
(ಪತ್ರ ಒಂಬತ್ತು) ಮಗಳೇ,
Letters to Daughter: ಪುಟ್ಟೂ, ಸಂಜೆಗೇನು ಸ್ನಾಕ್ಸ್ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ. ಬೆಳಗ್ಗೆ ಇದ್ದ ತಿಂಡಿ ಏನೋ ಅದುವೇ ಸಂಜೆಗೂ. ಉಂಡೆ ಮಾಮೂಲಿ, ತೆಳ್ಳವು ಖಾಯಂ, ಹಾಗೆಂದು ಅದು ಸಂಜೆ ಬಿಸಿಬಿಸಿಯಾಗಿ ಅಮ್ಮ ತಯಾರು ಮಾಡುತ್ತಿದ್ದುದಲ್ಲ. ನಮ್ಮ ಮನೆಯಲ್ಲಿ ಫ್ರಿಜ್ ಇರಲಿಲ್ಲ, ಹಾಗಾಗಿ ಹಿಟ್ಟು ಹುಳಿ ಬರುತ್ತದೆಂದ ಕಾರಣಕ್ಕೆ ಅಮ್ಮ ಬೆಳಗ್ಗೆಯೇ ಹುಯಿದಿಟ್ಟಿರುತ್ತಿದ್ದರು. ಅದು ಒಣಗಿದ್ದರೂ ಸರಿಯೇ ಸಕ್ಕರೆಯಿದ್ದರೆ ಮತ್ತೆ ಚಟ್ನಿಯ ಚಿಂತೆಯೂ ಇಲ್ಲ. ಆ ದಿನಗಳು ತುಂಬಾ ಸಂತೋಷದಿAದ ಕೂಡಿದ್ದವು ಎಂಬುದರಲ್ಲಿ ಅನುಮಾನವೇ ಇಲ್ಲ. ಎಷ್ಟೋ ಸಲ ಸಂಜೆಗೆ ಚಹಾ ಮಾತ್ರ.. ಈಗಿನಂತೆ ಆಗ ಮಕ್ಕಳಿಗಾಗಿ ಹಾರ್ಲಿಕ್ಸ್, ಬೋರ್ನ್ವಿಟಾ ಎಂಬುದೆಲ್ಲ ಏನೂ ಇರಲಿಲ್ಲ.
ಇದನ್ನೂ ಓದಿ: Letters to Daughter: ಮಗಳೇ, ನನ್ನ ಅದೆಷ್ಟೋ ವಿದ್ಯಾರ್ಥಿಗಳು ನನ್ನನ್ನು ಸೈಕಲ್ಲಿನಲ್ಲಿ ಓವರ್ ಟೇಕ್ ಮಾಡುತ್ತಾರೆ!
ತಿಂಡಿಯಿಲ್ಲದ ದಿನಗಳಿಗೆ ಗಂಜಿಯೂಟ. ಅದರಲ್ಲಿ ಅದ್ಭುತವಾದ ಸೊಗಸು. ಅಮ್ಮ ಮಾಡುವ ತುಪ್ಪ, ಮಿಡಿ ಉಪ್ಪಿನಕಾಯಿ. ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತದೆ. ಆ ರುಚಿ ಆ ಸೊಗಸು ನಿಜಕ್ಕೂ ಈಗಿನ ಮಕ್ಕಳ ಅಚ್ಚುಮೆಚ್ಚಿನ ತಿನಿಸಾದ ಪಿಜ್ಜಾ ಬರ್ಗರುಗಳಲ್ಲಿ ಇಲ್ಲ ಗೊತ್ತಾ? ನಾನು ಹೀಗೆಂದರೆ ನೀವೆಲ್ಲಿ ನಂಬುತ್ತೀರಿ? ಹೌದೂ, ನೂಡಲ್ಸ್ ತಿನ್ನುವಲ್ಲಿ ಅಷ್ಟೊಂದು ಪ್ರೀತಿ ತೋರುತ್ತೀರಲ್ಲ? ಒತ್ತುಶ್ಯಾವಿಗೆ ಕಾಯಿಹಾಲು ಮೆಂತೆಕೊದಿಲಿಗಿAತ ಅದೇನು ರುಚಿಯಿದೆ ಹೇಳು? ಹೀಗೆಂದರೆ ‘ಅದೆಲ್ಲ ಹಳೆಯಕಾಲದ ತಿಂಡಿ’ ಅನ್ನುತ್ತೀರಿ ಗೊತ್ತು ನನಗೆ.
