Dr. Arathi Patrame
Dear Son: ಮುದ್ದಿನ ಮಗನೇ, ಬದುಕಿನಲ್ಲಿ ಎಲ್ಲರೂ ಅನುಭವಿಸುವ, ಆದರೆ ತುಂಬ ಜನ ಹೆದರುವ ಸಂಗತಿಯೊಂದರ ಬಗ್ಗೆ ನಾನಿವತ್ತು ನಿನಗೆ ಹೇಳಬೇಕು. ಅದು- ಸೋಲು (Failure)! ನೀನು ದೊಡ್ಡವನಾಗುತ್ತಾ ಬಂದಂತೆ ನಿನಗೆ ಅನೇಕ ಕನಸುಗಳಿರುತ್ತವೆ. ಅವುಗಳಲ್ಲಿ ಕೆಲವು ನನಸಾಗುತ್ತವೆ, ಕೆಲವು ಆಗುವುದಿಲ್ಲ. ಆದರೆ ನಾವು ನೆನಪಿಟ್ಟುಕೊಳ್ಳಬೇಕಾದುದು ಏನು ಗೊತ್ತಾ? ಸೋಲು ಎನ್ನುವುದು ನಮ್ಮ ಪಯಣದ ಅಂತ್ಯವಲ್ಲ, ಅದು ನಮ್ಮ ಜ್ಞಾನದ ಪ್ರಾರಂಭ. (Beginning of Knowledge).
ನನ್ನದೇ ಒಂದು ಅನುಭವ (Personal Experience) ವನ್ನು ಹೇಳುತ್ತೇನೆ ಕೇಳು- ನಾನು ಪಿಯುಸಿಯಲ್ಲಿದ್ದಾಗ ಮಂಗಳೂರಿನ ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದಲ್ಲಿ ಅಂತರ್ಕಾಲೇಜು ಯಕ್ಷಗಾನ ಸ್ಪರ್ಧೆಯಿತ್ತು. ಅದಕ್ಕಾಗಿ ನಮ್ಮ ಇಡಿಯ ತಂಡ ಬಹಳ ಅಭ್ಯಾಸ ಮಾಡಿದ್ದೆವು. ರತ್ನಾವತಿ ಕಲ್ಯಾಣ ಪ್ರಸಂಗ. ನನ್ನದು ಅದರಲ್ಲಿ ಭದ್ರಸೇನನ ಪಾತ್ರ ವೈಯಕ್ತಿಕ ಬಹುಮಾನ ಅಲ್ಲದಿದ್ದರೂ ತಂಡಕ್ಕೆ ಒಂದು ಬಹುಮಾನ ಬಂದೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೆವು. ಆದರೆ ಬಹುಮಾನ ಘೋಷಣೆಯ ಹೊತ್ತಿಗೆ ನಮಗೆ ಬಹಳ ನಿರಾಸೆಯಾಯಿತು. ನಮ್ಮ ಅಭ್ಯಾಸ, ಪರಿಶ್ರಮ, ಪ್ರದರ್ಶನ ಎಲ್ಲ ಯಾಕೆ ಕಡಿಮೆಯಾಯಿತು ಎಂದು ಯೋಚಿಸಿಕೊಂಡು ಮರಳಿದೆವು. ಒಂದೆರಡು ದಿನ ಅರ್ದೆ ಸೋಲಿನ ಗುಂಗಿನಲ್ಲಿದ್ದವು. ಆ ಹೊತ್ತಿಗೆ ನಮ್ಮ ಪಾಲಿಗೆ ಅದು ಬಹಳ ದೊಡ್ಡ ಸೋಲಾಗಿತ್ತು. ಆದರೆ ಮತ್ತೆ ಕುಳಿತು ಯೋಚನೆ ಮಾಡುವಾಗ ನಮ್ಮ ತಂಡದ ಪ್ರದರ್ಶನದಲ್ಲಿ ಏನೇನು ಕೊರತೆಯಾಯಿತು ಎಂಬುದನ್ನು ಗ್ರಹಿಸುತ್ತಾ ಹೋದವು. ನಮಗೆ ಒದಗಿದ ಹೊಳಹುಗಳು ಅನೇಕ. ಜತೆಯಲ್ಲಿ, ಒಂದು ಸ್ಪರ್ಧೆ ಎನ್ನುವಾಗ ಗೆಲುವು ಸೋಲು’ಎನ್ನುವುದು ಇದ್ದದೇ, ಆದರೆ ಆ ಸಂದರ್ಭದಲ್ಲಿ ನಾವು ಕಲಿತ ತಂಡದ ಶಿಸ್ತು (Team Discipline), ನಮ್ಮಲ್ಲಿರಬೇಕಾದ ತಾಳ್ಮೆ (Patience) ಇವೆಲ್ಲವೂ ಬದುಕಿಗೆ ಬಹಳ ದೊಡ್ಡ ಕಲಿಕೆಯಾಗಿ ಒದಗಿದವು. ಮುಂದೆ ಅದೆಷ್ಟೋ ದೊಡ್ಡ ದೊಡ್ಡ ಅವಕಾಶಗಳನ್ನು ಹೊಂದುವುದಕ್ಕೆ ನಮಗೆ ಅಂದಿನ ಸೋಲು ಮೆಟ್ಟಿಲಾಗಿ ಒದಗಿತು. ಮುಂದಿನ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಬರಿಗೈಯಲ್ಲಿ ನಾವು ಮರಳಿದ್ದಿಲ್ಲ.
