Dr. Arathi Patrame
Life Lesson: ಪ್ರೀತಿಯ ಮಗನೇ, ಪತ್ರ ಎರಡು ನೀನೊಬ್ಬ ಪ್ರಬುದ್ಧ ವ್ಯಕ್ತಿಯಾಗಿ ರೂಪುಗೊಳ್ಳುತ್ತಾ ಇರುವ ಈ ಹೊಸಿಲಲ್ಲಿ ನಿನಗೆ ಹೇಳಬೇಕಾದ ಸಂಗತಿಗಳು ನೂರಾರಿವೆ. ನಿನ್ನ ಬುದ್ಧಿವಂತಿಕೆ, ಜಾಣ್ಮೆ, ನಿನ್ನ ಸಾಧನೆಗಳು, ನಿನ್ನ ಆತ್ಮವಿಶ್ವಾಸ, ನಿನ್ನೊಳಗಿನ ಸಂಗೀತ ಯಕ್ಷಗಾನದಂಥ ಕಲೆಗಳು, ಎಲ್ಲಕ್ಕಿಂತ ಮಿಗಿಲಾಗಿ ಸುತ್ತಲಿನ ಮಂದಿಯೊಂದಿಗೆ ಚಂದದಿಂದ ಮಾತನಾಡಿಸುವ ನಿನ್ನ ಗುಣ ಇವೆಲ್ಲವನ್ನೂ ಕಂಡು ಮೆಚ್ಚಿಕೊಂಡಾಡುವವರು ನೂರಾರು ಮಂದಿ ಸಿಗಬಹುದು. ಈ ನಿನ್ನ ಎಲ್ಲ ಗುಣಗಳ ಜತೆಗೆ ನಿನ್ನನ್ನು ಸಮಾಜಕ್ಕೊಂದು ನಿಜಾರ್ಥದ ಕೊಡುಗೆಯಾಗಿ ರೂಪುಗೊಳಿಸಬಲ್ಲ ಗುಣವೆಂದರೆ ದಯೆ. ಬದುಕು ನಿನ್ನೆದುರು ದಯೆ ಮತ್ತು ಅಹಂಕಾರದ ಆಯ್ಕೆಯನ್ನು ಇಟ್ಟಾಗ ನೀನು ಆಯ್ಕೆ ಮಾಡಿಕೊಳ್ಳಬೇಕಾದುದು ದಯೆಯನ್ನೇ ಹೊರತು ಅಹಂಕಾರ, ಅಭಿಮಾನವನ್ನಲ್ಲ.
ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುವ ಶ್ಲೋಕವೊಂದು ಹೀಗಿದೆ. ದಂಭೋ ದರ್ಪೋಭಿಮಾನಶ್ಚ/ ಕ್ರೋಧಃ ಪಾರುಷ್ಯಮೇವ ಚ/ ಅಜ್ಞಾನಂ ಚಾಭಿಜಾತಸ್ಯ/ ಪಾರ್ಥ ಸಂಪದಮಾಸುರೀಂ// ಅಂದರೆ ದಂಭ, ದರ್ಪ, ಅಭಿಮಾನ, ಕ್ರೋಧ, ಪಾರುಷ್ಯ ಮತ್ತು ಅಜ್ಞಾನ- ಈ ಆರು ದುರ್ಗುಣಗಳು ಆಸುರೀ ಸ್ವಭಾವದ ಲಕ್ಷಣಗಳು.
