
(ಮೊದಲನೆಯ ಪತ್ರ) ಮಗಳೇ,
ಅಮ್ಮನ ಆಶೀರ್ವಾದಗಳು. ನಿನಗೇ ಹೇಳಬೇಕಾದ ಮಾತುಗಳನ್ನು ಹೀಗೇಕೆ ಬರೆಯುತ್ತಿರುವೆ ಎಂಬ ಕೌತುಕ ನಿನ್ನದಲ್ಲವೇ? ನಿನ್ನೊಂದಿಗೆ ಕುಳಿತು ಹರಟುವುದರಲ್ಲಿ ಇರುವ ಸಂತೋಷ ಬರೆಯುವುದರಲ್ಲಿ, ಪತ್ರ ಓದುವುದರಲ್ಲಿ ಇರಲಾರದು ನಿಜ. ಆದರೆ ಮಗೂ, ಎಷ್ಟೋ ಮನೆಗಳಲ್ಲಿ ನಿನ್ನಂತಹ ಮಗಳಂದಿರು ಇರುತ್ತಾರೆ, ನನ್ನಂತಹ ಅಮ್ಮಂದಿರೂ ಇರುತ್ತಾರೆ. ಅಮ್ಮನ ಮನದ ಮಾತುಗಳನ್ನು ತೆರೆದಿಡಲು ಅವರಿಗೂ ಇದರಿಂದ ಅನುಕೂಲವಾದೀತು ಎಂಬುದೊಂದು ದೂರಾಲೋಚನೆ.
ಮನೆಯ ಬೆಳಕು ನೀನು, ನಮ್ಮ ಬದುಕಿನ ಸಂಭ್ರಮ ನೀನು. ದೇವರು ಯಾರನ್ನು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ. ನಿನ್ನಂತಹ ಮಗಳನ್ನು ನೋಡಿಯೇ ಅಂಥದ್ದೊಂದು ಉದ್ಗಾರ ಬಂದದ್ದಿರಬೇಕು. ನೀನು ಜನಿಸಿದಾಗಿನಿಂದ ತೊದಲು ನುಡಿಗಳನ್ನಾಡುವವರೆಗೂ ನಿನ್ನೊಂದಿಗೆ ಬಿಡುವಿಲ್ಲದೇ ಹರಟುವ ದಿನಗಳಿದ್ದವು. ನಿನ್ನ ನೋಟದಲ್ಲಿ, ನಗೆಯಲ್ಲಿ, ಹಟದಲ್ಲಿ.. ಎಲ್ಲದರಲ್ಲಿಯೂ ಮಾತಿನ ಮುತ್ತುಗಳಿದ್ದವು. ನಮಗೆ ಬೇಕಾದಂತೆ ನಾವದನ್ನು ಜೋಡಿಸಿಕೊಳ್ಳುತ್ತಿದ್ದೆವು.
ಕಂದಾ, ಈಗಿನ್ನೂ ಮಡಿಲಲ್ಲಿ ಆಡುತ್ತಿದ್ದ ಮುದ್ದುಮಗು ಕೊಂಡಾಟದ ಮಗಳಾಗಿ ಹೆಚ್ಚುಕಡಿಮೆ ನನ್ನಷ್ಟೇ ಎತ್ತರಕ್ಕೆ ಬೆಳೆದಿದ್ದಿ. ಫೋಟೋ ತೆಗೆಸಿಕೊಳ್ಳುವಾಗ ನೀನು ತುದಿಗಾಲಲ್ಲಿ ನಿಂತು ನನ್ನ ಎತ್ತರಕ್ಕೆ ಇರುವಂತೆ ಮಾಡಿಕೊಳ್ಳುತ್ತಿ. ಅದು ಎಲ್ಲರಿಗೂ ಗೊತ್ತು ಬಿಡು! ನಿನ್ನ ತುಂಟತನ, ತುಂಟನಗೆ ಮುಖದ ತುಂಬಾ ಹಾಗೆಯೇ ಅರಳಿಕೊಂಡಿದ್ದರೆ ನಮ್ಮ ಮನಸ್ಸೂ ಉಲ್ಲಸಿತವಾಗಿರುತ್ತದೆ. ಕ್ಷಣಕಾಲ ನೀನು ಮುಖ ಬಾಡಿಸಿಕೊಂಡರೂ ಕಳವಳಿಸುವ ಸರದಿ ನಮ್ಮದು. ಮಗಳೇ, ನಿನ್ನ ಈ ವಯಸ್ಸೇ ಹಾಗೇ. ನಾವೂ ಇದೆಲ್ಲ ಹಂತಗಳನ್ನು ದಾಟಿ ಬಂದವರಲ್ಲವೇ ಹೇಳು? ನಿನ್ನೊಳಗಿನ ತಲ್ಲಣಗಳು ನಮಗೆ ಅರ್ಥವಾಗಲೇ ಬೇಕು. ಅಪ್ಪ-ಅಮ್ಮ ನಮಗೆ ಸಮಯ ಕೊಡುತ್ತಿಲ್ಲ ಎಂಬುದು ಈ ಶತಮಾನದ ಬಹುಮಕ್ಕಳ ಮುನಿಸು. ಅದು ಕೊರಗಾಗಬಾರದು ಎಂಬುದಕ್ಕಾಗಿ ಈ ಅಕ್ಕರೆಯ ಓಲೆ.
