
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಮತಗಳ್ಳತನವಾಗಿದೆ. ಹಾಗಾಗಿ, ನರೇಂದ್ರ ಮೋದಿಯವರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ಯಾವ ನೈತಿಕ ಹಕ್ಕೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.
ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ, ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಬಿಜೆಪಿಯ ಬ್ರಾಂಚ್ ಆಫೀಸ್ ಆಗಿದೆ
“ಚುನಾವಣಾ ಆಯೋಗವು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕಿತ್ತು. ಆದರೆ, ಅದು ಇಂದು ಬಿಜೆಪಿಯ ಒಂದು ಶಾಖಾ ಕಚೇರಿಯಂತೆ ವರ್ತಿಸುತ್ತಿದೆ,” ಎಂದು ಸಿಎಂ ಕಿಡಿಕಾರಿದರು. “ಈ ಮತಗಳ್ಳತನದ ವಿರುದ್ಧ ನಾವು ಕರ್ನಾಟಕದಲ್ಲಿ ಆರಂಭಿಸಿರುವ ಹೋರಾಟ, ಇಡೀ ದೇಶಕ್ಕೆ ಹಬ್ಬಲಿದೆ. ರಾಹುಲ್ ಗಾಂಧಿಯವರು ಸುಮ್ಮನೆ ಆರೋಪ ಮಾಡುತ್ತಿಲ್ಲ. ಎಲ್ಲಾ ಅಂಕಿಅಂಶಗಳನ್ನು ಸಂಗ್ರಹಿಸಿ, ದಾಖಲೆ ಸಮೇತ ಜನರ ಮುಂದಿಟ್ಟಿದ್ದಾರೆ,” ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು.
“ಸಂವಿಧಾನ ವಿರೋಧಿಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯ”
“ಸಂವಿಧಾನವನ್ನೇ ಒಪ್ಪದ ‘ಮನುವಾದಿಗಳು’ ಇಡೀ ಪ್ರಕ್ರಿಯೆಯನ್ನೇ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಸೋತಿದ್ದು ಜನರ ತೀರ್ಪಿನಿಂದಲ್ಲ, ಮಹದೇವಪುರ ಕ್ಷೇತ್ರದಲ್ಲಿ ನಡೆದ ವಂಚನೆಯಿಂದ,” ಎಂದು ನೇರ ಆರೋಪ ಮಾಡಿದರು.
“ನಾವು ರಾಜ್ಯದಲ್ಲಿ 14 ಸೀಟುಗಳನ್ನು ಸುಲಭವಾಗಿ ಗೆಲ್ಲಬೇಕಿತ್ತು. ಆದರೆ, ಇವಿಎಂ ದುರುಪಯೋಗ ಮಾಡಿಕೊಂಡು ನಮ್ಮನ್ನು ಸೋಲಿಸಲಾಗಿದೆ. ಈಗ ಅವರು ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ,” ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: Letters to Daughter: ದೇವರು ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ
ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಚಳುವಳಿ
“ಇದು ಕೇವಲ ಪ್ರತಿಭಟನೆಯಲ್ಲ, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಆರಂಭವಾಗಿರುವ ಒಂದು ದೊಡ್ಡ ಚಳವಳಿ. ಇದಕ್ಕೆ ಕರ್ನಾಟಕದ ಜನತೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ,” ಎಂದು ಅವರು ವೇದಿಕೆಯಲ್ಲಿ ಘೋಷಿಸಿದರು.
ಒಟ್ಟಿನಲ್ಲಿ, ಫ್ರೀಡಂ ಪಾರ್ಕ್ನಲ್ಲಿ ನಡೆದ ಈ ಪ್ರತಿಭಟನೆಯು, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳನ್ನು ಕಂಡು ಬರುತ್ತಿದೆ.
