Life Lesson: ಪತ್ರ ಐದು -ಪ್ರೀತಿಯ ಮಗನೇ,
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದೊಂದು ಹಳೆಯ ಗಾದೆ. ಅಂದರೆ ನಾವಾಡುವ ಮಾತುಗಳಿಗಿರುವ ಮೌಲ್ಯವನ್ನು ಲೆಕ್ಕ ಹಾಕು ನೀನು! ನೀನು ಬೆಳೆಯುತ್ತಾ ಅರ್ಥ ಮಾಡಿಕೊಳ್ಳಬೇಕಾಗಿರುವ ಮುಖ್ಯ ಸಂಗತಿಗಳಲ್ಲಿ ಇದೂ ಒಂದು. ನಾವು ಅಂದುಕೊಳ್ಳುವುದಕ್ಕಿಂತಲೂ ನಾವಾಡುವ ಮಾತುಗಳು ಹೆಚ್ಚು ಶಕ್ತಿಯನ್ನು ಹೊಂದಿರುತ್ತವೆ. ಅವು ಗಾಯಗೊಳಿಸಬಹುದು ಅಥವಾ ನೊಂದ ಮನಸ್ಸಿಗೆ ಸಮಾಧಾನ ಒದಗಿಸಬಹುದು. ನಾವು ಗಂಟೆಗಟ್ಟಲೆ ಮಾತನಾಡಿದರೂ ಒಂದೆರಡು ವಾಕ್ಯಗಳಷ್ಟೇ ಮಾತನಾಡಿದರೂ ಅವುಗಳ ಪರಿಣಾಮ ನಾವು ಬಳಸುವ ಪದಗಳು, ನಮ್ಮ ಧ್ವನಿಯ ಏರಿಳಿತಗಳನ್ನು ಹೊಂದಿಕೊಂಡು ಇರುತ್ತದೆ.
ಗಮನಿಸು: ಮನೆಯಲ್ಲಿ ನಾನು ಅಡುಗೆ ಮಾಡುತ್ತಾ ಇರುತ್ತೇನೆ. ನೀನು ಬಳಿಬಂದು ʼಅಮ್ಮ ಏನು ಮಾಡುತ್ತಿದ್ದೀಯಾ?ʼ ಅಂತ ಕೇಳಿದರೆ ʼದೋಸೆ/ಸಾಂಬಾರ್/ಚಟ್ನಿ ಮಾಡುತ್ತಿದ್ದೇನೆʼ ಅಂತ ನಾನು ಮಾಡುತ್ತಿರುವ ಕೆಲಸವನ್ನು ಹೇಳಿದಾಗ ನಿನಗೆ ಹೇಗನ್ನಿಸುತ್ತದೆ ಅಥವಾ ʼಕಣ್ಣು ಕಾಣಿಸ್ತಾ ಇಲ್ವಾ? ಅಡುಗೆ ಮನೆಯಲ್ಲಿ ಅಡುಗೆ ಮಾಡದೇ ಮತ್ತೇನು ಸ್ನಾನ ಮಾಡುವುದಕ್ಕಾಗ್ತದಾ?ʼ ಅಂತ ಏನಾದರೂ ನಾನು ಉತ್ತರಿಸಿದರೆ ನಿನಗೆ ಹೇಗನ್ನಿಸಬಹುದು- ಅಲ್ವಾ? ಆದರೆ ಈ ಸತ್ಯ ನಮಗೆ ಗೊತ್ತಿದ್ದರೂ ಎಷ್ಟೋ ಸಲ ನಾವು ಕೊಡಬೇಕಾದ ಉತ್ತರಕ್ಕಿಂತ ಇನ್ನೇನೋ ಮಾತನಾಡಿರುತ್ತೇವೆ. ಮುದಗೊಳಿಸುವ ಮಾತುಗಳಿಗಿಂತ ಘಾಸಿಗೊಳಿಸುವ ಮಾತುಗಳನ್ನಾಡುವುದರಲ್ಲಿಯೇ ನಮಗೇನೋ ವಿಚಿತ್ರ ತೃಪ್ತಿ. ಆದರೆ ಮಗೂ ಕೆಲವು