ಮಗಳೇ, ಮನೆಯಿಂದ ಹೊರಗೂ ಮನೆಯೊಳಗೂ ದುಡಿಯುವ ಅಮ್ಮಂದಿರ ಮಕ್ಕಳೆಲ್ಲ ಬಹುಶಃ ತಮ್ಮ ಅಮ್ಮಂದಿರ ಬಗ್ಗೆ ಇಂತದ್ದೇ ಪೊಸೆಸಿವ್ನೆಸ್ ಹೊಂದಿರುತ್ತಾರೆ. ಅಮ್ಮ ಮನೆ ತಲುಪಲು ಹಪಹಪಿಸುತ್ತಿರುತ್ತಾರೆ. ನಿನ್ನೊಳಗೆ ಉಕ್ಕುವ ಉತ್ಸಾಹ, ಅದರೊಂದಿಗಿನ ಮಾತುಗಳು ಅಮ್ಮ(Mother) ಮನೆಗೆ ತಲುಪುವುದನ್ನೇ ಎದುರು ನೋಡುತ್ತಿರುತ್ತವೆ.
ಮಗಳೇ, ನಾನು ನಿನ್ನಂತಿದ್ದಾಗ ಶಾಲೆಯಿಂದ ನಡೆದು ಮನೆಗೆ ತಲುಪುವಷ್ಟರಲ್ಲಿ ಅಮ್ಮ ಮನೆಯೊಳಗೆ ಇರಲೇ ಬೇಕಿತ್ತು ನನಗೆ. ಅಮ್ಮನೇನಾದರೂ ಹಸುಗಳ ಹಟ್ಟಿಗೆ ಸೊಪ್ಪು ತರುವುದಕ್ಕೋ, ಹುಲ್ಲು ತರುವುದಕ್ಕಾಗಿಯೋ ಅಥವಾ ಇನ್ನೇನಾದರೂ ಕೆಲಸದಲ್ಲಿ ತೊಡಗಿಕೊಂಡಿದ್ದರೆ ನನಗೆ ಅಸಾಧ್ಯ ಸಿಟ್ಟು. ಇಡೀ ದಿನ ಶಾಲೆಯಲ್ಲಿ ನಡೆದದ್ದನ್ನೆಲ್ಲ ಒಂದೇ ಉಸಿರಿನಲ್ಲಿ ಅಮ್ಮನಲ್ಲಿ ಹೇಳಿದರೆ ಸಮಾಧಾನ. ಒಂದು ವೇಳೆ ಅಮ್ಮನ ಕೆಲಸಗಳು ಮುಗಿದಿರದೇ ಇದ್ದರೆ ನಾನೂ ಅಮ್ಮನ ಹಿಂದೆಯೇ ನಡೆದುಬಿಡುತ್ತಿದ್ದೆ. ಹಸುಗಳಿಗೆ ಬೇಕಾದ ಮಡ್ಡಿಸೊಪ್ಪು ಕೊಯ್ಯುತ್ತಾ ಮಾತಾಡಿಕೊಂಡು ನಡೆದ ಸಂಜೆಗಳೆಷ್ಟೋ! ಏಳು ಕಿಲೋಮೀಟರ್ ದೂರ ನಡೆದು ಬಂದ ದಣಿವು ಅಮ್ಮನೊಂದಿಗೆ ನಡೆಯುವಾಗ ಮರೆತುಹೋಗುತ್ತಿತ್ತು. ಅಮ್ಮ ಎಷ್ಟು ಕೇಳಿಸಿಕೊಂಡಳೋ, ಬಿಟ್ಟಳೋ ಗೊತ್ತಿಲ್ಲ, ಆದರೆ ನಾನು ಹಗುರಾಗುತ್ತಿದ್ದೆ. ಅಮ್ಮ ಹೂಂಗುಟ್ಟಿದರೂ ಇಲ್ಲದಿದ್ದರೂ ಅಮ್ಮನೊಂದಿಗೆ ಕಳೆಯುವ ಆ ಕೆಲವು ನಿಮಿಷಗಳು ನನ್ನ ಪಾಲಿಗೆ ಅತ್ಯಂತ ಅಮೂಲ್ಯವಾಗಿದ್ದವು.