ಮಗನೇ, ನಮ್ಮೊಳಗಿನ ಅಹಂಕಾರವು ಸದಾ ನಮ್ಮಲ್ಲಿ ಪಿಸುಗುಟ್ಟುವುದೇನು ಗೊತ್ತಾ? -ನಾವು ಇತರರಿಗಿಂತ ಶ್ರೇಷ್ಠವೆಂದು ನಿರೂಪಿಸಬೇಕು- ಎಂಬುದನ್ನು. ನಮ್ಮ ತಪ್ಪನ್ನು ಒಪ್ಪಿಕೊಂಡರೆ ನಾವು ದುರ್ಬಲರು ಎಂದು ಒಪ್ಪಿಕೊಂಡಂತಾಗುತ್ತದೆ. ಅದಕ್ಕಾಗಿ ನಾವು ಮಾಡಿದ್ದೇ ಸರಿಯೆಂಬ ಭಾವವನ್ನು ಹೊಂದಬೇಕು ಎಂಬುದನ್ನು ನಮ್ಮೊಳಗಿನ ಅಂಧಾಭಿಮಾನ ಹೇಳುತ್ತದೆ. ನಾವು ಮಾಡುವ ಉಪಕಾರಕ್ಕೆ ಪ್ರತಿಯಾಗಿ ನಮಗೆ ಯಾರು ಏನನ್ನೂ ಕೊಡಲಾರರೋ ಅವರಿಗೆ ನಾವು ಸಹಾಯವನ್ನೇ ಮಾಡಬೇಕಿಲ್ಲ ಎಂಬ ಭಾವವನ್ನು ಅದು ನಮ್ಮೊಳಗೆ ಬೆಳೆಸುತ್ತದೆ. ಆದರೆ ದಯೆಯ ಮೆಲುವಾದ ಧ್ವನಿಯೇ ಬೇರೆ. -ಬದುಕಿನಲ್ಲಿ ನಮಗೆ ಎದುರಾಗುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ನಮ್ಮ ಕಣ್ಣಿಗೆ ಕಾಣದ ಹೋರಾಟವೊಂದರಲ್ಲಿ ಇರುತ್ತಾನೆ. ಅವನ ಯುದ್ಧ ಅವನಿಗೆ ಮಾತ್ರ ಗೊತ್ತು. ನಾವು ಅರ್ಥ ಮಾಡಿಕೊಳ್ಳಬೇಕಾದುದು ಅದನ್ನೇ.(Life Lesson)
ಉದಾಹರಣೆಗೆ ಒಂದು ಕಥೆ ಹೇಳುತ್ತೇನೆ ಕೇಳು. ಒಂದು ಶಾಲೆಯಲ್ಲಿ ಒಬ್ಬ ಹುಡುಗ ಪ್ರತಿದಿನವೂ ತಡವಾಗಿ ತರಗತಿಗೆ ಬರುತ್ತಿದ್ದ. ಎಲ್ಲರೂ ಅವನಿಗೆ ಬೈಯುತ್ತಿದ್ದರು. ಯಾಕೆಂದರೆ ತರಗತಿಯ ಶಿಸ್ತನ್ನು ಪಾಲಿಸುವುದು ಅವನಿಗೆ ಕಡ್ಡಾಯ. ಅದೂ ನಿಜವೇ. ಶಾಲೆಗೆ ಹೋಗುವ ಮಕ್ಕಳು ಸಮಯಕ್ಕೆ ಸರಿಯಾಗಿ ಬರಬೇಕು, ಅನಗತ್ಯ ರಜೆ ಮಾಡಬಾರದು ಎಂದು ನಾವೂ ನಿರೀಕ್ಷಿಸುತ್ತೇವಲ್ಲ? ಅವನು ಪ್ರತಿದಿನವೂ ಮೊದಲ ಅವಧಿ ತರಗತಿಯಿಂದ ಹೊರಗೆ ನಿಲ್ಲಬೇಕಿತ್ತು. ಉಳಿದ ಮಕ್ಕಳು ಅವನನ್ನು ಅಸಡ್ಡೆಯಿಂದ ನೋಡುತ್ತಿದ್ದರು. ಆದರೆ ಅವನು ಅದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಇರುತ್ತಿರಲಿಲ್ಲ.