ಸಂದರ್ಭಗಳಲ್ಲಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ರೀತಿಯ ಉತ್ತರಗಳನ್ನು ಕೊಟ್ಟಾಗ ಅದನ್ನು ಕೇಳಿಸಿಕೊಂಡವರ ಮನಸ್ಸಿನಲ್ಲಿ ಆಗುವ ಗಾಯ ತುಂಬ ಆಳವಾಗಿಬಿಡಬಹುದು. ವರ್ಷಗಳು ಕಳೆದರೂ ಆ ನೋವು ಮಾಗದೇ ಇರಬಹುದು.(Life Lesson)
ನೀನು ಅಥವಾ ನಾವು ಚಿಕ್ಕವರಿದ್ದಾಗ ಯೋಚನೆಯೇ ಮಾಡದೇ ಕೆಲವು ಮಾತುಗಳನ್ನು ಆಡಿದ್ದಿರಬಹುದು. ಆಡಿದ ಬಳಿಕ ʼಛೇ, ಹಾಗೆ ಹೇಳಬಾರದಿತ್ತುʼ ಅಂತ ನೊಂದುಕೊಂಡದ್ದಿರಬಹುದು. ಆದರೆ ನಮ್ಮ ಮಾತುಗಳನ್ನು ಕೇಳಿ ಬೇಸರಪಟ್ಟವರ ಬಳಿ, ʼಕ್ಷಮಿಸಿಬಿಡು, ನಾನು ಹಾಗೆ ಹೇಳಬಾರದಿತ್ತುʼ ಎನ್ನಲು ನಮಗೆ ನಮ್ಮ ಅಹಂ ಬಿಡುವುದಿಲ್ಲ. ನಮ್ಮ ಸಂಬಂಧಗಳು ಬಿರುಕು ಬಿಡಲು ಪ್ರಾರಂಭವಾಗುವುದು ಇಲ್ಲಿಯೇ. ಅಪ್ಪ-ಅಮ್ಮ ಮಕ್ಕಳು ಅಂತ ಇದ್ದಾಗ ಏನೋ ಹೋಗಲಿ ಬಿಡು ಅಂತ ಸುಮ್ಮನಾಗಿಬಿಡಬಹುದು. ಆದರೆ ಮುಂದೆ ಬೇರೆಯದೇ ಮನೆಯ ಮಗಳು ನಮ್ಮ ಮನೆಗೆ ಸೊಸೆಯಾಗಿ ಬರುತ್ತಾಳೆ, ನಿನ್ನ ಅಕ್ಕ ಬೇರೆಯ ಮನೆಗೆ ಸೊಸೆಯಾಗಿ ಹೋಗುತ್ತಾಳೆ. ಸಂಗಾತಿಯ ಜತೆಗೆ ಸುಂದರವಾದ ಬಾಳನ್ನು ಕಟ್ಟಿಕೊಳ್ಳಬೇಕಾದರೆ ನಮ್ಮ ಮಾತುಗಳ ಬಗ್ಗೆ ನಮಗೆ ಬಹಳ ಎಚ್ಚರವಿರಬೇಕು ಕಂದ. ನೋವಿನಲ್ಲೋ, ಸಿಟ್ಟಿನ ಭರದಲ್ಲೋ, ಹತಾಶೆಯಲ್ಲೋ ನಾವು ಏನಾದರೂ ಆಡಿಬಿಡಬಹುದು. ಆದರೆ ಆಡಿದ ಮಾತನ್ನು ಹಿಂಪಡೆಯುವುದು ಸಾಧ್ಯವಿಲ್ಲ, ಕತ್ತಿಮೊನೆಯಂತೆ ಅದು ಕೇಳಿಸಿಕೊಂಡವರ ಹೃದಯವನ್ನು ಇರಿದಿರುತ್ತದಲ್ಲ, ಅದನ್ನು ಗುಣಪಡಿಸುವುದು ಸುಲಭವಲ್ಲ.
ಇದನ್ನೂ ಓದಿ: ನಗುವವರೆಲ್ಲ ನಲ್ಮೆಯ ಮಿತ್ರರಲ್ಲ ಮುದ್ದು ಕಂದ: ಕಪಟ ಸ್ನೇಹದ ನಡುವೆ ನಿಜ ಗೆಳೆಯನನ್ನು ಗುರುತಿಸುವುದು ಹೇಗೆ?
