
ಅಂದು ಹದಿನೆಂಟನೇಯ ದಿನ ಮಹಾಭಾರತದ ಯುದ್ದ ಮುಗಿದಿದೆ. ಭೀಷ್ಮ, ದ್ರೋಣಾದಿಗಳು, ಕರ್ಣ ಶಕುನಿ, ದುಶ್ಯಾಸನ, ಅಭಿಮನ್ಯು ದ್ರುಪದ, ವಿರಾಟ, ಘಟೋತ್ಗಜ ಮೊದಲಾದವರೆಲ್ಲ ರಕ್ತದ ಮಡುವಿನಲ್ಲಿ ಶವವಾಗಿದ್ದಾರೆ. (ಭೀಷ್ಮ ಶರಶೆಯ್ಯೆಯಲ್ಲಿ) ರಣಭೂಮಿ ಯುದ್ದೋನ್ಮಾದದಲ್ಲಿ ತೊಯ್ದು ಮುಳುಗಿದೆ. ದುರ್ಯೋಧನ ತೊಡೆ ಮುರಿದುಕೊಂಡು ತನ್ನ ಸಾವಿನ ಕೊನೆಯ ಕ್ಷಣಗಳನ್ನು ಎದುರು ನೋಡುತ್ತಿದ್ದಾನೆ. ಯುದ್ದ ಗೆದ್ದೆವಲ್ಲ ಎಂಬ ಖುಷಿ ಪಾಂಡವರಲ್ಲಿ ಇನ್ನೂ ಮೊಳಗಿದ್ದಿಲ್ಲ.
ಬಿಚ್ಚಿದ ಮುಡಿಯನ್ನು ದುಶ್ಯಾಸನನ ರಕ್ತವನ್ನು ಆ ಮುಡಿಗೆ ಸವರಿದ ಮೇಲೆಯೇ ಕಟ್ಟುವೆನೆಂದು ವನವಾಸಕ್ಕೆ ಹೊರಡುವ ಕಾಲದಲ್ಲಿ ಶಪಥ ಮಾಡಿದ ಅಗ್ನಿಸಂಭೂತೆ ದ್ರೌಪದಿ, ಬಿಚ್ಚಿದ ಮುಡಿಯನ್ನು ಕಟ್ಟುವ ಕಾಲ-ಸನ್ನಿಹಿತದಲ್ಲಿದ್ದಾಳೆ. ಆಗ ಅದೊಂದು ಭೀಕರ ಘಟನೆ ನಡೆದುಹೊಯಿತು.ದ್ರೋಣಪುತ್ರ ಅಶ್ವತ್ಥಾಮ ಕೃತವರ್ಮ ಮತ್ತು ಕೃಪ ಮೂವರು ಯುದ್ದಭೂಮಿಯಿಂದ ಓಡಿಹೋಗಿ ಅಡವಿಯಲ್ಲಿ ಒಂದು ಮರದ ಕೆಳಗೆ ಒರಗಿರಲು, ಹೀಗೆ ಸಹಜದೃಷ್ಟಿ ಹಾಯಿಸಿ ಮರದ ರೆಂಬೆಯೆಡೆ ಕತ್ತೆತ್ತಿ ನೋಡಿದನು ಅಶ್ವತ್ಥಾಮ! ಕೂಡಲೇ ಅವನಿಗೊಂದು ದೃಶ್ಯ ಗೋಚರವಾಯಿತು.
ಇದನ್ನೂ ಓದಿ: Letters to Daughter: ದೇವರು ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ
ರಾತ್ರಿಯ ವೇಳೆ, ಹಕ್ಕಿಗಳು ಗೂಡು ಬಿಟ್ಟು ಆಹಾರ ತರಲು ಹಾರಿದ ಘಳಿಗೆ ನೋಡಿ ಗೂಬೆಯೊಂದು ಬಂದು ಗೂಡ ಹೊಕ್ಕು ಪಾಪದ ಹಕ್ಕಿಮರಿಗಳನ್ನೆಲ್ಲ ಕೊಂದು ಹಾಕಿಬಿಟ್ಟಿತು. ಇದನ್ನು ಕಂಡ ಅಶ್ವತ್ಥಾಮನಿಗೆ ಇದೇ ಮಾದರಿಯ ಕುತಂತ್ರವೊಂದು ಹೊಳೆಯಿತು. ತನ್ನ ಮಿತ್ರ ದುರ್ಯೋಧನನಿಗೆ ತಾನಿತ್ತ ಭಾಷೆಯು ಫಕ್ಕನೆ ನೆನಪಾಯಿತು.
ರಾತ್ರಿ ಪಾಂಡವರ ಬಿಡಾರಕ್ಕೆ ಕಳ್ಳತನದಲಿ ನುಸುಳಿ ದ್ರುಷ್ಟದ್ಯುಮ್ನನನ್ನೂ, ಪಾಂಡವರೆಂದು ಭಾವಿಸಿ ದ್ರೌಪದಿಯ ಮಕ್ಕಳಾದ (ಪ್ರತಿವಿಂಧ್ಯ, ಸುತಸೋಮ, ಶ್ರುತಕೀರ್ತಿ, ಶತಾನೀಕ, ಮತ್ತು ಶ್ರುತಸೇನ. ಪ್ರತಿವಿಂಧ್ಯ: ಯುಧಿಷ್ಠಿರನ ಮಗ.ಸುತಸೋಮ: ಭೀಮನ ಮಗ. ಶ್ರುತಕೀರ್ತಿ: ಅರ್ಜುನನ ಮಗ. ಶತಾನೀಕ: ನಕುಲನ ಮಗ. ಶೃತಸೇನ -ಸಹದೇವನ ಮಗ)ಐದು ಉಪಪಾಂಡವರ ಕತ್ತನ್ನೂ ಕತ್ತರಿಸಿ ಬಿಟ್ಟನು.
ಬೆಳೆದು ದೊಡ್ಡವರಾದ ತನ್ನೈದು ಮಕ್ಕಳು ಏಕಕಾಲದಲ್ಲಿ ಹೀಗೆ ಬರ್ಬರವಾಗಿ ಹತ್ಯಗೊಂಡಾಗ ಆ ತಾಯಿಗೆ ಅದೆಂಥಹ ಸಂಕಟವಾಗಿರಬೇಡ. ವ್ಯಾಸರು ಹೇಳಿದಂತೆ ‘ದ್ರೌಪದಿ ಸುಖಪಡುವುದಕ್ಕಾಗಿ ಹುಟ್ಟಿದವಳಲ್ಲ’. ಬರೀ ಕಷ್ಟಕೋಟಲೆಗಳನ್ನೆ ನೋಡಿದವಳು. ಯುದ್ದ ಕೊನೆಗೊಂಡು ಎಲ್ಲವೂ ಸುಸೂತ್ರವಾಗಿ ಮುಗಿಯಿತಲ್ಲ ಎನ್ನುವಷ್ಟರಲ್ಲಿ ಏನಿದು ಅನಾಹುತ!! ಹೆತ್ತ ಕರುಳಿಗೆ ಬೆಂಕಿಯ ಶಾಖ!!ದ್ರೌಪದಿಯೆಂಬ ಮಹಾಮಾತೆಗೆ ಪುತ್ರವಿಯೋಗದಂತ ವಿಷಮಕಾಲ.