ಕೇವಲ ನಮ್ಮ ಉದಾಹರಣೆಗಳು ಅಂತಲ್ಲ, ಪುರಾಣದಲ್ಲಿಯೂ ನಮಗೆ ಅಂತಹ ಅದೆಷ್ಟೋ ಸಂಗತಿಗಳು ಸಿಗುತ್ತವೆ. ಮಕ್ಕಳಿಗೆ ಸದಾ ಹೀರೋ ಆಗಿರುವ ಆಂಜನೇಯನೂ (Lord Hanuman) ಸೂರ್ಯನನ್ನು ಹಣ್ಣೆಂದು ಭ್ರಮಿಸಿ ತಿನ್ನಲು ಹೋದಾಗ ದೇವೇಂದ್ರನ ವಜ್ರಾಯುಧದ ಘಾತಕ್ಕೆ ಒಳಗಾಗಿದ್ದ, ಅವನ ತಂದೆ ವಾಯುದೇವನ ಅನುಗ್ರಹದಿಂದ ಬದುಕುಳಿದ, ವಜ್ರಕಾಯನಾದ. ತನಗಿದ್ದ ದೈವಬಲದಿಂದ ಸ್ವಲ್ಪಮಟ್ಟಿಗೆ ಋಷಿಮುನಿಗಳನ್ನು ಕಾಡಲು ಪ್ರಾರಂಭಿಸಿದಾಗ ಮತ್ತೆ ಶಾಪಗ್ರಸ್ತನಾದ. ಬಳಿಕ ಅವನಿಗೆ ಸ್ವಸಾಮರ್ಥ್ಯದ ಅರಿವು (Self-realization) ಆದದ್ದು ಪ್ರಭುಶ್ರೀರಾಮಚಂದ್ರನ ದರ್ಶನವಾದ ಮೇಲೆಯೇ. ಆದರೂ ಸೀತಾಮಾತೆಯನ್ನು ಹುಡುಕುವುದಕ್ಕಾಗಿ ಅವನು ಲಂಕೆಗೆ ಹೋಗಬೇಕಿತ್ತಲ್ಲ, ಸಾಗರೋಲ್ಲಂಘನ ಮಾಡಬೇಕಿತ್ತಲ್ಲ? ಆಗ ನೂರು ಯೋಜನ ಹಾರುವ ಶಕ್ತಿ ಅವನಿಗಿದ್ದರೂ ತನ್ನಿಂದಾಗದು ಎಂದು ಕುಳಿತಿದ್ದ. ಅವನನ್ನು ಎಚ್ಚರಿಸಿದ್ದು ಜಾಂಬವಂತ. ಮತ್ತೆ ನಡೆದದ್ದೆಲ್ಲ ಬಹಳ ದೊಡ್ಡ ಸಾಧನೆಯ ಕೆಲಸಗಳೇ. ಅಂತಹ ಮಹಾತ್ಮನ ಕತೆಯೇ ಹಾಗಿರುವಾಗ ನಮ್ಮ ಸಣ್ಣಪುಟ್ಟ ಸೋಲು, ಅವಮಾನ ಯಾವ ಲೆಕ್ಕ?(Life Lesson)
Letters to Daughter: ಮಗಳೇ, ಬದುಕಿನಲ್ಲಿ ಅತ್ಯಂತ ಅಮೂಲ್ಯವಾದ ಅನುಭವವೆಂದರೆ ಮುದ್ದು ಕಂದಮ್ಮಗಳ ಅಪ್ಪುಗೆಯಂತೆ!
