ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದ ಹಿಂದೆ ಭೀಕರ ಸಂಚು ಅಡಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ.(Delhi Bomb Blast) ಈ ಭೀಕರ ಸ್ಪೋಟದಲ್ಲಿ ಕನಿಷ್ಠ 12 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ವಿಶ್ವಸಂಸ್ಥೆಯೇ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿರುವ ಮೌಲಾನಾ ಮಸೂದ್ ಅಜರ್ನ ನಿರ್ದೇಶನವಿತ್ತು ಎಂದು ಹಿರಿಯ ಗುಪ್ತಚರ ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಈ ಸ್ಪೋಟವನ್ನು ನಡೆಸಿದೆ ಎಂದು ಆರೋಪಿಸಲಾಗಿದೆ.
ಉಗ್ರರ ಜಾಲದಲ್ಲಿ ‘ಮೂಲಭೂತವಾದಿ ವೈದ್ಯರು’
ತನಿಖಾಧಿಕಾರಿಗಳ ಪ್ರಕಾರ, ಜೈಶ್-ಎ-ಮೊಹಮ್ಮದ್ ಸಂಘಟನೆಯು ದೆಹಲಿಯಲ್ಲಿ(Delhi Bomb Blast) ಪುಲ್ವಾಮಾ ಮಾದರಿಯ ವಾಹನಗಳ ಮೂಲಕ ಆತ್ಮಾಹುತಿ ದಾಳಿಗಳನ್ನು ನಡೆಸಲು ತೀವ್ರಗಾಮಿ ವೈದ್ಯರ ಜಾಲವನ್ನು ಬಳಸಿಕೊಂಡಿದೆ ಎಂದು ತಿಳಿಸಿದ್ದಾರೆ. ಈ ಸ್ಪೋಟವು 2006 ರಲ್ಲಿ ಮುಂಬೈ ರೈಲು ಬಾಂಬ್ ದಾಳಿಗೆ ಹೋಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದು ಕೂಡ 209 ಜನರ ಸಾವಿಗೆ ಕಾರಣವಾದ ಸಂಘಟಿತ ದಾಳಿಗೆ ಸ್ಥಳೀಯವಾಗಿ ತೀವ್ರವಾದಿಗಳಾದ ವ್ಯಕ್ತಿಗಳನ್ನು ಬಳಸಲಾಗಿತ್ತು. ಈಗಿನ ದೆಹಲಿ ಸ್ಫೋಟದಲ್ಲೂ ವೈಟ್-ಕಾಲರ್ ವೃತ್ತಿಪರರಾದ ವೈದ್ಯರು ಭಾಗಿಯಾಗಿದ್ದಾರೆ ಎಂಬುದು ಆಘಾತಕಾರಿ ಸಂಗತಿ ಎಂದು ತನಿಖಾಧಿಕಾರಿಗಳು ತಿಳಿಸಿರುವುದಾಗಿ ಸುದ್ದಿ ಮೂಲಗಳು ತಿಳಿಸಿವೆ.
ಐಇಡಿ ಅಳವಡಿಸಿದ ಕಾರಿನ ಚಾಲಕನೇ ವೈದ್ಯ!
ಕೆಂಪು ಕೋಟಿ ಬಳಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಉದ್ದೇಶದಿಂದ ಬಿಳಿ ಹುಂಡೈ ಐ20 ಕಾರಿನಲ್ಲಿ ಐಇಡಿ (IED) ಅಳವಡಿಸಿ ಸ್ಫೋಟ ನಡೆಸಲಾಗಿದೆ. ಈ ಕಾರಿನ ಚಾಲಕ ಡಾ. ಉಮರ್ ಮೊಹಮ್ಮದ್ ನಬಿ ಎಂಬಾತನೇ ಎಂದು ಶಂಕಿಸಲಾಗಿದೆ. ಈತ ಕಾಶ್ಮೀರದಲ್ಲಿ ಜೆಇಎಂ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದ ವೈದ್ಯರನ್ನು ಒಳಗೊಂಡ “ವೈಟ್-ಕಾಲರ್” ಭಯೋತ್ಪಾದಕ ಮಾಡ್ಯೂಲ್ನ ಭಾಗವಾಗಿದ್ದ.
ಶ್ರೀನಗರದ ಹೊರವಲಯದಲ್ಲಿ ಕಾಣಿಸಿಕೊಂಡ ಜೆಇಎಂ ಪೋಸ್ಟರ್ಗಳ ತನಿಖೆಯ ಸಂದರ್ಭದಲ್ಲಿ ಈ ಜಾಲದ ಸುಳಿವು ಸಿಕ್ಕಿದೆ. ತಾಂತ್ರಿಕ ಕಣ್ಗಾವಲು ಮೂಲಕ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಮತ್ತು ಹರಿಯಾಣದ ಪೊಲೀಸ್ ತಂಡಗಳು ಕೇಂದ್ರ ಸಂಸ್ಥೆಗಳ ಸಹಕಾರದೊಂದಿಗೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿವೆ.
ಹಲವು ರಾಜ್ಯಗಳಲ್ಲಿ ಸುಳಿವು ಪತ್ತೆ, ಮೂವರು ವೈದ್ಯರ ಬಂಧನ
ಈ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು ಫರಿದಾಬಾದ್ನಲ್ಲಿ ಡಾ. ಮುಜಮ್ಮಿಲ್ ಅಹ್ಮದ್ (35ವ) ಬಂಧನವಾಗಿದೆ. ಪುಲ್ವಾಮಾ ಮೂಲದವನಾಗಿರುವ ಈತ ಅಲ್ ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜಿನ ಈತನ ಲಾಕರ್ ನಲ್ಲಿ AK47 ಗನ್ ಹಾಗೂ ಈತ ಬಾಡಿಗೆ ಪಡೆದಿದ್ದ ಎರಡು ಮನೆಗಳಲ್ಲಿ ಸುಮಾರು 2,900 ಕೆಜಿ ಸ್ಪೋಟಕಗಳನ್ನು (ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾಗಿದೆ), ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ. ಆತನ ವಿಚಾರಣೆಯ ನಂತರ, ಕುಲ್ಯಾಮ್ ನ ಡಾ. ಅದೀಲ್ ಮಜೀದ್ ರಾಥರ್ ಮತ್ತು ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರುವ ಲಕ್ನೋ ಮೂಲದ ವೈದ್ಯಕೀಯ ವೃತ್ತಿಪರ ಡಾ. ಶಾಹೀನ್ ಸಯೀದ್ ಎಂಬುವವನನ್ನು ಬಂಧಿಸಲಾಯಿತು.
