲ್ಲ, ನನ್ನದೇ. ನನ್ನ ಹೊಟ್ಟೆ ಪುಟ್ಟದಿರುವುದರಿಂದ ದೇವರು ನಿನ್ನ ಹೊಟ್ಟೆಯಲ್ಲಿ ತಂದಿರಿಸಿದ ಅಷ್ಟೇ). ನನಗದಷ್ಟು ಬೆರಗಾಗಿತ್ತು ಗೊತ್ತಾ ಮಗೂ.. ನೀನು ದಿನ ಬಿಡದಂತೆ ನನ್ನ ಬಳಿ ಕುಳಿತು ನಿನಗೆ ಬರುವ ಪದ್ಯಗಳನ್ನೆಲ್ಲ ಹಾಡುತ್ತಾ ಬಂದೆ. ಅದೇನೇನೋ ಮಾತಾಡಿಸುತ್ತಿದ್ದೆ. ನೀನಿದ್ದ ರೀತಿ ನೋಡಿದರೆ ನಿಜವಾಗಿಯೂ ಇಬ್ಬರು ಮಕ್ಕಳು ಇರಲೇಬೇಕೆಂಬ ನಿರ್ಧಾರ ಒಳ್ಳೆಯದೇ ಆಯ್ತಲ್ಲ ಅನ್ನುವ ಸಮಾಧಾನ ನಮಗೊದಗಿತ್ತು.
ಇದನ್ನೂ ಓದಿ: Letters to Daughter: ಮಗಳೇ, ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ
ತಮ್ಮ ಹುಟ್ಟಿದ ದಿನ ಬೆಳಗಿನ ಜಾವ ಎರಡೂವರೆ ಗಂಟೆಗೆ ನಮ್ಮೊಂದಿಗೆ ಆಸ್ಪತ್ರೆಗೆ ನೀನೂ ಬಂದಿದ್ದೆ. ನೀನು ಸದಾ ತಂಗಿಯೇ ಬೇಕೆನ್ನುತ್ತಿದ್ದೆ. ನಿನಗೆ ನಿರಾಶೆಯಾಗುವುದಕ್ಕೆ ಅಲ್ಲೇನೂ ಇರಲಿಲ್ಲ. ತಮ್ಮನಾದರೂ ತಂಗಿಯಾದರೂ ಏನು ವ್ಯತ್ಯಾಸ? ನಿನ್ನ ಪಾಲಿಗೆ ಅದೊಂದು ಪುಟ್ಟ ಬೊಂಬೆ. ವೈದ್ಯರು ಪುಟ್ಟ ತಮ್ಮನನ್ನು ಅಜ್ಜಿಯ ಕೈಯಲ್ಲಿ ಕೊಟ್ಟು, ನನ್ನನ್ನು ಪೋಸ್ಟ್ ಆಪರೇಟಿವ್ ವಾರ್ಡಿಗೆ ಕಳಿಸಿದ ಬಳಿಕ ಅಪ್ಪ ನಿನ್ನನ್ನು ಕರೆದುಕೊಂಡು ಮನೆಗೆ ಹೊರಟಿದ್ದರು. ನೀನು ಹೊರಡಲು ಸಿದ್ಧಳಿರಲಿಲ್ಲ. ‘ಅಮ್ಮನನ್ನೂ ತಮ್ಮನನ್ನೂ ಕರೆದುಕೊಂಡೇ ಮನೆಗೆ ಹೋಗೋಣ ಅಪ್ಪಾ..’ ನೀನು ಹೇಳುತ್ತಲೇ ಇದ್ದೆ. ಅಪ್ಪ ಅದೇನೋ ನೆಪ ಹೇಳಿ ನಿನ್ನನ್ನು ಮನೆಗೆ ಕರೆದೊಯ್ದರು.
