
ಇಂದಿನ ಸಮಾಜದಲ್ಲಿ ಹೆಣ್ಣು ಏಕ ಕಾಲಕ್ಕೆ ಹಲವು ಪಾತ್ರಗಳನ್ನು ನಿಭಾಯಿಸ ಬಲ್ಲಳು. ಅವಳಲ್ಲಿ ಆ ಶಕ್ತಿಯುಂಟು. ಮಗಳಾಗಿ, ಹೆಂಡತಿಯಾಗಿ, ಸೊಸೆಯಾಗಿ ಹಾಗೂ ತಾಯಿಯಾಗಿ ಎಲ್ಲದರಲ್ಲಿಯೂ ಆಕೆ ವಿಶೇಷವಾಗಿಯೇ ಕಾಣಿಸಿಕೊಳ್ಳುತ್ತಾಳೆ. ಎಲ್ಲಾ ಹಂತಗಳಲ್ಲಿಯೂ ಪ್ರಬಲವಾಗಿಯೇ ಮೆರೆಯಲು ಯತ್ನಿಸುತ್ತಾಳೆ. ಆದರೆ ಈ ಒಂದು ಹಂತದಲ್ಲಿ ಅವಳಿಗೆ ತಿಳಿದೋ, ತಿಳಿಯದೆಯೋ ಹರಿಯದ ನೀರಿನಂತೆ ನಿಂತು ಬಿಡುತ್ತಾಳೆ. ಇದಕ್ಕೆ ಕಾರಣಗಳನ್ನು ಹುಡುಕಿದರೆ ಬಹುಶಃ ಸಿಗಲಾರವು. ಎಲ್ಲರೂ ಸಂತೋಷದಲ್ಲಿ ತೇಲುವಾಗ ಅವಳು ಕಣ್ಣೀರಿನಲ್ಲಿ ಮುಳುಗಿರುತ್ತಾಳೆ ಅದುವೇ ತಾಯ್ತನ.
ಈ ತಾಯ್ತನದಿಂದಾಗಿ ಇಡೀ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ಪ್ರಪಂಚಕ್ಕೆ ತಾನೊಂದು ಹೊಸ ರೀತಿಯಲ್ಲಿ ಪರಿಚಯವಾಗುತ್ತಾಳೆ. ಹೊಸ ಸಂಬಂಧ ಹೊಂದುತ್ತಾಳೆ. ಅನೇಕರು ಈ ಪಾತ್ರವನ್ನು ಅತಿಶ್ರೇಷ್ಟ ಎಂದು ಹೊಗಳುತ್ತಾರೆ ಅದುವೇ “ತಾಯಿ” ಆದರೆ ಈ ಹೊಸ ಪಾತ್ರಕ್ಕೆ ಹೊಂದಿಕೊಳ್ಳುವ ಆಕೆಯ ಮನಸ್ಥಿತಿ ಎಂತಹದ್ದು ಎಂದು ಹುಡುಕುವವರು ಕಡಿಮೆ.
ಆ ತಾಯಿಯ ಮನಸ್ಸಿನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಹೆಚ್ಚಾಗಿ ಯಾರಿಗೂ ಅರಿವಿರುವುದಿಲ್ಲ. ಇದ್ದಕ್ಕಿದಂತೆ ಒಂದೇ ಕ್ಷಣದಲ್ಲಿ ಮಂಕಾಗಿಹೋಗುತ್ತಾಳೆ. ಅವಳ ಜೀವನಕ್ಕೆ ಅರ್ಥವೇ ಇಲ್ಲವೇನೋ ಅನ್ನುವ ಹಾಗೆ ನಿರಾಸಕ್ತಿ ತೋರಿಸುತ್ತಾಳೆ. ಇದನ್ನು ಪೋಸ್ಟ್ ಪಾರ್ಟನ್ ಡಿಪ್ರೆಶನ್ (Post Partum Depression) ಎನ್ನಲಾಗುತ್ತದೆ. ಇದು ಪ್ರಸವ ನಂತರದಲ್ಲಿ ಉಂಟಾಗುವ ಸ್ಥಿತಿಯಾಗಿದೆ.
