
(ಪತ್ರ ಏಳು) ಮಗಳೇ,
Letters to Daughter: ತೇಜಣ್ಣ ಎಳೆಯವನಿದ್ದಾಗಲೊಮ್ಮೆ ದೊಡ್ಡಮ್ಮ ಅವನಿಗೆ ಏನೋ ಕಾರಣಕ್ಕೆ ಹೊಡೆದಿದ್ದರು. ಅವನು ತನಗೆ ನೋವಾದ್ದಕ್ಕಿಂತ ಹೆಚ್ಚು, ಅಮ್ಮ ಹೊಡೆದಳೆಂಬ ದುಃಖಕ್ಕಿಂತ ಹೆಚ್ಚು ಬಿಕ್ಕಳಿಸಿ ಅತ್ತದ್ದು ‘ಅಮ್ಮಾ, ನಿನ್ನ ಕೈಯ ಬಳೆ ಚಂದ ಇತ್ತು, ಅದು ಒಡೆದು ಹೋಯ್ತು’ ಅಂತ! ಮಕ್ಕಳೇ ಹೀಗೆ, ನಾವು ಅವರ ತಪ್ಪಿಗೆ ಬೈದೋ ಗದರಿಯೋ ಇಲ್ಲ ಹೊಡೆದೋ ಮಾಡುತ್ತೇವೆ ಎಂಬುದಕ್ಕಿAತಲೂ ಬೇರೇನೋ ಕಾರಣಕ್ಕೆ ಅಳುತ್ತವೆ.
ಮಗುವಿನ ಮುಗ್ಧತೆ ನೋಡಿದಾಗ ಯಾಕಾದರೂ ಹೊಡೆದೆವೋ ಎಂದು ಪರಿತಪಿಸುವುದು ನಾವೇ. ಮಕ್ಕಳಿಗೆ ಶಿಕ್ಷೆ ಕೊಡುವಾಗ ಇಂಥಾ ತಪ್ಪಿಗೆ ಇಂಥದ್ದೇ ಶಿಕ್ಷೆ ಎಂಬ ನಿಯಮವನ್ನೇನೂ ನಮ್ಮ ಹಿರಿಯರು ಮಾಡಿಟ್ಟಿಲ್ಲ ಮಗೂ. ಹಾಗೊಂದು ವೇಳೆ ಇದ್ದಿದ್ದರೆ ಬಹಳ ಅನುಕೂಲವಿರುತ್ತಿತ್ತು. ನಮಗೆ ನಾವು ಬೈದದ್ದೋ ಹೊಡೆದದ್ದೋ ಸರಿ ಎಂಬ ಭರವಸೆಯಾದರೂ ಇರುತ್ತಿತ್ತು. ಕೆಲವೊಮ್ಮೆ ತಪ್ಪು ಕ್ಷುಲ್ಲಕವಿರುತ್ತದೆ, ಶಿಕ್ಷೆ ದೊಡ್ಡದೆನಿಸುತ್ತದೆ, ಅಥವಾ ತಪ್ಪು ದೊಡ್ಡದೇ ಇದ್ದು ಶಿಕ್ಷೆ ಕಡಿಮೆಯೆನಿಸುತ್ತದೆ.
ಇದನ್ನೂ ಓದಿ: Letters to Daughter: ಮಗಳೇ, ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ‘ನನಗೆ ಸಮಾನತೆ ಬೇಕು’ ಅಂತ!
