ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ.(Karnataka Congress) ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಅಧಿಕಾರ ಹಂಚಿಕೆ’ ಕಗ್ಗಂಟು ಈಗ ಬಹಿರಂಗ ಬೀದಿಗೆ ಬಂದಿದೆ. ದೆಹಲಿ ವರಿಷ್ಠರ ಕದ ತಟ್ಟಿರುವ ಈ ಪೈಪೋಟಿಯನ್ನು ಕೇವಲ ಕುರ್ಚಿ ಜಗಳ ಎಂದು ನೋಡುವ ಬದಲು, ಇದರ ಹಿಂದೆ ಆಡಳಿತ ಮತ್ತು ರಾಜ್ಯದ ಜಾತಿ ಸಮೀಕರಣದ ಸೂಕ್ಷ್ಮ ಲೆಕ್ಕಾಚಾರಗಳು ಅಡಗಿವೆ.
ಸಿಎಂ ಪಾಳಯದ ಚಾಣಾಕ್ಷ ನಡೆ: ಡಿಕೆಶಿ ಪ್ರಭಾವಕ್ಕೆ ಬ್ರೇಕ್?
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಬದ್ಧರಾಗಿನಿಂತಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರ ಬೆಂಬಲಿಗರು ದೆಹಲಿಯಲ್ಲಿ ನಡೆಸುತ್ತಿರುವ ಒತ್ತಡದ ರಾಜಕೀಯವನ್ನು ಎದುರಿಸಲು, ಸಿಎಂ ಪಾಳಯ ಒಂದು ಚಾಣಾಕ್ಷ ತಂತ್ರ ಹೆಣೆದಿದೆ ಎನ್ನಲಾಗಿದೆ. ಎರಡು ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಯ ಪ್ರಸ್ತಾಪ ಇದೇ ತಂತ್ರದ ಭಾಗವಾಗಿದೆ. ಈ ನಡೆಯಿಂದ ಡಿಕೆ ಶಿವಕುಮಾರ್ ಅವರ ಅಧಿಕಾರ ಮತ್ತು ಹಿಡಿತ ಸಹಜವಾಗಿ ದುರ್ಬಲಗೊಳ್ಳುತ್ತದೆ. ಇದು, “ನಾಯಕತ್ವದ ಬದಲಾವಣೆ ಸುಲಭವಲ್ಲ “ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುವ ಪ್ರಯತ್ನವಾಗಿದೆ.
ದಲಿತ ಸಿಎಂ ಕೂಗು: ಸಿಎಂ ಕುರ್ಚಿಗೆ ಹೊಸ ಆಯಾಮ
ಈ ಅಧಿಕಾರ ಜಿದ್ದಾಜಿದ್ದಿ ನಡುವೆ, ರಾಜ್ಯ ರಾಜಕಾರಣದ ಗಮನವನ್ನು ಸೆಳೆದಿದ್ದು ದಲಿತ ಸಿಎಂ ಬೇಡಿಕೆ. ಪ್ರಮುಖ ದಲಿತ ನಾಯಕರು ಸಭೆ ಸೇರಿ, “ಒಂದು ವೇಳೆ ಅಧಿಕಾರ ಹಂಚಿಕೆಯ ಪ್ರಶ್ನೆ ಬಂದರೇ, ಅದು ಡಿಕೆ ಶಿವಕುಮಾರ್ ಅವರಿಗೆ ಅಲ್ಲ, ಬದಲಿಗೆ ದಲಿತ ಸಮುದಾಯದ ನಾಯಕರಿಗೆ ಸಿಗಬೇಕು” ಎಂಬ ಬಲವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಕೆ.ಎನ್. ರಾಜಣ್ಣ, ವೆಂಕಟೇಶ್, ಡಾ. ಜಿ. ಪರಮೇಶ್ವರ, ಎಚ್.ಸಿ. ಮಹಾದೇವಪ್ಪ ಅವರಂತಹ ಹಿರಿಯ ಸಚಿವರು ನಡೆಸಿದ ಪ್ರತ್ಯೇಕ ಭೋಜನ ಕೂಟದಲ್ಲಿ ಈ ವಿಚಾರ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಜವಾದ ಸವಾಲು: ಸಚಿವರಿಗೆ ಆಡಳಿತದ ಚಿಂತೆ
ಕೇವಲ ಸಿಎಂ ಹುದ್ದೆಯ ಪೈಪೋಟಿಗಿಂತಲೂ, ಈ ಸಚಿವರ ಗುಂಪು ಆಂತರಿಕ ಜಗಳದಿಂದಾಗಿ ಆಡಳಿತಕ್ಕೆ ಆಗುತ್ತಿರುವ ಹಿನ್ನಡೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದರೂ, ನಿರಂತರ ಆಂತರಿಕ ಕಲಹದಿಂದಾಗಿ ಅದು ಮಂಕಾಗುತ್ತಿದೆ. “ಈಗ ನಾಯಕತ್ವ ಬದಲಾವಣೆಗೆ ಒತ್ತಡ ಹಾಕುವುದು ಪಕ್ಷದ ಶಿಸ್ತಿಗೆ ವಿರುದ್ಧ. ಇದು ಪ್ರತಿಪಕ್ಷಗಳಿಗೆ ಬ್ರಹ್ಮಾಸ್ತ್ರ ನೀಡಿದಂತೆ,” ಎಂಬ ಆತಂಕವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ಸಂಭಾವ್ಯ ನಿರ್ಧಾರಗಳು…
ಯಥಾ ಸ್ಥಿತಿ ಮುಂದುವರಿಕೆ..