ಆದರೆ ಮಗಳೇ, ಇಲ್ಲೊಂದು ಸಣ್ಣ ಸಂಗತಿಯಿದೆ. ಒತ್ತು ಶ್ಯಾವಿಗೆ ಮಾಡುವುದಕ್ಕೆ ನಾಲ್ಕುಮಂದಿ ಸೇರಿಕೊಂಡರೆ ಬಹಳ ಒಳ್ಳೆಯದು. ನೂಡಲ್ಸ್ ಗಾದರೆ ಜನ ಬೇಡ. ಆಗಿನ ಬದುಕಿಗೂ ಈಗಿನದ್ದಕ್ಕೂ ರೂಪಕ ಅಲ್ಲವೇ ಈ ಶ್ಯಾವಿಗೆ ಮತ್ತು ನೂಡಲ್ಸ್? ಒಬ್ಬರೇ ಇದ್ದುಕೊಂಡು ಮೊಬೈಲ್ ನೋಡಿಕೊಂಡು ತಿನ್ನುವ ಈ ದಿನಗಳಲ್ಲಿ ಒಬ್ಬರಿಗೇ ಬೇಯಿಸಿಕೊಳ್ಳುವ ಅವಕಾಶವೂ ಇದೆಯಲ್ಲ? ಶ್ಯಾವಿಗೆಯನ್ನು ಹಾಗೆ ಮಾಡಲಾಗದು. ಅದಕ್ಕೇ ನಾನು ಹಿಂದೊಮ್ಮೆ ‘ಊಟದ ಮೇಜಿಗೆ ಮೊಬೈಲ್ ಬೇಡ’ ಎಂಬರ್ಥದ ಲೇಖನ ಬರೆದಿದ್ದೆ.
ಇದನ್ನೂ ಓದಿ: Letters to Daughter: ಮಗಳೇ, ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ‘ನನಗೆ ಸಮಾನತೆ ಬೇಕು’ ಅಂತ!
ಇಂದಿನ ಒತ್ತಡದ ದಿನಗಳಲ್ಲಿ ನಮಗೆ ಜತೆಯಾಗಿ ಕೂರುವುದಕ್ಕೆ, ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತನಾಡುವುದಕ್ಕೆ ಸಿಗುವ ಸಮಯ ಅದಷ್ಟೇ. ಅದನ್ನೂ ನಾವು ಮೊಬೈಲಿನೊಂದಿಗೆ ಕಳೆದರೆ ಹೇಗೆ ಹೇಳು? ನೀನಾದರೂ ಸರಿ, ನಾನಾದರೂ ಸರಿ. ತಂತ್ರಜ್ಞಾನವು ನಮ್ಮನ್ನು ಹತ್ತಿರ ತರಬೇಕೇ ವಿನಾ ದೂರ ಮಾಡಬಾರದಲ್ಲ ಮಗೂ? ಅದಿರಲಿ, ಸಂಜೆಯ ತಿಂಡಿಯ ಬಗ್ಗೆ ಹೇಳುತ್ತಾ ಇದ್ದೆ. ‘ಅಮ್ಮಾ, ಬಪ್ಪಗ ಎಂತಾರೂ ತತ್ತೆಯಾ?’ ನಾನು ಕಾಲೇಜಿಂದ ಹೊರಡುವ ಸಮಯಕ್ಕೆ ಸರಿಯಾಗಿ ನೀನು ಅಥವಾ ತಮ್ಮ ಕರೆ ಮಾಡಿರುತ್ತೀರಿ.