ನನ್ನದೇ ಬದುಕಿನ ಉದಾಹರಣೆಯನ್ನು ಹೇಳುತ್ತೇನೆ ಕೇಳು. ನೀನಿನ್ನೂ ನನ್ನ ಗರ್ಭದಲ್ಲಿ ಇದ್ದಾಗ ಮನೆಯಲ್ಲಿ ನಿನ್ನ ಅಜ್ಜಿ ಹಾಸಿಗೆ ಹಿಡಿದಿದ್ದರು. ಅವರಿಗೆ ಪಾರ್ಶ್ವವಾಯು ಆಗಿತ್ತು. ಅವರಿಗೆ ನಡೆದಾಡಲಾರದ, ತನ್ನ ಕೆಲಸಗಳಿಗೂ ಎದ್ದು ಹೋಗಲಾರದ ಹತಾಶೆ, ನನಗೆ ಬಸಿರಿನ ಸಂಕಟ, ಜತೆಗೆ ನಿನ್ನ ಅಕ್ಕ ಆಗಿನ್ನೂ ಎರಡೂವರೆ ವರ್ಷದ ಪುಟ್ಟ ಕಂದ. ರಾತ್ರಿ ನಿದ್ದೆ ಮಾಡಲೊಲ್ಲಳು. ಅಪ್ಪನಿಗೆ ವಿಪರೀತ ಕೆಲಸದ ಒತ್ತಡ. ಈ ಸಂದಿಗ್ಧದಲ್ಲಿ ನಾನೂ ಮಾನಸಿಕವಾಗಿ ತುಂಬಾ ದುರ್ಬಲಳಾಗಿದ್ದೆ. ಜತೆಗೆ ನನಗಾಗ ತುಂಬಾ ತಲೆನೋವು. ಬಸುರಿಯಾಗಿದ್ದರಿಂದ ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಹಾಗಿಲ್ಲ. ಇಂಥದ್ದೊಂದು ಸಂಕಟದ ದಿನ ಅಜ್ಜಿ ಮಲಗಿದಲ್ಲಿಂದಲೇ ನನ್ನ ಬಗ್ಗೆ ಕಟುವಾಗಿ ಏನೋ ಅಂದುಬಿಟ್ಟರು. ನಾನು ಆ ಕ್ಷಣದಲ್ಲಿ ಪ್ರತಿಕ್ರಿಯಿಸಿಬಿಟ್ಟಿದ್ದರೆ ಎಲ್ಲವೂ ಸರಿಯಾಗಿ ಬಿಡುತ್ತಿತ್ತು. ಆದರೆ ಮಲಗಿದಲ್ಲೇ ಇದ್ದವರಲ್ಲಿ ಕಠಿಣವಾಗಿ ಮಾತಾಡಲು ನನ್ನಿಂದಾಗಲಿಲ್ಲ. ಆದರೆ ಪರಿಣಾಮ ಏನಾಯಿತು ಗೊತ್ತಾ? ಆ ಮಾತುಗಳು ದಿನೇದಿನೇ ನನ್ನನ್ನು ಕೊರೆಯುತ್ತಾ ಬಂದವು. ಆ ಮಾತುಗಳನ್ನು ಮರೆಯುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಅಜ್ಜಿ ತೀರಿಕೊಂಡು ಏಳು ವರ್ಷಗಳೇ ಆಗುತ್ತಾ ಬಂದವು. ಅವರನ್ನೂ ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದಿತ್ತು ಎಂಬ ಪಶ್ಚಾತ್ತಾಪ ನನ್ನನ್ನು ಅದೆಷ್ಟು ಬಾರಿ ಕಾಡಿದೆಯೋ ಗೊತ್ತಿಲ್ಲ. ಮಾತು ಇರಿದದ್ದಕ್ಕಿಂತ ಹೆಚ್ಚು ಮೌನದಲ್ಲಿ ನಾನು ಅವರನ್ನು ನೋಯಿಸಿದೆನೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ. ಇರಲಿ. ಮರದೊಳಗಣ ಕಿಚ್ಚು ಮರವನ್ನೇ ಸುಡುತ್ತದಂತೆ!(Life Lesson)
