ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರು ಭಾರತದ ಗಡಿ ವಿಷಯವಾಗಿ ನೀಡಿರುವ ಒಂದು ಹೇಳಿಕೆ ಇದೀಗ ಇಡೀ ದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ಈ ಮಾತುಗಳು ಪಾಕಿಸ್ತಾನದಲ್ಲಿ ತಳಮಳ ಸೃಷ್ಟಿಸಿವೆ.
ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ, “ಇಂದು ಸಿಂದ್ ಪ್ರದೇಶವು ಭಾರತದ ಜೊತೆ ಇಲ್ಲದಿರಬಹುದು, ಆದರೆ ಗಡಿಗಳು ಖಂಡಿತಾ ಬದಲಾಗಬಹುದು ಮತ್ತು ಆ ಪ್ರದೇಶ ಮರಳಿ ಭಾರತಕ್ಕೆ ಸೇರಬಹುದು” ಎಂದು ರಾಜನಾಥ್ ಸಿಂಗ್(Rajnath Singh) ಹೇಳಿದ್ದು, ಈ ವಿಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಭಜನೆಯ ನೋವು ಮತ್ತು ಸಿಂಧಿಗಳ ಆಶಯ
1947ರ ದೇಶ ವಿಭಜನೆಯ ಬಳಿಕ ಸಿಂದ್ ಪ್ರಾಂತ್ಯವು ಪಾಕಿಸ್ತಾನದ ಭಾಗವಾಗಿ ಸೇರ್ಪಡೆಯಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಸಿಂಧಿ ಜನರು ಭಾರತದಲ್ಲಿ ಆಶ್ರಯ ಪಡೆದರು. ನಮ್ಮ ದೇಶದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಅವರಂತಹ ಸಿಂಧಿ ಹಿಂದೂಗಳ ಪೀಳಿಗೆಯವರು ಭಾರತದಿಂದ ಸಿಂದ್ ಬೇರ್ಪಡೆಯನ್ನು ಇದುವರೆಗೂ ಒಪ್ಪಿಕೊಂಡಿಲ್ಲ ಎಂದು ರಕ್ಷಣಾ ಸಚಿವರು(Rajnath Singh) ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಅವರು ತಮ್ಮ ಪುಸ್ತಕದಲ್ಲಿ ತಮ್ಮ ಪೀಳಿಗೆಯ ಸಿಂಧಿ ಹಿಂದೂಗಳು ಸಿಂದ್ ಪ್ರಾಂತ್ಯ ಭಾರತದಿಂದ ಬೇರ್ಪಡುವುದನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂದು ಬರೆದಿದ್ದಾರೆ,” ಎಂದು ರಾಜನಾಥ್ ಸಿಂಗ್(Rajnath Singh) ಉಲ್ಲೇಖಿಸಿದ್ದಾರೆ.
ಸಂಸ್ಕೃತಿಯ ಬಂಧ: ಸಿಂಧೂ ನದಿಯ ಪಾವಿತ್ರ್ಯತೆ
ರಕ್ಷಣಾ ಸಚಿವರು ಭಾವನಾತ್ಮಕ ಅಂಶವನ್ನೂ ಪ್ರಸ್ತಾಪಿಸಿದ್ದಾರೆ. “ಸಿಂದ್ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಅಡ್ವಾಣಿ ಜಿ ಅವರ ಉಲ್ಲೇಖದ ಪ್ರಕಾರ, ಸಿಂದ್ನ ಅನೇಕ ಮುಸ್ಲಿಮರು ಕೂಡ ಸಿಂಧೂ ನದಿಯ ನೀರು ಮೆಕ್ಕಾದ ಆಬ್-ಎ-ಜಮ್ಮಾಮ್ಗಿಂತ (Ab-e-Zamzam) ಕಡಿಮೆ ಪವಿತ್ರವಲ್ಲ ಎಂದು ನಂಬಿದ್ದರು,” ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಸಿಂದ್ ಯಾವಾಗಲೂ ಭಾರತದ ಭಾಗವೇ ಎಂದು ಅವರು ಪ್ರತಿಪಾದಿಸಿದ್ದಾರೆ.
