
(ಪತ್ರ ಎಂಟು) ಮಗಳೇ,
Letters to Daughter: ನಿನಗೊಂದು ತಮಾಷೆಯ ಸಂಗತಿ ಹೇಳಬೇಕು. ನಾನು ನಿಧಾನಗತಿಯಲ್ಲಿ ಸ್ಕೂಟರ್ ಓಡಿಸಿಕೊಂಡು ಹೋಗುವಾಗ ನನ್ನ ಅದೆಷ್ಟೋ ವಿದ್ಯಾರ್ಥಿಗಳು ನನ್ನನ್ನು ಸೈಕಲ್ಲಿನಲ್ಲಿ ಓವರ್ ಟೇಕ್ ಮಾಡಿಕೊಂಡು ಹೋಗುತ್ತಾರೆ, ಮೆಲ್ಲನೆ ಹಿಂದೆ ತಿರುಗಿ ನಗುತ್ತಾರೆ. ನಾನೂ ಹಾರ್ನ್ ಹೊಡೆದು ಕೆಲವೊಮ್ಮೆ ಅವರ ನಗುವಿಗೆ ಸ್ಪಂದಿಸುತ್ತೇನೆ.
ಶಿಷ್ಯಾದಿಚ್ಛೇತ್ ಪರಾಜಯಂ ಅನ್ನುವುದು ಇಲ್ಲಿಗೆ ಹೊಂದುವ ಮಾತಲ್ಲದಿರಬಹುದು, ಆದರೆ ಮಕ್ಕಳಿಗೆ ಅಂದರೆ ವಿದ್ಯಾರ್ಥಿಗಳಿಗೆ ಆಗುವ ಸಣ್ಣ ಸಂತೋಷವಿದೆಯಲ್ಲ.. ಅದನ್ನು ನೋಡುವಾಗ ನನಗೂ ನಗೆ ಬರುತ್ತದೆ. ಪರೀಕ್ಷೆಯಲ್ಲಿ ಎಷ್ಟು ಪುಟ ಬರೆದರೂ ಮಾಕ್ಸ್ ಕೊಡದ ಟೀಚರ್ ದಾರಿಯುದ್ದಕ್ಕೂ ತಮ್ಮ ಹಿಂದೆ ಉಳಿಯುವಾಗ ಅವರಿಗೇನೋ ಸಂಭ್ರಮ.
ಆದರೆ ಏನು ಗೊತ್ತಾ? ಒಂದು ದಿನ ತಮ್ಮನನ್ನು ಕರೆದುಕೊಂಡು ಗಾಡಿಯಲ್ಲಿ ಹೋಗುತ್ತಿದ್ದೆ. ಅವನಿಗೋ ಅಪ್ಪನ ಜತೆಗೆ ಗಾಡಿಯಲ್ಲಿ ಓಡಾಡಿ ಓಡಾಡಿ ನನ್ನ ಜತೆಗೆ ಬರುವುದೆಂದರೆ ಬೇಜಾರು. ‘ಅಮ್ಮಾ ಚೂರು ಸ್ಪೀಡಾಗಿ ಹೋಗು..’ ಅನ್ನುತ್ತಿದ್ದ. ಒಂದೆರಡು ಸಲ ಅವನನ್ನೂ ನಿನ್ನನ್ನೂ ಕೂರಿಸಿಕೊಂಡು ಬೀಳುವಂತಾದ ಮೇಲೆ ಈಗ ಸದ್ಯ ಹುಷಾರಾಗಿ ಶಾಲೆಗೆ ತಲುಪಿದರೆ ಸಾಕು ಅಂತ ಸುಮ್ಮನೇ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಮಗಳೇ, ನಿನಗೇನಾದರೂ ಅಮ್ಮ ಗಾಡಿ ಓಡಿಸುವಾಗ ನಿಧಾನವಾಗಿ ಹೋಗುತ್ತಾಳೆಂಬ ಬಗ್ಗೆ ಸಂಕೋಚವೆನಿಸುತ್ತದೆಯಾ? ನನ್ನ ಆತಂಕವನ್ನೂ ಹೇಳಿಬಿಡುತ್ತೇನೆ ಕೇಳು.
