ಮಗಳಿಗೆ ಅಮ್ಮನ ಹೃದಯಸ್ಪರ್ಶಿ ಪತ್ರ
(ಪತ್ರ ಆರು) ಮಗಳೇ,
Letters to Daughter: ‘ಹೋಗಮ್ಮ ನೀನು, ನನ್ನ ಮಾತೇ ಕೇಳುವುದಿಲ್ಲ..’ ಅನ್ನುತ್ತೀಯಾ ಆಗಾಗ. ನಿನ್ನ ಫ್ರೆಂಡ್ ಹೊಡೆಯುವ ಡಯಲಾಗ್ ಹೊಡಿತೀಯಾ. ಯು ಹೇಟ್ ಮಿ ಅಮ್ಮಾ’ ಅಂತ. ಮಗಳೇ, ಆ ಮಾತು ಮಾತ್ರ ತಪ್ಪಿಯೂ ಹೇಳಬೇಡ. ತಮಾಷೆಗೆ ಅಂತ ನೀನು ಹೇಳಿದರೂ ನನಗದು ತುಂಬಾ ಘಾಸಿಯಾಗುತ್ತದೆ. ಮಗಳೇ, ನನ್ನದೊಂದು ದೊಡ್ಡ ದೌರ್ಬಲ್ಯ ಏನು ಗೊತ್ತಾ? ಸಿಟ್ಟು ಬರಬೇಕಾದ ಕಡೆ ದುಃಖವಾಗುವುದು.
ನನ್ನ ಕಣ್ಣಂಚಿನಲ್ಲಿ ನೀರು ಕಂಡೆ ಅಂತಾದರೆ ನಿಜಕ್ಕೂ ನನ್ನ ಮನಸ್ಸಿಲ್ಲಿ ದುಃಖ, ಸಿಟ್ಟುಗಳೆರಡೂ ನರ್ತನ ಮಾಡುತ್ತಿವೆ ಅಂತಲೇ ಲೆಕ್ಕ. ಮಗಳೇ, ನಮ್ಮನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತಲೇ ಇರುತ್ತೇವೆ. ಎಷ್ಟೋ ಸಲ ನಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕೊರಗುತ್ತೇವೆ, ನಮ್ಮ ಮಾತುಗಳಿಗೆ ಬೆಲೆ ಕೊಡದೇ ಹೋದಾಗ ನನಗಿಷ್ಟೇ ಮನ್ನಣೆ ಅನ್ನಿಸಿಬಿಡುವುದು ಸಹಜವೇ.
ಇದನ್ನೂ ಓದಿ: Letters to Daughter:ಮಗಳೇ, ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಅಂತ ಒಂದು ಹಾಡಿದೆ
ಬದುಕಿನ ವೈಚಿತ್ರ್ಯ ಏನು ಗೊತ್ತಾ.. ಸರಳವಾಗಿ ಹಗುರವಾಗಿ ಇರುವುದನ್ನು ಸಂಕೀರ್ಣವಾಗಿಸುತ್ತಾ ಭಾರಗೊಳಿಸುತ್ತಾ ನಡೆಯುತ್ತೇವೆ. ಎಳೆಯ ಹಸುಳೆಯಿದ್ದಾಗ ಮಕ್ಕಳಲ್ಲಿ ಮಾತನಾಡಿದಂತೆ ದೊಡ್ಡವರಾದ ಮೇಲೆ ಮಾತನಾಡಲಾಗದು ಕಂದ! ಕೆಲವೊಮ್ಮೆ ಅಮ್ಮನನ್ನು ಮಕ್ಕಳೂ ಅರ್ಥ ಮಾಡಿಕೊಳ್ಳುವುದಿಲ್ಲ ಅನ್ನಿಸಿದಾಗ ಕಾಡುವ ಹತಾಶೆ ಹೀನಾಯವಾದದ್ದು ಮಗೂ. ಯಾಕೆ ಗೊತ್ತಾ? ಸಣ್ಣ ಉದಾಹರಣೆಯಿಂದ ಹೇಳೋಣ.
