
ಅದೊಂದು ರಾತ್ರಿ ಆಕೆ ಕರೆಮಾಡಿ ನಿನ್ನ ಜೊತೆ ಬಹಳ ಮಾತನಾಡುವುದಿದೆ ಎಂದಳು.ನಾನು ಕೂಡ ಸರಿ ಮಾತನಾಡೆಂದೆ.ಆದರೆ ಆಕೆ ಈಗ ಬೇಡ ನಾಲ್ಕು ದಿನ ಕಳೆದ ಮೇಲೆ ಸಿಗುವೆ ಆಗ ಭೇಟಿಯಾಗಿ ಮಾತನಾಡೋಣ ಎಂದು ಹೇಳಿ ಅರ್ಧಕ್ಕೆ ಕರೆಯನ್ನು ಕತ್ತರಿಸಿದ್ದಳು.ನಾನೂ ಹೆಚ್ಚೇನೂ ಯೋಚಿಸದೆ ‘ಹೇಗೂ ಸಿಗುವಳಲ್ಲ ಬಿಡು’ ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದೆ.ಆದರೆ ಅವಳನ್ನು ಭೇಟಿಯಾಗುವ ಸಮಯ ಬರಲೇ ಇಲ್ಲ.
ಕೆಲಕಾಲದ ನಂತರ ಆಕೆಯನ್ನು ಭೇಟಿಯಾಗಬೇಕೆಂದುಕೊಂಡು ಅದೇಷ್ಟೊ ಸಾರಿ ಆಕೆಗೆ ಕರೆಮಾಡಲೆತ್ನಿಸಿ ವಿಫಲನಾದೆ.ಸ್ನೇಹಿತರ ಮುಖಾಂತರ ಸಂಪರ್ಕಿಸಿದೆ ಸಿಗಲಿಲ್ಲ,ಸಂದೇಶ ಕಳುಹಿಸಿದೆ ಅದಕ್ಕೂ ಪ್ರತ್ತ್ಯುತ್ತರ ಇಲ್ಲದಾಯಿತು.ಕೊನೆಗೆ ನನಗೆ ವಿಷಯ ತಿಳಿದಾಗ ಮಾತ್ರ ನನಲ್ಲಿ ಆದ ಆಘಾತ ಮಾತ್ರ ಭಯಂಕರ.ಆಕೆ ತೀರಿಕೊಂಡಾಗಿತ್ತು.ಏಕೆ?ಹೇಗೆ ? ಯಾವಾಗ ? ಎಂದು ಮಾತ್ರ ತಿಳಿಯಲೇ ಇಲ್ಲ.
ಆಕೆ ನನ್ನ ಜೊತೆಗೆ ಏನು ಮಾತನಾಡಬೇಕೆಂದಿದ್ದಳೊ ಏನೊ? ಆಕೆ ನನ್ನ ಆಪ್ತ ಸ್ನೇಹಿತೆ.ಆಕೆಯ ಎಲ್ಲ ಆಗುಹೋಗುಗಳನ್ನು ನನಗೆ ಹೇಳಿಕೊಳ್ಳುತ್ತಿದ್ದ ಅವಳು ಇದೊಂದು ವಿಷಯ ತಿಳಿಸದೆ ಹೊರಟುಬಿಟ್ಟಿದ್ದಳು.ಆದರೆ ಆಕೆಯಾಡಿದ ಕೊನೆಯ ಮಾತು ಆ ಧ್ವನಿ ನನಗೆ ಈಗಲೂ ನೆನಪಿದೆ. ಅಷ್ಟೇ ಅಚ್ಚಾಗಿ!ಅವಳ ಕೊನೆಯ ಭೇಟಿ ಈಗಲೂ ನನ್ನನ್ನು ಕಾಡುತ್ತದೆ.
