ನವದೆಹಲಿ: ಕಳೆದ ಸೋಮವಾರ ದೆಹಲಿಯಲ್ಲಿ ನಡೆದ ನಿಗೂಢ ಸ್ಪೋಟದ ಕುರಿತು ತನಿಖೆ ತೀವುಗೊಂಡಿದೆ. (Delhi Bomb Blast) ಈ ಭೀಕರ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಎನ್ಐಎ(NIA), ಸೇರಿದಂತೆ ಇತರ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ತನಿಖೆ ವೇಳೆ ಇಬ್ಬರು ಶಂಕಿತರನ್ನು ವಿಚಾರಣೆ ಮಾಡಿದಾಗ ಬೆಚ್ಚಿಬೀಳಿಸುವ ವಿಷಯಗಳು ಬಯಲಾಗಿವೆ.
ಉಗ್ರರ ಅಸಲಿ ಪ್ಲಾನ್ ಏನು ಗೊತ್ತಾ?
ಬರುವ ಜನವರಿ 26ರಂದು ಅಂದರೆ ಗಣರಾಜ್ಯೋತ್ಸವದ ದಿನವೇ ಐತಿಹಾಸಿಕ ಕೆಂಪು ಕೋಟೆಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲು ಅವರು ಸಂಚು ರೂಪಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಮುಜಮ್ಮಿಲ್ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ, ಸ್ಫೋಟಕ್ಕೂ ಮುನ್ನ ತಾನು ಮತ್ತು ಉಮರ್ ಕೆಂಪು ಕೋಟೆಯ ಪ್ರದೇಶದಿಂದಲೇ ವಾಪಸ್ ಬಂದಿದ್ದರಂತೆ. ತಮ್ಮ ಮೊದಲ ಗುರಿ ಕೆಂಪು ಕೋಟೆಯೇ ಆಗಿದ್ದರಿಂದ, ದಾಳಿಯ ಪೂರ್ವಸಿದ್ಧತೆಗಾಗಿ ಹಲವು ಬಾರಿ ಅದರ ಸುತ್ತಮುತ್ತ ಓಡಾಡಿ ಪರಿಸ್ಥಿತಿ ಅವಲೋಕಿಸಿದ್ದರು ಎಂದು ಆತ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕೆಂಪುಕೋಟೆ ಸಮೀಪದ ಸ್ಪೋಟ: ಅದು ಆತ್ಮಹತ್ಯಾ ದಾಳಿಯಲ್ಲ, ಆಕಸ್ಮಿಕ!
ದೆಹಲಿಯ ಕೆಂಪು ಕೋಟಿ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿಯು ವಾಸ್ತವವಾಗಿ ಯೋಜಿತ ಆತ್ಮಹತ್ಯಾ ಬಾಂಬ್ ದಾಳಿಯಾಗಿರಲಿಲ್ಲ. ಅದು ಆಕಸ್ಮಿಕವಾಗಿ ನಡೆದ ಘಟನೆ! ಗುಪ್ತಚರ ಮೂಲಗಳು ಮತ್ತು ತನಿಖಾಧಿಕಾರಿಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(Delhi Bomb Blast)
ಏನಾಯಿತು?
ಸೋಮವಾರ ಕೆಂಪುಕೋಟೆ ಸಮೀಪದ ಮೆಟ್ರೋ ಸ್ಟೇಷನ್ ಬಳಿ ನಡೆದ ಕಾರು ಸ್ಫೋಟದಲ್ಲಿ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ, ತನಿಖೆಯ ವೇಳೆ, ಪ್ರಮುಖ ಶಂಕಿತನಾದ ಡಾ. ಮೊಹಮ್ಮದ್ ಉಮರ್ ಭಯಭೀತರಾಗಿ ಆತುರದಲ್ಲಿ ಬಾಂಬ್ ಸ್ಪೋಟಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಸ್ಫೋಟವಾದ ಸಮಯದಲ್ಲಿ ಕಾರು ಚಲನೆಯಲ್ಲಿತ್ತು. ಇದು ಆಕಸ್ಮಿಕ ಸ್ಫೋಟ ಎಂಬ ಸಿದ್ಧಾಂತಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ತನಿಖಾಧಿಕಾರಿಗಳ ಪ್ರಕಾರ, ಆರೋಪಿಯು ಐಇಡಿ (IED) ಅನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಗರಿಷ್ಠ ಹಾನಿ ಉಂಟು ಮಾಡುವಷ್ಟು ಸಿದ್ಧನಾಗಿರಲಿಲ್ಲ. ಅದೃಷ್ಟವಶಾತ್, ಇದರಿಂದ ಭಾರೀ ಅನಾಹುತ ನಿಯಂತ್ರಣಕ್ಕೆ ಬಂತು ಎಂದು ಹೇಳಲಾಗಿದೆ.
ಇಂಡಿಯಾ ಟುಡೇ ವರದಿ ಮಾಡಿರುವಂತೆ, “ಇದು ಆತ್ಮಹತ್ಯಾ ದಾಳಿಯಲ್ಲ, ಡಾ. ಮೊಹಮ್ಮದ್ ಉಮರ್ ಆತಂಕದಲ್ಲಿ ತನ್ನ ಐ20 ಕಾರಿನಲ್ಲಿದ್ದ ಸ್ಪೋಟಕವನ್ನು ಆಕಸ್ಮಿಕವಾಗಿ ಸ್ಪೋಟಿಸಿದ್ದಾನೆ” ಎನ್ನಲಾಗಿದೆ.
ಕಾರಣ ಏನು?
ಭದ್ರತಾ ಏಜೆನ್ಸಿಗಳು ಫರಿದಾಬಾದ್, ಸಹರಾನ್ ಪುರ ಪುಲ್ವಾಮಾದಂತಹ ಹಲವು ಪ್ರದೇಶಗಳಲ್ಲಿ ಉಗ್ರರ ಜಾಲಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಈ ಕಾರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶಂಕಿತ ಉಮರ್, ಆತುರದಿಂದ ವರ್ತಿಸಿ ಸ್ಫೋಟಕ್ಕೆ ಕಾರಣನಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸಾಮಾನ್ಯವಾಗಿ ಆತ್ಮಹತ್ಯ ದಾಳಿಕೋರರು ಕಾರನ್ನು ಗುರಿಯತ್ತ ಡಿಕ್ಕಿ ಹೊಡೆಸುವುದು ಅಥವಾ ಉದ್ದೇಶಪೂರ್ವಕವಾಗಿ ಸ್ಪೋಟಿಸುವುದನ್ನು ಮಾಡುತ್ತಾರೆ. ಆದರೆ, ಈ ಸ್ಫೋಟದಲ್ಲಿ ಆ ಮಾದರಿ ಕಂಡುಬಂದಿಲ್ಲ. ಹಾಗಾಗಿ ಇದು ಆಕಸ್ಮಿಕ ಸ್ಫೋಟ ಎಂದು ಪರಿಗಣಿಸಲಾಗಿದೆ.