ಮನೆಗೆ ಬಂದ ಬಳಿಕ ಅದೆಷ್ಟು ಮುಚ್ಚಟೆ ಮಾಡಿದೆ ತಮ್ಮನನ್ನು.. ನಿನ್ನ ಪುಟ್ಟ ಮಡಿಲಲ್ಲಿ ಅವನನ್ನೂ ಮಲಗಿಸಿಕೊಂಡು, ಆಟವಾಡಿಸಿಕೊಂಡು ಎಂಥ ಸಂಭ್ರಮ ನಿನ್ನದು! ‘ತಮ್ಮನ ಹೆಸರು ವಿಷ್ಣು’ ಎಂದೆ ನೀನು. ಅಪ್ಪ ವಿಷ್ಣು ಸಹಸ್ರನಾಮ ಓದಿ ಸಂವೃತ ಎಂಬ ಹೆಸರಾದೀತು ಅಂತ ಆಯ್ಕೆ ಮಾಡಿದರು. ಅಲ್ಲೂ ನಿನ್ನದೇ ಕಾರ್ಬಾರು. ಅವನಿಗೆ ತೆಗೆಯುವ ಬಟ್ಟೆಯಾಗಲೀ, ಮುಂದೆ ಅವನ ಫೀಡಿಂಗ್ ಬಾಟಲಿಯಾಗಲೀ ಎಲ್ಲವೂ ನಿನ್ನದೇ ಆಯ್ಕೆ.
ಅವನು ನಿನ್ನೊಂದಿಗೆ ಶಾಲೆಗೆ ಬರುವಂತಾದಾಗಲೂ ನಿನಗೆ ಬಿಂಕ. ಇವನೋ ಮನೆಯಲ್ಲಿ ನಿನ್ನೊಂದಿಗೆ ಇದ್ದಂತೆ ಶಾಲೆಯಲ್ಲಿಯೂ ಬಂದು ನಿನ್ನ ತರಗತಿಯಲ್ಲಿ ಕುಳಿತುಕೊಳ್ಳಲಾರಂಭಿಸಿದ. ಅವನಿಗೆ ನಿನ್ನನ್ನು ಕಾಣಿಸದಂತೆ ಮಾಡಲು ನಿನ್ನನ್ನು ಎದುರು ಬೆಂಚಿನ ಬದಲು ಹಿಂದಿನ ಬೆಂಚಿನಲ್ಲಿ ಕೂರಿಸಿದರು. ಅವನು ಅಂದರೂ ನಿನ್ನನ್ನು ಹುಡುಕಿ ಬರುತ್ತಿದ್ದ. ಬಹುಶಃ ನೀನು ಜತೆಗಿದ್ದುದರಿಂದ ಅವನು ಶಾಲೆಗೆ ಬಲುಬೇಗನೇ ಹೊಂದಿಕೊಂಡ.
ಒಂದು ದಿನ ನಿರೀಕ್ಷೆಯಿಲ್ಲದೆ ಮಳೆ ಸುರಿದಿತ್ತು. ನೀನು ಹಾಕಿಕೊಂಡಿದ್ದ ಸ್ವೆಟರ್ ತೆಗೆದು ಅವನಿಗೆ ಹಾಕಿಸಿ, ನಿನ್ನ ಬ್ಯಾಗಲ್ಲಿ ನೀನು ಸದಾ ಇಟ್ಟುಕೊಳ್ಳುತ್ತಿದ್ದ ಮಳೆಯಂಗಿ ಹಾಕಿಕೊಂಡು ನಮಗಾಗಿ ಕಾದು ಕುಳಿತಿದ್ದೆ. ಅಕ್ಕನೆಂದರೆ ಹಾಗೆಯೇ. ಮಾಲತಿ ದೊಡ್ಡಮ್ಮ ಐದನೇ ತರಗತಿಯಲ್ಲಿದ್ದಾಗ ನಾನು ಅಂಗನವಾಡಿಗೆ ಹೋಗುವುದಿತ್ತು. ನಾನೂ ಅಕ್ಕನೊಂದಿಗೇ ಹೋಗಿ ಕುಳಿತಿರುತ್ತಿದ್ದೆ. ಅಕ್ಕನೆಂದರೆ ಒಂದು ಬಗೆಯಲ್ಲಿ ಅಮ್ಮನೇ ತಾನೇ? ಈಗಲೂ ಅವನೇನಾದರೂ ಚಿತ್ರ ಮಾಡಬೇಕಿದ್ದರೆ ಅಚ್ಚುಕಟ್ಟಾಗಿ ನಿನ್ನಮುಂದೆ ಪೇಪರು, ಪೆನ್ಸಿಲ್ ಹಿಡಿದು ನಿಲ್ಲುವುದನ್ನು ಕಂಡಾಗ ನನಗೆ ಹಿತವೆನಿಸುತ್ತದೆ.