ಇದನ್ನೂ ಓದಿ: Life Lesson: “ಸೋಲು ಅಂತ್ಯ ಅಲ್ಲ ಮುದ್ದಿನ ಮಗನೇ, ಅದು ಹೊಸ ಆರಂಭ”
ಮುಂದಿನ ಅವಧಿಗಾಗಿ ಕಾಯುತ್ತಿದ್ದ-ಪಾಠ ಕೇಳುತ್ತಿದ್ದ, ಟಿಪ್ಪಣಿ ಬರೆದುಕೊಳ್ಳುತ್ತಿದ್ದ. ಪರೀಕ್ಷೆಯಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಅಂಕಗಳನ್ನೂ ಪಡೆಯುತ್ತಿದ್ದ.ಅವರ ಕ್ಲಾಸ್ಟೀಚರು ಒಂದು ದಿನ ಅವನಿಗೆ ಗೊತ್ತಿಲ್ಲದಂತೆ ಅವನ ಮನೆಗೆ ಭೇಟಿಕೊಟ್ಟರು. ಅವರಿಗೆ ಆಘಾತವೇ ಕಾದಿತ್ತು. ತಂದೆಯಿಲ್ಲದ ಆ ಹುಡುಗನಿಗೆ ಅಮ್ಮನೇ ಪ್ರಪಂಚ. ಆದರೆ ಅವಳಿಗೆ ಕಾಯಿಲೆಯೊಂದು ಬಂದು ಕಂಗೆಡಿಸಿತ್ತು. ಅವಳನ್ನು ಉಳಿಸಿಕೊಳ್ಳುವುದಕ್ಕಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದ ಈ ಮಗ ಅವಳಿಗೆ ಪೂರ್ಣ ವಿಶ್ರಾಂತಿ ತೆಗೆದುಕೊಂಡು ಹುಷಾರಾಗುವಂತೆ ನೋಡಿಕೊಳ್ಳುತ್ತಿದ್ದ. ಶಾಲೆಗೆ ಬರುವುದಕ್ಕಿಂತ ಮೊದಲು ಕೆಲಸಗಳನ್ನು ಮಾಡಿಕೊಟ್ಟು, ಶಾಲೆಯ ಅವಧಿಯ ನಂತರವೂ ಕೆಲಸ ಮಾಡಿ ತನ್ನ ಫೀಸನ್ನು ಹೊಂದಿಸಿಕೊಂಡು, ಅಮ್ಮನ ಔಷಧಿ ಖರ್ಚುಗಳನ್ನು ನೋಡಿಕೊಂಡು ಸುಧಾರಿಸುತ್ತಿದ್ದ. ಅಂತೂ ಅವನ ಅಮ್ಮ ಅವನಿಗಾಗಿ ಉಳಿದುಕೊಂಡಳು. ಈಗ ಹೇಳು, ಅವನ ಬಗ್ಗೆ ಏನೂ ಗೊತ್ತಿಲ್ಲದ ಅವನ ಸಹಪಾಠಿಗಳು ಅಂದುಕೊಂಡದ್ದಕ್ಕೆ ವಿಭಿನ್ನವಾಗಿ ಅವನ ವ್ಯಕ್ತಿತ್ವ ಇತ್ತು ಅಲ್ಲವೇ?