‘ಸೋಲನ್ನು ಯಾವಾಗ ನೀನು ಪಾಠವಾಗಿ ಸ್ವೀಕರಿಸುತ್ತೀಯೋ, ಅಲ್ಲಿಂದ ನಿನ್ನ ಯಶಸ್ಸು (Success) ಪ್ರಾರಂಭವೆಂದು ತಿಳಿ ಕಂದ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೂ ಕೂಡ ನಮಗೆ ಸಾವಿರಾರು ಮಂದಿ ಸಾಧಕರ ಉದಾಹರಣೆಗಳು ಒದಗುತ್ತವೆ. ಅವರು ಯಾರೂ ಮೊದಲ ಪ್ರಯತ್ನದಲ್ಲೇ ದೊಡ್ಡ ಯಶಸ್ಸು ಕಂಡವರಲ್ಲ, ಅಂತಹ ಒಬ್ಬ ಮಹಾನ್ ಸಾಧಕ ನಮ್ಮ ಎ.ಪಿ.ಜೆ. ಅಬ್ದುಲ್ ಕಲಾಂ (Dr. APJ Abdul Kalam). ಒಂದು ಸಾಮಾನ್ಯ ಕುಟುಂಬದಿಂದ ಬಂದ ಅವರಿಗೆ ಬಹಳ ದೊಡ್ಡ ಕನಸುಗಳಿದ್ದವು. ಅದರಲ್ಲೂ ಅವರಿಗಿದ್ದ ಧೈಯ ತಾನು ಭಾರತೀಯ ವಾಯು ಸೇನೆಗೆ ಪೈಲಟ್ ಆಗಬೇಕೆಂಬುದು. ಅದಕ್ಕಾಗಿ ಬಹಳ ಶ್ರದ್ಧೆಯಿಂದ ಸಿದ್ಧತೆ ನಡೆಸಿ ಆಯ್ಕೆಯ ಕೊನೆಯ ಹಂತದವರೆಗೆ ಬಂದರು. ಆದರೆ ಫಲಿತಾಂಶ ಪ್ರಕಟವಾದಾಗ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಅವರಿಗೆ ಆಗಿದ್ಧಿರಬಹುದಾದ ನಿರಾಸೆಯನ್ನೊಮ್ಮೆ ಕಲ್ಪಿಸಿ ನೋಡು ಪುಟ್ನಾ, ಆದರೆ ಅವರು ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. ತಮ್ಮ ಅಧ್ಯಯನವನ್ನು ಮುಂದುವರಿಸಿದರು, ದೊಡ್ಡ ವಿಜ್ಞಾನಿಯಾದರು, ಕ್ಷಿಪಣಿ ಮಾನವ (Missile Man) ನೆಂಬ ಹೆಸರನ್ನು ಪಡೆದರು. ನಮ್ಮ ದೇಶದ ರಾಷ್ಟ್ರಪತಿಯೂ ಆಗಿ ಸಾವಿರಾರು ಮಕ್ಕಳಿಗೆ ರೋಲ್ ಮಾಡೆಲ್ (Role Model) ಆದರು. ಒಂದು ಸೋಲು ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ ಅಥವಾ ನಿರೂಪಿಸುವುದಿಲ್ಲ ಎಂಬುದಕ್ಕೆ ಅವರ ಬದುಕೇ ಸಾಕ್ಷಿ.
ಇಂತಹ ವಿಷಯಕ್ಕೆ ಬಂದಾಗಲೆಲ್ಲ ಎಲ್ಲರೂ ಉದಾಹರಿಸುವ ಇನ್ನೊಂದು ಮುಖ್ಯ ಹೆಸರು ಥೋಮಸ್ ಅಳ್ತಾ ಎಡಿಸನ್ (Thomas Alva Edison), ಶಾಲೆಯಿಂದ ತಿರಸ್ಕೃತನಾದ ಮಗನಲ್ಲಿ ಆತ್ಮವಿಶ್ವಾಸ (Self-confidence) ತುಂಬಿ ಬೆಳೆಸಿದ ಅವರ ಅಮ್ಮ ಪ್ರಾತಃಸ್ಮರಣೀಯರೇ ಹೌದು. ಎಡಿಸನ್ ವಿದ್ಯುತ್ ಬಲ್ಬನ್ನು ಆವಿಷ್ಕಾರ ಮಾಡುವ ಹೊತ್ತಿಗೆ ನೂರಾರು ಸಲ ಸೋಲನ್ನು ನಷ್ಯವನ್ನೂ ಅನುಭವಿಸಿದವರು. ಕೊನೆಗೆ ಗೆದೇ ಗೆದ್ದರಲ್ಲ? ಗೆದ್ದ ಬಳಿಕ ಅವರಲ್ಲಿ ಯಾರೋ ಅವರ ಸೋಲುಗಳ ಬಗ್ಗೆ ಕೇಳಿದರಂತೆ. ಅವರ ಉತ್ತರವೇನು ಗೊತ್ತಾ? ನಾನು ಸೋಲಲಿಲ್ಲ, ಆದರೆ ಸಮರ್ಪಕವಾಗದ ನೂರಾರು ವಿಧಾನಗಳು ನನಗೆ ‘ಅರ್ಥವಾದವು! ಅವರ ಈ ಮನೋಧರ್ಮ (Mindset) ದಿಂದಲೇ ಅವರ ಪ್ರತಿಯೊಂದು ಸೋಲು ಕೂಡಾ ಆವಿಷ್ಕಾರದ ದಾರಿಯಾಗುತ್ತಾ ಬಂದವು.(Life Lesson)
ಕಂದ,(Dear Son) ಬದುಕು ಅನೇಕ ಸಲ ನಮ್ಮ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ಪರೀಕ್ಷೆಗೊಡುತ್ತದೆ- ಸೋಲಿನ ಮೂಲಕ. ನೀನು ನಿರೀಕ್ಷೆ ಮಾಡದೇ ಇರುವ ರೀತಿಯಲ್ಲಿ ಬದುಕು ತಿರುವುಗಳನ್ನು ತೆಗೆದುಕೊಳ್ಳಬಹುದು. ನೀನು ನಿರೀಕ್ಷಿಸಿದಂತೆ ಆಗದೇ ಇರಬಹುದು. ಆದರೆ ಅಂಥ ಯಾವ ಸಂದರ್ಭ ಎದುರಾದರೂ ನಿನ್ನೊಳಗಿನ ನಂಬಿಕೆಯನ್ನು ಕಳೆದುಕೊಳ್ಳಬೇಡ. ಪ್ರತಿಯೊಂದು ತಪ್ಪೋ ಕೂಡ ಹೊಸ ಪಾಠವನ್ನು ಕಲಿಸುತ್ತದೆ. ಸೋತು ಕುಸಿದ, ಹಿಮ್ಮೆಟ್ಟಿದ ಪ್ರತಿಯೊಂದು ಕ್ಷಣವೂ ನಿನ್ನನ್ನು ಹೊಸದಾದ, ಬಲುದೊಡ್ಡ ಹೆಜ್ಜೆಗೆ ಸಿದ್ಧನನ್ನಾಗಿಸುತ್ತದೆ. ನೀನು ಎಷ್ಟು ಬಾರಿ ಬಿದ್ದೆ ಎನ್ನುವುದು ವಿಷಯವಲ್ಲ, ಬಿದ್ದ ಪ್ರತಿಯೊಂದು (Courage and Determination) ಮೇಲೆದ್ದು ನಿಲ್ಲುತ್ತೀ ಅನ್ನುವುದು ಮಾತ್ರ ಮುಖ್ಯ(.Life Lesson)
ಯಶಸ್ಸಿಗಾಗಿ ಕಠಿಣ ಪರಿಶ್ರಮ (Hard Work) ಪಡು, ವಿನಯವಂತಿಕೆಯನ್ನು ಅಭ್ಯಾಸ ಮಾಡಿಕೋ. ಕಲಿಯುವ ಮತ್ತು ಬೆಳೆಯುವ ನಿನ್ನ ಸಾಮರ್ಥ್ಯದಲ್ಲಿ ಯಾವತ್ತೂ ನಂಬಿಕೆಯಿರಲಿ. ಬದುಕು ಸವಾಲೊಡ್ಡುವ ಎಲ್ಲ ಸಂದರ್ಭಗಳಲ್ಲಿಯೂ ನಾನು ನಿನ್ನ ಬದಿಯಲ್ಲಿ ಇರುವುದು ಸಾಧ್ಯವಿಲ್ಲ ನಿಜ, ಆದರೆ ನಿನ್ನ ಕುರಿತು ನನಗಿರುವ ನಂಬಿಕೆ ಅಚಲವಾದದ್ದು ಎಂಬುದನ್ನು ಸದಾ ನೆನಪಿನಲ್ಲಿಡು. ಏನೇನು ಆಗಬೇಕೋ ಅವೆಲ್ಲವೂ ಭಗವಂತನ ನಿರ್ಧಾರದಂತೆ ಆಗಿಯೇ ಆಗುತ್ತವೆ, ಆದರೆ ಪ್ರಯತ್ನಿಸುವುದನ್ನು ನಿಲ್ಲಿಸಬೇಡ. ‘ತಮಗೆ ತಾವೇ ಸಹಾಯ ಮಾಡಿಕೊಳ್ಳುವವರಿಗೆ ಮಾತ್ರ ದೇವರೂ ಸಹಾಯ ಮಾಡಬಲ್ಲ!’ (God helps those who help themselves).
ಎಂದೂ ಮುಗಿಯದ ಪ್ರೀತಿಯೊಂದಿಗೆ,
ಅಮ್ಮ (Mother)