ಇದನ್ನೂ ಓದಿ: Letters to Daughter: ಮಗಳೇ, ಬದಲಾಗಬೇಕು ನೀವು, ಕಾಲದೊಂದಿಗೆ ಚಲಿಸುತ್ತಾ ಇರಬೇಕು
ಈ ಚಿತ್ರಗಳು ಹೀಗೆಯೇ ಇದ್ದರೆ ಬಹಳ ಚಂದ ಮಗಳೇ. ಇತ್ತೀಚೆಗೇಕೋ ನೀನು ಅವನ ಮೇಲೆ ಬಹಳವೇ ಎಗರಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೀ ಅನಿಸುತ್ತದೆ. ‘ಅಮ್ಮಾ, ಅಕ್ಕ ನನ್ನನ್ನು ಕಂಡರೇ ಆಗದವಳಂತೆ ಮಾಡುತ್ತಾಳೆ’ ಎಂದು ತಮ್ಮ ಬಿಕ್ಕಳಿಸಿದಾಗ ತುಂಬಾ ಆಘಾತವೇ ಆಯ್ತು ಮಗೂ. ಒಡಹುಟ್ಟಿದವರ ನಡುವೆ ಸಣ್ಣಪುಟ್ಟ ಜಗಳಗಳು ಇದ್ದದ್ದೇ.
ಆದರೆ ಮಾತುಮಾತಿಗೂ ಸಿಡುಕಿದರೆ ನೋವಾಗುತ್ತದಲ್ಲ ಮಗಳೇ? ನಿನ್ನ ವಯಸ್ಸಿನ ಪ್ರಭಾವ ಅದು ಎಂಬುದು ನಮಗೆ ಗೊತ್ತು. ಆದರೆ ತಮ್ಮನಿಗೆ ಅರ್ಥವಾಗದಲ್ಲ? ನಿನ್ನ ಮೇಲೆ ಸಿಟ್ಟು ಬಂದಾಗಲೆಲ್ಲ ನಾವು ನಿನ್ನ ಮೇಲೆ ಕೂಗಾಡಿರುವುದಿಲ್ಲ ಅನ್ನುವುದು ನಿನಗೂ ಗೊತ್ತು. ಹಾಗಿದ್ದ ಮೇಲೆ ತಮ್ಮನ ಜತೆಗೆ ನೀನು ಚೆನ್ನಾಗಿಯೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಲ್ಲ? ‘ಅಕ್ಕ ಬೇರೆ ಮಕ್ಕಳಲ್ಲೆಲ್ಲ ಚೆನ್ನಾಗಿ ಮಾತಾಡುತ್ತಾಳೆ, ಆಟವಾಡಿಸುತ್ತಾಳೆ. ನನ್ನನ್ನು ಮಾತ್ರ ಯಾವಾಗಲೂ ಬೈತಾಳೆ’ ಅನ್ನುವುದು ಅವನ ದಿನನಿತ್ಯದ ದೂರು ಎಂಬAತಾಗಿದೆ.
ನಿನಗೆ ಅವನ ಮೇಲೆ ಸಿಟ್ಟು ಬರುವುದು ಬಹುತೇಕ ನಿನ್ನ ಪಾಲಿನ ತಿಂಡಿಯನ್ನು ಅವನೇ ತೆಗೆದು ತಿಂದಿರುತ್ತಾನೆ ಎಂಬುದಕ್ಕೆ. ಇನ್ನು, ಎಲ್ಲರಲ್ಲೂ ಮಾತಾಡಿಸಿಕೊಂಡು ಬರುತ್ತಾನೆ ಅಗತ್ಯಕ್ಕಿಂತಲೂ ಜಾಸ್ತಿ ಎಂಬುದಕ್ಕೆ. ನೀನು ಎಳೆಯವಳಿದ್ದಾಗ ಊಟತಿಂಡಿಗೆ ನನ್ನನ್ನು ಅದೆಷ್ಟು ಸತಾಯಿಸಿದ್ದೀ ಎಂದರೆ ತಮ್ಮ ಹುಟ್ಟುವುದಕ್ಕಿಂತ ಮೊದಲು ಪ್ರತಿದಿನವೂ ದೇವರಿಗೆ ನನ್ನ ಮೊರೆ ಅದೇ ಆಗಿತ್ತು.
