(ಪತ್ರ ಎರಡು) ಮಗಳೇ,

ನೀನು ಬಳಿಬಂದು ಅಮ್ಮಾ ಅಂತ ಬಳಸಿ ಹಿಡಿದುಕೊಂಡರೆ ನನಗೆಷ್ಟೋ ಸಮಾಧಾನ. ನೀನು ನನ್ನೊಂದಿಗೆ ಇದ್ದೀಯಾ ಅನ್ನುವ ಭರವಸೆ. ಪುಟ್ಟೂ, ಬದುಕಿನಲ್ಲಿ ಬೇರೆ ಬೇರೆ ಹಂತದಲ್ಲಿ ಎಷ್ಟೇ ಸಾಧನೆ ಮಾಡಿರಬಹುದು, ಸಾಧಿಸುವ ದಾರಿ ಇನ್ನೂ ಬಹುದೂರವಿರಬಹುದು, ಆದರೆ ಮಕ್ಕಳ ಪ್ರಗತಿಗಿಂತ ದೊಡ್ಡ ಸಾಧನೆ ಇನ್ಯಾವುದು ಹೇಳು? ಅದೇ ಸಮಯಕ್ಕೆ ನಿನಗೆ ಇನ್ನೊಂದು ಗುಟ್ಟು ಹೇಳಲಾ?.
ಎಷ್ಟೋ ಸಲ ಮಕ್ಕಳ ಅಪ್ಪುಗೆಯಿಂದ ಮಕ್ಕಳಿಗಿಂತ ಹೆಚ್ಚಿನ ಧೈರ್ಯ, ಸ್ಥೈರ್ಯ ಒದಗುವುದು ಹೆತ್ತವರಿಇದನ್ನೂ ಓದಿಗೆ. ಹೇಳಿಕೊಳ್ಳದೆಯೂ ಹೇಳಿಕೊಳ್ಳಬೇಕಾದ ಸತ್ಯವಿದು. ದಿನದ ದುಡಿಮೆ, ದಣಿವು, ಕೆಲಸಗಳ ಒತ್ತಡ ನಮ್ಮನ್ನು ಬಹುವಾಗಿ ಕಾಡುತ್ತಿರುತ್ತದೆ. ಆ ಕ್ಷಣದಲ್ಲಿ ಮಾತುಗಳಿಗಿಂತಲೂ ಮೌಲ್ಯಯುತವಾದದ್ದು ಸಣ್ಣದೊಂದು ಸ್ಪರ್ಶ.
ಇದನ್ನೂ ಓದಿ: ತಾಯ್ತನದ ನಲಿವಿನಲಿ ಕಾಡುವ ಮನಸ್ಸಿನ ಹೊರಳಾಟ, ಪ್ರಸವ ನಂತರ ಉಂಟಾಗುವ ಹಿಂಜರಿಕೆಯ ಮನಸ್ಥಿತಿ
ನೀನೇ ಕೆಲವು ಸಲ ಹೇಳುತ್ತೀಯಲ್ಲ, ‘ಅಮ್ಮ, ಹತ್ತಿರ ಕುಳಿತುಕೊಂಡು ತಲೆ ನೇವರಿಸು’ ಅಂತ! ಆಗ ನಿನಗೆ ಒದಗುವ ಸಾಂತ್ವನವಿದೆಯಲ್ಲ, ಅಂಥದ್ದೇ ಸಾಂತ್ವನ ನಿನ್ನ ಸ್ಪರ್ಶದಲ್ಲಿ ನಮಗಿರುತ್ತದೆ. ಅಪ್ಪ ತಲೆನೋವು ಅಂತ ಮಲಗಿದ್ದಾಗ ‘ಮಗಳೇ, ಸ್ವಲ್ಪ ಮಸಾಜ್ ಮಾಡುತ್ತೀಯಾ?’ ಅಂತ ಕರೆಯುತ್ತಾರಲ್ಲ, ನಿಜವಾಗಿಯೂ ಹೇಳಬೇಕೆಂದರೆ ಸಂಜೆ ಕಾಡುವ ತಲೆನೋವಿಗೆ ಬೇಕಾಗುವುದು ಆಪ್ತಸ್ಪರ್ಶ ಮಾತ್ರ. ಅದು ನಿನಗೂ ಗೊತ್ತು. ಅಲ್ಲಿ ತೆಗೆದುಕೊಂಡ ಮಾತ್ರೆಗಿಂತಲೂ ಹೆಚ್ಚು ಕೆಲಸ ಮಾಡುವುದು ನೀನು ಕೊಡುವ ಮಸಾಜ್!