ಸ್ನೇಹಿತರು ಯಾವಗ ಕರೆಮಾಡಿದರೂ ಸಮಾಧಾನದಿಂದ ಸ್ಪಂದಿಸಬೇಕು ಯಾವ ಕಾರಣಕ್ಕೂ ಉಪೇಕ್ಷೆ ಮಾಡಕೂಡದೆಂದು ನನಗೆ ಮತ್ತೂ ಆಕೆಗೆ ಗೊತ್ತಿದ್ದರೂ ನಾವು ಕಾಲನ ಅನುಮತಿಗೆ, ಔದಾರ್ಯಕ್ಕೆ ಪಾತ್ರರಾಗಲೇ ಇಲ್ಲ.ನನ್ನ ಜೊತೆ ಕೆಲ ದಿನಗಳ ಹಿಂದಷ್ಟೇ ಒಡನಾಡಿದ ಜೀವ ಇಂದಿಗೆ ಇಲ್ಲ ಎನ್ನುವುದನ್ನ ಊಹಿಸಿಕೊಳ್ಳಲೂ ಆಗುವುದಿಲ್ಲ.
ಸಾವು ಎಲ್ಲಕ್ಕೂ ತೆರೆ ಎಳೆದುಬಿಡುತ್ತದೆ.
ಅವನು, ನಾನು ಎರಡು ದೇಹ ಒಂದು ಜೀವದಂತಿದ್ದೆವು.ಅದು ನಮ್ಮನ್ನ ಬಲ್ಲವರೆಲ್ಲರಿಗೂ ಗೊತ್ತಿತ್ತು.ಬಾಲ್ಯದಿಂದ ಕಾಲೇಜು ಶಿಕ್ಷಣ ಮುಗಿಯುವವರೆಗೂ ನಾವಿಬ್ಬರೂ ಗಳಸ್ಯ-ಗಂಠಸ್ಯ ರಂತೆಯೇ ಇದ್ದೆವು.ಆ ನಂತರ ನೋಡಿ ಶುರುವಾಗಿದ್ದು.ಸ್ನೇಹದಲ್ಲಿ ಬಿರುಕು ಮೂಡಲು ಶುರುವಾಯಿತು.ಅವನ ಕೆಲವು ನಡವಳಿಕೆಗಳು,ವರ್ತನೆಗಳು ನನ್ನ ಸ್ವಭಾವಕ್ಕೆ ವಿರುದ್ಧವಾಗಿದ್ದವು.ಅದನ್ನ ನಾನು ಅವನಿಗೆ ನೇರವಾಗಿಯೇ ಹೇಳಿದೆ.ಅದರಿಂದ ಇಬ್ಬರಲ್ಲೂ ವೈಮನಸ್ಯ ಬೆಳೆಯಿತು. ಒಂದೇ ಊರಿನಲ್ಲಿದ್ದರೂ ಭೇಟಿಯಾಗುವುದನ್ನ ಬಿಟ್ಟೆವು.ನಡನಡುವೆ ಅವನು ಎರಡು ಬಾರಿ ಕ್ಷಮೆಯಾಚಿಸಿದರೂ ನಾನು ಅನಾದರದಿಂದಲೆ ಸ್ಪಂದಿಸಿದೆ.ನಂತರ ಮತ್ತೆ ಅವನ ನಡವಳಿಕೆ ಅದೆ ದಾರಿ ಹಿಡಿಯಿತು.ಈ ಸಾರಿ ಅವನು ಮಾತನಾಡಿಸಿದರೂ ಮಾತನಾಡುವುದನ್ನು ನಾನು ಪೂರ್ತಿಯಾಗಿ ನಿಲ್ಲಿಸಿಬಿಟ್ಟಿದ್ದೆ.ಈಗ್ಗೆ ಕೆಲ ತಿಂಗಳ ಹಿಂದೆ ಅವನೇ ಕರೆಮಾಡಿ ಮಾತನಾಡಿಸಿದ.ನಾನೂ ಮಾತನಾಡಿಸಿದ್ದೆ.ಮನೆಗೂ ಕರೆದಿದ್ದ.ಆದರೆ ಒಂದು ದಿನ ಮುಂಜಾನೆಯ ಸುದ್ದಿಯೊಂದು ನನ್ನನ್ನ ವಿಹ್ವಲಗೊಳಿಸಿತ್ತು.ಅದರಷ್ಟು ದುಃಖ ತಂದ ಸಂಗತಿ ಬೇರೆಯೊಂದಿರಲಿಕ್ಕಿಲ್ಲ.
