
ಬೆಂಗಳೂರು: ಕನ್ನಡಿಗರ ಮನೆ ಮಗ, ಕೋಟ್ಯಂತರ ಅಭಿಮಾನಿಗಳ ಪ್ರೀತಿಯ ‘ದಾದಾ’, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಸಾವಿರಾರು ಅಭಿಮಾನಿಗಳ ಹೃದಯ ಒಡೆದಂತಾಗಿದೆ. ಉತ್ತರಹಳ್ಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ, ಹನ್ನೊಂದು ವರ್ಷಗಳಿಂದ ಭಾವನಾತ್ಮಕ ವಿವಾದದ ಕೇಂದ್ರವಾಗಿದ್ದ ಸಮಾಧಿಯನ್ನು ಪೊಲೀಸ್ ಭದ್ರತೆಯಲ್ಲೇ ಕೆಡವಿರುವುದು ಅಭಿಮಾನಿಗಳ ಆಕ್ರೋಶಕ್ಕೆ ತುಪ್ಪ ಸುರಿದಿದೆ.
ಇದನ್ನೂ ಓದಿ: The Last Word, the Last Meet: ಕೊನೆಯ ಮಾತು ಕಡೆಯ ಭೇಟಿ ಎಂದಿಗೂ ಜೀವಂತ
ವಿಷ್ಣು ದಾದಾ ಅಭಿಮಾನಿಗಳ ಕಣ್ಣೀರು ಮತ್ತು ಆಕ್ರೋಶ
ವಿಷಯ ತಿಳಿಯುತ್ತಿದ್ದಂತೆ, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಬಳಿ ಜಮಾಯಿಸಿದರು. ತಮ್ಮ ನೆಚ್ಚಿನ ನಟನ ಸಮಾಧಿಯ ದುಸ್ಥಿತಿ ಕಂಡು ಕಣ್ಣೀರು ಹಾಕಿದರು. “ಇದು ಅನ್ಯಾಯ, ದಾದಾಗೆ ಮಾಡಿದ ಅವಮಾನ,” ಎಂದು ಘೋಷಣೆ ಕೂಗುತ್ತಾ, ಬಾಲಣ್ಣ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಉತ್ತರಹಳ್ಳಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿ, ಕೆಲ ಅಭಿಮಾನಿಗಳನ್ನು ವಶಕ್ಕೆ ಪಡೆದರು. ಸದ್ಯ, ಸ್ಟುಡಿಯೋ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹನ್ನೊಂದು ವರ್ಷಗಳ ಹೋರಾಟಕ್ಕೆ ಇಂಥಾ ಅಂತ್ಯವೇ?
ಈ ವಿವಾದದ ಹಿಂದೆ ಒಂದು ದಶಕದ ಹೋರಾಟದ ಕಥೆಯಿದೆ. ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಅವರ ‘ಪುಣ್ಯಭೂಮಿ’ ನಿರ್ಮಾಣವಾಗಬೇಕು ಎಂಬುದು ಅಭಿಮಾನಿಗಳ ಹಠವಾಗಿತ್ತು. ಆದರೆ, ಆ ಜಾಗದ ಮಾಲೀಕರಾದ ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬ ಇದಕ್ಕೆ ಒಪ್ಪಿರಲಿಲ್ಲ.ಈ ಕಾನೂನು ಹೋರಾಟ ಮತ್ತು ನಿರಂತರ ಜಗಳಗಳಿಂದ ಬೇಸತ್ತ ವಿಷ್ಣು ಅವರ ಕುಟುಂಬ, ಭಾರತಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ, ಸರ್ಕಾರ ಮೈಸೂರಿನಲ್ಲಿ ನೀಡಿದ ಜಾಗದಲ್ಲಿ ಸುಂದರವಾದ ಸ್ಮಾರಕವನ್ನು ನಿರ್ಮಿಸಿತು. ಆದರೆ, ಅಭಿಮಾನಿಗಳ ಭಾವನೆಗಳು ಮಾತ್ರ ಅಭಿಮಾನ್ ಸ್ಟುಡಿಯೋ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. “ದಾದಾನನ್ನು ಮಣ್ಣು ಮಾಡಿದ ಜಾಗವೇ ನಮಗೆ ಪವಿತ್ರ” ಎಂಬುದು ಅವರ ವಾದವಾಗಿತ್ತು.
ಸದ್ಯಕ್ಕೆ, ಕಾನೂನು ಹೋರಾಟದಲ್ಲಿ ಒಂದು ತೀರ್ಪು ಬಂದಿರುವಂತೆ ಕಂಡರೂ, ಸಾವಿರಾರು ಅಭಿಮಾನಿಗಳ ಮನಸ್ಸಿನಲ್ಲಿ ಹೊತ್ತಿಕೊಂಡಿರುವ ಆಕ್ರೋಶದ ಕಿಡಿ ಮತ್ತು ನೋವನ್ನು ಯಾರು ತಣಿಸಲಿದ್ದಾರೆ? ಈ ಭಾವನಾತ್ಮಕ ವಿವಾದಕ್ಕೆ ಶಾಶ್ವತ ಪರಿಹಾರ ಯಾವಾಗ? ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ.