ಬಂಗಾರಿ, ಆಗ ನೀನಿನ್ನೂ ಒಂದೂವರೆ ವರ್ಷದ ಮಗು. ಊಟಕ್ಕೆ ನನ್ನನ್ನು ಅತಿಯಾಗಿ ಸತಾಯಿಸುತ್ತಿದ್ದೀ. (ಬರೆದರೆ ಇದೇ ಒಂದು ಪತ್ರವಾದೀತು.) ಒಂದೆಡೆ ವೈದ್ಯರು ಪದೇಪದೇ ನನ್ನನ್ನು ಎಚ್ಚರಿಸುತ್ತಿದ್ದರು – ಮಗು ತೂಕ ಕಡಿಮೆ ಇದೆ. ತೊಂದರೆಯಾದೀತು, ಅಂತ. ನನಗೆ ಭಯ. ನೀನೋ ಉಣಿಸಿನ ತಟ್ಟೆ ಕಂಡರೆ ಪೆಟ್ಟು ತಿಂದವಳಂತೆ ಅಳುತ್ತಿದ್ದೀ. ಜೀರ್ಣಶಕ್ತಿ ಕಡಿಮೆಯೆಂದೂ ಹೇಳುವ ವೈದ್ಯರು ಚೆನ್ನಾಗಿ ತಿನ್ನಿಸಿ ಎಂದೂ ಹೇಳಿದರೆ ನಾನೇನು ಮಾಡಬೇಕಿತ್ತು? ಒಟ್ಟೂ ಹತಾಶೆ ನನ್ನನ್ನು ಕಾಡಿತ್ತು.
ನಿನ್ನ ರಾತ್ರಿಯ ಊಟದ ಹೊತ್ತು. ಒಂದೇ ಒಂದು ತುತ್ತು ಬಾಯಿಗಿಡಲೊಲ್ಲೆ. ಮುದ್ದು ಮಾಡಿ ಮಂಗಾಟ ಮಾಡಿ ನಾನೇ ಮಂಗನಂತಾಡಿದರೂ ಊಹೂಂ, ಅನ್ನ ತಣಿದಿತ್ತು ವಿನಾ ನೀನು ಉಣ್ಣಲಿಲ್ಲ. ತೊಡೆಯ ಮೇಲೆ ಪಟ್ಟನೆ ಒಂದೇಟು ಹೊಡೆದಿದ್ದೆ. ನಿನ್ನ ಎಳೆಯ ತೊಡೆಯ ಮೇಲೆ ನನ್ನ ಬೆರಳುಗಳು ಮೂಡಿದ್ದವು. ನೀನು ಒಂದೂ ಅರ್ಥವಾಗದೇ ಪಿಳಿಪಿಳಿ ನನ್ನನ್ನೇ ನೋಡುತ್ತಾ, ಮರುಕ್ಷಣದಲ್ಲಿ ಅಮ್ಮ ಎಂದಿನಂತಿಲ್ಲ ಎಂದರಿತು ನನ್ನ ಮಡಿಲಲ್ಲಿ ನಿಂತು ನನ್ನನ್ನು ಬಲವಾಗಿ ಅಪ್ಪಿಕೊಂಡೆ.
ಇದನ್ನೂ ಓದಿ: Letters to Daughter:ಮಗಳೇ, ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಅಂತ ಒಂದು ಹಾಡಿದೆ
ಅತ್ತವಳು ನೀನಲ್ಲ, ನಾನು! ಮತ್ತೊಂದು ಘಟನೆ ನೀನು ಮೂರೂವರೆ ವರ್ಷದವಳಿದ್ದಾಗಿನದ್ದು. ತಮ್ಮನಿಗಾಗ ನಾಲ್ಕು ತಿಂಗಳು. ಅವನಿಗೇನೋ ಸಣ್ಣಗೆ ಜ್ವರ. ರಾತ್ರಿ ನನಗೂ ಅವನಿಗೂ ನಿದ್ದೆಯಿಲ್ಲ. ಇತ್ತ ಬೆಳಗಾದರೆ ಮನೆಮಂದಿಯ ತಿಂಡಿಯ ವ್ಯವಸ್ಥೆಯಾಗಬೇಕು. ಹಾಸಿಗೆ ಹಿಡಿದಿದ್ದ ಅಜ್ಜಿ, ವಯೋಸಹಜ ನಿತ್ರಾಣದಿಂದ ಬಳಲಿದ್ದ ಅಜ್ಜ, ಕಾಲೇಜಿಗೆ ಹೊರಡುವ ತರಾತುರಿಯಲ್ಲಿರುವ ಅಪ್ಪ. ಅಂತೂ ಹೇಗುಹೇಗೋ ಕೆಲಸ ಮುಗಿಸಿದ್ದೆ.