ಇದನ್ನೂ ಓದಿ: Letters to Daughter: ಮಗಳೇ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ
‘ಸದ್ಯ ಚೆನ್ನಾಗಿ ತಿಂದು ಉಂಡು ಮಾಡುವಂಥ ಆರೋಗ್ಯವಂತ ಮಗುವನ್ನು ಕೊಡು’ ಅಂತ! ಈಗ ಅವನು ರುಚಿರುಚಿಯಾಗಿ ತಿಂದುಂಡು ಮಾಡಿದರೆ ನನಗೆ ಆತಂಕವಿಲ್ಲ. ಮತ್ತೆ, ಮಾತಾಡುವ ವಿಷಯಕ್ಕೆ ಬಂದರೆ ಮಗಳೇ, ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಕೌಶಲ ಇರುತ್ತದೆ. ನೀನು ಬಣ್ಣಗಳ ಒಡನಾಟ ಇಷ್ಟಪಡುವುದರಿಂದ ನಿನ್ನಷ್ಟಕ್ಕೇ ಇದ್ದು ಅಂತರ್ಮುಖಿಯಾಗಿ ನಿನ್ನ ಸೃಜನಶೀಲತೆಯನ್ನು ಪೋಷಿಸುತ್ತೀ. ಅವನು ಇಷ್ಟಪಡುವುದು ಹೊರಾಂಗಣ ಆಟಗಳನ್ನು. ಸಹಜವಾಗಿಯೇ ಜನರೊಂದಿಗೆ ಬೆರೆಯುವುದನ್ನು ಇಷ್ಟಪಡುತ್ತಾನೆ. ಅದು ಸಹಜವೇ ಮಗೂ. ಬೇಕಾದರೆ ಮನಃಶಾಸ್ತ್ರ ಓದಿರುವ ಮಾಲತಿ ದೊಡ್ಡಮ್ಮನನ್ನು ಕೇಳಿನೋಡು.
ಮೊನ್ನೆ ಸಿನೆಮಾ ನೋಡುವಾಗ ನಡುನಡುವೆ ಅವನೇನೋ ಪ್ರಶ್ನೆಗಳನ್ನು ಕೇಳಿದರೆ ‘ಇದಕ್ಕೇ ನಾನು ಒಬ್ಬಳೇ ನೋಡ್ತೇನೆ ಅನ್ನುವುದು. ಹೀಗೆ ಡಿಸ್ಟರ್ಬ್ ಮಾಡಿದರೆ ನಂಗಿಷ್ಟವಾಗಲ್ಲ’ ರೇಗಿದೆಯಲ್ಲ? ನಿಜ ಹೇಳು..ಅದನ್ನು ಸ್ವಲ್ಪ ಮೆಲುವಾಗಿ ಹೇಳುವ ಸಾಧ್ಯತೆ ಇತ್ತಲ್ವಾ? ಹೇಳುವ ಸಾಲುಗಳು ಅವೇ ಆದರೂ ನಮ್ಮ ಧಾಟಿಯ ಮೇಲೆ ಕೇಳಿಸಿಕೊಂಡವರಿಗೆ ಹೇಗಾಗುತ್ತದೆ ಅನ್ನುವುದು ನಿಂತಿರುತ್ತದೆ! ಪದೇಪದೇ ಘಾಸಿಗೊಳಗಾದರೆ ಮನಸ್ಸು ಕಲ್ಲಾಗುತ್ತದೆ ಪುಟ್ಟಾ.
ಬದುಕು ಮುಂದುವರಿಯುತ್ತಾ ಸಾಗುವಾಗ ಮುಂದೆ ನಿನ್ನ ಪಾಲಿಗೆ ನಮ್ಮ ಉಡುಗೊರೆಯಾಗಿ ಉಳಿಯುವುದು ಕೂಡಿಟ್ಟ ಆಸ್ತಿಯಲ್ಲ, ತಮ್ಮನೆಂಬ ಪ್ರೀತಿ ಮಾತ್ರ. ಅದನ್ನು ಉಳಿಸಿಕೊಳ್ಳಬೇಕಾದುದು ನಿಮಗಿಬ್ಬರಿಗೂ ಬದ್ಧತೆಯಾಗಬೇಕಲ್ಲ ಮಗೂ.. ಅಕ್ಕನಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ ಅನ್ನುವ ಭಾವನೆ ಅವನಲ್ಲಿ ಭದ್ರವಾಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ನೀನು ಅರ್ಥ ಮಾಡಿಕೊಳ್ಳುವ ದಿನಕ್ಕಾಗಿ ಕಾಯುತ್ತಿದ್ದೇವೆ.