ಇದನ್ನೂ ಓದಿ: The Last Word, the Last Meet: ಕೊನೆಯ ಮಾತು ಕಡೆಯ ಭೇಟಿ ಎಂದಿಗೂ ಜೀವಂತ
ಇದ ತಿಳಿದು ಕೃಷ್ಣಾರ್ಜುನರು ಅಶ್ವತ್ಥಾಮ ನನ್ನು ಕಾಳರಾತ್ರಿಯ ಕಾಡಿನಲ್ಲಿ ಹುಡುಕಿ ತಂದು ದ್ರೌಪದಿಯ ಮುಂದೆ ನಿಲ್ಲಿಸಿ ಕೊಲ್ಲುಲು ಮುಂದಾದರು. ಆಗ ದ್ರೌಪದಿಯು ಆಡಿದ ಮಾತು ಎಂದಿಗೂ ಮರೆಯಲಾರದಂಥವು. ಒಂದು ಹೆಂಣನ್ನು ಇನ್ನೊಂದು ಹೆಂಣೆ ಅರ್ಥಮಾಡಿಕೊಳ್ಳಬಲ್ಲಳೆನ್ನುವುದಕ್ಕೆ ಯಾವಕಾಲಕ್ಕೂ ಸಾಕ್ಷಿಯಾಗಿ ನಿಲ್ಲುವಂತಹ ಉದಾತ್ತವಾದ ಮಾತು. ಅದಿನ್ನೆಂಥ ಔದಾರ್ಯ ಅವಳದು.
ತನಗೆ ಮದುವೆಯಾದ ದಿನದಿಂದಲೇ ಅನ್ಯಾಯದ ದಿನಗಳು ಶುರುವಾಗಿ, ಒಂದಲ್ಲ ಎರಡಲ್ಲ ನಾಲ್ಕು ಸಾರಿ ಅಪಮಾನಕ್ಕೊಳಗಾಗಿ, ಐದು ಜನ ಗಂಡಂದಿರಿದ್ದರೂ ನೆಮ್ಮದಿ ಇಲ್ಲದೆ ಅತ್ಯಾಚಾರದ ಅವಮಾಮವನ್ನು ಎದುರಿಸಿ, ಮಾನ ಉಳಿಸಿಕೊಂಡು ವನವಾಸ ಅಜ್ಞಾತವಾಸ ಕಳೆದು, ಸವೆದು ಬಂದರೆ ಮತ್ತದೇ ಯುದ್ದದ ಝೇಂಕಾರ. ಇದ್ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೇ ತಾನೂ ಒಬ್ಬ ತಾಯಿಯಾಗಿ ಮಾತನಾಡುವಳು.
“ಅಶ್ವತ್ಥಾಮನನ್ನು ಕೊಂದು ನನ್ನಂತೆ ಅಶ್ವತ್ಥಾಮನ ತಾಯಿ ‘ಕೃಪೆ’ಯ ಹೊಟ್ಠೆಗೆ ಬೆಂಕಿ ಇಡಬೇಡಿ, ನಾವಿಬ್ಬರೂ ಸಮಾನದುಃಖಿಗಳು, ಆತ ಗುರುನಂದನ,ಅವನ ಕೊಲೆಯಲ್ಲಿ, ನಮ್ಮೀ ದ್ವೇಷದ ಗುರುತಿನಲಿ ಇನ್ನೊಂದು ಹೆತ್ತ ಕರುಳ ಕತ್ತರಿಸಬೇಡಿರಿ” ಎಂದು ದ್ರೌಪದಿ ನುಡಿದಾಗ ಅರಿವೇ ಇಲ್ಲದಂತೆ ಕಣ್ಣು ಹನಿಗೂಡುತ್ತವೆ.ಅಶ್ವತ್ಥಾಮನ ಸಾವಿನಲಿ ಯುದ್ಧದ ವೀರಗಾಥೆ ಮಹಾವ್ಯಥೆಯಾಗಿ ಮುಗಿಯದಿರಲೆಂದು ದ್ರೌಪದಿಬಯಸುವಳು. (ಅಶ್ವತ್ಥಾಮ ಕೃಷ್ಣನಿಂದ ಶಾಪಗ್ರಸ್ಥನಾಗುವನು.) ದ್ರೌಪದಿಯ ಮನೋಧರ್ಮಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ!. ಆಕೆ ಲೋಕಕಂಡ ಅಪೂರ್ವ ಸ್ತ್ರೀ!!!. ಇವತ್ತು ರಕ್ಷಾಬಧನ. ರಕ್ಷಾಬಂಧನದ ಆಚರಣೆಗೆ ಕಾರಣಳಾದ ದ್ರೌಪದಿಯನ್ನು ನೆನೆಯದಿದ್ದರೆ ಹೇಗೆ?