ಮಗಳೇ, ‘ಅಪ್ಪ ನನ್ನನ್ನೇ ಕರೆಯುತ್ತಾರೆ.. ನಾನು ಬರೆಯುತ್ತಿದ್ದೆ’ ಎಂದು ಕೆಲವೊಮ್ಮೆ ನೀನು ಹೇಳುವಾಗ ನನಗೆ ನಗು ಬರುವುದಿದೆ. ‘ಅಪ್ಪಾ, ಐ ಲವ್ ಯು ಪಾ’ ಹಾಡಿನಲ್ಲಿ ‘ನಿನ್ನ ಅಂಗಿ ಬೆವರಲಿ ನಮ್ಮ ಅನ್ನ ಅಡಗಿದೆ..’ ಅಂತೇನೋ ಸಾಲುಗಳು ಬರುತ್ತವಲ್ಲ.. ಮಕ್ಕಳೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಅದು. ಮನೆಗಾಗಿ, ಮಕ್ಕಳಿಗಾಗಿ ಅಪ್ಪ (ಅಮ್ಮನೂ) ದುಡಿಯುತ್ತಾರೆ, ಆದರೆ ಪ್ರತಿಯಾಗಿ ಅವರು ಮಕ್ಕಳಿಂದ ನಿರೀಕ್ಷೆ ಮಾಡುವುದು ಸಣ್ಣ ಒಡನಾಟವನ್ನಷ್ಟೇ. ನೀನೆಲ್ಲಿಯಾದರೂ ನಿನ್ನ ಮುಂದಿನ ವ್ಯಾಸಂಗಕ್ಕಾಗಿ ದೂರದ ಊರಿನಲ್ಲಿ ಹಾಸ್ಟೆಲ್ಲಿನಲ್ಲಿರಬೇಕಾದ ಸಂದರ್ಭ ಬಂದರೆ ನಿನ್ನನ್ನು ಬಿಟ್ಟು ಹೇಗಿದ್ದೇವೋ ಅನ್ನಿಸಿ ಭಯವಾಗುತ್ತದೆ. ಅದರರ್ಥ ನೀನು ನಾವಿದ್ದಲ್ಲಿಯೇ ಏನು ಲಭ್ಯವಿದೆಯೋ ಅದನ್ನಷ್ಟೇ ಓದು ಎಂದು ಖಂಡಿತಾ ಅಲ್ಲ.
ನಿನ್ನ ಕನಸುಗಳಿಗೆ ನಾವು ಅಡ್ಡಿಯಾಗುವವರೂ ಅಲ್ಲ. ಹೆತ್ತವರಿಗೆ ಬೇಕಾದ ಭರವಸೆಯೊಂದೇ: ‘ನಮ್ಮ ಮಕ್ಕಳು ನಾವು ಒದಗಿಸಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅಧ್ಯಯನ ಮಾಡುತ್ತಿದ್ದಾರೆ. ಎಲ್ಲೂ ಸಮಯ ಪೋಲಾಗದಂತೆ ತಮ್ಮ ಪ್ರತಿಭೆಯನ್ನು ಬೆಳಗುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.’ ಈ ವಿಷಯದಲ್ಲಿ ನಿಮ್ಮಿಬ್ಬರನ್ನೂ ನೂರಕ್ಕೆ ನೂರು ನಂಬಿದ್ದೇವೆ. ಆ ನಂಬಿಕೆ ಎಂದೂ ಸುಳ್ಳಾಗದಂತೆ ನಮ್ಮನ್ನು ಕಾಪಾಡಿಕೊಳ್ಳುತ್ತೀರಿ ಎಂಬುದು ಅಂತರಂಗದ ಧೈರ್ಯ.