ನೀನಾಗಲೀ ತಮ್ಮನಾಗಲೀ ಮಾಡಲೇಬೇಕಿದ್ದ ಕೆಲಸವೊಂದನ್ನು ಕಡೆಗಣಿಸಿ ಬೇರೇನೋ ಮಾಡುತ್ತಿದ್ದೀರಿ ಅಂದುಕೊಳ್ಳೋಣ. ನಾನು ಹತ್ತಾರು ಸಲ ಹೇಳಿರುತ್ತೇನೆ- ಬೈಸಿಕೊಂಡು ಮಾಡುವುದಕ್ಕಿಂತ ಮೊದಲೇ ಮಾಡಿ ಅಂತ. ಊಹೂಂ, ನೀವಿಬ್ಬರೂ ಗಮನವೇ ಕೊಟ್ಟಿರುವುದಿಲ್ಲ. ಅಪ್ಪ ಬಂದು ಒಂದು ಮಾತಿನಲ್ಲಿ ಹೇಳಿದರೆ ಸಾಕು, ಮರುಕ್ಷಣದಲ್ಲಿ ನೀವು ಕೆಲಸ ಪೂರೈಸಿರುತ್ತೀರಿ. ನಾನು ಬೆರಗಾಗಿ ನೋಡುತ್ತೇನೆ- ಇಲ್ಲಿಯವರೆಗೆ ನಾನು ಹೇಳಿದ್ದಕ್ಕೆ ಏನು ಬೆಲೆ ಕೊಟ್ಟರು ಮಕ್ಕಳು ಅಂತ!
ಇದನ್ನೂ ಓದಿ: Letters to Daughter: ಮಗಳೇ, ನಿನ್ನ ಬಗ್ಗೆ ಏನೋ ಹೇಳಬೇಕು ಎಂದುಕೊಂಡಾಗಲೆಲ್ಲ ನನಗೆ ನನ್ನ ಅಮ್ಮ ನೆನಪಾಗುತ್ತಾಳೆ
ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ, ‘ನನಗೆ ಸಮಾನತೆ ಬೇಕು’ ಅಂತ! ನಾನೂ ಅದನ್ನೇ ಹೇಳುವುದು. ಇದೊಂಥರಾ ಚೆನ್ನಾಗಿದೆ ಅಲ್ವಾ? ಇನ್ನೂ ತಮಾಷೆ ಗೊತ್ತಾ, ತಮ್ಮ ಸಣ್ಣ ಮಗುವಿದ್ದಾಗ ಕೆಲವೊಮ್ಮೆ ರಾತ್ರಿಯೆಲ್ಲ ಎದ್ದು ಅಳುವುದಿತ್ತು. ‘ಎಷ್ಟೇ ತೂಗಿದರೂ ಮಲಗನು ಮುರವೈರಿ’ ಅಂತ ಹಾಡು ಗುನುಗಿಕೊಂಡು ಅವನನ್ನು ತೂಗಿಯೋ, ಮಡಿಲಲ್ಲಿ ಮಲಗಿಸಿಯೋ, ತಿನ್ನುವುದಕ್ಕೆ ಹಣ್ಣು, ಕುಡಿಯುವುದಕ್ಕೆ ಹಾಲು ಏನೇ ಕೊಟ್ಟರೂ ಊಹೂಂ, ಅವನ ಹಟ ನಿಲ್ಲದು. ಇತ್ತಣಿಂದ ಅವನ ಅಳು ಕೇಳಿ ನೀನೂ ಕುಸುಕುಸು ಅಂತ ಎದ್ದುಬಿಡುತ್ತಿದ್ದೆ.
ಅಗೋ, ಅಪ್ಪ ರಂಗಸ್ಥಳ ಪ್ರವೇಶಿಸುತ್ತಿದ್ದುದೇ ಆಗ! ‘ತಮ್ಮು, ಮಲಗ್ತೀಯೋ ಇಲ್ಲವೋ’ ಅಂತ ಕೇಳಿಬಿಟ್ಟರೆ ಸಾಕು, ನಿನ್ನ ತಮ್ಮ ಅಷ್ಟು ಹೊತ್ತು ಅತ್ತವನು ತಾನಲ್ಲವೇ ಅಲ್ಲ ಎಂಬಂತೆ ನನ್ನನ್ನು ಅವುಚಿಕೊಂಡು ಮಲಗಿಬಿಡುತ್ತಿದ್ದ! ಅಪ್ಪ ಬೈಯದೆಯೂ ಹೊಡೆಯದೆಯೂ ನಿಮ್ಮನ್ನು ಬಾಗಿಸುವುದು ನನಗೊಂದು ವಿಸ್ಮಯ. ಆದರೂ ಅಮ್ಮ ಹೇಳಿದ್ದನ್ನು ಕೇಳಬೇಕು ಅಂತ ನೀವು ಮನಸ್ಸು ಮಾಡಿದರೆ ನನಗೆ ಹೃದಯ ಹಗುರವಾಗುತ್ತದೆ. ಇಲ್ಲದಿದ್ದರೆ ನನಗೂ ಕೆಲವೊಮ್ಮೆ ‘ನನ್ನ ಮಾತಿಗೆ ಬೆಲೆಯಿಲ್ಲ ಅಲ್ವಾ’ ಅನ್ನಿಸಿಬಿಡುತ್ತದೆ. ನಾನೊಂದು ದುಡಿಯುವ ಯಂತ್ರ ಮಾತ್ರ ಅನ್ನಿಸುತ್ತದೆ. ಹಾಗಾಗಬಾರದು, ನೊಂದುಕೊಳ್ಳಬಾರದು ಅಂತ ಎಷ್ಟೇ ಅಂದುಕೊಂಡರೂ ಸೋಲುತ್ತೇನೆ ಮಗಳೇ, ಯಾಕೆಂದರೆ ನಾನು ಅಮ್ಮ, ನೀನು ಮಗಳು.
ಇದನ್ನೂ ಓದಿ: Letters to Daughter: ಮಗಳೇ, ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣಬೇಕು!
ಇದೇ ವಿಷಯದ ಕುರಿತು ಅಪ್ಪನಲ್ಲಿ ನಾನು ಚರ್ಚಿಸಿದರೆ ಅಪ್ಪ ನಿಮ್ಮ ಪರವೇ. ‘ಅಮ್ಮ ಎನ್ನುವುದೇ ಅದಕ್ಕೆ’ ಅಂತ ನನ್ನನ್ನು ಉಪ್ಪರಿಗೆಯಲ್ಲಿ ಕೂರಿಸುವ ಪ್ರಯತ್ನ ಬೇರೆ! ಅಪ್ಪನಲ್ಲಿ ಮಕ್ಕಳು ಎಷ್ಟೇ ಸಲುಗೆಯಿಂದ, ಸ್ನೇಹದಿಂದ ವರ್ತಿಸಿದರೂ ಅಮ್ಮನಲ್ಲಿ ಇರುವ ಸಲುಗೆ ಬೇರೆಯಂತೆ. ಅದನ್ನು ಹಾಗೆಯೇ ಇರಗೊಡಬೇಕಂತೆ. ಸರಿ, ಇರಗೊಡೋಣ. ಆದರೆ ಎರಡಲ್ಲ, ಮೂರು ಸಲ ಹೇಳಿದಾಗಲಾದರೂ ಕೆಲಸ ಕೈಗೂಡಬೇಕಲ್ಲ.