ಮಗನೇ, ನಾವಾಡುವ ಮಾತುಗಳು ಒಬ್ಬನಲ್ಲಿ ಧೈರ್ಯವನ್ನು ತುಂಬಬಹುದು. ಅಥವಾ ಅವನ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಕುಗ್ಗಿಸಬಹುದು. ಶಾಲೆಯಲ್ಲಿಯೂ ನಾವು ಅಂತಹ ಅನೇಕ ಸಂದರ್ಭಗಳನ್ನು ನೋಡುತ್ತೇವೆ. ಒಬ್ಬ ಶಿಕ್ಷಕ ನಿನ್ನಿಂದ ಇದು ಸಾಧ್ಯವಾಗುತ್ತದೆ ಎಂದರೆ ವಿದ್ಯಾರ್ಥಿ ಅದೆಷ್ಟೇ ಕಠಿಣವಾದ ವಿಷಯವನ್ನಾದರೂ ಕಲಿತು ಬರೆಯಬಲ್ಲ. ʼನೀನು ಶತಮೂರ್ಖ, ನಿನ್ನಿಂದ ಇದು ಸಾಧ್ಯವಾಗದುʼ ಎನ್ನುತ್ತಲೇ ಇದ್ದರೆ ಅವನು ಆ ಶಿಕ್ಷಕರು ಕಲಿಸುವ ವಿಷಯವನ್ನೇ ದ್ವೇಷಿಸಲು ಪ್ರಾರಂಭಿಸುತ್ತಾನೆ. ಅಕ್ಕ ಸಂಗೀತ ಕಲಿಯುತ್ತಾ ಇದ್ದವಳು ಹಾಡುವುದನ್ನು ನಿಲ್ಲಿಸಿದ್ದೂ ಇಂತಹುದೇ ಒಂದು ಕಾರಣಕ್ಕೆ ಅಲ್ವಾ? ಮನೆಯಲ್ಲಿ ನಾವೆಲ್ಲರೂ ಅವಳಿಗೆ ಹಾಡುವಂತೆ ಅದೆಷ್ಟೇ ಉತ್ತೇಜಿಸಿದರೂ ʼಹಾಡುವುದೆಲ್ಲ ಸಮಯ ಪೋಲು…ʼ ಎಂದು ಹಾಡಿದಾಗ ನಿಂದಿಸಿದವರ ಮಾತು ಅವಳಲ್ಲಿ ಗಟ್ಟಿಯಾಗಿ ಬೇರೂರಿದೆ. ಏನು ಮಾಡೋಣ ಹೇಳು? ಮಹಾಭಾರತ ಯುದ್ದ ನಡೆಯುವುದಕ್ಕೆ ದ್ರೌಪದಿಯ ಒಂದು ಮಾತು ಕಾರಣ ಅನ್ನುವವರಿದ್ದಾರೆ. ಇಂದ್ರಪ್ರಸ್ಥದಲ್ಲಿ ಮಯನು ನಿರ್ಮಿಸಿಕೊಟ್ಟ ಅರಮನೆಯಲ್ಲಿ ನೀರೋ ನೆಲವೋ ಗೊತ್ತಾಗದೇ ದುರ್ಯೋಧನ ಎಡವಿದಾಗ ಅವಳು ನಕ್ಕಳಂತೆ. ʼಕುರುಡನ ಮಗನೂ ಕುರುಡನೇʼ ಎಂದಳಂತೆ! ಕೌರವರು ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನ್ಯಾಯ, ಧರ್ಮಗಳು ಗೆಲ್ಲಬೇಕಿತ್ತು, ಯುದ್ಧವಾಗಬೇಕಿತ್ತು ಎಂಬುದೇನೋ ಸತ್ಯವೇ. ಆದರೆ ದ್ರೌಪದಿಯ ಮಾತು ಕಿಚ್ಚು ಹತ್ತಿಸಿತು ಎಂಬುದೂ ಸುಳ್ಳಲ್ಲ.(Life Lesson)
ಇತಿಹಾಸದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನ ಮಾತುಗಳು ಸದಾ ಉಲ್ಲೇಖನೀಯ. ತನ್ನ ಭಾಷಣಗಳ ಮೂಲಕ ಅವನು ಸಮಾನತೆ ಮತ್ತು ನ್ಯಾಯವನ್ನು ಪ್ರತಿಪಾದಿಸುತ್ತಿದ್ದ. ಜನರು ಉತ್ತಮವಾದ ಒಂದು ಪ್ರಪಂಚದ ಕುರಿತು ಕನಸು ಕಾಣುವಂತೆ ಅವನು ಪ್ರೇರೇಪಿಸಿದ. ಅವನ ಮಾತುಗಳಲ್ಲಿ ಎಂದೂ ಅವನು ಇತರರನ್ನು ಅವಮಾನಿಸುವುದಾಗಲೀ ಹಲ್ಲೆ ನಡೆಸುವುದಾಗಲೀ ಮಾಡಲಿಲ್ಲ. ಬದಲಿಗೆ ತನ್ನ ಜನರಿಗೆ ಭರವಸೆಯನ್ನು ಕೊಟ್ಟ, ಧೈರ್ಯವನ್ನು ಕೊಟ್ಟ.
