
ಬೆಂಗಳೂರು: ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಈ ಬಾರಿ ನಡೆಯಲಿರುವ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶೇಷವೆಂದರೆ, ಈ ಬಾರಿ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಿಸಲು ಮೊದಲ ಬಾರಿಗೆ ‘ಇ-ಪಾಸ್’ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇ-ಪಾಸ್ ಪಡೆಯಲು, ಆಸಕ್ತರು ಸೇವಾಸಿಂಧು ವೆಬ್ಸೈಟ್ www.sevasindhu.karnataka.gov.in ಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ, ಒಟಿಪಿ ಮೂಲಕ ಇ-ಪಾಸ್ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವವರು ಇ-ಪಾಸ್ ಜೊತೆಗೆ ತಮ್ಮ ಮೂಲ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಬೆಳಗ್ಗೆ 8.15ರ ಒಳಗೆ ಗೇಟ್ ಸಂಖ್ಯೆ 4ರ ಮೂಲಕ ಮಾತ್ರ ಮೈದಾನ ಪ್ರವೇಶಿಸಲು ಅವಕಾಶವಿದೆ. ನಿಗದಿತ ಸಮಯದ ನಂತರ ಪಾಸ್ ಅಮಾನ್ಯವಾಗುತ್ತದೆ. ಒಂದು ಇ-ಪಾಸ್ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಮಾನ್ಯವಾಗಿದ್ದು, ಅದನ್ನು ವರ್ಗಾಯಿಸುವಂತಿಲ್ಲ. ಕಾರ್ಯಕ್ರಮದ ಸಂದರ್ಭದಲ್ಲಿ ಇ-ಪಾಸ್ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ ಪ್ರತಿ (ಮೊಬೈಲ್ನಲ್ಲಿ) ಕಡ್ಡಾಯ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಅಗತ್ಯವಿಲ್ಲ.
ಒಟ್ಟು 3,000 ಇ-ಪಾಸ್ಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ವಿತರಿಸಲಾಗುತ್ತದೆ. ಇ-ಪಾಸ್ ಹೊಂದಿರುವವರಿಗೆ ಮೈದಾನದೊಳಗೆ ಪಾರ್ಕಿಂಗ್ ಸೌಲಭ್ಯ ಇರುವುದಿಲ್ಲ. ಸಾರ್ವಜನಿಕರು ಪೊಲೀಸ್ ಇಲಾಖೆಯ ನಿರ್ದೇಶನದಂತೆ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
