ಗುಜರಾತ್: ಭಾವನಗರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿರುವ ಶೈಲೇಶ್ ಖಂಬಾಲಾ ಎಂಬಾತ ಕೇವಲ ತನ್ನ ಅನೈತಿಕ ಸಂಬಂಧವನ್ನು ಮುಂದುವರಿಸುವ ಉದ್ದೇಶದಿಂದ ತನ್ನಿಡಿ ಕುಟುಂಬವನ್ನೇ ನಿರ್ನಾಮ ಮಾಡಿಬಿಟ್ಟಿದ್ದಾನೆ. 2022 ರಲ್ಲಿ ಆರಂಭವಾದ ತನ್ನ ಮಹಿಳಾ ಸಹೋದ್ಯೋಗಿಯೊಂದಿಗಿನ ಈ ಅಕ್ರಮ ಸಂಬಂಧ, ಕೊನೆಗೆ ತನ್ನ ಪತ್ನಿ ನಯನಾ(40), ಮಗಳು ಪ್ರೀತಾ(13) ಮತ್ತು ಮಗ ಭವ್ಯಾ(9) ಅವರ ಹತ್ಯೆಗೆ ಕಾರಣವಾಗಿದೆ. ಈ ಅಪರಾಧದಲ್ಲಿ ಮಹಿಳಾ ಅಧಿಕಾರಿಯ ಪಾತ್ರದ ಕುರಿತಾಗಿಯೂ ತನಿಖೆ ನಡೆಯುತ್ತಿದೆ.
ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಪೊಲೀಸ್ ಇಲಾಖೆ
ಪೊಲೀಸರ ಮಾಹಿತಿ ಪ್ರಕಾರ, ಅರಣ್ಯ ಅಧಿಕಾರಿ ಶೈಲೇಶ್ ಗೆ ಇತ್ತೀಚೆಗೆ ಬಾವನಗರಕ್ಕೆ ವರ್ಗಾವಣೆಯಾಗಿತ್ತು. ಆದರೆ ಆತನ ಕುಟುಂಬ ಸೂರತ್ನಲ್ಲಿ ವಾಸಿಸುತ್ತಿದ್ದು. ಕೆಲ ದಿನಗಳ ಹಿಂದೆ ರಜೆಗಾಗಿ ಭಾವನಗರಕ್ಕೆ ಬಂದಿದ್ದ ಕುಟುಂಬವು ಕಣ್ಮರೆಯಾದ ನಂತರ, ನವೆಂಬರ್ 5 ರಂದು ಖಂಬಾಲಾ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ. ತನ್ನ ಭದ್ರತಾ ಸಿಬ್ಬಂದಿ ಕುಟುಂಬ ಆಟೋರಿಕ್ಷಾದಲ್ಲಿ ಹೋಗುವುದನ್ನು ನೋಡಿದ್ದಾಗಿ ಹೇಳಿದ್ದ. ಆದರೆ, ವಿಚಾರಣೆಯ ವೇಳೆ ಶೈಲೇಶ್ ತೋರಿದ ವಿಚಿತ್ರ ವರ್ತನೆ ಮತ್ತು ಕಣ್ಮರೆಯಾದ ಕುಟುಂಬದ ಬಗ್ಗೆ ಅವನಲ್ಲಿ ವ್ಯಕ್ತವಾಗದ ಕಾಳಜಿ ಪೊಲೀಸರಿಗೆ ಅನುಮಾನ ಮೂಡಿಸಿತು. ಭದ್ರತಾ ಸಿಬ್ಬಂದಿ ಆತನ ಹೇಳಿಕೆಯನ್ನು ನಿರಾಕರಿಸಿದ್ದು ಅನುಮಾನವನ್ನು ದೃಢಪಡಿಸಿತು.
ಪೂರ್ವಯೋಜಿತ ಕೊಲೆಯ ಕರಾಳ ಸತ್ಯ
ಶೈಲೇಶ್ ತನ್ನ ಕಿರಿಯ ಅಧಿಕಾರಿ ಗಿರೀಶ್ ವಾನಿಯಾ ಎಂಬಾತನಿಗೆ ಕಸ ಸುರಿಯಲು ತನ್ನ ಮನೆಯ ಹಿಂದೆ ಎರಡು ಹೊಂಡಗಳನ್ನು ಅಗೆಯುವಂತೆ ಹೇಳಿದ್ದ. ಕೊಲೆಯಾದ ನಾಲ್ಕು ದಿನಗಳ ಬಳಿಕ, ಹೊಂಡವನ್ನು ಮುಚ್ಚಲು ‘ನೀಲಗಾಯ್ ಬಿದ್ದಿದೆ’ ಎಂದು ಸುಳ್ಳು ಹೇಳಿ ಡಂಪರ್ ಟ್ರಕ್ ಕಳುಹಿಸುವಂತೆ ಕರೆ ಮಾಡಿದ್ದ. ಅವನ ಕರೆ ದಾಖಲೆಗಳ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು, ನವೆಂಬರ್ 16 ರಂದು ಆ ಹೊಂಡಗಳನ್ನು ಅಗೆದಾಗ ಅವರಿಗೆ ಅಚ್ಚರಿ ಕಾದಿತ್ತು. ಆ ಹೊಂಡಗಳಲ್ಲಿ ಆತನ ಪತ್ನಿ ಮತ್ತು ಮಕ್ಕಳ ಶವಗಳು ಸಿಕ್ಕಿವೆ.
ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ
ಬಂಧನದ ನಂತರ ನಡೆದ ವಿಚಾರಣೆಯಲ್ಲಿ ಶೈಲೇಶ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಇದು ಪೂರ್ವ ಯೋಜಿತ ಕೊಲೆ ಎಂದು ಹೇಳಿರುವ ಆತ, ಮೂವರನ್ನೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ತನ್ನ ಹೆಂಡತಿ ಬೇರೊಬ್ಬರೊಂದಿಗೆ ವಾಸಿಸಲು ಹೊರಟು ಹೋಗುತ್ತಿದ್ದಾಳೆ ಎಂಬ ಸುಳ್ಳು ಕಥೆ ಸೃಷ್ಟಿಸಲು, ಕೊಲೆಯ ನಂತರ ಅವಳ ಫೋನ್ನಿಂದ ತನಗೆ ತಾನೇ ಸಂದೇಶ ಕಳುಹಿಸಿ, ಸಾಕ್ಷ್ಯ ನಾಶಕ್ಕಾಗಿ ಫೋನ್ ಅನ್ನು ಏರ್ಪ್ಲೇನ್ ಮೋಡ್ನಲ್ಲಿ ಇರಿಸಿದ್ದ ಎಂದು ಆಘಾತಕಾರಿ ಸತ್ಯವನ್ನು ಬಯಲು ಮಾಡಿದ್ದಾನೆ.
