Body Shaming: ಈಗಿನ ಕಾಲದಲ್ಲಿ ಎಲ್ಲರಿಗೂ “ಅಂದವಾಗಿ ಕಾಣಬೇಕು” ಅನ್ನೋ ಒತ್ತಡ ತುಂಬಾ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಚಿತ್ರಗಳಲ್ಲಿ, ಅಥವಾ ಸುತ್ತಲಿನ ಜನರ ಮಾತುಗಳಲ್ಲಿ ಪರಿಪೂರ್ಣ ದೇಹ, ಬಣ್ಣ, ರೂಪ ಇವೆಲ್ಲವನ್ನೇ ಸೌಂದರ್ಯದ ಮಾಪನವನ್ನಾಗಿ ನೋಡಲಾಗುತ್ತಿದೆ. ಆದರೆ ನಿಜವಾಗಿ ಸೌಂದರ್ಯ ಎಂದರೆ ಏನು? ಅದು ಕೇವಲ ಮುಖದ ಮೇಲಿರುತ್ತದೆಯೇ?. ಅಲ್ಲಾ ಖಂಡಿತವಾಗಿಯೂ ಅಲ್ಲ. ನಿಜವಾದ ಅಂದ ನಮ್ಮ ಆತ್ಮವಿಶ್ವಾಸದಲ್ಲಿ, ನಗುವಿನಲ್ಲಿ, ಹೃದಯದ ಮೃದುತನದಲ್ಲಿ ಇದೆ. ಆದರೆ ದುರಾದೃಷ್ಟವಶಾತ್, ಇಂದಿನ ಸಮಾಜದಲ್ಲಿ “ಬಾಡಿ ಶೇಮಿಂಗ್” ಎಂಬ ವಿಷ ಮನುಷ್ಯರ ಮನಸ್ಸನ್ನು ನಿಧಾನವಾಗಿ ನಾಶಮಾಡುತ್ತಿದೆ.
ಬಾಡಿ ಶೇಮಿಂಗ್ ಎಂದರೇನು?(Body Shaming)
ಯಾರಾದರೂ ಒಬ್ಬರ ದೇಹದ ರೂಪ, ತೂಕ, ಬಣ್ಣ, ಎತ್ತರ ಅಥವಾ ಯಾವುದೇ ಶಾರೀರಿಕ ಲಕ್ಷಣಗಳ ಬಗ್ಗೆ ಹಾಸ್ಯ ಮಾಡುವುದು, ಟೀಕಿಸುವುದು, ಕೆಣಕುವುದು ಅಥವಾ ಹೋಲಿಸುವುದನ್ನೇ ಬಾಡಿ ಶೇಮಿಂಗ್ ಎನ್ನುತ್ತಾರೆ. ಇದು ಕೇವಲ ಹಾಸ್ಯ ಅಥವಾ ಮಾತಲ್ಲ — ಇದು ಒಬ್ಬರ ಆತ್ಮಸಮ್ಮಾನವನ್ನು ಕಿತ್ತುಕೊಳ್ಳುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕ್ರೂರ ಮನೋಭಾವ.
ಲಕ್ಷಣಗಳು (Symptoms)
ಬಾಡಿ ಶೇಮಿಂಗ್ನಿಂದ ಬಾಧಿತ ವ್ಯಕ್ತಿಯ ಮನಸ್ಸಿನಲ್ಲಿ ಕಾಣಬಹುದಾದ ಕೆಲವು ಲಕ್ಷಣಗಳು:
- ತನ್ನದೇ ದೇಹದ ಬಗ್ಗೆ ಅಸಹ್ಯ ಭಾವನೆ ಅಥವಾ ನಾಚಿಕೆ.
- ಕನ್ನಡಿ ನೋಡುವುದನ್ನೇ ತೊರೆದುಬಿಡುವುದು.
- ಜನರ ಮುಂದೆ ಮಾತನಾಡಲು, ಫೋಟೋ ತೆಗೆಸಿಕೊಳ್ಳಲು ಹೆದರಿಕೆ.
- ಹತಾಶೆ, ಆತಂಕ ಅಥವಾ ಡಿಪ್ರೆಶನ್.
- ಆಹಾರ ಪದ್ಧತಿಯಲ್ಲಿ ಬದಲಾವಣೆ — ಕೆಲವರು ಅತಿಯಾಗಿ ತಿನ್ನುವುದು, ಕೆಲವರು ತಿನ್ನದೆ ಇರುವುದು.
- ಇತರರ ಮೆಚ್ಚುಗೆಯ ಮೇಲೆಯೇ ಜೀವಿಸುವುದು.