ನಿನ್ನೊಳಗೆ ಅವನ ಕುರಿತು ಇರುವ ಪ್ರೀತಿಯನ್ನು ಬಚ್ಚಿಡಬೇಡ. ಹೊರಹೊಮ್ಮಿಸು. ಬೈಯಬೇಕಾದಂತಹ ತಪ್ಪು ಅವನು ಮಾಡಿದ ಎಂದೆನಿಸಿದರೂ ಪ್ರೀತಿಯಿಂದ ಬೈದುಬಿಡು. ನೀನು ಅವನೊಂದಿಗೆ ಚೆನ್ನಾಗಿ ನಡೆದುಕೊಳ್ಳಬೇಕೆಂಬ ಕಾರಣಕ್ಕೆ ನಿನ್ನ ಶೂ ಪಾಲಿಶ್ ಮಾಡಿಡಲೂ ಅವನು ಸಿದ್ಧನಿದ್ದಾನೆ ಎಂದರೆ ನಿನಗರ್ಥವಾಗಬೇಕು ಮಗೂ. ಅಂಥ ಪ್ರೀತಿ, ಒಡನಾಟ ಸಿಗದ ಮಕ್ಕಳೇ ಹೆಚ್ಚು.
ಇದನ್ನೂ ಓದಿ: Letters to Daughter: ಮಗಳೇ, ‘ಊಟಕ್ಕಾತು ಬಟ್ಳು ಮಡುಗು’ ಎಂಬ ಅಮ್ಮನ ಕರೆಗೆ ಕಾಯುತ್ತಿದ್ದ ದಿನಗಳವು..!
ನಿನಗೆ ಅವನ ಮೇಲೆ ತುಂಬಾ ಪ್ರೀತಿ ಕಾಳಜಿ ಇದೆಯೆಂಬುದು ನನಗೆ ಗೊತ್ತು. ನನ್ನ ಮಾತನ್ನಾದರೂ ಅವನು ಕೇಳದಿರಬಹುದು, ಆದರೆ ನಿನ್ನ ಮಾತುಗಳನ್ನು ಕೇಳಿಯೇ ಕೇಳುತ್ತಾನೆ. ಒಡಹುಟ್ಟಿದವರ ಜಟಾಪಟಿಗಳ ನಡುವೆ ಅಪ್ಪ-ಅಮ್ಮ ಬಾರದಿದ್ದರೇ ಒಳ್ಳಯದು ಅನ್ನುವುದೇನೋ ಸತ್ಯವೇ. ಆದರೆ ಒಂದು ಮಿತಿಯ ಒಳಗಿನ ಆರೋಗ್ಯಕರ ಜಗಳವನ್ನು ಮಾತ್ರ ನೋಡಿ ನಕ್ಕೇವು ವಿನಾ ನೀವಿಬ್ಬರು ಧುಮುಗುಟ್ಟಿಯೋ ಕಣ್ಣೀರು ಹಾಕಿದರೋ ಅಲ್ಲ ಕಂದಾ.
ಸರಿ, ತಮ್ಮನಿಗೆ ಕೊಂಡಾಟ ಜಾಸ್ತಿ ಅಂತ ಸಿಟ್ಟು ಮಾಡಿಕೊಳ್ಳುವ ನೀನು ಮೊನ್ನೆ ನೀರುಳ್ಳಿ ತರುವುದಕ್ಕೆಂದು ಅಂಗಡಿಗೆ ಹೋದವಳು ಉಳಿದ ಚಿಲ್ಲರೆಯಲ್ಲಿ ತಮ್ಮನಿಗೆ ಮಾತ್ರ ಚಾಕ್ಲೇಟ್ ತಂದುಕೊಟ್ಟೆಯಲ್ಲಾ..ಅದ್ಯಾಕೆ ಹೇಳು? ನನಗೆ ಮಾತ್ರ ‘ಈ ಬಾಬೆ ಎನ್ನದು’ ಎಂಬ ನಿನ್ನ ಧ್ವನಿ ಮತ್ತೆ ಹೃದಯದಲ್ಲಿ ಕೇಳಿಸಿದಂತಾಯ್ತು..ಇನ್ನೇನೋ ಹೇಳಬೇಕಿದೆ, ನಾಳೆ ಹೇಳುವೆ.
ಇಂತೀ ಆಶೀರ್ವಾದಗಳು
ಅಮ್ಮ