ಪ್ರಸವ ನಂತರದಲ್ಲಿ ಕೆಲವು ಮಹಿಳೆಯರಲ್ಲಿ ಭಾವನಾತ್ಮಕ ಏರಿಳಿತಗಳು ಉಂಟಾಗುತ್ತವೆ. ಈ ಸಮಯದಲ್ಲಿ ಅವರು ಭಾವನಾತ್ಮಕವಾಗಿ ಕುಗ್ಗಿ, ನಿರಶೆ ಬೆದರಿಕೆ, ಆತಂಕ, ಗಾಬರಿ, ಕೋಪ, ಉತ್ಸಾಹ ಹೀನತೆಯಂತಹ ಲಕ್ಷಣಗಳನ್ನು ತೋರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಬೇಬಿ ಬ್ಲ್ಯೂಸ್ (Baby Blues) ಎಂದು ಕರೆಯಲಾಗುತ್ತದೆ. ಬಹುತೇಕ ಜನರಿಗೆ ಇದರ ಅರಿವು ಕಡಿಮೆ ಇದ್ದು, ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ, ಈ ಸ್ಥಿತಿ ತೀವ್ರವಾಗಿ ಧೀರ್ಘ ಕಾಲದವರೆಗೂ ಮುಂದುವರೆಯುವ ಅಪಾಯವಿದೆ.
ಈ ಸ್ಥಿತಿ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮತ್ತು ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯ ಮೇಲೆಯೋ ತೀವ್ರ ದುಷ್ಪರಿಣಾಮ ಬೀರುತ್ತದೆ. ಇಂತಹ ಸ್ಥಿತಿಯನ್ನು ವೈದ್ಯಕೀಯವಾಗಿ “ಪೋಸ್ಟ್ ಪಾರ್ಟನ್ ಡಿಪ್ರೆಶನ್”(Post Partum Depression) ಎನ್ನಲಾಗುತ್ತದೆ. ಪ್ರತಿ 100 ತಾಯಂದಿರಲ್ಲಿ ಶೇ. 22 ರಿಂದ 28 ರಷ್ಟು ಮಂದಿ ಮಹಿಳೆಯರಿಗೆ ಈ ಸಮಸ್ಯೆ ಉಂಟಾಗಬಹುದು. ಅಂದರೆ ಸರಾಸರಿ 4 ಅಥವಾ 5 ತಾಯಂದಿರಲ್ಲಿ ಒಬ್ಬರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ.
ಪ್ರಸವ ನಂತರ ಪ್ರಸವ ನಂತರ ಹಿಂಜರಿಕೆ ಉಂಟಾಗುವ ಬಗೆ ಮತ್ತು ಕಾಣಿಸಿಕೊಳ್ಳುವ ರೀತಿ:-
ತಾಯಿ ಮಗುವಿಗೆ ಜನ್ಮಕೊಟ್ಟ ನಂತರ, ಅವರೊಳಗೆ ಏನೋ ಖಾಲಿತನವೆನಿಸುವುದು. ಮಗುವನ್ನು ನೋಡಿದಾಗಲು ಸಂತೋಷವಾಗದೆ ಇರುವುದು, ನಿರಂತರವಾಗಿ ಅಳುತ್ತಿರುವುದು, ಬೇಸರದಿಂದ ಇರುವುದು, ಎನೋ ಜೀವನದಲ್ಲಿನ ದೊಡ್ಡ ಸಮಸ್ಯೆ ಎದುರಾಗಿದೆ ಎನ್ನುವಂತೆ ವರ್ತಿಸುವುದು ಇವೆಲ್ಲಾ ಸಮಾನ್ಯ ಸ್ಥಿತಿಗಳಲ್ಲ. ಇದು ಹಾರ್ಮೊನಲ್ ಬದಲಲಾವಣೆ, ನಿದ್ರಾ ಕೊರತೆ, ದೈಹಿಕ ಆರೋಗ್ಯದಲ್ಲಿನ ಕೊಂದುಕೊರತೆ ಮತ್ತು ಭಾವನಾತ್ಮಕ ಒತ್ತಡಗಳಿಂದ ಇದು ಉಂಟಾಗುತಿರುತ್ತದೆ.
ಈ ಸ್ಥಿತಿಯು ಸಾಮಾನ್ಯವಾಗಿ ಮಗುವಿಗೆ ಜನ್ಮನೀಡಿದ 2 ರಿಂದ 8ವಾರದೊಳಗಾಗಿ ಬರಬಹುದು. ಕೆಲವೊಮ್ಮೆ ಹೆಚ್ಚು ಸಮಯದ ನಂತರವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಹೆಚ್ಚು ಸಮಯದ ಬಳಿಕವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ತಾಯಂದಿರಿಗೂ ಈ ಸ್ಥಿತಿಯ ಬಗ್ಗೆ ಗೊತ್ತಾಗದೆ ಇರಬಹುದು.