ಕಾರಣಗಳು (Reasons)
- ಸಾಮಾಜಿಕ ಮಾಧ್ಯಮದ ಪ್ರಭಾವ: ಫಿಲ್ಟರ್ಗಳಿಂದ ಕೂಡಿದ ಪರಿಪೂರ್ಣ ಚಿತ್ರಗಳು ಅಸಲಿ ಜೀವನದ ದೃಷ್ಟಿಕೋನವನ್ನು ಬದಲಾಯಿಸುತ್ತವೆ.
- ಸಮಾಜದ ನಿರೀಕ್ಷೆ: “ಹುಡುಗಿ ಅಂದವಾಗಿರಬೇಕು”, “ಹುಡುಗ ಶಾರ್ಪ್ ಆಗಿರಬೇಕು” ಎಂಬ ಧೋರಣೆಗಳು.
- ಕುಟುಂಬ ಮತ್ತು ಸ್ನೇಹಿತರ ಟೀಕೆ: ಕೆಲವೊಮ್ಮೆ ಸ್ನೇಹಿತರು ಹೇಳುವ “ನಿನ್ನ ತೂಕ ಜಾಸ್ತಿ ಆಗಿದೆ” ಅಥವಾ “ನಿನ್ನ ಬಣ್ಣ ಹೀಗೆ ಯಾಕೆ?” ಅನ್ನೋ ಮಾತುಗಳು ಆಳವಾದ ನೋವನ್ನು ಉಂಟುಮಾಡುತ್ತವೆ.
- ತನ್ನದೇ ಹೋಲಿಕೆ: ಇತರರೊಂದಿಗೆ ತನ್ನನ್ನು ಹೋಲಿಸುವ ಮನೋಭಾವದಿಂದ ಆತ್ಮವಿಶ್ವಾಸ ಕುಸಿಯುತ್ತದೆ.
ಹೇಗೆ ಹೊರಬರಬರುವುದು ? (Overcome)
- ಸ್ವ-ಸ್ವೀಕಾರ (Self-Acceptance): ನಿನ್ನ ದೇಹ ನಿನ್ನದೇ; ಅದು ನಿನ್ನ ಪಯಣದ ಸಾಕ್ಷಿ. ಪ್ರತಿಯೊಂದು ಗುರುತು, ಪ್ರತಿಯೊಂದು ಬಣ್ಣ, ಪ್ರತಿಯೊಂದು ಆಕಾರವೂ ನಿನ್ನ ಕಥೆ ಹೇಳುತ್ತದೆ.
- ಸಕಾರಾತ್ಮಕ ಚಿಂತನೆ (Positive Thinking): ನಮ್ಮ ಒಳಗಿನ ಗುಣಗಳನ್ನು ನೆನಪುಮಾಡಿಕೊಳ್ಳುವುದು — ನಮ್ಮಲ್ಲಿನ ಕರುಣೆಯ ಗುಣ, ಆತ್ಮ ಶಕ್ತಿ, ನಮ್ಮ ಹೃದಯವೇ ನಮ್ಮ ನಿಜವಾದ ಸೌಂದರ್ಯ.
- ಸಾಮಾಜಿಕ ಮಾಧ್ಯಮಗಳ ನಿಯಂತ್ರಣ: ಫಿಲ್ಟರ್ಗಳ ಹಿಂದಿನ ಸುಳ್ಳು ಸೌಂದರ್ಯವನ್ನು ನಂಬದೆ ಇರುವುದು. ನಿಜವಾದ ಜೀವನವನ್ನು ಅನುಭವಿಸುವುದು.
- “ನಾನು ಹೇಗಿದ್ದರೂ ಒಳ್ಳೆಯವಳು/ಒಳ್ಳೆಯವನು” ಅನ್ನೋ ಭಾವನೆ ಬೆಳೆಸು.
- ಸ್ನೇಹಿತರ ಸಹಾಯ: ನಮ್ಮನ್ನು ಪ್ರೋತ್ಸಾಹಿಸುವ, ಪ್ರೀತಿಸುವ ಜನರೊಂದಿಗೆ ಸಮಯ ಕಳೆಯುವುದು.
- ಮಾನಸಿಕ ಆರೋಗ್ಯ ಕಾಳಜಿ: ಅಗತ್ಯವಿದ್ದರೆ ಕೌನ್ಸೆಲರ್ ಅಥವಾ ಸೈಕಾಲಜಿಸ್ಟ್ರ ಸಹಾಯ ಪಡೆಯುವುದು.