ಅಜ್ಜಿಯ ಸ್ನಾನ ಆಗಿ, ನಿನ್ನ ಸ್ನಾನ ಮಾಡಿಸಿ, ಅಳುತ್ತಿದ್ದ ತಮ್ಮನನ್ನು ಜೋಲಿಯಲ್ಲಿ ಮಲಗಿಸಿ ತೂಗಿ ನಿದ್ದೆ ಮಾಡಿಸಿ ಅವನು ಎದ್ದೇಳುವಷ್ಟರಲ್ಲಿ ಸ್ನಾನ ಮುಗಿಸಿ ಬರೋಣವೆಂದು ಹೋಗಿದ್ದೆ. (ಅಕ್ಕಪಕ್ಕದವರು ನನ್ನ ನೋಡಿದಾಗೆಲ್ಲ ಅನುಕಂಪ ಸೂಸುತ್ತಿದ್ದರು. ‘ಎಂಥ ಬಾಣಂತನ ರೀ ನಿಮ್ದು? ಒಂಭತ್ತು ತಿಂಗಳು ರೆಸ್ಟ್ ಮಾಡೋದಲ್ವರಾ?’ ವಿಶ್ರಾಂತಿಯೆಂಬ ಪದ ನನ್ನ ಪದಕೋಶದಲ್ಲಿ ಇರಲಿಲ್ಲ, ಈಗಲೂ ಇಲ್ಲ ಮಗೂ. ಹಾಗೆಂದು ಸ್ವ ಅನುಕಂಪದಿಂದ ಇದನ್ನು ಹೇಳುತ್ತಿಲ್ಲ. ವಸ್ತುಸ್ಥಿತಿ ಹಾಗಿತ್ತು ಅಷ್ಟೇ) ನಿನಗೇನಿಸಿತ್ತೋ ಗೊತ್ತಿಲ್ಲ, ಬಾತ್ ರೂಮಿನ ಬಾಗಿಲಿನ ಹೊರಗಿನ ಚಿಲಕ ಸಿಕ್ಕಿಸಿ ಹಾಲ್ ಗೆ ಹೋಗಿ ಕುಳಿತುಬಿಟ್ಟಿದ್ದೆ.
ನನ್ನ ಸ್ನಾನ ಮುಗಿಸಿ ಬಾಗಿಲು ತೆಗೆಯಲೆತ್ನಿಸಿದರೆ ಊಹೂಂ.. ತೆರೆಯಲೊಲ್ಲದು. ನಾನು ಕೂಗಿ ಕರೆದರೂ ಯಾರೊಬ್ಬರಿಗೂ ಕೇಳಿಸದು. ಬಾಗಿಲು ಬಡಬಡನೆ ಸದ್ದು ಮಾಡಿದರೆ ಮಲಗಿದ ತಮ್ಮ ಎದ್ದು ಬಿಡುತ್ತಾನೆ. ನನಗೆ ಹತ್ತು ನಿಮಿಷಗಳ ಕಾಲವಾದರೂ ವಿಶ್ರಾಂತಿ ಬೇಕೆನಿಸಿತ್ತು ಅಂದು. ಕಡೆಗೂ ನಿರ್ವಾಹವಿಲ್ಲದೇ ಬಾಗಿಲು ಬಡಿದೆ. ಜೋಲಿಯಲ್ಲಿದ್ದ ತಮ್ಮ ‘ಉವ್ವೇ..’ ಎಂದು ಕೊಸರಿ ಎಚ್ಚರಗೊಂಡ! ನೀನು ನಗುತ್ತಾ ಬಂದು ಬಾಗಿಲ ಚಿಲಕ ತೆಗೆದೆ. ನಿನ್ನ ಕಣ್ಣುಗಳಲ್ಲಿ ತುಂಟತನ ಮಿನುಗುತ್ತಿತ್ತು.
