
ಜಮ್ಮು: ದೇಶವಿರೋಧಿ ಚಟುವಟಿಕೆಗಳನ್ನು ಪ್ರಚೋದಿಸುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (SIA) ಗುರುವಾರ ಜಮ್ಮುವಿನಲ್ಲಿರುವ ಸುಪ್ರಸಿದ್ಧ ಕಾಶ್ಮೀರ ಟೈಮ್ಸ್ ಪತ್ರಿಕೆಯ ಪ್ರಧಾನ ಕಚೇರಿ ಮೇಲೆ ಮಿಂಚಿನ ದಾಳಿ ನಡೆಸಿದೆ.(Anti-National Activity)
ಪೊಲೀಸ್ ಮೂಲಗಳ ಪ್ರಕಾರ, ಇಂದು (ಗುರುವಾರ) ಬೆಳಿಗ್ಗೆ ಆರಂಭವಾದ ಈ ಶೋಧ ಕಾರ್ಯಾಚರಣೆಯು ನಿಜಕ್ಕೂ ಆಘಾತಕಾರಿಯಾಗಿತ್ತು. ಅಧಿಕಾರಿಗಳು ಕಚೇರಿಯಿಂದ AK-47 ರೈಫಲ್ನ ಕಾರ್ಟ್ರಿಡ್ಜ್ಗಳು, ಪಿಸ್ತೂಲ್ ಗುಂಡುಗಳು ಮತ್ತು ಮೂರು ಗ್ರೆನೇಡ್ ಲಿವರ್ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಹಾಗೂ ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎನ್ನಲಾಗಿದೆ.
ಕಾಶ್ಮೀರ ಟೈಮ್ಸ್ ಪತ್ರಿಕೆಯು ‘ಅಸಮಾಧಾನವನ್ನು ಹರಡುವುದು, ಪ್ರತ್ಯೇಕತಾವಾದವನ್ನು ವೈಭವೀಕರಿಸುವುದು ಹಾಗೂ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಒಡ್ಡುವುದು’ ಮುಂತಾದ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಆರೋಪದ ಮೇಲೆ SIA ಒಂದು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದೆ.
ಜಮ್ಮುವಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಕಾಶ್ಮೀರ್ ಟೈಮ್ಸ್ ಪ್ರಧಾನ ಕಚೇರಿಯ ಮೇಲೆ SIA ಇಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಳಿ ಮತ್ತು ಶೋಧ ನಡೆಸಿತು. ಜಮ್ಮು ಮತ್ತು ಕಾಶ್ಮೀರದೊಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಹಾಗೂ ಇತರ ರಾಷ್ಟ್ರವಿರೋಧಿ ಸಂಸ್ಥೆಗಳೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಮಾಧ್ಯಮ ಸಂಸ್ಥೆ (Kashmir Times/kashmirtimes.com) ಭಾಗಿಯಾಗಿರುವ ಕುರಿತ ಪ್ರಕರಣದ ತನಿಖೆಯ ಮುಂದುವರಿಕೆಯಾಗಿ ಈ ಶೋಧ ಕಾರ್ಯವನ್ನು ನಡೆಸಲಾಗಿದೆ,” ಎಂದು ಜಮ್ಮು ಮತ್ತು ಕಾಶ್ಮೀರ SIA ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈ ಎಫ್ಐಆರ್ನಲ್ಲಿ ಕಾಶ್ಮೀರ ಟೈಮ್ಸ್ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲ ಪತ್ರಿಕೆಯ ಸಂಪರ್ಕಗಳು ಮತ್ತು ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಈ ತನಿಖೆಯ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರ ಟೈಮ್ಸ್ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದಾಗಿದೆ.
ಇದನ್ನು ವೇದ್ ಭಾಸಿನ್ ಅವರು 1954 ರಲ್ಲಿ ವಾರಪತ್ರಿಕೆಯಾಗಿ ಪ್ರಾರಂಭಿಸಿ, ನಂತರ 1964 ರಲ್ಲಿ ದಿನಪತ್ರಿಕೆಯಾಗಿ ಪರಿವರ್ತಿಸಿದ್ದರು. ಈ ವರದಿಯನ್ನು ಬರೆಯುವ ಸಮಯದಲ್ಲಿ ಪತ್ರಿಕೆಯ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.(Anti-National Activity)