ಇದನ್ನೂ ಓದಿ: Letters to Daughter: ಮಗಳೇ, ಪೂಜಿಸಲ್ಪಡುವ ಮೂರ್ತಿಯಾಗಬೇಕಿದ್ದರೆ ಕಲ್ಲು ಅದೆಷ್ಟು ಪೆಟ್ಟು ತಿನ್ನುತ್ತದಲ್ಲ!
ಮಗಳೇ, ನಾನು ಗಾಡಿ ಓಡಿಸುವುದನ್ನು ಕಲಿಯುವ ಹೊತ್ತಿಗೆ ನೀನು ಐದು ವರ್ಷದ ಮಗು. ತಮ್ಮನಿಗೆ ಎರಡು ವರ್ಷ. ನನಗೆ ಒಳಗಿಂದೊಳಗೆ ಭಯ. ಎಲ್ಲಾದರೂ ಬಿದ್ದು ಎಡವಟ್ಟು ಮಾಡಿಕೊಂಡರೆ ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡಿಕೊಡುವವರು ಯಾರು? ಇತರೆ ಕೆಲಸಗಳನ್ನು ಮಾಡಿಕೊಡುವವರು ಯಾರು? ಈ ಚಿಂತೆ ಯಾಕೆ ಗೊತ್ತಾ? ಅಜ್ಜಿ ಅಡುಗೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಜ್ಜ ಎರಡು ದಿನ ಆರಾಮಿದ್ದರೆ ಮತ್ತೆರಡು ದಿನ ಆರೋಗ್ಯ ತಪ್ಪಿ ಮಲಗುತ್ತಿದ್ದ ದಿನಗಳವು.
ಅಪ್ಪ ಹತ್ತಾರು ಕೆಲಸಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿದ್ದರು. ಮನೆಯ ಪರಿಸ್ಥಿತಿ ಹೀಗಿರುವಾಗ ನಾನೂ ಕೈಕಾಲು ಏಟು ಮಾಡಿಕೊಂಡರೆ ಗತಿಯೇನು ಎಂಬ ಭಯ. ಬಹುಶಃ ಈ ಭಯ ನನಗೆ ಅಜ್ಜನ ಬಳುವಳಿಯಿರಬಹುದು. ಕಣ್ಮಣಿ ಅಜ್ಜ ದಿನಕ್ಕೆ ಇಪ್ಪತ್ತು ಕಿಲೋಮೀಟರು ನಡೆಯುವ ದಿನಗಳಲ್ಲೂ ನಡೆದೇ ನಡೆದರು ವಿನಾ ಸೈಕಲ್ ಆಗಲೀ ಗಾಡಿ ಆಗಲೀ ಅಭ್ಯಾಸ ಮಾಡಲಿಲ್ಲ. ಬೆಂಗಳೂರಿನAಥ ಬೆಂಗಳೂರಿನಲ್ಲಿ ಸ್ಕೂಟರ್ ಓಡಿಸಲು ಕಲಿತ ಮಾಲತಿ ದೊಡ್ಡಮ್ಮನ ಪ್ರೇರಣೆ ನನಗಿತ್ತು. ಆದರೆ ಅನಿವಾರ್ಯತೆಯೆಂಬುದೇ ಆವಿಷ್ಕಾರದ ತಾಯಿಯಂತೆ. ಅಗತ್ಯ ಬರದ ಹೊರತು ಗಾಡಿ ಓಡಿಸುವುದನ್ನು ಕಲಿಯುವುದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Letters to Daughter: ಮಗಳೇ, ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ‘ನನಗೆ ಸಮಾನತೆ ಬೇಕು’ ಅಂತ!