ಬೇಕರಿ ತಿನಿಸುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೂ ಸರಿಯಾಗಿ ಗೊತ್ತು. ಕೆಲವು ಸಲ ಮನೆಗೆ ಬಂದು ಏನಾದರೂ ಮಾಡಿಕೊಡೋಣವೆಂದರೆ ಅಡುಗೆ ಮನೆಯಲ್ಲಿ ಮತ್ತೆ ಅರ್ಧ ಗಂಟೆ ನಿಲ್ಲುವ ಚೈತನ್ಯವೇ ಇರುವುದಿಲ್ಲ. ಅಂಥ ದಿನಗಳಲ್ಲಿ ಬ್ರೆಡ್ಡು ಬನ್ನು ತರುವುದಿದೆ. ಆದರೂ ನೀವು ನಮ್ಮಂತೆ ಬೆಳಗ್ಗಿನ ತಿಂಡಿ ತಿನ್ನಲಾರಿರಿ. ಬಹುಶಃ ಆ ರೀತಿಯಾಗಿ ನಿಮ್ಮನ್ನು ಬೆಳೆಸಿರುವುದು ನಾವೇ. ಒಂದು ಬಗೆಯ ಭ್ರಮೆ. ಮಕ್ಕಳು ಬಿಸಿಬಿಸಿಯಾಗಿ ತಿನ್ನಲಿ ಅಂತ. ಕೆಲವೊಮ್ಮೆ ಅದೇ ತೊಡಕಾಗುವುದಾ ಅನಿಸುತ್ತದೆ.
ಮಗಳೇ, ಎಷ್ಟೋ ಸಲ ಹಣ್ಣು ತಿನ್ನುವಾಗಲೋ ಇತರೆ ತಿಂಡಿ ತಿನ್ನುವಾಗಲೋ ಅಪ್ಪ ಅಮ್ಮ ಮಕ್ಕಳೊಂದಿಗೆ ತುಂಬಾ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅದರರ್ಥ ಅಪ್ಪ ಅಮ್ಮನಿಗೆ ಅದೇ ಇಷ್ಟ ಎಂದೇನೂ ಅಲ್ಲ. ಅಜ್ಜಿ ಹೇಳುತ್ತಿದ್ದ ರಾಗಿಗಂಜಿಯ ಕಥೆ ನೆನಪಾಗುತ್ತದೆ: ಒಂದೂರಿನಲ್ಲಿ ಒಬ್ಬ ರೈತನಿದ್ದನಂತೆ. ಅವನ ಹೆಂಡತಿ ತೀರಿಕೊಂಡಿದ್ದಳು. ಅವನ ಪುಟ್ಟಮಗಳನ್ನು ಸಾಕಿ ದೊಡ್ಡವಳನ್ನಾಗಿ ಮಾಡಿ ಯೋಗ್ಯವರನಿಗೆ ಮದುವೆ ಮಾಡಿಕೊಟ್ಟ.
ಇದನ್ನೂ ಓದಿ: Letters to Daughter: ಮಗಳೇ, ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಅಂತ ಒಂದು ಹಾಡಿದೆ
ಅವರ ಮನೆಯಲ್ಲಿ ಅಲ್ಲಿಯವರೆಗೂ ದಿನವೂ ರಾಗಿಗಂಜಿಯAತೆ. ಮಗಳನ್ನು ಮದುವೆ ಮಾಡಿಕೊಂಡವನು ಸ್ವಲ್ಪ ಸ್ಥಿತಿವಂತ. ಅಪ್ಪನಿಗೇನೋ ಸಮಾಧಾನ. ಸದ್ಯ, ಮಗಳ ಮನೆಯಲ್ಲಾದರೂ ಅಪರೂಪಕ್ಕೆ ರುಚಿರುಚಿಯಾದ ತಿಂಡಿ ತಿಂದೇನು ಅಂತ. ಹೀಗೆ ಯೋಚಿಸಿಕೊಂಡು ಒಂದು ದಿನ ಮಗಳ ಮನೆಗೆ ಹೋದನಂತೆ. ಅಲ್ಲಿ ಮಗಳು ‘ನಮ್ಮಪ್ಪನಿಗೆ ರಾಗಿಗಂಜಿಯೇ ಇಷ್ಟ. ಅದಿಲ್ಲದಿದ್ದರೆ ತೃಪ್ತಿಯೇ ಆಗಲಿಕ್ಕಿಲ್ಲ’ ಎಂದುಕೊAಡು ರಾಗಿಗಂಜಿ ಮಾಡಿದ್ದಳು! ಅಪ್ಪ ಊಟಕ್ಕೆ ಕುಳಿತಾಗ ‘ನನ್ನಿಂದ ಮುಂದಾಗಿ ಬಂದೆಯಾ ರಾಗಿಗಂಜಿಯೇ?’ ಎಂದು ಹತಾಶೆಯಿಂದ ಉದ್ಗರಿಸಿದನಂತೆ!
