ತಿರುಪತಿ: ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಸ್ಥಾನ (TTD) ಆಡಳಿತ ಮಂಡಳಿಯು ಈ ವರ್ಷದ ವೈಕುಂಠ ಏಕಾದಶಿ ದರ್ಶನಕ್ಕೆ (Vaikunta Ekadasi) ಸಿದ್ಧತೆಗಳನ್ನು ಅಂತಿಮಗೊಳಿಸಿದೆ. ಡಿಸೆಂಬರ್ 30 ರಿಂದ ಜನವರಿ 8 ರವರೆಗೆ ಸತತ 10 ದಿನಗಳ ಕಾಲ ವೈಕುಂಠ ದ್ವಾರ ದರ್ಶನವನ್ನು ಮುಂದುವರಿಸಲು ನಿರ್ಧರಿಸಿದೆ. ವರ್ಷಾಂತ್ಯದ ಭಾರೀ ಜನದಟ್ಟಣೆ ನಿಭಾಯಿಸಲು TTD ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.(TTD New Rules)
ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧಾರ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಈ ಬಾರಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದರ್ಶನದ ಒಟ್ಟು ಅವಧಿಯಲ್ಲಿ, 164 ಗಂಟೆಗಳ ಕಾಲ ಸಾಮಾನ್ಯ ಭಕ್ತರಿಗೆ ಸರ್ವ ದರ್ಶನ ನೀಡಲು TTD ನಿರ್ಧರಿಸಿದೆ. ಮೊದಲ ಮೂರು ದಿನಗಳಲ್ಲಿ (ಡಿಸೆಂಬರ್ 30, 31 ಮತ್ತು ಜನವರಿ 1) ಕೇವಲ ಆನ್ಲೈನ್ ಇ-ಡಿಪ್ ಟೋಕನ್ ಹೊಂದಿರುವವರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ನೂಕು ನುಗ್ಗಲು ತಪ್ಪಿಸಲು ಆಫ್ಲೈನ್ ಟೋಕನ್ ಸಂಪೂರ್ಣ ರದ್ದು
ಕಳೆದ ವರ್ಷ ತಿರುಪತಿಯ ಕೌಂಟರ್ಗಳಲ್ಲಿ ಟೋಕನ್ಗಳಿಗಾಗಿ ಕಾಲ್ತುಳಿತ ಉಂಟಾಗಿದ್ದ ಘಟನೆಯನ್ನು ಗಮನದಲ್ಲಿಟ್ಟುಕೊಂಡು TTD ಈ ಬಾರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಕ್ತರಿಗೆ ಆಗುವ ಅನಾನುಕೂಲತೆ ತಪ್ಪಿಸಲು, ತಿರುಪತಿಯ ಕೌಂಟರ್ಗಳಲ್ಲಿ ವೈಕುಂಠ ದ್ವಾರ ದರ್ಶನ ಟೋಕನ್ಗಳನ್ನು ಆಫ್ಲೈನ್ನಲ್ಲಿ ನೀಡುವ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ(TTD New Rules)
ಇ-ಡಿಐಪಿ ಟೋಕನ್ಗಳ ಆನ್ಲೈನ್ ಹಂಚಿಕೆ ನೀತಿ
ಸಾಮಾನ್ಯ ಭಕ್ತರಿಗೆ ಸರ್ವ ದರ್ಶನ ಟೋಕನ್ಗಳ ಹಂಚಿಕೆಯಲ್ಲಿ TTD ಹೊಸ ನೀತಿಯನ್ನು ಜಾರಿಗೆ ತರುತ್ತಿದೆ. ಡಿಸೆಂಬರ್ 30, 31 ಮತ್ತು ಜನವರಿ 1ರಂದು ದರ್ಶನ ಬಯಸುವವರು ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು. ಡಿಸೆಂಬರ್ 2ರಂದು ಆನ್ಲೈನ್ ಡಿಐಪಿ ಮೂಲಕ ಟೋಕನ್ಗಳನ್ನು ಹಂಚಲಾಗುತ್ತದೆ. ಟಿಟಿಡಿ ವೆಬ್ಸೈಟ್, ಅಪ್ಲಿಕೇಶನ್ ಮತ್ತು ವಾಟ್ಸಾಪ್ ಮೂಲಕ ಮಾತ್ರ ಟೋಕನ್ಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: Delhi Red Fort Blast: ಗುಟ್ಟು ರಟ್ಟು- ದೆಹಲಿ ಉಗ್ರರ ಮೊಬೈಲ್ ಲಾಕ್ ತೆರೆದಾಗ ಬಯಲಾಯ್ತು ಸ್ಫೋಟಕ ಸತ್ಯ!
ವಿಶೇಷ ಟಿಕೆಟ್ಗಳು ಮತ್ತು ಗಣ್ಯರ ಪ್ರೋಟೋಕಾಲ್
ಜನವರಿ 2ರಿಂದ ಜನವರಿ 8ರವರೆಗೆ ಟೋಕನ್ ಇಲ್ಲದ ಭಕ್ತರಿಗೂ ಎಂದಿನಂತೆ ಸರ್ವ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರತಿದಿನ 15,000 ವಿಶೇಷ ಪ್ರವೇಶ ದರ್ಶನ (ರೂ. 300) ಟಿಕೆಟ್ಗಳು ಮತ್ತು 1,000 ಶ್ರೀವಾನಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ವೈಯಕ್ತಿಕವಾಗಿ ಭೇಟಿ ನೀಡುವ ಪ್ರೋಟೋಕಾಲ್ ಹೊಂದಿರುವ ಗಣ್ಯರಿಗೆ ಮಾತ್ರ ಶಿಫಾರಸು ದರ್ಶನಕ್ಕೆ ಅವಕಾಶವಿರುತ್ತದೆ.
ತಿರುಮಲ ನಿವಾಸಿಗಳಿಗೂ ದರ್ಶನಕ್ಕೆ ವಿಶೇಷ ಅವಕಾಶ
ತಿರುಮಲದಲ್ಲಿ ವಾಸಿಸುವ ಸ್ಥಳೀಯರಿಗೂ ದರ್ಶನದ ಭಾಗ್ಯವನ್ನು ಕಲ್ಪಿಸಲಾಗಿದ್ದು, ಅಂತಿಮ ದಿನಗಳಲ್ಲಿ ಅಂದರೆ ಜನವರಿ 6, 7 ಮತ್ತು 8ರಂದು ಪ್ರತಿದಿನ 5,000 ಸರ್ವ ದರ್ಶನ ಟೋಕನ್ಗಳನ್ನು ಟಿಟಿಡಿ ಒದಗಿಸಲಿದೆ ಎಂದು TTD ಮೂಲಗಳು ತಿಳಿಸಿವೆ.