ಹಾಂ, ಇದನ್ನು ಹೇಳುವಾಗ ನೆನಪಾಯಿತು. ನಾನು ಕಾರ್ ಓಡಿಸುವುದನ್ನು ಕಲಿಯಬೇಕೆಂದು 21 ದಿನ ಡ್ರೆöÊವಿಂಗ್ ಕ್ಲಾಸಿಗೆ ಹೋದ ಕತೆ. ಮಗಳೇ, ನಾನಂದುಕೊAಡದ್ದು ಕಾರಿನ ಅವಯವಗಳನ್ನು ಪರಿಚಯ ಮಾಡಿಕೊಳ್ಳುವರೆಗೆ ಖಾಲಿ ಬಯಲಲ್ಲಿ ಕಲಿಸುತ್ತಾರೆ ಅಂತ. ಆದರೆ ಏನಾಯಿತು ಗೊತ್ತಾ, ಸಂಜೆ ಐದು ಗಂಟೆಯ ಸಮಯ. ಎಂಜಿನಿಯರಿAಗ್ ಕಾಲೇಜಿನ ಮಕ್ಕಳೆಲ್ಲ ರ್ರನೇ ಗಾಡಿ ಓಡಿಸುವ ಹೊತ್ತು. ಈ ಡ್ರೆöÊವಿಂಗ್ ಮಾಸ್ತರರೋ ಸೀದಾ ಮೈನ್ ರೋಡಿಗೆ ಕಾರ್ ಕೊಂಡೋಗುವAತೆ ಹೇಳಿದರು.
ಯಬ್ಬ! ನಿಜವಾಗಿ ನಾನು ಕಣ್ಣು ಕತ್ತಲೆ ಬಂದು ಬೀಳದೇ ಇದ್ದದ್ದು ನನ್ನ ಪುಣ್ಯ. ಮಾಸ್ತರರು ನಿಧಾನಕ್ಕೆ ಕಾಲನ್ನು ಬ್ರೇಕಿನ ಮೇಲೆ ಇಟ್ಟುಕೊಳ್ಳಿ ಅಂದರೆ ನಾನು ನನ್ನ ಶಕ್ತಿ ಪೂರಾ ಹಾಕಿ ಬ್ರೇಕ್ ಅದುಮುತ್ತಿದ್ದೆ. ನನ್ನಂಥ ಅದೆಷ್ಟೋ ಮಂದಿಯಿAದ ಕಾಲ್ತುಳಿತಕ್ಕೆ ಒಳಗಾದ ಕಾರು ನಡುಬೀದಿಯಲ್ಲಿಯೇ ಗಡಗಡವೆಂದು ನಿಂತುಬಿಡುತ್ತಿತ್ತು. ನನಗೋ ತಾರಾಮಾರಾ ಬೈಗಳು.
ಸಾರಿ ಸರ್ ಎಂದು ನಾನೆಂದರೆ ‘ಸಾರಿ ಅಂದರೆ ಆಕ್ಸಿಡೆಂಟ್ ತಪ್ಪುತ್ತದಾ? ಹಿಂದಿನ ಗಾಡಿಯವರು ಬಂದು ಗುದ್ದುವುದಿಲ್ಲವಾ’ ನಾನ್ ಸ್ಟಾಪ್ ಬೈಯುವುದು ಹೇಗೆಂದು ಅವರ ಹತ್ತಿರ ಕಲಿಯಬೇಕಿತ್ತು ಅಂತ ನನಗನ್ನಿಸುತ್ತಿತ್ತು. ಪಕ್ಕಾ ತುಮಕೂರು ಬೆಂಗಳೂರು ನಾನ್ ಸ್ಟಾಪ್ ಬಸ್ಸಿನಂತೆ ಬೈಯುತ್ತಿದ್ದರು.
ನನ್ನೊಂದಿಗೆ ಪ್ರತೀ ಕ್ಲಾಸಿಗೂ ಬರುತ್ತಿದ್ದವನು ತಮ್ಮ. ಅವನು ಬರುತ್ತಿದ್ದುದು ಕ್ಲಾಸಿನ ನಂತರ ಕಬ್ಬಿನಹಾಲು ಕುಡಿಯುವುದಕ್ಕೆ. ಮಗಳೇ, ಅಂತೂ ಟೆಸ್ಟ್ನ ಮುನ್ನಾ ದಿನ ಒಂದು ಟ್ರಯಲ್ ನೋಡುವಾ ಅಂತ ಅಪ್ಪನೂ ನಾನೂ ತಮ್ಮನೂ ಹೊರಟದ್ದು. ನೀನು ಎಲ್ಲಿ ಬಚ್ಚಿಟ್ಟುಕೊಂಡು ಬಾಕಿಯಾದೆಯೋ ಗೊತ್ತಿಲ್ಲ.ಯಾವುದೋ ಒಳಮಾರ್ಗ.