ಇದನ್ನೂ ಓದಿ: ಕೇವಲ ಸಹೋದರ ಸಂಬಂಧವಲ್ಲ, ರಕ್ಷಾಬಂಧನ ಹಬ್ಬದ ಮೂಲ ದ್ರೌಪದಿಯ ಅಪೂರ್ವ ಔದಾರ್ಯ
ಕಂದಾ, ನಿಮ್ಮ ಹೆಸರು ಹೇಳಿದ ತಕ್ಷಣ ಶಾಲೆಯಲ್ಲಿಯೂ ಶಿಕ್ಷಕರ ಮುಖದ ಮೇಲೆ ಸಂತೋಷದ ನಗು ಅರಳುವುದನ್ನು ನೋಡಿದರೆ ನಮಗೆ ಸಂತೃಪ್ತಿ. ಅದಕ್ಕಿಂತ ದೊಡ್ಡ ಆಸ್ತಿ ಇನ್ನೇನಿದೆ ಹೇಳು? ಮೊನ್ನೆ ಸಿದ್ಧಗಂಗಾ ಜಾತ್ರೆಯಲ್ಲಿ ಸಿಕ್ಕಿದ ನಿಮ್ಮ ಯೋಗ ಗುರುಗಳು, ‘ಕ್ಲಾಸಿಗೆ ಫಸ್ಟ್ ಬಂದ್ರೂ ಒಂದು ಚಾಕ್ಲೇಟು ತಂದುಕೊಟ್ಟಿಲ್ಲ ನಿಮ್ಮ ಮಗಳು’ ಅಂತ ನಕ್ಕರು. ನೀನು ಸಣ್ಣಗೆ ನಕ್ಕು ಅತ್ತ ದೈತ್ಯ ಚಕ್ರದತ್ತ ಮುಖಮಾಡಿ ನಿಂತಾಗ ‘ಎಂಥಾ ಅದೃಷ್ಟವಂತರು ಮೇಡಂ ನೀವು! ಎಷ್ಟು ಒಳ್ಳೆಯ ಮಕ್ಕಳು..’ ಇತ್ಯಾದಿ ಅಂದರು. ಹೌದು, ಅದರಲ್ಲಿ ಅನುಮಾನವೇನು? ನೀನೇ ಕೆಲವು ಸಲ ಹೇಳುತ್ತೀಯಲ್ಲ, ‘ಇಂಥವರ ಮಗಳು’ ಅಂತ ನಿನ್ನನ್ನು ಗುರುತಿಸುವ ಬದಲು ‘ಇಂಥವರ ಅಪ್ಪ ಅಮ್ಮ’ ಅಂತ ಸಮಾಜ ನಮ್ಮನ್ನು ಗುರುತಿಸುವ ಹಾಗೆ ಏನಾದರೂ ಸಾಧಿಸುತ್ತೇವೆ ಅಂತ. ಆ ದಿನಗಳು ಬರಲಿ. ನಮಗೆ ಮಾತ್ರವಲ್ಲ, ಮುದ್ದುಮಕ್ಕಳಿರುವ ಎಲ್ಲ ತಂದೆತಾಯಿಯರಿಗೂ ಆ ಭಾಗ್ಯವನ್ನು ಭಗವಂತ ಕರುಣಿಸಲಿ.
ಹೌದು, ನಿನ್ನ ಸ್ಪರ್ಶದಿಂದ ತೊಡಗಿದ ಮಾತು ಎಲ್ಲೆಲ್ಲೋ ಸಾಗಿತು. ಮಗಳೇ, ಕೆಲವು ಸಲ ನಿಜಕ್ಕೂ ಬದುಕು ಎಷ್ಟು ಬೇಗ ಓಡುತ್ತಿದೆಯಲ್ಲಾ ಅನಿಸುತ್ತಿದೆ. ಈಗಿನ್ನೂ ಮೊನ್ನೆ ಮೊನ್ನೆ ಮೊದಲ ಬಾರಿಗೆ ನಿನ್ನ ಎತ್ತಿಕೊಂಡ ಕ್ಷಣ ನೆನಪಾಗುತ್ತದೆ. ಮಡಿಲಲ್ಲಿ ಮಲಗಿದ ನೀನು ಬೊಚ್ಚುಬಾಯಿ ಬಿಟ್ಟು ನಕ್ಕ ದಿನಗಳು ನೆನಪಾಗುತ್ತವೆ.