ಭೌಗೋಳಿಕ ಗಡಿಗಳು ಬದಲಾಗುವ ಮುನ್ಸೂಚನೆ
ತಮ್ಮ ಮಾತಿನ ತಿರುಳನ್ನು ಸ್ಪಷ್ಟಪಡಿಸುತ್ತಾ, “ಇಂದು ಸಿಂದ್ ಭೂಮಿ ನಮ್ಮ ಭಾಗವಾಗಿಲ್ಲದಿರಬಹುದು, ಆದರೆ ನಾಗರಿಕತೆಯ ದೃಷ್ಟಿಯಿಂದ ಸಿಂಥ್ ಯಾವಾಗಲೂ ಭಾರತದ ಭಾಗವೇ. ಮತ್ತು ಭೌಗೋಳಿಕ ದೃಷ್ಟಿಯಿಂದ ಹೇಳುವುದಾದರೆ, ಗಡಿಗಳು ಬದಲಾಗಬಹುದು, ನಾಳೆ ಸಿಂದ್ ಮತ್ತೆ ಭಾರತಕ್ಕೆ ಮರಳಬಹುದು ಎಂದು ಯಾರಿಗೆ ಗೊತ್ತು? ಸಿಂಧೂ ನದಿಯನ್ನು ಪವಿತ್ರವೆಂದು ಭಾವಿಸುವ ನಮ್ಮ ಸಿಂಧಿ ಜನರಿಗೆ ನಮ್ಮ ಹೃದಯದಲ್ಲಿ ಯಾವಾಗಲೂ ಸ್ಥಾನವಿದೆ. ಅವರು ಎಲ್ಲೇ ಇದ್ದರೂ, ಅವರು ಯಾವಾಗಲೂ ನಮ್ಮವರೇ ಆಗಿರುತ್ತಾರೆ,” ಎಂದು ರಕ್ಷಣಾ ಸಚಿವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಪಿಒಕೆ ಕೂಡ ಮರಳುವುದು ಖಚಿತ: ರಾಜನಾಥ್ ಸಿಂಗ್ ವಿಶ್ವಾಸ
ಈ ಹಿಂದೆ, ಸೆಪ್ಟೆಂಬರ್ 22ರಂದು ಮೊರಾಕ್ಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗಲೂ ಸಿಂಗ್ ಇದೇ ರೀತಿಯ ಮಹತ್ವದ ಹೇಳಿಕೆ ನೀಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಮಾತನಾಡಿದ್ದ ಅವರು, ಪಿಒಕೆಯಲ್ಲಿ ವಾಸಿಸುವ ಜನರೇ ಆಕ್ರಮಣಕಾರರಿಂದ ಸ್ವಾತಂತ್ರ್ಯವನ್ನು ಒತ್ತಾಯಿಸುತ್ತಿರುವುದರಿಂದ, ಭಾರತವು ಯಾವುದೇ ಆಕ್ರಮಣಕಾರಿ ಕ್ರಮ ತೆಗೆದುಕೊಳ್ಳದೆ ಪಿಒಕೆಯನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದು ಹೇಳಿದ್ದರು.
“ಪಿಒಕೆ ನಮ್ಮದಾಗುತ್ತದೆ. ಪಿಒಕೆಯಲ್ಲಿ ಜನರು ಬೇಡಿಕೆಗಳನ್ನು ಇಡಲು ಶುರುಮಾಡಿದ್ದಾರೆ. ಅಲ್ಲಿನ ಘೋಷಣೆಗಳನ್ನು ನೀವು ಕೇಳಿರಬಹುದು,” ಎಂದು ಅವರು ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ್ದರು.
