ಹಾವೇರಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಿವಾದ ಉಂಟಾಗಿದೆ. ಮುಸ್ಲಿಮರು ಸಾಲಾಗಿ ನಿಂತು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.(Airport Namaz controversy)
ಈ ಘಟನೆಯ ಕುರಿತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾನ ನಿಲ್ಯಾಣವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಯಾರು ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದೆ. ಈ ವಿವಾದದ ನಡುವೆ, ಕಾಂಗ್ರೆಸ್ನ ಮಾಜಿ ಸಚಿವ ಎಚ್. ಆಂಜನೇಯ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸುದ್ದಿಯ ಕೇಂದ್ರವಾಗಿದ್ದಾರೆ.
ಮುಸ್ಲಿಮರ ಪ್ರಾರ್ಥನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ, ಅವರು ಹಿಂದೂಗಳ ಆಚರಣೆಗಳನ್ನು ಟೀಕಿಸಿದ್ದಾರೆ ಎಂದು ವರದಿಯಾಗಿದೆ. “ಮುಸ್ಲಿಮರ ಶ್ರದ್ಧೆಯನ್ನು ನೋಡಿ ನೀವು(ಹಿಂದೂಗಳು) ಕಲಿಯಿರಿ,” ಎಂದು ಆಂಜನೇಯ ಅವರು ಅಭಿಪ್ರಾಯಪಟ್ಟಿದ್ದಾರೆ. “ಅವರು ಎಲ್ಲಿಯೇ ಇರಲಿ-ಬಸ್ ನಿಲ್ದಾಣ, ರಸ್ತೆ ಅಥವಾ ವಿಮಾನ ನಿಲ್ದಾಣವೇ ಆಗಿರಲಿ ತಮ್ಮ ಮನದ ನೆಮ್ಮದಿಗಾಗಿ ಅಚ್ಚುಕಟ್ಟಾಗಿ ಪ್ರಾರ್ಥನೆ ಮಾಡುತ್ತಾರೆ,” ಎಂದು ಅವರು ಹೇಳಿದರು.
“ನಮ್ಮವರಂತೆ ಅವರು ನಾಮ ಹಾಕಿಕೊಂಡು, ಪೂಜೆ ಮಾಡಿ ತಟ್ಟೆಗೆ ದಕ್ಷಿಣೆ ಹಾಕಿ ಎಂದು ಕೇಳಲ್ಲ,” ಎಂದು ಆಂಜನೇಯ ಟೀಕಿಸಿದ್ದಾರೆ. ಮಸೀದಿ ಇಲ್ಲ ಎಂಬ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿರಬಹುದು, ಅದಕ್ಕೆ ನಾವು ಸಣ್ಣತನ ತೋರಿಸಬೇಕಿಲ್ಲ ಎಂದು ಅವರು ಹೇಳಿದರು.
ಗಣೇಶ ಹಬ್ಬದ ಆಚರಣೆಯನ್ನು ಉಲ್ಲೇಖಿಸಿದ ಅವರು, “ಗಣೇಶ ಹಬ್ಬದಲ್ಲಿ ಹೂವು, ಹಣ್ಣಿನ ವ್ಯಾಪಾರಕ್ಕಿಂತ ಮದ್ಯದ ಅಂಗಡಿಗಳೇ ಫುಲ್ ರಶ್ ಇರುತ್ತವೆ,” ಎಂದರು. “ನಮ್ಮವರು ಬಾರ್ ಗಳಲ್ಲಿ ಚೆನ್ನಾಗಿ ಕುಡಿದು, ದೇವರ ಮುಂದೆ ಬಂದು ಕುಣಿಯುತ್ತಾರೆ,” ಎಂದು ಆಂಜನೇಯ ವ್ಯಂಗ್ಯವಾಗಿ ನುಡಿದರು. ಮಾಜಿ ಸಚಿವರ ಈ ತುಲನಾತ್ಮಕ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿವೆ.