ಇದರ ಕುರಿತು ನಾನು ಯಾಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತೇನೆ ಗೊತ್ತಾ, ಅಮ್ಮನ ಮಾತನ್ನು ಮಕ್ಕಳೇ ಕೇಳದಿದ್ದರೆ ನಮ್ಮ ಮಾತನ್ನು ಶಾಲೆಯಲ್ಲಿ/ ಕಾಲೇಜಿನಲ್ಲಿ ಮಕ್ಕಳು ಕೇಳುವುದಿಲ್ಲ ಅಂತ ಗದರುವುದಕ್ಕೆ ನಮಗೆ ನೈತಿಕಬಲ ಒದಗುತ್ತದೆಯೇ ಹೇಳು? ನನ್ನ ಶ್ರಮದ ಬಲುಪಾಲು ಉಳಿಯುತ್ತದೆ ನೀವು ನಾನೇನೋ ಹೇಳಿದ ತಕ್ಷಣ ಕಾರ್ಯಸನ್ನದ್ಧರಾದರೆ. ಪದೇ ಪದೇ ಹೇಳಿ ಮಾಡಿಸುವಂಥ ಪರಿಸ್ಥಿತಿ ಬಂದರೆ ಬಹಳ ಕಷ್ಟವಾಗುತ್ತದೆ ಮಗೂ. ಇದನ್ನು ನಾನೇಕೆ ಹೇಳುತ್ತಿದ್ದೇನೆ ಅಂತ ನಿನಗರ್ಥವಾಗುತ್ತಿದೆಯಲ್ಲ?
Letters to Daughter: ಮಗಳೇ, ಬದುಕಿನಲ್ಲಿ ಅತ್ಯಂತ ಅಮೂಲ್ಯವಾದ ಅನುಭವವೆಂದರೆ ಮುದ್ದು ಕಂದಮ್ಮಗಳ ಅಪ್ಪುಗೆಯಂತೆ!
ಅಮ್ಮನನ್ನು ದೇವರೆಂದು ಕಾಣಬೇಕಿಲ್ಲ ಪುಟ್ಟಾ, ಮನುಷ್ಯಳೆಂದು ತಿಳಿದರೆ ಸಾಕಲ್ಲ ಎಲ್ಲರೂ? ಇಲ್ಲವಾದರೆ ಏನಾಗುತ್ತದೆ ಗೊತ್ತಾ? ಯಾಂತ್ರಿಕವಾಗಿ ಎಲ್ಲಾ ಕೆಲಸಗಳನ್ನು ಮುಗಿಸಿದಂತಷ್ಟೇ ಆಗುತ್ತದೆ. ಅಲ್ಲಿ ಯಾವುದೇ ಜೀವಕಳೆ ಇರುವುದಿಲ್ಲ. ತುಂಬ ಕಷ್ಟವೆನಿಸುವುದು ಯಾವಾಗ ಗೊತ್ತಾ? ಕಾಲೇಜಿನಲ್ಲೂ ನಾಲ್ಕು ಗಂಟೆಯ ಅವಧಿಯ ಪಾಠ ಮಾಡಿ ಮನೆಗೆ ಬಂದಿರುತ್ತೇನಲ್ಲ, ಬೆಳಗ್ಗಿನಿಂದ ಬಾಕಿ ಉಳಿಸಿದ ಕೆಲಸಗಳು ಎಷ್ಟೋ ರಾಶಿ ಬಿದ್ದಿರುತ್ತವೆ.
ಸಣ್ಣಪುಟ್ಟದ್ದನ್ನು ನಿಮಗೆ ವಹಿಸಿದಾಗ ಮಕ್ಕಳು ಸಿಡಿಮಿಡಿಗುಟ್ಟದೇ ಮಾಡಿದರೆ ನನಗೆಷ್ಟು ಸಮಾಧಾನ ಗೊತ್ತಾ? ನೀವು ಮಾಡುತ್ತೀರಿ, ಇಲ್ಲವೆಂದಲ್ಲ. ಆದರೆ ಕೆಲವೊಮ್ಮೆ ನೀವು ಎಲ್ಲವನ್ನೂ ನನ್ನ ಹೆಗಲ ಮೇಲೆ ಹೊರಿಸಿ ಸುಮ್ಮನಾಗಿಬಿಡುತ್ತೀರಿ. ಯೋಚಿಸಿ ನೋಡು ಮಗೂ ಕೆಲಸ ಹಂಚಿಕೊಂಡು ಮಾಡಿದರೆ ನನಗೆ ನಿಮ್ಮೊಂದಿಗೆ ಸಮಯ ಕಳೆದಂತೆಯೂ ಆಗುತ್ತದೆ, ನನ್ನ ಒಂಟಿತನವೂ ಕರಗುತ್ತದೆ, ಮನಸ್ಸೂ ಶಾಂತವಾಗಿರುತ್ತದೆ. ಪರಿಣಾಮ? ನಾಳೆಯ ದಿನ ನನ್ನ ಸಮಯ ಹೊಂದಿಸಿಕೊಂಡಾದರೂ ನಿಮಗಿಷ್ಟದ ಏನನ್ನಾದರೂ ಮಾಡಿಕೊಡುವುದಕ್ಕೆ ಮನಸ್ಸು ಒತ್ತಾಯಿಸುತ್ತದೆ. ಮಗಳೇ, ಒಂದಂತೂ ನಿಜ. ನಮಗೆ ನೀವೆಂದರೆ ಜೀವ.