ಇದನ್ನೂ ಓದಿ: Life Lesson: ಬ್ಯಾಂಕ್ ಬ್ಯಾಲೆನ್ಸ್ಗಿಂತ ಬದುಕಿನ ಮೌಲ್ಯ ದೊಡ್ಡದು!; ಮುದ್ದು ಕಂದ
ಮಗನೇ, ನೀನು ಜೀವನದಲ್ಲಿ ಅನೇಕ ಮಂದಿಯನ್ನು ಭೇಟಿಯಾಗುತ್ತೀಯ. ನಿನ್ನ ಸ್ನೇಹಿತರು, ಸಹಪಾಠಿಗಳು, ಅಪರಿಚಿತರು.. ಹೀಗೆ. ಕೆಲವರು ನೀನಾಡಿದ್ದನ್ನು ಒಪ್ಪಿಕೊಳ್ಳಬಹುದು, ಹಲವರು ವಿರೋಧಿಸಬಹುದು, ಮಾತುಗಳಿಂದ ನಿನ್ನನ್ನು ಚುಚ್ಚಬಹುದು. ಅಂತಹ ಸಂದರ್ಭಗಳಲ್ಲಿ ಕಟುವಾದ ನುಡಿಗಳನ್ನು ಆಡುವಂತೆ ನಿನಗೆ ಪ್ರೇರಣೆಯಾದೀತು. ಅದು ಸುಲಭ ಕೂಡಾ. ಆದರೆ ನಿನ್ನ ಹೆಚ್ಚುಗಾರಿಕೆಯಿರುವುದು ಅವರಿಗೆ ಪ್ರತಿಕ್ರಿಯಿಸುವಾಗ ನೀನು ಆಡುವ ಪದಗಳ ಆಯ್ಕೆಯಲ್ಲಿ. ಎಚ್ಚರಿಕೆಯಿಂದ ಮಾತನಾಡು. ಶತ್ರುವೂ ಮಿತ್ರನಾಗಬಲ್ಲ!
ಇತರರಲ್ಲಿ ಮಾತನಾಡುವಾಗ ಗೌರವದಿಂದ ಮಾತನಾಡು. ದುರ್ಬಲರಿಗೆ ಧೈರ್ಯ ತುಂಬುವ ಮಾತನಾಡು. ಒಳ್ಳೆಯ ಕೆಲಸಗಳನ್ನು ಮಾಡಿದವರಿಗೆ ಮೆಚ್ಚುಗೆಯ ಮಾತುಗಳನ್ನಾಡು. ʼನಿನ್ನಿಂದ ಇದು ಸಾಧ್ಯʼ ಅಥವಾ ʼನಿನ್ನನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆʼ ಎಂಬ ಸಾಲುಗಳು ನಿನ್ನ ಸುತ್ತಲಿನ ಮಂದಿಯ ಬದುಕಿನಲ್ಲಿ ಅತ್ಯಂತ ಮಹತ್ವದ ತಿರುವನ್ನು ತಂದುಕೊಟ್ಟೀತು.
ಯಾವಾಗಲೂ, ಮಾತನಾಡುವುದಕ್ಕಿಂತ ಮುಂಚೆ -ನನ್ನ ಮಾತುಗಳು ಈ ವ್ಯಕ್ತಿಗೆ ನೆರವಾಗಬಲ್ಲವೇ ಅಥವಾ ನೋಯಿಸಬಲ್ಲವೇ?- ಎಂದು ಯೋಚಿಸುವುದಕ್ಕೆ ಒಂದು ಕ್ಷಣ ಅವಕಾಶ ತೆಗೆದುಕೋ. ಅದೊಂದು ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ನಿನ್ನ ಅಮ್ಮನಾಗಿ ನಾನು ಬಯಸುವುದಿಷ್ಟೇ. ನಿನ್ನ ಆಯ್ಕೆಯ ಕ್ಷೇತ್ರದಲ್ಲಿ ನೀನೊಬ್ಬ ಮಹಾನ್ ಸಾಧಕನಾಗು. ಅದರ ಜತೆಗೆ ಹೃದಯದ ತುಂಬ ವಾತ್ಸಲ್ಯವನ್ನು ಹೊಂದಿದ ಒಬ್ಬ ಒಳ್ಳೆಯ ವ್ಯಕ್ತಿಯಾಗು. ನಿನ್ನ ಮಾತುಗಳು ಇತರರ ಬದುಕಿನಲ್ಲಿ ಸಮಾಧಾನವನ್ನೂ, ಹಿತವನ್ನೂ, ಸೌಮ್ಯತೆಯನ್ನೂ ಒದಗಿಸಲಿ. ಯಾವತ್ತೂ ನೆನಪಿಟ್ಟುಕೋ – ಮಾತು ಎನ್ನುವುದು ನಮಗೆ ಭಗವಂತನ ಉಡುಗೊರೆ. ಇತರರಿಗೆ ಹಿತವಾಗುವಂತೆ ಮಾತನಾಡಬೇಕು ಹೊರತು ವಿನಾಕಾರಣ ನೋಯಿಸುವುದಕ್ಕಲ್ಲ.
ಪ್ರೀತಿಯಿಂದ,
ಅಮ್ಮ