ಇದನ್ನೂ ಓದಿ: Letters to Daughter: ಮಗಳೇ, ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಅಂತ ಒಂದು ಹಾಡಿದೆ
ಕಾರು ಬಲಕ್ಕೆ ತಿರುಗಿಸಿ ಸ್ಟಿಯರಿಂಗ್ ವೀಲ್ ಗಟ್ಟಿಯಾಗಿ ಹಿಡಿದುಕೊಂಡೆ. ಬಲಕ್ಕೇ ತಿರುಗಿದ ಕಾರು ಚರಂಡಿಗೆ ಹೋಗಿ ಬಿತ್ತು. ಎಡಗಡೆಯ ಎರಡೂ ಚಕ್ರಗಳು ತಮ್ಮ ನೆಲೆಯೆಲ್ಲಿ ಎಂದು ಹುಡುಕುತ್ತಿದ್ದವು. ಅಪ್ಪನಲ್ಲಿ ಸ್ಸಾರಿ ಎಂದೆ. ಆಕ್ಸಿಡೆಂಟ್ ತಪ್ಪಲಿಲ್ಲ! ಸದ್ಯ, ಅಲ್ಲಿ ರಸ್ತೆಯ ಬದಿ ಯಾರೂ ಇರಲಿಲ್ಲ, ಜೀವಹಾನಿಯಾಗಲಿಲ್ಲ. ಹಿಂದಿನ ಸೀಟಿನಲ್ಲಿದ್ದ ತಮ್ಮ ಹೆದರಿ ಒಂದೇ ಸಮನೇ ಅಳುತ್ತಿದ್ದ. ಅದೇ ಕೊನೆ, ಮತ್ತೆಂದೂ ನಾನು ನಮ್ಮ ಕಾರಿನ ಡ್ರೆöÊವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಲಿಲ್ಲ.
ಧೈರ್ಯಗೆಡಬಾರದಿತ್ತು ಅಂತ ಅಂದುಕೊಳ್ಳುವೆ, ಆದರೆ ನನ್ನ ಕಣ್ಣಮುಂದೆ ನೀವಿದ್ದಿರಿ. ಕಾರ್ ಗಾದರೋ ಬೇರೆ ಡ್ರೆöÊವರ್ ದೊರೆತಾರು ಹಣ ಕೊಟ್ಟರೆ, ಅಗತ್ಯ ಬಿದ್ದರೆ. ಆದರೆ ಬದುಕಿನ ಡ್ರೆöÊವರ್?
ಕಾರ್ ಓಡಿಸಲು ಬರುದಿಲ್ವಾ? ಅಂತ ನನ್ನ ಕುರಿತು ಅನುಕಂಪ ಸೂಸುವವರಿಗೆ ಅಥವಾ ಆಡಿಕೊಳ್ಳುವವರಿಗೆ ಭೂಮಿಯ ಮೇಲಿನ ಎಲ್ಲ ಕೌಶಲಗಳೂ ಒದಗಬೇಕೆಂದೇನೂ ಇಲ್ಲ ಅಲ್ವಾ? ಮಗಳೇ, ನೀನಾಗಲೀ ತಮ್ಮನಾಗಲೀ ನನ್ನನ್ನು ಈ ವಿಷಯದ ಕುರಿತು ತಮಾಷೆ ಮಾಡಲಾರಿರಿ ಎಂಬುದು ನನ್ನ ಧೈರ್ಯ.
ನೀನು ಸೈಕಲ್ ತುಳಿಯುವುದನ್ನು ಕಲಿತದ್ದೊಂದು ಚಂದದ ಕಥೆ. ಮುಂದಿನ ಪತ್ರದಲ್ಲಿ ನೆನಪಿಸುವೆ.
ಇಂತೀ ಅಮ್ಮ
