ನವದೆಹಲಿ: ದೇಶಾದ್ಯಂತ ಈಗ ವಾಹನಗಳಿಗೆ ಫಿಟ್ನೆಸ್ ಟೆಸ್ಟ್(Vechile Fitness Test) ಮಾಡಿಸುವುದು ತುಂಬಾನೇ ದುಬಾರಿಯಾಗಿದೆ. ಕೇಂದ್ರ ಸರ್ಕಾರವು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಹಳೆಯದಾದ ವಾಹನಗಳ ಫಿಟ್ ನೆಸ್ ಪರೀಕ್ಷೆಯ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಹಿಂದೆ ಕೇವಲ 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಮಾತ್ರ ಅಧಿಕ ಶುಲ್ಕವಿತ್ತು, ಆದರೆ ಈಗ ಹೊಸ ನಿಯಮಗಳ ಅಡಿಯಲ್ಲಿ ಶುಲ್ಕದ ರಚನೆಯನ್ನೇ ಸಂಪೂರ್ಣವಾಗಿ ಬದಲಿಸಲಾಗಿದೆ.
10 ವರ್ಷ ಮೇಲ್ಪಟ್ಟ ವಾಹನಗಳಿಗೆ ಶುಲ್ಕ ಹೆಚ್ಚಳ ಏಕೆ?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಪ್ರಕಾರ, ರಸ್ತೆಗಳಲ್ಲಿ ಓಡಾಡುತ್ತಿರುವ ಅಪಾಯಕಾರಿ ಮತ್ತು ಅತಿಯಾಗಿ ಮಾಲಿನ್ಯಕಾರಕಗಳನ್ನು ಹೊರಸೂಸುವ ಹಳೆಯ ವಾಹನಗಳನ್ನು ತೆಗೆದುಹಾಕುವುದು ಈ ಶುಲ್ಕ ಹೆಚ್ಚಳದ ಮುಖ್ಯ ಉದ್ದೇಶವಾಗಿದೆ. ಜನರು ಹೆಚ್ಚು ಪರಿಣಾಮಕಾರಿ, ಸುರಕ್ಷಿತವಾದ ಹೊಸ ವಾಹನಗಳತ್ತ ವಾಲಲು ಪ್ರೋತ್ಸಾಹಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ವಾಹನಗಳು ಹಳೆಯದಾಗುತ್ತಿದ್ದಂತೆ ಸುರಕ್ಷತಾ ಅಪಾಯ ಹೆಚ್ಚುವುದರಿಂದ ಮತ್ತು ಮಾಲಿನ್ಯಕಾರಕಗಳು ಹೆಚ್ಚು ಹಾನಿಕಾರಕವಾಗುವುದರಿಂದ ಈ ಕ್ರಮ ಅನಿವಾರ್ಯವಾಗಿದೆ.
ಹಳೆಯ ವಾಣಿಜ್ಯ ಮತ್ತು ಖಾಸಗಿ ವಾಹನಗಳಿಗೆ ಹೆಚ್ಚಳ ಹೇಗಿದೆ?
ಮೋಟಾರು ವಾಹನ ಕಾಯ್ದೆಯ ಹೊಸ ನಿಯಮಗಳ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ದ್ವಿಚಕ್ರ ವಾಹನಗಳಿಗೆ ₹400, ಲಘು ಮೋಟಾರು ವಾಹನಗಳಿಗೆ ₹600 ಮತ್ತು ಮಧ್ಯಮ/ಭಾರೀ ವಾಣಿಜ್ಯ ವಾಹನಗಳಿಗೆ ₹1,000 ಪಾವತಿಸಬೇಕು. ಅದೇ ರೀತಿ 15 ವರ್ಷಕ್ಕಿಂತ ಹಳೆಯ ಕಾರುಗಳಿಗೆ (LMV) ಈ ಹಿಂದೆ ₹600 ಇದ್ದ ಶುಲ್ಕವನ್ನು ₹1,000ಕ್ಕೆ ಹೆಚ್ಚಿಸಲಾಗಿದೆ. ತ್ರಿಚಕ್ರ ವಾಹನಗಳಿಗೆ ₹400 ರಿಂದ 2600 ಆಗಿದೆ. ಮಧ್ಯಮ ಸರಕು ಅಥವಾ ಪ್ರಯಾಣಿಕ ವಾಹನಗಳಿಗೆ ₹1,800 ಮತ್ತು ಭಾರೀ ಸರಕು ಅಥವಾ ಪ್ರಯಾಣಿಕ ವಾಹನಗಳಿಗೆ ₹2,500 ಪಾವತಿಸಬೇಕಾಗುತ್ತದೆ.
20 ವರ್ಷದ ಟ್ರಕ್ಗಳು ಮತ್ತು ಬಸ್ಗಳಿಗೆ ₹25,000 ಶಾಕ್!
ಭಾರೀ ವಾಣಿಜ್ಯ ವಾಹನಗಳ ಮೇಲೆ ಸರ್ಕಾರ ಅತಿದೊಡ್ಡ ಏರಿಕೆಯನ್ನು ಮಾಡಿದೆ. ಉದಾಹರಣೆಗೆ, 20 ವರ್ಷಕ್ಕಿಂತ ಹಳೆಯದಾದ ಟ್ರಕ್ಗಳು ಮತ್ತು ಬಸ್ಗಳ ಫಿಟ್ನೆಸ್ ಪರೀಕ್ಷೆಗೆ ಈ ಹಿಂದೆ ₹2,500 ಪಾವತಿಸಬೇಕಾಗಿತ್ತು. ಆದರೆ ಈಗ ಅದು ಬರೋಬ್ಬರಿ ₹25,000ಕ್ಕೆ ಏರಿಕೆಯಾಗಿದೆ! ಇದು 10 ಪಟ್ಟು ಹೆಚ್ಚಳ. ಅದೇ ರೀತಿ, ಮಧ್ಯಮ ವಾಣಿಜ್ಯ ವಾಹನಗಳಿಗೆ ₹20,000, ಲಘು ವಾಣಿಜ್ಯ ವಾಹನಗಳಿಗೆ ₹15,000, ತ್ರಿಚಕ್ರ ವಾಹನಗಳಿಗೆ ₹7,000 ಮತ್ತು ದ್ವಿಚಕ್ರ ವಾಹನಗಳಿಗೆ ₹2,000 ರವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ.
ಹಳೆಯ ವಾಹನಗಳ ಮಾಲೀಕರು ಏಕೆ ಚಿಂತಿಸಬೇಕು?
ನಿಮ್ಮ ವಾಹನ ಚಿಕ್ಕದೇ ಇರಲಿ ಅಥವಾ ದೊಡ್ಡದೇ ಇರಲಿ, ಹಳೆಯದಾಗುತ್ತಾ ಹೋದಂತೆ ಅದನ್ನು ಫಿಟ್ನಸ್ ಮಾಡಿಸೋದು ದುಬಾರಿಯಾಗಲಿದೆ. ಹಳೆಯ ವಾಹನಗಳಲ್ಲಿ ಎಂಜಿನ್ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಶುಲ್ಕದ ಹೊರೆ ಮತ್ತು ಸುರಕ್ಷತೆಯ ದೃಷ್ಟಿಯಿಂದ, ಹಳೆಯ ವಾಹನಗಳನ್ನು ಬದಲಾಯಿಸಿ ಹೊಸ ವಾಹನಗಳನ್ನು ತೆಗೆದುಕೊಳ್ಳುವ ಬಗ್ಗೆ ಜನರು ಯೋಚಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ
