Dharmasthala Case Update: ಧರ್ಮಸ್ಥಳದಲ್ಲಿ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ತಲೆಬುರುಡೆ ಪ್ರಕರಣ’ಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕಳೆದ ಮೂರು ತಿಂಗಳುಗಳಿಂದ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡ (SIT), ಇದೀಗ ಬೆಳ್ತಂಗಡಿ ಕೋರ್ಟ್ಗೆ ತನಿಖಾ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಅನೇಕ ಸ್ಫೋಟಕ ಮತ್ತು ಅಚ್ಚರಿಯ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
4 ಸಾವಿರ ಪುಟಗಳಲ್ಲಿ ಸುಳ್ಳು ಸಾಕ್ಷ್ಯ ಮತ್ತು ಷಡ್ಯಂತ್ರದ ವಿವರ
ಎಸ್ಐಟಿ ಸಲ್ಲಿಸಿರುವ ಈ ತನಿಖಾ ವರದಿಯು ಬರೋಬ್ಬರಿ 4 ಸಾವಿರ ಪುಟಗಳಷ್ಟು ದೀರ್ಘವಾಗಿದೆ. ಈ ವರದಿಯು, ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ ಕುರಿತ ಪ್ರಕರಣದ ತನಿಖೆಯಾಗಿದೆ (BNSS 215ರ ಅಡಿಯಲ್ಲಿ). ಪ್ರಕರಣದಲ್ಲಿ ಭಾಗಿಯಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ ಎನ್ನಲಾದ ಆರು ಮಂದಿಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ವ್ಯಕ್ತಿಗಳು
ಹೆಣಗಳನ್ನು ಹೂತುಹಾಕಿದೆ ಎಂದು ಹೇಳಿಕೊಂಡಿದ್ದ ಈ ಪ್ರಕರಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಭಟ್ ಸೇರಿದಂತೆ ಒಟ್ಟು 6 ಮಂದಿಯ ಹೆಸರನ್ನು SIT ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಈ ಜನರು ಸುಳ್ಳು ಹೇಳುವ ಮೂಲಕ ಪ್ರಕರಣದ ದಿಕ್ಕನ್ನೇ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂಬುದು SIT ತನಿಖೆಯಿಂದ ಬಯಲಾಗಿದೆ.
ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಬಗ್ಗೆಯೂ ಪ್ರಸ್ತಾಪ
SITಯು ಕೇವಲ ಸುಳ್ಳು ಸಾಕ್ಷದ ಬಗ್ಗೆ ಮಾತ್ರವಲ್ಲ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಒಟ್ಟಾರೆ ಷಡ್ಯಂತ್ರದ ವಿಚಾರಗಳ ಬಗ್ಗೆಯೂ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. ಅಲ್ಲದೆ, ತಿಮರೋಡಿ ಮತ್ತು ಚಿನ್ನಯ್ಯ ನಡುವಿನ ಸಂಪರ್ಕ ಮತ್ತು ಇತರ ಹಲವು ವಿಚಾರಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತನಿಖೆಗೆ ಕರೆದಾಗ ಆರೋಪಿಗಳು ಸಹಕಾರ ನೀಡದೆ ತಡೆಯೊಡ್ಡಿದ ಬಗ್ಗೆಯೂ SIT ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾದ್ಯತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಜುಲೈ 20 ರಂದು ಈ ತನಿಖೆಗಾಗಿ SIT ತಂಡವನ್ನು ರಚಿಸಿತ್ತು. SIT ಮುಖ್ಯಸ್ಥರಾದ ಡಿಜಿಪಿ ಪ್ರಣಬ್ ಮೊಹಾಂತಿ ಅವರು ಕೋರ್ಟ್ಗೆ ವರದಿ ಸಲ್ಲಿಸಿದ ನಂತರ, ರಾಜ್ಯ ಸರ್ಕಾರಕ್ಕೂ ಈ ತನಿಖಾ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಬಹಿರಂಗವಾದರೆ, ರಾಜ್ಯ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡುವ ಸಾಧ್ಯತೆಯಿದೆ.