ಆಗಿನ್ನೂ ಅಜ್ಜಿ ನಿನಗೆ ಸ್ನಾನ ಮಾಡಿಸಿ ಬೇಬಿ ಪೌಡರ್ ಹಾಕಿ ಹಣೆಗೆ ಕಪ್ಪು ಬೊಟ್ಟು ಇಟ್ಟು ಜೋಲಿಯೊಳಗೆ ನಿನ್ನ ಮಲಗಿಸಿ ತೂಗುತ್ತಿದ್ದರೆ ಮನೆಯೆಲ್ಲ ಬೆಳಕು. ನೀನೋ..ತೂಗುವುದಕ್ಕೆ ಅಜ್ಜನೇ ಬೇಕೆಂದು ಅಳುತ್ತಿದ್ದೆ. ನಿನಗದು ಹೇಗೆ ತಿಳಿಯುತ್ತಿತ್ತೋ.. ಅಜ್ಜ ಬಂದು ಯಕ್ಷಗಾನ ಪದಗಳನ್ನು ಹಾಡುತ್ತಾ ತೂಗಿದರೆ ನಿನಗೆ ಸುಖವಾದ ನಿದ್ದೆ. ಅಜ್ಜನ ಕೈಕೂಸು ನೀನು. ಅಜ್ಜಿ ಕೆಲವೊಮ್ಮೆ ರೇಗುತ್ತಿದ್ದರು.. ‘ಎತ್ತಿಕೊಂಡು ತಿರುಗಿ ಅಭ್ಯಾಸ ಮಾಡಿಸಿದರೆ, ರಾತ್ರಿ ಅವಳೆದ್ದು ಅಳುವಾಗ ಎತ್ತಿಕೊಳ್ಳಲಿಕ್ಕೆ ಬರುತ್ತೀರಾ’ ಅಂತ! ಈಗಲೂ ನೀನು ಶಾಲೆಗೆ ಹೊರಟು ಘಮ್ಮನೆ ಬಳಿಸಾರಿದರೆ ಅದೆಲ್ಲ ನೆನಪಾಗುತ್ತದೆ.
ಮಗಳೇ, ಬೆಳಗ್ಗೆ ಎದ್ದಾಗಿನ ಮೊದಲ ಕೆಲವು ಸಮಯ, ಮಲಗುವುದಕ್ಕೆ ಮೊದಲಿನ ಕೆಲವು ಸಮಯ ಮಕ್ಕಳೊಂದಿಗೆ ಇರಬೇಕಂತೆ. ಎಲ್ಲ ದಿನಗಳಲ್ಲೂ ಅದು ಸಾಧ್ಯವಾಗದಿರಬಹುದು. ನೀನು ಅರ್ಥ ಮಾಡಿಕೊಳ್ಳುತ್ತೀಯಲ್ಲ.. ನಮ್ಮ ಒತ್ತಡಗಳನ್ನು ಹಗುರವಾಗಿಸುವುದು ಈ ಭರವಸೆಯೇ. ‘ನಿದ್ದೆ ಅರ್ಧಂಬರ್ಧ ಮಾಡಿ ಕೆಡಿಸಿಕೊಳ್ಳಬೇಡ, ಚೆನ್ನಾಗಿ ನಿದ್ದೆ ಮಾಡು. ಬೆಳಗ್ಗೆ ಫ್ರೆಶ್ ಆಗಿ ಎದ್ದೇಳು’ ಅಂದೆಯಲ್ಲ, ನಿನ್ನೆ? ಆ ಕ್ಷಣದಲ್ಲಿ ನೀನೇ ನನ್ನ ಅಮ್ಮನಾಗಿಬಿಟ್ಟೆ! ಈಗೊಂದು ಬೆಚ್ಚಗಿನ ಅಪ್ಪುಗೆ ನಿನಗೆ!
ಸಂಜೆ ಅಕ್ಕ ತಮ್ಮ ಇಬ್ಬರೂ ಜತೆಯಾಗಿ ಮನೆಗೆ ಬರುವುದನ್ನೇ ಕಾಯುತ್ತಾ ಇರುವೆ.
