(ಪತ್ರ 30) ಮಗಳೇ,
Letters to Daughter: ಇಂದು ಸ್ವಲ್ಪ ಗಂಭೀರ ಸಂಗತಿಯನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕಿದೆ. ಅದಕ್ಕೆ ಬರೆಯುತ್ತಿರುವೆ. ನನಗೆ ತರಗತಿಯಲ್ಲಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡುವಾಗ ಹತ್ತಾರು ವಿಷಯಗಳು ಹೊಳೆಯುವುದಿದೆ. ಇತ್ತೀಚೆಗಂತೂ ಮಾತೆತ್ತಿದರೆ ‘ಮೇಡಂ, ನಮಗೆ ಸ್ವಾತಂತ್ರ್ಯ ಬೇಕು,’ ಎಂಬುದು ಒಕ್ಕೊರಲಿನ ಕೂಗು. ಸರಿ, ಈ ಸ್ವಾತಂತ್ರ್ಯ ಅಂದರೇನು? ತಮ್ಮನ್ನು ಯಾರೂ ಪ್ರಶ್ನಿಸಬಾರದು, ತಮಗೆ ಖರ್ಚು ಮಾಡುವುದಕ್ಕೆ ಬೇಕಾದಷ್ಟು ದುಡ್ಡು ಕೊಡಬೇಕು, ಹೇಗೆ ಖರ್ಚು ಮಾಡಿದೆ ಅಂತ ಕೇಳಬಾರದು. ಓಡಾಡುವುದಕ್ಕೆ ಗಾಡಿ ಕೊಡಿಸಬೇಕು, ಪೆಟ್ರೋಲ್ ಹಾಕಿಸುವುದಕ್ಕೆ ಬೇಕಾದ ದುಡ್ಡು ಕೊಟ್ಟಿರಬೇಕು, ಎಲ್ಲಿಗೆ ಹೋದೆ, ಏನು ಮಾಡಿದೆ ಎಂಬುದನ್ನು ಯಾರೂ ಕೇಳಬಾರದು. ಈ ಮಕ್ಕಳು ಅಪ್ಪ ಅಮ್ಮನನ್ನು ಬರಿಯ ಎಟಿಎಂ ಕಾರ್ಡ್ ಅಂದುಕೊಂಡಿರುವರೇ? ತಮಗೆ ಬೇಕುಬೇಕಾದುದೆಲ್ಲವನ್ನೂ ಕೊಡಿಸಬೇಕು, ಆದರೆ ಏನು ಮಾಡಿದೆ ಅಂತ ಪ್ರಶ್ನಿಸಬಾರದು ಅಂದರೆ ಏನರ್ಥ? ಅಪ್ಪ ಅಮ್ಮ ಅತಿಯಾಗಿ ತಮ್ಮನ್ನು ನಿಯಂತ್ರಿಸುತ್ತಾರೆ ಎಂದುಕೊಳ್ಳುವ ಈ ಮಕ್ಕಳಿಗೆ ನಿಜಕ್ಕೂ ಸ್ವಾತಂತ್ರ್ಯದ ಮೌಲ್ಯ ಗೊತ್ತಿದೆಯೇ, ಹೋಗಲಿ ಅದರ ಅರ್ಥ ಗೊತ್ತಿದೆಯೇ?
ಸ್ತ್ರೀವಾದ- ಸ್ತ್ರೀ ಪರ ಹೋರಾಟವೆನ್ನುವುದು ಬೆಳೆದು ಬಂದ ದಾರಿ, ಅದಕ್ಕಾಗಿ ನಮ್ಮ ಪೂರ್ವಜ ಮಹಿಳೆಯರು ಮಾಡಿದ ತ್ಯಾಗ ಎಲ್ಲವನ್ನೂ ನೆನಪಿಸಿಕೊಂಡರೆ ನಾವಿಂದು ಇಷ್ಟರ ಮಟ್ಟಿಗಿನ ಸ್ವಾತಂತ್ರ್ಯ ವನ್ನು, ಸಾಮಾಜಿಕ ಗೌರವವನ್ನು ಸಂಪಾದಿಸಿರುವುದರ ಹಿಂದೆ ಎಂತಹ ನೋವಿನ ದಾರಿಯಿದೆ ಎಂಬುದು ಅರ್ಥವಾದೀತು. ಹೆಣ್ಣುಮಕ್ಕಳು ಸ್ತ್ರೀವಾದದ ಇತಿಹಾಸವನ್ನು ಓದಲೇಬೇಕಾಗಿರುವ ಅನಿವಾರ್ಯತೆ ಇಂದಿರುವುದು ತಮ್ಮ ಮನೆಗಳನ್ನು, ಮನೆಯ ಆಚಾರವಿಚಾರಗಳನ್ನು ದಿಕ್ಕುತಪ್ಪಿಸುವುದಕ್ಕೆ ಅಲ್ಲ, ಬದಲಾಗಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಮೌಲ್ಯವೇನು ಎಂಬುದನ್ನು ಅರಿಯುವುದಕ್ಕೆ.