Letters to Daughter: ದೇವರು ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ
ನಿಮ್ಮನ್ನೇ ನಾವರ್ಥ ಮಾಡಿಕೊಳ್ಳುವುದಿಲ್ಲ ಎಂದು ನೀನೆನ್ನುತ್ತೀಯಾದರೆ ಕಣ್ಣಿಗೆ ಕಂಡಿರದ ಪಾತ್ರಗಳನ್ನೆಲ್ಲ ಆವಾಹಿಸಿಕೊಂಡು ರಂಗದಲ್ಲಿ ಮರುಸೃಷ್ಟಿ ಮಾಡುವುದೇ ಸುಳ್ಳು ಅಂತಾದೀತು. ಸಮಯ ಸನ್ನಿವೇಶಗಳಿಗೆ ಸ್ಪಂದಿಸುತ್ತಾ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿರುವುದೇ ಸುಳ್ಳು ಅಂತಾದೀತು. ಮಗಳೇ, ನಮ್ಮ ಬದುಕಿನ ಬಣ್ಣ, ನಮ್ಮ ಬರೆವಣಿಗೆಯ ಭಾವ ನೀವೇ ಇಬ್ಬರು ಅಂದಮೇಲೆ ಅರ್ಥ ಮಾಡಿಕೊಳ್ಳುವುದು ಕಷ್ಟವಾ ಕಂದ?
ಹಳೆಯದೊಂದು ವಿಡಿಯೋ ಇದೆ ನೆನಪು ಮಾಡಿಕೋ. ನೀನು ನಿನ್ನ ಆಲ್ಪಮ್ ನೋಡುತ್ತಾ ನಿನ್ನನ್ನು ಎತ್ತಿಕೊಂಡಿರುವ ಅಜ್ಜನನ್ನು ನೋಡಿ ‘ಡಿಂಗ್ ಡಾ ಬೆಲ್’ ಅಂತ ಪದೇ ಪದೇ ಅನ್ನುತ್ತೀ. ನಾನೂ ನಿನ್ನೊಂದಿಗೆ ಅದನ್ನೇ ಪುನರುಚ್ಚರಿಸಿದರೆ ‘ಬೇಡ.. ಅದಲ್ಲ..’ ಅನ್ನುತ್ತೀ. ಅಜ್ಜನೆನ್ನುತ್ತಿದ್ದ ಹಾಗೆ ‘ಡಿಂಗ್ಣ, ರಡ್ಡಡ್ಡಿಂಗ್ಣ’ ಅಂತ ಯಕ್ಷಗಾನದ ಚೆಂಡೆ ಪೆಟ್ಟು ಹೇಳಿದಾಗ ನಿನ್ನ ಮುಖ ಅರಳಿದ ರೀತಿ ನೋಡುತ್ತೀ ಅಲ್ವಾ? ಮಗಳೇ..ಪರಸ್ಪರರ ಅಂತರAಗವನ್ನು ಅರಿಯುವುದು ಏನು ಕಷ್ಟ ಹೇಳು?
ನಿನ್ನದೊಂದು ತಮಾಷೆಯ ಮಾತು ಇಷ್ಟು ಬರೆಸಿತು. ಇನ್ನೇನೋ ಹೇಳಬೇಕಿದೆ, ನಾಳೆ ಬರೆಯುವೆ.
ಇಂತೀ ಅಮ್ಮ