ಪುರಾಣಗಳಲ್ಲಿ, ಇತಿಹಾಸದಲ್ಲಿ ಇಂತಹ ಅದೆಷ್ಟೋ ನಿದರ್ಶನಗಳು ನಮಗೆ ದೊರೆಯುತ್ತವೆ. ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಅವರ ಬಗ್ಗೆ ನೀನು ಕೇಳಿರಬಹುದು. ಅವರು ಅನೇಕ ವರ್ಷಗಳನ್ನು ಕಾರಾಗ್ರಹದಲ್ಲಿ ಕಳೆದರು. ಅವರೊಳಗಿನ ಸಿಟ್ಟು, ಪ್ರತೀಕಾರ ಬೆಳೆಸಿಕೊಳ್ಳುವುದಕ್ಕೆ ಅವರಿಗೆ ನಂತರದಲ್ಲಿ ಬೇಕಾದಷ್ಟು ಅವಕಾಶವಿತ್ತು. ಅವರು ರಾಷ್ಟ್ರನಾಯಕನಾದಾಗ ತಮಗೆ ಅವಮಾನಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬಹುದಿತ್ತು. ಆದರೆ ಅವರು ಕ್ಷಮೆಯನ್ನೂ ದಯಾಪರತೆಯನ್ನೂ ಆಯ್ದುಕೊಂಡರು. ಒಡೆದು ಹೋದ ದೇಶದ ಗಾಯಕ್ಕೆ ಮುಲಾಮು ಹಚ್ಚುವಲ್ಲಿ ಅವರ ಈ ಆಯ್ಕೆ ಬಹಳ ದೊಡ್ಡದಾಗಿತ್ತು.(Life Lesson)
ಮಗನೇ, ಅಹಂಕಾರವು ನಿನ್ನನ್ನು ಆ ಕ್ಷಣಕ್ಕೆ ಅತ್ಯಂತ ಬಲಿಷ್ಟನೆಂದೋ ಸಮರ್ಥನೆಂದೋ ಬಿಂಬಿಸಬಹುದು. ಆದರೆ ನಿನ್ನೊಳಗಿರುವ ಕರುಣೆ ನಿನ್ನನ್ನು ಜೀವನ ಪರ್ಯಂತ ದೃಢವಾಗಿರುವಂತೆ ಮಾಡುತ್ತದೆ. ಅಹಂಕಾರವು ಜನರ ನಡುವೆ ಗೋಡೆಗಳನ್ನು ನಿರ್ಮಿಸಿದರೆ ದಯೆ ಕರುಣೆಯು ಸೇತುವೆಗಳನ್ನು ನಿರ್ಮಿಸುತ್ತದೆ. ಅಹಂಕಾರದಿಂದ ನೀನು ವಾದಗಳನ್ನು ಗೆಲ್ಲಬಹುದು, ಆದರೆ ದಯಾಪರತೆಯಿಂದ ಹೃದಯಗಳನ್ನು ಗೆಲ್ಲುತ್ತೀ. ಈಗ ಹೇಳು, ನಿನ್ನ ಆಯ್ಕೆ ಯಾವುದಾಗಬೇಕು?
ಒಂದು ದಿನ ಶಾಲೆಯಲ್ಲಿ ನಿನ್ನ ಟೀಚರ್ ಒಬ್ಬರು ನಿಷ್ಕಾರಣವಾಗಿ ನಿನಗೆ ಹೊಡೆದರು ಎಂದೆಯಲ್ಲ? ನಾವು ಬಂದು ಶಾಲೆಯಲ್ಲಿ ಗಲಾಟೆ ಮಾಡಬಹುದಿತ್ತು. ನಿನಗಾದ ನೋವಿಗೆ, ಅನ್ಯಾಯಕ್ಕೆ ನಾವು ಪ್ರತಿಭಟಿಸಬಹುದಿತ್ತು. ಆದರೆ ಕಂದ, ನಾವು ಬರಲಿಲ್ಲ, ನೀನೂ ಅದನ್ನು ನಿರೀಕ್ಷೆ ಮಾಡಲಿಲ್ಲ. ಆ ಟೀಚರ್ ಬಗ್ಗೆ ನಿನಗಿರುವ ಪ್ರೀತಿ ಗೌರವಗಳು ಒಂದೆಡೆಯಾದರೆ ʼಅವರ ಮನಸ್ಸು ಆ ದಿನ ಯಾವುದೋ ಕಾರಣಕ್ಕೆ ಕೆಟ್ಟಿದ್ದಿರಬಹುದು ಅಮ್ಮ, ಅದ್ಯಾವುದೋ ಹತಾಶೆ ಅವರಲ್ಲಿದ್ದಿರಬಹುದು. ಪೆಟ್ಟು ಮಾತ್ರ ನನಗೆ ಬಿತ್ತು..