ಇಂದಿನ ತಲೆಮಾರಿನ ಮೂರ್ಖತನ ಎಲ್ಲಿಯವರೆಗೆ ಎಂದರೆ ನಮಗಿಷ್ಟ ಬಂದಂತೆ ಉಡುಪು ಧರಿಸುವುದು, (ಅದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿಡುವುದು), ಹಣೆಯ ಮೇಲೆ ಬೊಟ್ಟಿಡದೇ ಇರುವುದು, ಸಾಂಪ್ರದಾಯಿಕ ಕಾರ್ಯಕ್ರಮಗಳಿಗೂ ಜೀನ್ಸ್ ಪ್ಯಾಂಟ್- ಟಿಶರ್ಟ್ ಧರಿಸಿ ಬರುವುದು ಎಂದುಕೊಂಡಿದ್ದಾರೇನೋ ಅಂತ ನನಗನಿಸುವುದಿದೆ. ಕಾಲೇಜು ಉಪನ್ಯಾಸಕಿಯಾಗಿ ದಿನನಿತ್ಯವೂ ಅನೇಕ ಮಕ್ಕಳನ್ನು ನೋಡುತ್ತೇನಲ್ಲ, ಹುಡುಗಿಯರಿಗೆ ಹಣೆಯ ಬೊಟ್ಟಿಡುವುದೆಂದರೆ ಅಲರ್ಜಿ. ಮಗಳೇ, ನನಗೆ ಕಾಡುವ ಪ್ರಶ್ನೆ- ತಾಯಂದಿರು ಇವರಿಗೆ ಕಲಿಸಹೊರಟಿರುವುದಾದರೂ ಏನು?(Letters to Daughter)
ತರಗತಿಗಳಲ್ಲಿ ಮಕ್ಕಳು ಕುಳಿತುಕೊಳ್ಳುವ ಭಂಗಿಯಾದರೂ ಅಷ್ಟೇ. ಕೆಲವು ಮಕ್ಕಳಂತೂ ಸದಾ ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು. ಇನ್ನೂ ಕೆಲವರು ಒಂದು ಕಾಲನ್ನು ತೊಡೆಯಮೇಲೆ ಏರಿಸಿ ಕುಳಿತುಕೊಳ್ಳುವವರು, ಪೌರಾಣಿಕ ನಾಟಕಗಳಲ್ಲಿ ರಾಜನ ಪಾತ್ರ ಮಾಡುವವರು ಕುಳಿತುಕೊಳ್ಳುವ ಹಾಗೆ. ಈ ಭಂಗಿ ಅಸಭ್ಯವಾದುದು ಎಂದರೆ ಅವರಿಗೆ ಅರ್ಥವೇ ಆಗದು. ಪ್ರತೀ ತರಗತಿಯಲ್ಲಿಯೂ ಹೀಗೆ ಕುಳಿತವರು ಕಂಡಾಗಲೆಲ್ಲ ಅವರಿಗೆ ತಿಳಿಹೇಳುತ್ತೇನೆ, ಮನೆಯಲ್ಲಿ ಅಪ್ಪ-ಅಮ್ಮನ ಎದುರು, ಹಿರಿಯರ ಎದುರು ಹೀಗೆ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸುತ್ತಲೂ ಇರುತ್ತೇನೆ. ಕೆಲವೊಮ್ಮೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದುರ್ಯೋಧನನ ಕಥೆ ಹೇಳುವುದೂ ಇದೆ.