ಇದರ ಲಕ್ಷಣಗಳು:
ಈ ಲಕ್ಷಣಗಳು ತಾಯಿಯ ಸ್ಥಿತಿಯ ಮೇಲೆ ತಿವ್ರತೆಯನ್ನು ಪಡೆದುಕೊಳ್ಳುತ್ತವೆ.
- ನಿರಂತರ ದುಃಖ, ಖಾಲಿತನ ಅಥವಾ ನಿರಾಶೆ
- ಮಗುವಿನತ್ತ ಆಶಕ್ತಿಯ ಕೊರತೆ
- ಅತಿಯಾದ ಬೇಸರ, ಹೆಚ್ಚು ಅಳುವುದು ಅಥವಾ ಭಾವನಾತ್ಮಕವಾಗಿ ಬಳಲುವುದು
- ನಿದ್ದೆಯ ಸಮಸ್ಯೆ, ಹೆಚ್ಚು ನಿದ್ರೆ ಅಥವಾ ನಿದ್ರೆ ಮಾಡದಿರುವುದು
- ಆಹಾರದ ಮೇಲೆ ಆಸಕ್ತಿ ಇಲ್ಲದಿರುವುದು ಅಥವಾ ಹೆಚ್ಚು ಆಹಾರ ಸೇವಿಸುವುದು
- ತಾನು ವ್ಯರ್ಥ ಎನ್ನುವಂತೆ ಭಾಸವಾಗುವುದು
- ಆತ್ಮಹತ್ಯೆಯ ಆಲೋಚನೆಗಳು
- ಮಗುವಿನ ಬಗ್ಗೆ ಕಾಳಜಿ ಇಲ್ಲದಿರುವುದು ಅಥವಾ ಅತಿಯಾದ ಕಾಳಜಿವಹಿಸುವುದು.
- ಎಲ್ಲರಿಂದ ದೂರವಿರುವುದು
- ಕಿರಿಕಿರಿ ಭಾವನೆ ಉಂಟಾಗುವುದು
- ಪಶ್ಚಾತಾಪ ಭಾವನೆ ಮೂಡುವುದು
ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಕಷ್ಟವಾಗುವುದುಈ ಮನಸ್ಥಿತಿ ಉಂಟಾಗಲು ಕಾರಣಗಳು:-
- ಹಾರ್ಮೋನಲ್ ಬದಲಾವಣೆ: ಪ್ರಸವದ ನಂತರ ತಾಯಿಯ ದೇಹದಲ್ಲಿರುವ ಇಸ್ಟ್ರೊಜನ್ ಮತ್ತು ಪ್ರೊಜೆಸ್ಟೋನ್ಗಳ (Estrogen and progesterone) ಮಟ್ಟ ತೀವ್ರವಾಗಿ ಇಳಿಕೆಯಾಗುವುದರಿಂದ ಮನಸ್ಥಿತಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.
- ಆರ್ಥಿಕ ಸಮಾಜಿಕ ಒತ್ತಡ: ಕುಟುಂಬದಲ್ಲಿ ಬೆಂಬಲದ ಕೊರತೆ, ಬಡತನ, ಕೆಲಸದ ಅನಿಶ್ಚಿತತೆ ಹಾಗೂ ಗಂಡನ ಜೊತೆ ಸಂಪರ್ಕದ ಕೊರತೆಯು ಈ ಸ್ಥಿತಿಗೆ ಕಾರಣವಾಗಬಹುದು.
- ಹಿಂದಿನ ಮನೊವೈಕಲ್ಯದ ಪ್ರಭಾವ: ತಾಯಿಗೆ ಹಿಂದಿನ ದಿಮಾನಗಳಲ್ಲಿ ಅತಿಯಾದ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಪ್ರಸವನಂತರ ಹಿಂಜರಿಕೆಗೆ ಕಾರಣವಾಗಬಹುದು.
- ಅನಾರೋಗ್ಯಕರ ಗರ್ಭಾವಸ್ಥೆ ಅಥವಾ ಸೀಸೆರಿಯನ್ ಡೆಲಿವರಿ: ದೈಹಿಕವಾಗಿ ಹಾಗು ಮಾನಸಿಕವಾಗಿ ಕಷ್ಟಕರ ಗರ್ಭಧಾರಣೆ ಅಥವಾ ಜನನ ಕ್ರಮದಿಂದದಾಗಿ ಮಹಿಳೆಯರ ಮೆಲೆ ಹೆಚ್ಚಿನ ಒತ್ತಡದಿಂದಾಗಿ ಈ ಸ್ಥಿತಿ ಕಾಣಬಹುದು.