ಇದನ್ನು ಓದಿ: ತಾಯ್ತನದ ನಲಿವಿನಲಿ ಕಾಡುವ ಮನಸ್ಸಿನ ಹೊರಳಾಟ, ಪ್ರಸವ ನಂತರ ಉಂಟಾಗುವ ಹಿಂಜರಿಕೆಯ ಮನಸ್ಥಿತಿ
ರಸ್ತೆ ಅಪಘಾತದಲ್ಲಿ ಅವನು ಕೊನೆಯುಸಿರೆಳೆದಿದ್ದ.ನಾನು ಅವನನ್ನ ಮಾತನಾಡಿಸುತ್ತಿಲ್ಲವೆಂದು ಅವನು ಎಂದೂ ಮಾತನಾಡದಂತೆ ಎದ್ದು ಹೊರಟುಹೋಗಿದ್ದ. ತಪ್ಪು ಅವನದ್ದೊ, ನಂದೊ? ಆದರೆ ಅವನಾಡಿದ ಕೊನೆಯ ಮಾತು ನನ್ನ ಸ್ಮೃತಿಯಲ್ಲಿ ಈಗಲೂ ಅಚ್ಷಳಿಯದೆ ಉಳಿದುಕೊಂಡಿದೆ.ಅವನ ನಗು ಕಾಡುತ್ತದೆ.ಅಹಂಗಳು ಇಸಂಗಳು ನಮ್ಮ ಜೀವನದಲ್ಲಿ ಎಷ್ಟು ದೊಡ್ಡ ನಷ್ಟ ಉಂಟುಮಾಡುತ್ತವೆ.ಅವನ ಮುಖವನ್ನು ನಾನು ಕೊನೆಯ ಬಾರಿ ನೋಡಲೂ ಆಗಲಿಲ್ಲ. ಈ ಒಂದು ಕೊರಗು ಕೊನೆಯವರೆಗೂ ನನ್ನನ್ನ ಕೊರೆಯುತ್ತಲೇ ಇರುತ್ತದೆನೊ.ಕೆಲವು ವ್ಯಕ್ತಿಗಳೊಂದಿಗಿನ ನಂಟು ಬಾಂಧವ್ಯ ಚಿರಂತನ ವಾಗಿ ಉಳಿದುಬಿಡುತ್ತದೆ.ಅವರು ನಮ್ಮೊಡನೆ ಇದ್ದರೂ ಇರದಿದ್ದರೂ…!!
ನಮ್ಮ ಸ್ನೇಹಿತರೊಂದಿಗೆ ಕುಳಿತು ಊಟ ಮಾಡುವುದು ಖುಷಿಯ ವಿಷಯವೆ.ಆದರೆ ಅವರ ಸತ್ತ ನಂತರ ಅವರ ಶ್ರಾದ್ಧದಂದು ಕುಳಿತು ಊಟ ಮಾಡುವುದಿದೆಯಲ್ಲ ಅದು ಯಾರಿಗೂ ಬರಬಾರದ ಸಂದರ್ಭಗಳಲ್ಲಿ ಒಂದು.ಸ್ನೇಹಿತರಾಗಲಿ ಬಂದುಗಳಾಗಲಿ ಅವರು ಬಿಟ್ಟು ಹೋದಮೇಲೂ ಅವರ ಕೊನೆಯ ಮಾತು ಕಡೆಯ ಭೇಟಿ ನಮ್ಮನ್ನು ಬಿಡುವುದಿಲ್ಲ.ಅದು ಯಾವತ್ತಿಗೂ ಜೀವಂತವೇ.ಅಲ್ಲವ??