ಮಗಳೇ, ನಮ್ಮ ಮನೆಯಲ್ಲೂ ಒಂದಿನ ಇಂತದ್ದೇ ಕಥೆ ನಡೆದಿತ್ತು. ಅಜ್ಜಿಗೆ ಪುಳಿಯೋಗರೆ ತಿಂದೂ ತಿಂದೂ ಸಾಕಾಗಿತ್ತು. ನಾವು ದೊಡ್ಡತ್ತೆಯ ಮನೆಗೆ ಹೋಗಿದ್ದಾಗ ಬೆಳಗ್ಗೆ ಅಜ್ಜಿ ಸಂಭ್ರಮದಿAದ ‘ಇಂದೇನು ತಿಂಡಿ?’ ಅಂದರು. ಅತ್ತೆ ಪುಳಿಯೋಗರೆ ಎಂದದ್ದೇ.. ‘ಛೇ, ನನ್ನಿಂದ ಮುಂದಾಗಿ ಬಂದೆಯಾ ರಾಗಿಹೆಜ್ಜೆ!’ ಎಂದು ಬಿಸುಸುಯ್ದರು. ಆಗಿನ್ನೂ ಬೆಳಗ್ಗೆ ಐದು ಗಂಟೆಯ ಸಮಯ! ಅಜ್ಜಿಗೆ ಹತ್ತಾರು ಮಾತ್ರೆಗಳ ಕಾರಣ ತಡೆಯಲಾಗದ ಹಸಿವು. ಅಂದು ಯಾಕೋ ನಕ್ಕುಬಿಟ್ಟಿದ್ದೆ, ಇಂದು ನೆನಪಿಸುವಾಗ ಮನಸ್ಸು ಮರುಗುತ್ತದೆ.
ಪಾಪ, ಅದೇನನ್ನು ತಿನ್ನುವ/ ಉಣ್ಣುವ ಆಸೆಗಳಿದ್ದವೋ.. ಏನನ್ನೂ ಮಾಡಿಕೊಳ್ಳಲಾಗದ ಅಸಹಾಯಕತೆ, ಇಂಥದ್ದೇ ಬೇಕು ಎಂದು ಕೇಳಲಾಗದ ಸಣ್ಣ ಬಿಗುಮಾನ.. ಏನು ಮಾಡೋಣ ಕಂದಾ? ಎಷ್ಟೋ ಸಲ ಪರಿಸ್ಥಿತಿ ಅರ್ಥವಾಗುವಾಗ ಬಹಳ ತಡವಾಗಿರುತ್ತದೆ.
ಕಣ್ಮಣಿ ಅಜ್ಜಿಯ ಕೊನೆಯ ದಿನಗಳನ್ನು ನೆನಪು ಮಾಡಿಕೋ. ಕೊನೆಯ ವಾರದಲ್ಲಿ ದೊಡ್ಡಮ್ಮನ ಹತ್ತಿರ ‘ನೀನೇನಾದರೂ ಸ್ಪೆಷಲ್ ಮಾಡಿದರೆ ಎನಗೆ ತಿಂಬಲೆಡಿಯ. ನುಂಗುಲೆಡಿತ್ತಿಲ್ಲೆ.’ ಕ್ಷೀಣವಾದ ಧ್ವನಿಯಲ್ಲಿ ಅಜ್ಜಿ ಹೇಳಿದರೆ ನಾನೂ ದೊಡ್ಡಮ್ಮನೂ ಅಡುಗೆ ಮನೆಯಲ್ಲಿ ನಿಂತು ಕಂಬನಿ ಮಿಡಿದಿದ್ದೆವು. ಈಗಲೂ ಅಜ್ಜಿಗಿಷ್ಟವಾದ ಏನನ್ನಾದರೂ ಮಾಡುವಾಗ ಅದೇ ಮಾತು ನೆನಪಾಗುತ್ತದೆ. ಅಜ್ಜಿಗೆ ಕಾಯಿವಡೆಯೆಂದರೆ ಬಹಳ ಇಷ್ಟ. ಈಗಲೂ ಅದನ್ನು ಮಾಡುವಾಗ, ಫ್ರಟ್ ಸಲಾಡ್ ತಿನ್ನುವಾಗ ಅಜ್ಜಿಯ ಮುಖವೇ ನೆನಪಾಗುತ್ತದೆ.
ಸರಿ, ಈಗ ಊಟ ಮಾಡೋಣವಾ? ಬಟ್ಳು ಮಡುಗಿ ಬನ್ನಿ
ಇಂತೀ ಅಮ್ಮ