ಪರಿಣಾಮಗಳು:-
- ತಾಯಿಯ ಮಾನಸಿಕವಾಗಿ ಹಾಗೂ ದೈಹಿಕವಗಿ ಕುಗ್ಗುತ್ತಾರೆ
- ಮಗುವಿನ ಕಾಳಜಿವಹಿಸದೆ ಇರುವುದು ಅಥವಾ ಅತಿಯಾದ ಕಾಳಜಿ ವಹಿಸುವುದು
- ತಾಯಿಯ ತೂಕ ಕಡಿಮೆಯಾಗುವುದು
- ದೈಹಿಕ ಆರೋಗ್ಯ ಕುಸಿಯುವುದು
- ಮಗುವುನ ಮನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ
- ದಾಪಂತ್ಯ ಜೀವನದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ.
ಚಿಕಿತ್ಸೆ ಮತ್ತು ಪರಿಹಾರ ಮಾರ್ಗಗಳು:
- ಅರಿವು ಮೂಡಿಸುವುದು: ಈ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ತಾಯಿಯಂದಿರನ್ನು ಪ್ರಸವ ನಂತರದ ಸ್ಥಿತಿಗೆ ಸಜ್ಜುಗೊಳಿಸುವುದು. ಇದು ದೈಹಿಕ ಮಾನಸಿಕ ಸಮಸ್ಯೆ ಎಂದು ಅರ್ಥ್ಯಸುವುದು.
- ವೈದ್ಯಕೀಯ ಚಿಕಿತ್ಸೆ: ಖಿನ್ನತೆಯ ಲಕ್ಷಣಗಳು ಹೆಚ್ಚಿದ್ದರೆ ಮನೋವೈದ್ಯರ ಸಲಹೆ ಪಡೆಯುವುದು. ವೈದ್ಯರ ಸಲಹೆಯ ಮೆರೆಗೆ ಔಷದೋಪಚಾರ ತೆಗೆದುಕೊಳ್ಳುವುದು(ವೈದ್ಯರನ್ನು ಸಂಪರ್ಕಿಸಿದ ಬಳಿಕವೇ ಔಷದೋಪಚಾರ ತೆಗೆದುಕೊಳ್ಳುವುದು
- ಮಾನಸಿಕ ಚಿಕಿತ್ಸೆ: ಸೈಕೊಥೆರಪಿ ಪಡೆಯುವುದು ಬಹಳ ಪರಿಣಾಮಕಾರಿಯಾಗಿರುತ್ತದೆ. ಸಮಸ್ಯೆಗೆ ಅನುಗುಣವಾಗಿ ಮನೋಚಿಕಿತ್ಸಕರು ಹಲವಾರು ಮನೋ ವಿಜ್ಞಾನದ ವಿಧಾನಗಳನ್ನು ಬಳಸಿ ಅದರಿಂದ ಹೊರ ಬರುವಂತೆ ಮಾಡುತ್ತಾರೆ.
- ಪರಿವಾರದ ಬೆಂಬಲ:ಗಂಡ, ಕುಟುಂಬದ ಹಿರಿಯರು, ಸ್ನೇಹಿತರು ಮತ್ತು ನೆರೆಹೊರೆಯವರ ಪರಾನುಭೂತಿಯೂ(Empathy) ಕೂಡ ಈ ಮನಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ.
- ತನ್ನ ತನ ಕಾಯ್ದುಕೊಳ್ಳುವುದು: ತಾಯಿಯಾದ ಬಳಿಕ ತನ್ನ ಜೀವನವೇ ಮುಗಿದು ಹೋಯಿತು ಎಂದುಕೊಳ್ಳದೆ ಓದು, ಸಂಗೀತ, ನೃತ್ಯ, ಪ್ರಾಣಾಯಾಮ ಸೇರಿದಂತೆ ಮತ್ತಿತರ ಆಸಕ್ತಿಕರ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು.
- ಊಟ, ನಿದ್ರೆ, ವಿಶ್ರಾಂತಿಯು ಅತಿ ಮುಖ್ಯ: ಹೌದು ಇಂತಹ ಸಂದರ್ಭಗಳಲ್ಲಿ ಸರಿಯಾದ ಸಮಯದಲ್ಲಿ ಊಟ, ನಿದ್ರೆ, ವಿಶ್ರಾಂತಿ ತೆಗೆದು ಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇದು ಜೀವನದಲ್ಲಿ ಆಗುವ ಬದಲಾವಣೆಗಳನ್ನು ಹೊದಾಣಿಕೆ ಮಾಡಲು ಸಹಕಾರಿಯಾಗುತ್ತದೆ.