ಮಗಳೇ, ಈಗ ನೀನು ಮಾಡಬೇಕಾಗಿರುವುದೂ ಅಷ್ಟೇ. ಅಮ್ಮನಿರುವಲ್ಲಿಗೆ ಬಾ, ಸಿನೆಮಾದಲ್ಲೋ, ಸೀರಿಯಲ್ಲಿನಲ್ಲೋ, ಪತ್ರಿಕೆಗಳ ಲೇಖನಗಳ ಚಿತ್ರಗಳಲ್ಲೋ ಇರುವಂತೆ ಅಮ್ಮ-ಮಗಳೆಂದರೆ ಚೆಂದವಾಗಿ ಅಲಂಕರಿಸಿಕೊಂಡು ಹಾಸಿಗೆಯ ಮೇಲೋ, ಸೋಫಾದ ಮೇಲೋ ಅಕ್ಕಪಕ್ಕವೇ ಕುಳಿತು ಮಾತುಗಳನ್ನಾಡುವುದು ಅಭಿನಯ ಮಾತ್ರ. ಅದು ಬದುಕಲ್ಲ. ಅಟ್ಟುಂಬಳ (ಅಡುಗೆ ಮಾಡಿ ಊಟ ಮಾಡುವ ಕೊಠಡಿ) ವೆಂಬುದು ಅಮ್ಮ-ಮಗಳಂದಿರ ಮಾತಿಗೆ ಹೇಳಿ ಮಾಡಿಸಿದ ಜಾಗ! ಹೌದೋ ಅಲ್ಲವೋ ನೋಡು. ಅಲ್ಲಿ ಅಮ್ಮನ ಮಾತಿಗೆ ನೀನು, ನಿನ್ನ ಮಾತಿಗೆ ನಾನು ಕಿವಿಯಾಗುವುದು ಕಷ್ಟವಲ್ಲ. ಅದರರ್ಥ ನಮ್ಮ ಮಾತುಗಳು ಮತ್ತು ನಾವು ಅಡುಗೆ ಮನೆಗೆ ಸೀಮಿತವೆಂದಲ್ಲ. ಅಡುಗೆ ಮನೆಯೆಂಬುದು ಮನೆಯ ಅತ್ಯಂತ ಆಪ್ತ ಜಾಗ. ಹಸಿವೆಗೆ ಉಣಿಸು ಒದಗಿಸುವ ಜಾಗ. ಅದು ಅತ್ಯಂತ ಶ್ರೇಷ್ಠವೇ ಮಗಳೇ. ನಿನ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅಡುಗೆಯ ಕೆಲಸ ಮುಗಿದದ್ದೇ ಗೊತ್ತಾಗುವುದಿಲ್ಲ. ಯಾಕೆ ಗೊತ್ತಾ, ನಿನಗೇ ಅರಿವಿಲ್ಲದೇ ನೀನು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಮಾತನಾಡುತ್ತೀ! ನಿನಗದು ಕಲಿಕೆಯೂ ಹೌದು, ನನಗೆ ಉಪಕಾರವೂ ಹೌದು.
ಎಲ್ಲರ ಬಾಲ್ಯದ ನೆನಪುಗಳಲ್ಲಿಯೂ ಒಂದು ಅಡುಗೆಮನೆ, ಹರಡಿಟ್ಟ ಪಾತ್ರೆಗಳು, ಒಲೆಯ ಮೇಲೆ ಬೇಯುತ್ತಿರುವ ತಿನಿಸು ಮತ್ತು ಅಮ್ಮ..ಅವಳ ಪ್ರೀತಿ ಇರುತ್ತದಂತೆ. ಮುಂದೆ ನೀನು ಬದುಕಿನ ಔನ್ನತ್ಯಕ್ಕೇರಿದ ಬಳಿಕ ಬಾಲ್ಯವನ್ನೊಮ್ಮೆ ತಿರುಗಿ ಮೆಲುಕು ಹಾಕುವಾಗ ಅಲ್ಲಿ ನಮ್ಮಿಬ್ಬರ ಪಿಸುಮಾತುಗಳು, ಹುಸಿಮುನಿಸುಗಳ ಬೆಚ್ಚಗಿನ ನೆನಪುಗಳು ಭದ್ರವಾಗಿರಬೇಕೆಂಬುದು ನನ್ನ ಬಯಕೆಯೂ ಹೌದು, ಹಾರೈಕೆಯೂ ಹೌದು. ನೀನೀಗ ಅಡುಗೆಮನೆಗೆ ಬಂದರೆ ಬಿಸಿಬಿಸಿ ಊಟ ಬಡಿಸುವೆ, ಅದರೊಂದಿಗೆ ಅಂತರಂಗದ ಪ್ರೀತಿಯನ್ನೂ ಉಣಿಸುವೆ. ಬರುತ್ತೀಯಾ?
ಇಂತೀ ಅಮ್ಮ