ನನಗೆ ಚೋದ್ಯವೆನಿಸುವುದು ಈ ಮಕ್ಕಳಿಗೆ ಮನೆಯಲ್ಲಿ ತಂದೆತಾಯಿ ಏನೂ ಕಲಿಸುವುದೇ ಇಲ್ಲವೇ? ನಮ್ಮ ಬಾಲ್ಯದಲ್ಲಿ ನಾವು ಎತ್ತರದಲ್ಲಿ ಕುಳಿತುಕೊಳ್ಳುವ ಪ್ರಮೇಯವೇ ಇರಲಿಲ್ಲ. ನಮ್ಮಲ್ಲಿ ಇದ್ದುದೇ ಎರಡು ಕುರ್ಚಿ, ಒಂದು ಅಜ್ಜನಿಗೆ, ಒಂದು ಅಪ್ಪನಿಗೆ! ಆದರಿಂದು ಹೆಚ್ಚಿನ ಮನೆಗಳಲ್ಲಿ ಚಂದದ ಸೋಫಾ ಸೆಟ್ಟುಗಳಿವೆ, ಮಕ್ಕಳಿಗೆ ಸದಾ ಅದರ ಮೇಲಿರುವುದೆಂದರೆ ಸಂಭ್ರಮ. ಕುಳಿತೋ ಬಿದ್ದುಕೊಂಡೋ! ಯಾರಾದರೂ ಅತಿಥಿಗಳು ಬಂದಾಗ ಎದ್ದು ಸ್ವಾಗತಿಸಬೇಕೆಂಬ ಶಿಸ್ತು ಕಲಿಸುವುದೂ ಕಷ್ಟವೇ. ವಯಸ್ಸಾದವರು ಬಂದಾಗಲೂ ಸುಮ್ಮನೆ ಕುಳಿತು ಮಿಕಮಿಕ ನೋಡುವ ಮಕ್ಕಳನ್ನು ಕಂಡಿದ್ದೇನೆ. ಅತಿಥಿಗಳು ಬಂದರೆಂದು ತಂದೆ ಟಿವಿ ಆಫ್ ಮಾಡಿದ್ದಕ್ಕೆ, ‘ನೀನು ಸುಮ್ಮನೆ ಕುಳಿತರೆ ಸರಿ, ಟಿವಿ ಆಫ್ ಮಾಡ್ತೀಯಾ’ ಎಂದು ಅಪ್ಪನಿಗೆ ಹೊಡೆದ ಮಗನನ್ನೂ ಕಂಡಿದ್ದೇನೆ. ಮಕ್ಕಳನ್ನು ಅತಿಮುದ್ದು ಮಾಡಿ ಬೆಳೆಸುತ್ತಿರುವ ಇಂದಿನ ಪೋಷಕರು ಬದುಕಿನ ಪಾಠಗಳನ್ನು ಕಲಿಸುವುದು ಯಾವಾಗ?
ಈಗ ಕೆಲವು ವರ್ಷಗಳ ಹಿಂದೆ ಶಬರಿಮಲೆಗೆ ಹೆಣ್ಣುಮಕ್ಕಳು ಹೋಗಬಾರದೇಕೆ ಎಂದು ಪ್ರಶ್ನಿಸಿ ಅತಿರೇಕದಿಂದ ನಡೆದುಕೊಂಡ ಕೆಲವು ಮಂದಿಯಿಲ್ಲವೇ? ನಮ್ಮ ಹಿಂದಿನ ತಲೆಮಾರಿನವರು ದೇವರು-ಮಡಿ-ಮೈಲಿಗೆಯ ವಿಚಾರಕ್ಕೆ ಬಂದಾಗ ಎನು ಹೇಳಿದರೋ ಅದನ್ನು ಪಾಲಿಸುವುದರಲ್ಲಿ ತಪ್ಪೇನಿದೆ ಎಂಬುದನ್ನು ಯೋಚಿಸುವುದಿಲ್ಲ. ಯಾವುದನ್ನು ಮಾಡಬಾರದು ಎಂದರೋ ಅದನ್ನು ಮಾಡುವಲ್ಲಿ ಎಲ್ಲಿಲ್ಲದ ಆಸಕ್ತಿ. ನಮ್ಮ ಹೆಣ್ಣುಮಕ್ಕಳನ್ನು ನಾವು ಅತ್ಯಂತ ಧೈರ್ಯವಂತೆಯರನ್ನಾಗಿ ಬೆಳೆಸಬೇಕು, ಅನ್ಯಾಯಗಳನ್ನು ಸಹಿಸಿ ಕೂರದಂತೆ ಅವರಲ್ಲಿ ಆತ್ಮವಿಶ್ವಾಸವಿರಬೇಕು, ತಪ್ಪನ್ನು ಪ್ರಶ್ನಿಸುವ ಎದೆಗಾರಿಕೆ ಅವರಲ್ಲಿ ಇರಬೇಕು ಎಂಬುದೆಲ್ಲ ಸರಿಯೇ. ಆದರೆ ದೊಡ್ಡವರು ಹೇಳಿದ್ದನ್ನು ಕೇಳಬಾರದು ಎಂಬುದು ಧೂರ್ತತನವಾಗುತ್ತದೆ ಹೊರತು ಧೈರ್ಯವಲ್ಲ. ನಡೆಸುವ ಹೋರಾಟ ಮಾನವ ಹಕ್ಕುಗಳಿಗಾಗಿ ಇರಬೇಕು ಹೊರತು ಸ್ವಾರ್ಥಸಾಧನೆಗಲ್ಲ. ಅಂಕೆಮೀರಿ ಸಲುಗೆ ತೋರಿಸುವವರನ್ನು ದಂಡಿಸಲು ತಿಳಿದಿರಬೇಕೇ ಹೊರತು ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿಯಿರಿಸಿರುವ ಅಪ್ಪ ಅಮ್ಮನಿಗೆ ಎದುರಾಡುವುದಕ್ಕಲ್ಲ.
ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ದಿನಬಿಡದಂತೆ ಕೊಲೆಯ ಸುದ್ದಿಗಳು ಇದ್ದೇ ಇರುತ್ತವೆ, ಸಾಲದೆಂಬುದಕ್ಕೆ ಟಿವಿಗಳಲ್ಲಿ ಅಂಥವುಗಳ ಮರುಸೃಷ್ಟಿ ಎಂಬಂಥ ಕಾರ್ಯಕ್ರಮಗಳು. ಅದನ್ನು ನೋಡುವಲ್ಲಿ ಮಕ್ಕಳಿಗೂ ಸಾಕಷ್ಟು ಕುತೂಹಲವೇ. ನಾವು ಎಳೆಯರಿದ್ದಾಗ ಪತ್ರಿಕೆಗಳನ್ನು ನೋಡಿದರೂ ಅವುಗಳನ್ನು ಓದುವುದಕ್ಕೊಂದು ಮಿತಿಯಿತ್ತು. ಹೆಣ್ಣುಮಕ್ಕಳಿಗಾದರೂ ಇಂದು ಗಮನಿಸಿ ನೋಡಿದರೆ ಆಸೆಗೆ ಮಿತಿಯಿಲ್ಲ ಎಂಬ ಪರಿಸ್ಥಿತಿ. ಅದಕ್ಕೆ ಯಾರು ಅಡ್ಡಿಯೆಂದು ಅವರಿಗೆ ಅನಿಸುತ್ತದೋ ಅವರನ್ನು ಮುಗಿಸಿಬಿಡುವುದು ದಾರಿ ಎಂಬ ಊಹನೆ ಯಾಕಾದರೂ ಬರುತ್ತದೋ! ತೀರಾ ಹೊಂದಾಣಿಕೆಯ ಕೊರತೆಯಾಯಿತೆಂದರೆ ದೂರವಾಗುವುದಕ್ಕೆ ಅವಕಾಶವಿದೆ. ಅದರ ಬದಲು ಸ್ವಾತಂತ್ರ್ಯ ದ ಎಲ್ಲೆ ಮೀರಿ ಸ್ವೇಚ್ಛೆಯನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಅವರು ತಮ್ಮ ಮಕ್ಕಳಿಗೆ ಏನನ್ನು ಕಲಿಸಬಹುದು?