- ವೈದ್ಯರ ಸಲಹೆ ಅತ್ಯಗತ್ಯ: ತಾಯಿಯಾದ ಬಳಿಕ ನಿಮಗೆ ಯಾವುದೇ ರೀತಿಯ ಅನುಮಾನಗಳು ಉಂಟಾದರೂ ನೇರವಾಗಿ ವೈದ್ಯರನ್ನು ಸಂಪರ್ಕಿಸಿ ಅವರಿಂದ ಪರಿಹಾರೋಪಾಯಗಳನ್ನು ಪಡೆಯುವುದು.
- ಹತ್ತಿರದವರ ಸಹಾಯ ಕೇಳಿ: ನಿಮಗೆ ತೀರಾ ಹತ್ತಿರವೆನಿಸುವವರ ಬಳಿ ಸಹಾಯ ಕೇಳಬೇಕು. ಸಹಾಯ ಕೇಳುವುದು ದುರ್ಬಲವಲ್ಲ.ತಾಯಿಯೆಂದರೆ ಎಂತಹದ್ದೇ ಸಮಸ್ಯೆಗಳು ಬಂದರು ಬಲಿಷ್ಟಳಾಗಿ ಎಲ್ಲವನ್ನು ಮೌನವಾಗಿ ಸಹಿಸಿಕೊಳ್ಳಬೇಖು ಎನ್ನುವ ನಿರೀಕ್ಷೆ ಈ ಸಮಾಜದಲ್ಲಿದೆ. ಅದರಲ್ಲು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಇದು ಅತಿಹೆಚ್ಚು ಕಂಡು ಬರುತ್ತದೆ. ಅನೇಕ ಮಹಿಳೆಯರು ತಮಗೆ ಆಗುತ್ತಿರುವ ಭಾವನಾತ್ಮಕ ವ್ಯತಿರಿಕ್ತಗಳನ್ನು ಹೇಳಲು ಹೆದರುತ್ತಾರೆ. ಒಂದುವೇಳೆ ಹೇಳಿದರು ಕೂಡ “ಇದು ಎಲ್ಲರಿಗೂ ಹೀಗೆ ಆಗುತ್ತದೆ” ಎನ್ನುವ ಪ್ರತಿಕ್ರಿಯೆಯಿಂದಾಗಿ ಆಕೆಯ ಮನೋಸ್ಥೈರ್ಯ ಕುಗ್ಗುತ್ತದೆ. ಇದರಿಂದ ಅವರ ಮಾನಸಿಕ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.
ಈ ಸ್ಥಿತಿಯಲ್ಲಿ ಅವರನ್ನು ಅರ್ಥಮಾಡಿಕೊಳ್ಳುವ ಗಂಡ, ಅತ್ತೆ, ಸಮಾಜ ಬೇಕಿರುತ್ತದೆ. ತಾಯಿಯಾದವಳಿಗು ತನ್ನದೆ ಒಂದು ಸುಂದರ ಜೀವನವಿದೆ ಎಂದು ಸಾಂತ್ವಾನ ಹೇಳುವವರು ಬೇಕಿರುತ್ತದೆ. ತಾಯ್ತನದ ಆರೈಕೆಯಲ್ಲಿರುವ ಹೆಣ್ಣನ್ನು ಜಾಗರೂಕತೆಯಿಂದ ನಡೆಸಿಕೊರ್ಳಳುವುದು ಸಮಾಜದ ಜವಾಬ್ದಾರಿಯಾಗಿರುತ್ತದೆ. ವೈದ್ಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟನೆಗಳು ಎಲ್ಲರಿಗೂ ಇದರ ಕುರಿತು ಅರಿವು ಮೂಡಿಸುವುದು ಅವರ ಹೊಣೆಗಾರಿಕೆಯಾಗಿರುತ್ತದೆ. ಒಬ್ಬ ಹೆಣ್ಣು ತಾಯಿಯಾದ ಬಳಿಕ ಆಕೆ ಹೊಸ ಜೀವನವನ್ನು ಆರಂಭಿಸಲು ಬೆಂಬಲಿಸುವ ಕೆಲಸವಾಗಬೇಕು.

1 thought on “Women’s Mental Health: ತಾಯ್ತನದ ನಲಿವಿನಲಿ ಕಾಡುವ ಮನಸ್ಸಿನ ಹೊರಳಾಟ, ಪ್ರಸವ ನಂತರ ಉಂಟಾಗುವ ಹಿಂಜರಿಕೆಯ ಮನಸ್ಥಿತಿ”