ಸಾಂದರ್ಭಿಕ ಚಿತ್ರ
ನೆಲಮಂಗಲ: ಸಮಾಜದಲ್ಲಿ ಅತ್ತೆ-ಮಾವ ಎಂದರೆ ತಂದೆ-ತಾಯಿಯ ಸಮಾನ ಎನ್ನುತ್ತಾರೆ. ಆದರೆ, ಸಂಬಂಧಗಳ ಪಾವಿತ್ರತೆಯನ್ನೇ ಅಣಕಿಸುವಂತಹ ಒಂದು ಆಘಾತಕಾರಿ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ಮನೆಗೆ ಬಂದ ಸೊಸೆಯನ್ನು ಮಗಳಂತೆ ಮಮತೆಯಿಂದ ಕಾಣಬೇಕಿದ್ದ ಮಾವನೇ, ಅಸಭ್ಯ ಮಾತುಗಳು ಹಾಗೂ ಲೈಂಗಿಕ ಬೇಡಿಕೆಗಳ ಮೂಲಕ ಸೊಸೆಗೆ ತೀವ್ರ ಕಿರುಕುಳ ನೀಡಿದ್ದಾರೆ.(Crime News) ನಿವೃತ್ತ ಡಿವೈಎಸ್ಪಿ ಅವರ ಪುತ್ರಿ ನೀಡಿದ ದೂರಿನನ್ವಯ, ಪತಿ ಮತ್ತು ಅತ್ತೆಯೂ ಮಾವನ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಕೇವಲ 15 ದಿನಗಳ ಸಂಸಾರದಲ್ಲಿ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಅಳಲು ಇದಾಗಿದೆ.
ಮದುವೆಯ ನಂತರ ಶುರುವಾದ ವರದಕ್ಷಿಣೆ ಕಿರುಕುಳ
ಅನಿತಾ ಅವರು ನವೆಂಬರ್ 2, 2023 ರಂದು ಗೋವರ್ಧನ್ ಎಂಬುವವರನ್ನು ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಗೆ ಅನಿತಾ ಅವರ ತಂದೆ ಚಿನ್ನ, ಬೆಳ್ಳಿ ಸೇರಿ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ ಮದುವೆಯಾದ ಕೇವಲ 15ದಿನಗಳ ನಂತರ ಕಿರುಕುಳ ಶುರುವಾಗಿದೆ. ಪತಿ ಗೋವರ್ಧನ್, ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಅನಿತಾ ಆರೋಪಿಸಿದ್ದಾರೆ. ಆಸ್ತಿ ಮತ್ತು ಹಣ ತಂದರೆ, ಸ್ವಂತ ನರ್ಸಿಂಗ್ ಹೋಂ ಪ್ರಾರಂಭಿಸಬಹುದು ಎಂಬುದು ಪತಿಯ ಆಸೆಯಾಗಿತ್ತು ಎನ್ನಲಾಗಿದೆ.
‘ಅರೆಬರೆ ಬಟ್ಟೆ ಹಾಕಿಕೊಂಡು ಬಾ’: ಮಾವನ ಲೈಂಗಿಕ ಬೇಡಿಕೆ
ಪತಿಯ ವರದಕ್ಷಿಣೆ ಕಿರುಕುಳದ ಜೊತೆಗೆ ಮಾವನಿಂದಲೂ ಲೈಂಗಿಕ ಕಿರುಕುಳ ಎದುರಿಸಬೇಕಾಯಿತು ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ. ಮಾವ ನಾಗರಾಜು ಅವರು ಅಶ್ಲೀಲವಾಗಿ ಮಾತನಾಡುತ್ತಿದ್ದರು ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಅನಿತಾ ಆರೋಪಿಸಿದ್ದಾರೆ.
ನಿಮ್ಮ ಮದುವೆಯಾಗಿ ಕೆಲವು ತಿಂಗಳು ಕಳೆದಿವೆ. ಯಾಕೆ ಇನ್ನೂ ಮಕ್ಕಳು ಮಾಡಿಕೊಂಡಿಲ್ಲ, ಸರಿಯಾಗಿ ಸಂಸಾರ ಮಾಡುತ್ತಿಲ್ಲವೇ, ಇಲ್ಲದಿದ್ದರೆ, ನಾನು ಬರುತ್ತೇನೆ. ಮಾಡರ್ನ್ ಹುಡುಗಿಯಂತೆ ಅರ್ಧ ಬಟ್ಟೆ ಧರಿಸಿ ನನ್ನ ಮುಂದೆ ಬಾ” ಎಂದು ಮಾವ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ.
ಅತ್ತೆ ಹಾಗೂ ಪತಿಯಿಂದಲೇ ಹೊಂದಾಣಿಕೆ ಮಾಡಿಕೊಳ್ಳುವಂತೆ ಒತ್ತಡ
ಮಾವನ ಈ ಅಸಭ್ಯ ವರ್ತನೆಯ ಬಗ್ಗೆ ಅನಿತಾ ಅವರು ತಮ್ಮ ಗಂಡ ಮತ್ತು ಅತ್ತೆ ಬಳಿ ಹೇಳಿದಾಗ, “ಇದು ಮನೆಯ ವಿಷಯ, ನೀನೇ ಹೊಂದಾಣಿಕೆ ಮಾಡಿಕೊಳ್ಳಬೇಕು” ಎಂದು ಹೇಳಿ ಅವರು ಕಿರುಕುಳವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ಗಂಡನ ಮನೆಯವರ ಆರ್ಥಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಅನಿತಾ ಕೊನೆಗೂ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರಿಂದ ಪ್ರಕರಣ ದಾಖಲು, ತನಿಖೆ ಶುರು
ಅನಿತಾ ಅವರ ದೂರಿನ ಅನ್ವಯ ಪೊಲೀಸರು ಇದೀಗ ಪತಿ, ಮಾವ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