ಮಗಳೇ, ಮಕ್ಕಳಿಗೆ ಶಿಸ್ತು ಕಲಿಸುವುದು ಕರ್ತವ್ಯ, ಆಯ್ಕೆಯಲ್ಲ. ಅದಕ್ಕಾಗಿ ಒಂದೆರಡು ಹೊಡೆದರೆ, ಬೈದರೆ ಅಪರಾಧವಲ್ಲ. ಹೆಣ್ಣುಮಕ್ಕಳಿಗೆ ನಮ್ಮ ಬದುಕಿನ ರೀತಿ ನೀತಿಗಳನ್ನು ಕಲಿಸುವುದರ ಜತೆಗೆ ಸ್ತ್ರೀತ್ವದ ಹೆಚ್ಚುಗಾರಿಕೆ, ಪ್ರಕೃತಿ ನಮಗೆ ವಿಧಿಸಿರುವ ಕೆಲವು ಕರ್ತವ್ಯಗಳು, ಅದಕ್ಕಾಗಿ ನಾವು ತೋರಬೇಕಾದ ಬದ್ಧತೆಯನ್ನೂ ಅರ್ಥ ಮಾಡಿಸಬೇಕಿದೆ. ಆರ್ಥಿಕ ಸ್ವಾತಂತ್ರ್ಯ ವು ನಮ್ಮ ಬದುಕನ್ನು ಗೌರವಯುತವಾಗಿ, ಸ್ವಾಭಿಮಾನದಿಂದ ಬದುಕಲು ಅನುವು ಮಾಡಿಕೊಡಬೇಕೇ ಹೊರತು ಅಹಂಕಾರವನ್ನು ಬೆಳೆಸಿ ಬದುಕನ್ನು ಮುರುಟಿಸಿಕೊಳ್ಳಲು ಖಂಡಿತಾ ಅಲ್ಲ. ನಡೆನುಡಿಯಲ್ಲಿ ಸೌಮ್ಯತೆ ಭೂಷಣವೇ ಹೊರತು ಅದು ದೈನ್ಯತೆ ಅಲ್ಲ. ಅಗತ್ಯವಿದ್ದಲ್ಲಿ ಮಾತ್ರ ದೇವಿಯೂ ಉಗ್ರಸ್ವರೂಪಿಣಿಯಾಗುತ್ತಾಳೆ ವಿನಾ ಉಳಿದಂತೆ ಮಾತೃರೂಪೇಣ.. ಎಂಬುದೇ ಚಂದ. ನಾವು ಧರಿಸುವ ಉಡುಪು ನಮ್ಮ ಮನಸ್ಸನ್ನು ಪ್ರಭಾವಿಸುತ್ತದೆ. ಹಾಗಾಗಿ ಮನಸ್ಸು ಅರಳುವಂಥ ಉಡುಪು ಧರಿಸಿದರೆ ನಾವೂ ಉಲ್ಲಸಿತರಾಗಿರುವುದು ಸಾಧ್ಯ.
ಕುಳಿತುಕೊಳ್ಳುವ ರೀತಿಯೂ ಕೂಡಾ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅದು ಹುಡುಗರಿಗಾದರೂ ಅಷ್ಟೇ, ಹುಡುಗಿಯರಿಗಾದರೂ ಅಷ್ಟೇ. ಹಾಗಾಗಿ ಹೇಗೆಂದರೆ ಹಾಗೆ ಕುಳಿತುಕೊಳ್ಳುವುದು ಭೂಷಣವಲ್ಲ. ಅಡುಗೆ ಕಲಿಯಲೇಬೇಕಿರುವುದು ನಮಗಾಗಿ, ನಮ್ಮನ್ನು ಪ್ರೀತಿಸುವ ನಮ್ಮ ಮನೆಮಂದಿಗಾಗಿ. ಅದು ನಮ್ಮ ಮೇಲೆ ಹೇರಲ್ಪಟ್ಟ ಶೋಷಣೆ ಎಂದುಕೊಂಡರೆ ನಮ್ಮ ತಪ್ಪುಕಲ್ಪನೆ ಅದು. ಗಂಡುಮಕ್ಕಳೂ ಇದರಿಂದ ಹೊರತಾಗಿರಬೇಕಿಲ್ಲ. ಅಡುಗೆ ಕಲಿತಿದ್ದರೆ ಮನೆಯೊಳಗಿನ ಬಂಧ ಭದ್ರವಾಗಿರುತ್ತದೆ. ಈ ತಲೆಮಾರಿಗೆ ಇದು ಬದುಕಿನ ಅತ್ಯಗತ್ಯಗಳಲ್ಲಿ ಒಂದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಎಚ್ಚರ ಈರ್ವರಿಗೂ ಇರಲಿ.
ಮದುವೆ-ಮಕ್ಕಳು ಎಂಬುದು ಬದುಕಿನ ಚಂದವನ್ನು ಸವಿಯುವುದಕ್ಕೆ ಸಾಧನಗಳೇ ಹೊರತುಮ ಸಾಧನೆಗೆ ಅಡ್ಡಿಯಲ್ಲ. ಕೇವಲ ಲಕ್ಷಗಟ್ಟಲೆ ದುಡಿದು ಸಿರಿವಂತರಾಗುವುದಷ್ಟೇ ಬದುಕಲ್ಲ. ನೀನೂ ಇವೆಲ್ಲವನ್ನೂ ಅರ್ಥ ಮಾಡಿಕೊಂಡು ನಿನ್ನ ಗೆಳತಿಯರಿಗೂ ಹೇಳು, ಆಗದೇ?
ಇಂತಿ, ಅಮ್ಮ
