ನವದೆಹಲಿ: ಕಳೆದ ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆ (Red Fort) ಬಳಿ ಸಂಭವಿಸಿದ ನಿಗೂಢ ಸ್ಫೋಟದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಸಿಕ್ಕಿವೆ.(Delhi Red Fort Blast) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಡಾ. ಮುಜಮ್ಮಿಲ್ ಆದಿಲ್, ಡಾ. ಶಾಹೀನ್ ಮತ್ತು ಇರ್ಫಾನ್ರಂತಹ ಪ್ರಮುಖ ಆರೋಪಿಗಳ ಡಿಜಿಟಲ್ ಸಾಮಗ್ರಿಗಳು ಬೆಚ್ಚಿ ಬೀಳಿಸುವ ವಿಷಯಗಳನ್ನು ಬಹಿರಂಗಪಡಿಸಿವೆ.
ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ಡಾ. ಮುಜಮ್ಮಿಲ್ ಶಕೀಲ್ ಗನ್ನೆ ಮೊಬೈಲ್ನಿಂದಲೇ ಬರೋಬ್ಬರಿ 200 ಕ್ಕೂ ಹೆಚ್ಚು ವಿಡಿಯೊಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ. ಮೂಲಗಳ ಪ್ರಕಾರ, ಈ ವಿಡಿಯೊಗಳಲ್ಲಿ ಮುಖ್ಯವಾಗಿ ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮಸೂದ್ ಅಜರ್ ಮತ್ತು ಇತರ ಜೈಶ್ ಕಮಾಂಡರ್ಗಗಳು ಹಾಗೂ ಐಸಿಸ್ (ISIS) ಉಗ್ರಗಾಮಿಗಳು ನೀಡಿದ ಪ್ರಚೋದನಕಾರಿ ಭಾಷಣಗಳು ರೆಕಾರ್ಡ್ ಆಗಿವೆ. ಇದು ಸ್ಪಷ್ಟವಾಗಿ ಉಗ್ರಗಾಮಿ ಬೋಧನೆ (Extremist teachings) ಎಂದು ಸಾಬೀತಾಗಿದೆ.
ಬಾಂಬ್ ತಯಾರಿಕೆ ತರಬೇತಿ ವಿಡಿಯೋಗಳು!
ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ 200 ವಿಡಿಯೋಗಳಲ್ಲಿ ಸುಮಾರು 80 ವಿಡಿಯೋಗಳು ಸಂಪೂರ್ಣವಾಗಿ ಭಯೋತ್ಪಾದಕ ತರಬೇತಿ, ಬಾಂಬ್ ತಯಾರಿಕೆಯ ವಿಧಾನಗಳು ಮತ್ತು ರಾಸಾಯನಿಕ ಕ್ರಿಯೆಗಳ ಮೇಲೆ ಕೇಂದ್ರೀಕೃತವಾಗಿವೆ. ಈ ದಾಖಲೆಗಳು, ಈ ಭಯೋತ್ಪಾದಕ ಗುಂಪುಗಳು ತಮ್ಮ ಕಾರ್ಯಕರ್ತರಿಗೆ ಹೇಗೆ ತರಬೇತಿ ನೀಡುತ್ತವೆ ಮತ್ತು ಸ್ಪೋಟಕಗಳನ್ನು ಹೇಗೆ ತಯಾರಿಸುತ್ತವೆ ಎಂಬುದರ ಬಗ್ಗೆ ಆಳವಾದ ಒಳನೋಟವನ್ನು ನೀಡುತ್ತವೆ.
ಇದಲ್ಲದೆ, ಆರೋಪಿಗಳ ಫೋನ್ಗಳಲ್ಲಿ ದೆಹಲಿ, ಉತ್ತರ ಪ್ರದೇಶ, ಮುಂಬೈ ಮತ್ತು ಇತರ ರಾಜ್ಯಗಳಲ್ಲಿನ ಧಾರ್ಮಿಕ ಸ್ಥಳಗಳು ಹಾಗೂ ಜನಸಂದಣಿಯ ಮಾರುಕಟ್ಟೆಗಳ ವೀಡಿಯೊಗಳು ಸಹ ಪತ್ತೆಯಾಗಿವೆ. ಈ ಮೂಲಕ, ಬಂಧಿತ ಉಗ್ರರು ದೇಶದ ವಿವಿಧ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ಮುಂದಿನ ದಾಳಿಗೆ ಗುರಿ ಇಟ್ಟಿದ್ದರು ಎಂಬುದು ಸ್ಪಷ್ಟವಾಗಿದೆ.
ಸಿರಿಯನ್ ಐಸಿಸ್ ಕಮಾಂಡರ್ ಭೇಟಿ
ತನಿಖೆಯ ವೇಳೆ 2022 ರಲ್ಲಿ ನಡೆದ ಮತ್ತೊಂದು ಪ್ರಮುಖ ಬೆಳವಣಿಗೆಯೂ ಬಹಿರಂಗವಾಗಿದೆ. ಡಾ. ಮುಜಮ್ಮಿಲ್ ಮತ್ತು ಡಾ. ಉಮರ್ ಎಂಬ ಇಬ್ಬರು ಟರ್ಕಿಯಲ್ಲಿ ಜೈಶ್ ಕಮಾಂಡರ್ನ ಸೂಚನೆಯ ಮೇರೆಗೆ ಸಿರಿಯನ್ ಐಸಿಸ್ ಭಯೋತ್ಪಾದಕ ಕಮಾಂಡರ್ನನ್ನು ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
ವಿಶೇಷ ಎನ್ಐಎ (NIA) ನ್ಯಾಯಾಲಯವು ಈ ನಾಲ್ವರು ಪ್ರಮುಖ ಆರೋಪಿಗಳಾದ ಡಾ. ಮುಜಮ್ಮಿಲ್ ಶಕೀಲ್ ನ್ನೆ (ಪುಲ್ವಾಮಾ), ಡಾ. ಅದೀಲ್ ಅಹ್ಮದ್ ರಾಥರ್ (ಅನಂತನಾಗ್), ಡಾ. ಶಾಹೀನ್ ಸಯೀದ್ (ಲಕ್ನೋ) ಮತ್ತು ಮುಫ್ತೀ ಇರ್ಫಾನ್ ಅಹ್ಮದ್ ವಾಗೆ (ಶೋಪಿಯಾನ್) ನನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೆ ನೀಡಿದೆ.
ಕೆಂಪು ಕೋಟೆ ಬಳಿ ಸಂಭವಿಸಿದ ಈ ಮಾರಕ ಕಾರು ಸ್ಪೋಟದಲ್ಲಿ 15 ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದರು.(Delhi Red Fort Blast)ಸ್ಫೋಟಕ್ಕೆ ಸಂಬಂಧಿಸಿದ ಈ ಭಯೋತ್ಪಾದಕ ಪಿತೂರಿಯ ವ್ಯಾಪ್ತಿಯನ್ನು ಸಂಪೂರ್ಣವಾಗಿ ಬಯಲು ಮಾಡಲು ಎನ್ಐಎ ಮುಂದಿನ ದಿನಗಳಲ್ಲಿ ತೀವ್ರ ವಿಚಾರಣೆ ನಡೆಸಲಿದೆ.