ಹೋಗಲಿ ಬಿಡುʼ ಎಂದು ನೀನಾಡಿದ ಮಾತುಗಳನ್ನು ನೆನಪಿಸಿಕೊಳ್ಳುವಾಗ ಈಗಲೂ ನಿನ್ನೊಳಗಿನ ಪ್ರಬುದ್ಧತೆಯ ಬಗ್ಗೆ ಹೆಮ್ಮೆಯೆನಿಸುತ್ತದೆ. ಜೀವನದಲ್ಲಿ ಅಂತಹ ಸಂದರ್ಭಗಳು ಅನೇಕ ಬರಬಹುದು. ಜನರು ನಿನ್ನನ್ನು ನೋಯಿಸಬಹುದು, ತಪ್ಪಾಗಿ ಅರ್ಥಮಾಡಿಕೊಳ್ಳಬಹುದು. ಅಥವಾ ನಿನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಆ ಕ್ಷಣದಲ್ಲಿ ನಿನಗೆ ಸಿಟ್ಟಿನಿಂದಲೋ, ದುರಹಂಕಾರದಿಂದಲೋ ಪ್ರತಿಕ್ರಿಯಿಸಬೇಕು ಅಂತ ಅನಿಸಬಹುದು. ಆದರೆ ನೆನಪಿಟ್ಟುಕೋ. ಆದರೆ ಆ ಕ್ಷಣದಲ್ಲಿ ಮೌನವಾಗಿರುವುದು ದೌರ್ಬಲ್ಯವಲ್ಲ. ಅದು ನಿನ್ನ ಶಕ್ತಿ. ನಿನ್ನ ಸುತ್ತಲಿನ ಜಗತ್ತು ನೀನು ಕಠಿಣವಾಗಿ ಪ್ರತಿಕ್ರಿಯಿಸುತ್ತೀ ಎಂದು ಭಾವಿಸುವಾಗ ಕ್ಷಮಿಸಿ, ನಕ್ಕು, ಮುನ್ನಡೆಯುವುದಕ್ಕೆ ಬಹಳ ದೊಡ್ಡ ಎದೆಗಾರಿಕೆ ಬೇಕು.
ಬದುಕಿನಲ್ಲಿ ಮುನ್ನಡೆಯುತ್ತಾ ನೀನು ಬಿದ್ದವರನ್ನು ಮೇಲೆತ್ತುವಂತಹ ವ್ಯಕ್ತಿಯಾಗಬೇಕು ವಿನಾ ತಾನು ಮೇಲೆ ಬರುವುದಕ್ಕಾಗಿ ಇತರರನ್ನು ತುಳಿಯುವಂಥವನಲ್ಲ. ಮೃದುವಾಗಿ ಮಾತನಾಡು, ಆದರೆ ಮಾತಿನಲ್ಲಿ ದೃಢತೆಯಿರಲಿ. ಅಗತ್ಯವಿದ್ದವರಿಗೆ ಸಹಾಯ ಮಾಡು, ಅಪಾತ್ರರಿಗಲ್ಲ. ಇತರರನ್ನು ಗೌರವದಿಂದ ಕಾಣು. ಈ ಸಣ್ಣಪುಟ್ಟ ವರ್ತನೆಗಳು ನಿನ್ನ ಯಶಸ್ಸಿನ ದಾರಿಯಲ್ಲಿ ನಿನ್ನ ಚಾರಿತ್ರ್ಯವನ್ನು ರೂಪಿಸುತ್ತವೆ. ನಿನ್ನ ಪ್ರತೀ ಹೆಜ್ಜೆಯಲ್ಲೂ ಬೆಳಕು ಬೀರುವುದಕ್ಕೆ ಪಕ್ಕದಲ್ಲಿ ನಾವಿಲ್ಲದೇ ಇರಬಹುದು. ಆದರೆ ಈ ಮಾತುಗಳು ಸದಾ ನಿನ್ನ ಹೃದಯದಲ್ಲಿ ಇರಲಿ- ಅಹಂಕಾರ ಮತ್ತು ದಯೆಗಳೆರಡು ಆಯ್ಕೆಗಳಾಗಿ ನಿನ್ನೆದುರು ಇದ್ದಾಗ ದಯೆಯನ್ನು ಆಯ್ದುಕೋ.(Life Lesson)
ಪ್ರೀತಿಯಿಂದ,
ಅಮ್ಮ