ಕಾಂಗ್ರೆಸ್ ಹೈಕಮಾಂಡ್ ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲು ಅನುಮತಿಸಬಹುದು. ಈ ಆಯ್ಕೆಯು ಸದ್ಯಕ್ಕೆ ಸರ್ಕಾರದಲ್ಲಿ ಸ್ಥಿರತೆ ಕಾಪಾಡಲು ಸಹಾಯ ಮಾಡುತ್ತದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ದೊಡ್ಡ ಅಂತರಿಕ ಬದಲಾವಣೆಗಳಿಂದ ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ತಡೆಯಲು ಈ ಮಾರ್ಗ ಸೂಕ್ತ ಎನಿಸಬಹುದು. ಹೈಕಮಾಂಡ್ ಇಬ್ಬರೂ ನಾಯಕರನ್ನು ಕರೆಸಿ, ಶಿಸ್ತು ಕಾಪಾಡಲು ಮತ್ತು ಅಂತರಿಕ ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಚರ್ಚಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬಹುದು.(Karnataka Congress)
ಅಧಿಕಾರ ಹಂಚಿಕೆ’ ಸೂತ್ರದ ಜಾರಿ
ಹೈಕಮಾಂಡ್ ಮೊದಲೇ ಒಪ್ಪಿಕೊಂಡಿದ್ದ ‘ಅಧಿಕಾರ ಹಂಚಿಕೆ’ ಸೂತ್ರವನ್ನು ಕಾರ್ಯರೂಪಕ್ಕೆ ತರಬಹುದು. ಆದರೆ, ಇದು ಕೇವಲ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವುದಕ್ಕಿಂತ ಹೆಚ್ಚು ಜಟಿಲವಾಗಬಹುದು. ದಲಿತ ನಾಯಕರ ಬೇಡಿಕೆ ಮತ್ತು ಸಿದ್ಧರಾಮಯ್ಯ ಬಣದ ಒತ್ತಡವನ್ನು ಪರಿಗಣಿಸಿ, ಹೈಕಮಾಂಡ್ ಅಧಿಕಾರವನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
‘ಮೂರನೇ ಪರ್ಯಾಯ’ದ ಹುಡುಕಾಟ (ದಲಿತ ನಾಯಕತ್ವ)
ಆಂತರಿಕ ಕಲಹ ತೀವ್ರಗೊಂಡರೆ, ಹೈಕಮಾಂಡ್ ಬಿಕ್ಕಟ್ಟನ್ನು ಕೊನೆಗೊಳಿಸಲು ಮೂರನೇ ಪರ್ಯಾಯ ನಾಯಕನನ್ನು ನೇಮಿಸಬಹುದು. ಇಲ್ಲಿ ಡಾ. ಜಿ. ಪರಮೇಶ್ವರ ಅಥವಾ ಸತೀಶ್ ಜಾರಕಿಹೊಳಿಯಂತಹ ಪ್ರಬಲ ದಲಿತ ನಾಯಕರ ಹೆಸರನ್ನು ಪರಿಗಣಿಸಬಹುದು. ಇದು ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಬೇಕು ಎಂಬ ಬೇಡಿಕೆಗೆ ಮನ್ನಣೆ ನೀಡಿದಂತಾಗುತ್ತದೆ ಮತ್ತು ಎರಡು ಪ್ರಬಲ ಒಕ್ಕಲಿಗ/ಕುರುಬ ನಾಯಕ ಬಣಗಳ ಜಗಳಕ್ಕೆ ಇತಿಶ್ರೀ ಹಾಡಿದಂತಾಗುತ್ತದೆ. ಈ ನಿರ್ಧಾರವು ಮುಂದಿನ ರಾಜ್ಯ ಚುನಾವಣೆಗಳಲ್ಲಿ ಸಾಮಾಜಿಕ ನ್ಯಾಯದ ನಿಲುವು ತೆಗೆದುಕೊಳ್ಳಲು ಪಕ್ಷಕ್ಕೆ ಸಹಾಯ ಮಾಡಬಹುದು.(Karnataka Congress)