ಇದನ್ನೂ ಓದಿ: Letters to Daughter: ಮಗಳೇ, ನಿನ್ನ ಬಗ್ಗೆ ಏನೋ ಹೇಳಬೇಕು ಎಂದುಕೊಂಡಾಗಲೆಲ್ಲ ನನಗೆ ನನ್ನ ಅಮ್ಮ ನೆನಪಾಗುತ್ತಾಳೆ
ಬೇರೆ ಸಂದರ್ಭವಾದರೆ ಎತ್ತಿ ಒಂದು ಸುತ್ತು ತಿರುಗಿಸಿ ಮುದ್ದಾಡಿರುತ್ತಿದ್ದೆ. ಅಂದು ಸೋತಿದ್ದೆ. ಪಟಪಟನೆ ಎರಡೇಟು ಹೊಡೆದೆ. ಈಗಲೂ ಅದನ್ನು ನೆನೆದಾಗ ಕಣ್ಣಲ್ಲಿ ನೀರಾಡುತ್ತದೆ ನನಗೆ. ಮಗೂ ಅಂದು ಕೇಳಲಿಲ್ಲ, ಇಂದು ಕೇಳುವೆ ಈ ಅಮ್ಮನನ್ನು ಕ್ಷಮಿಸಬಲ್ಲೆಯಾ ಹೇಳು? ಆ ಕ್ಷಣದ ಅಸಹಾಯಕತೆ ನನ್ನನ್ನು ಕಟುವಾಗಿಸಿತ್ತು ಮಗೂ. ಜತೆಗೆ ನನ್ನ ಬದುಕಿನ ಬಂಡಿ ನನ್ನನ್ನು ಎತ್ತೆತ್ತೆತ್ತಲೋ ಸೆಳೆದೊಯ್ಯುತ್ತಿದ್ದ ಭಯ. ಕೆಲಸ ಬಿಟ್ಟು ಮನೆಯಲ್ಲಿದ್ದ ಕಾರಣಕ್ಕೆ ಆರ್ಥಿಕ ಸ್ವಾತಂತ್ರ್ಯ ನನಗಿಲ್ಲ ಎಂಬ ಕಸಿವಿಸಿ ಒಂದೆಡೆ.
ಬದುಕು ಭದ್ರವಾಗಿ ಕಾಲೂರುವ ಅವಕಾಶ ಕೊಡುವ ಮೊದಲೇ ಹೆಗಲಿಗೆ ಜವಾಬ್ದಾರಿಯ ಭಾರ ಹೊರಿಸಿದ ದಿನಗಳವು. ಬದುಕನ್ನು ಬಂದAತೆ ಸ್ವೀಕರಿಸಿದೆವು ನಾನೂ ಅಪ್ಪನೂ, ಎದುರಿಸಿದೆವು. ನಿಮ್ಮ ಬಾಲ್ಯದ ಅಮೂಲ್ಯ ಕ್ಷಣಗಳನ್ನು ನಾವಂದುಕೊಂಡಂತೆ ಅನುಭವಿಸಲು ಸಾಧ್ಯವಾಗದೇ ಇರಬಹುದು, ಆದರೆ ನಿಮ್ಮಂಥಹ ಮುದ್ದುಮಕ್ಕಳನ್ನು ಪಡೆದಿದ್ದೇವಲ್ಲ! ಅದು ದೊಡ್ಡ ಭಾಗ್ಯ. ಮಗಳೇ, ಹೀಗೆ ಹೊಡೆದದ್ದರ ಹಿಂದೆ ಇನ್ನೊಂದು ಭಯವೂ ಇತ್ತು.
ಅದೆಲ್ಲೋ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ಘಟನೆ ಪತ್ರಿಕೆಯಲ್ಲಿ ವರದಿಯಾಗಿತ್ತು. ತಿಂಗಳು ತುಂಬಿದ ಬಸುರಿ ಸ್ನಾನಕ್ಕೆ ಹೋಗಿದ್ದಾಗ ಮೊದಲ ಮಗು, ಹೆಚ್ಚುಕಡಿಮೆ ಎರಡೂವರೆ ವರ್ಷದ್ದು, ಹೊರಗಿನಿಂದ ಚಿಲಕ ಹಾಕಿತ್ತು. ಅಪ್ಪ ಕೆಲಸಕ್ಕೆ ಹೋಗಿದ್ದ ಸಮಯ. ಅಮ್ಮನಿಗೆ ಸ್ನಾನದ ಮನೆಯಲ್ಲಿ ಹೆರಿಗೆ ನೋವು ಶುರುವಾಗಿದೆ, ಮಗು ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಮನೆಗಳಲ್ಲೂ ಎಲ್ಲರೂ ಕೆಲಸಕ್ಕಾಗಿ ಹೊರಗೆ ಹೋಗಿದ್ದರಂತೆ. ಅಪ್ಪ ಸಂಜೆ ಆಫೀಸಿನಿಂದ ಮನೆಗೆ ಮರಳುವ ವೇಳೆ ಎಲ್ಲವೂ ಮುಗಿದಿತ್ತು – ಮಗೂ.
ಅಂತಹ ಸುದ್ದಿಗಳನ್ನು ಓದಿದಾಗೆಲ್ಲ ನಾನು ತಳಮಳಿಸುತ್ತೇನೆ. ಇದನ್ನೆಲ್ಲ ಯೋಚಿಸುವಾಗ ಹೊಡೆದದ್ದು ತಪ್ಪಲ್ಲವೆನಿಸುತ್ತದೆ- ಮುಂದೆಂದೂ ನೀನು ಆ ತಪ್ಪು ಮಾಡಲಿಲ್ಲ ಎಂಬುದೂ ದಿಟವೇ. ಅಮ್ಮನೆಂದರೆ ಮಕ್ಕಳ ಬದುಕಿನ ಶಿಲ್ಪಿಯಂತೆ ಮಗೂ.
ಪೂಜಿಸಲ್ಪಡುವ ಮೂರ್ತಿಯಾಗಬೇಕಿದ್ದರೆ ಕಲ್ಲು ಅದೆಷ್ಟು ಪೆಟ್ಟು ತಿನ್ನುತ್ತದಲ್ಲ, ಹಾಗೆಯೇ ಹೆತ್ತವರ ಪೆಟ್ಟುಗಳು ಅಷ್ಟೇ. ಅದರರ್ಥ ಅಪ್ಪ ಅಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಎಂದೇ ಹೊರತು ಮತ್ತೇನಲ್ಲ. ಬಾಯಿಮಾತಿನಲ್ಲಿ ಹೇಳಿದ್ದು ಕೇಳದಿದ್ದರೆ ಕೈ ಮಾತಾಡುತ್ತದೆ ಅಂತ ನಾನು ಹೇಳುವುದಿತ್ತು. ಕೈ ಮಾತಾಡಬೇಕಾದ ಪರಿಸ್ಥಿತಿ ನಮಗೆ ತಾರದಿದ್ದರೆ ಒಳ್ಳೆಯದು ಅಲ್ಲವೇ ಹೇಳು?
ಒಂದು ಮಾತು ಹೇಳಲಾ, ಮಕ್ಕಳಿಗೆ ಅಮ್ಮಂದಿರು ಹೊಡೆದಾಗ ಮಕ್ಕಳ ಬೆನ್ನು, ಅಮ್ಮನ ಕೈ ಉರಿದಿರುವುದಕ್ಕಿಂತ ಹೆಚ್ಚಾಗಿ ಅಮ್ಮಂದಿರ ಹೃದಯ ಉರಿದಿರುತ್ತದೆ, ಮನಸ್ಸು ನೊಂದಿರುತ್ತಿದೆ. ಅದು ಸರಿಹೋಗುವುದು ಮತ್ತೆ ಮಕ್ಕಳ ನಗುಮುಖ ನೋಡಿದಾಗಲೇ.
ಖುಷಿಯಾಗಿರು ಮಗಳೇ
ಇಂತೀ ಅಮ್ಮ
