ಮಗಳಿಗೆ ಬರೆದ ಪತ್ರಗಳು
(ಪತ್ರ ಮೂರು) ಮಗಳೇ,
ಮೊನ್ನೆ ಮೊನ್ನೆ ಹತ್ತಾರು ಬುಕ್ ಮಾರ್ಕ್ಗಳನ್ನು ಮಾಡಿಕೊಟ್ಟೆ. ಈಗ ಅವನ್ನು ಬಳಸುವುದಕ್ಕಾದರೂ ದಿನಕ್ಕೊಂದು ಪುಸ್ತಕ ಓದುವ ಪಣ ತೊಡಬೇಕೆಂದಿದ್ದೇನೆ. ಹತ್ತಿರ ಹತ್ತಿರ ಒಂದು ವರ್ಷವೇ ಆಯ್ತು, ಹೊಸದೊಂದು ಓದಿ. ಪಿಯುಸಿಯ ಪಠ್ಯ, ಅದಕ್ಕೆ ಸಂಬಧಿಸಿದ ಒಂದಷ್ಟು ಅಧ್ಯಯನ, ಜತೆಯಲ್ಲಿ ಆಗೀಗ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸಂದೇಶಗಳ ಹೊರತು ಪಡಿಸಿ ಇನ್ನೇನೂ ಓದಿದಂತಿಲ್ಲ. ಅದಿರಲಿ. ಓದುವುದಕ್ಕೆ ಅಂತ ಕುಳಿತರೆ ಮತ್ತೆ ನಿನಗೆ ಸಮಯ ಕೊಡುವುದಿಲ್ಲ ಅಂತ ಬೇಜಾರು ಮಾಡಿಕೊಳ್ಳುತ್ತೀಯೇನೋ! ಮಲ್ಲಿಗೆಯಂಥ ಮನಸ್ಸಿನ ಮಗು ನೀನು. ನೀನು ನೊಂದುಕೊಂಡರೆ ಮನೆಯೆಲ್ಲ ನೊಂದುಕೊಂಡಂತೆ ಇರುತ್ತದಲ್ಲ!
ಇದನ್ನೂ ಓದಿ: Letters to Daughter: ಮಗಳೇ, ಬದುಕಿನಲ್ಲಿ ಅತ್ಯಂತ ಅಮೂಲ್ಯವಾದ ಅನುಭವವೆಂದರೆ ಮುದ್ದು ಕಂದಮ್ಮಗಳ ಅಪ್ಪುಗೆಯಂತೆ!
ಅದಿರಲಿ, ಈಗ ಹೇಳಹೊರಟದ್ದು ನೀನು ಬರೆದ ಬುಕ್ ಮಾರ್ಕ್ ಬಗ್ಗೆ. ಸಣ್ಣ ಕನಸುಗಳನ್ನು ಕಾಣುವುದು ಅಪರಾಧ, ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣಬೇಕು! ಅಬ್ದುಲ್ ಕಲಾಂ ಅವರ ಮಾತಿರಬೇಕು ಇದು. ಆದರೆ ಇದನ್ನು ಅರ್ಥ ಮಾಡಿಕೊಳ್ಳುವಷ್ಟು ನೀನು ದೊಡ್ಡವಳಾದೆಯಲ್ಲ! ಅಲ್ಲಿಗೆ ನಿನಗೆ ನಿನ್ನ ದಾರಿ, ಗುರಿ ಸ್ಪಷ್ಟ ಇದೆ ಅಂತ ಆಯಿತಲ್ಲ. ನಿನ್ನಷ್ಟಕ್ಕೇ ನೀನೇ ಅದೇನೋ ಕನಸೊಂದನ್ನು ಕಟ್ಟಿಕೊಂಡಿದ್ದಿ. ಅದು ಸಾಧ್ಯವಾಗಲಿ ಅಂತ ನಾವೂ ಬಯಸುತ್ತೇವೆ. ‘ಯಾವುದಕ್ಕೋ ಹಂಬಲಿಸಬೇಡ, ಅದರಲ್ಲಿ ತೊಡಗಿಸಿಕೋ’ ಅಂತ ಇನ್ನೊಂದು ಬುಕ್ ಮಾರ್ಕ್ ಕೊಟ್ಟಿದ್ದೀಯಾ.
ಸರಿ, ಇಲ್ಲಿಯವರೆಗೆ ನಾವು ತೊಡಗಿಸಿಕೊಂಡ ರೀತಿ ಅದುವೇ. ಎಷ್ಟೋ ಬಾರಿ ನಮ್ಮ ಸ್ನೇಹಿತರೆಲ್ಲಾ ಕೇಳುತ್ತಾರೆ, ಮನೆ, ಕಾಲೇಜು, ಬರೆವಣಿಗೆ, ಯಕ್ಷಗಾನ ಎಲ್ಲವನ್ನೂ ಅದು ಹೇಗೆ ನಿಭಾಯಿಸುತ್ತೀರಿ ಅಂತ! ನಿನ್ನೆ ಅರ್ಥವಾಯಿತು ಬಿಡು, ಮಗಳೇ, ಮಕ್ಕಳ ಸಾಧನೆಯಲ್ಲಿ ಅಪ್ಪ ಅಮ್ಮನ ಪಾತ್ರ ಎಷ್ಟು ಮುಖ್ಯವೋ ಅಪ್ಪ ಅಮ್ಮನ ಸಾಧನೆಯಲ್ಲಿ ಮಕ್ಕಳ ಪಾತ್ರ ಅದರಿಂದ ದೊಡ್ಡದು.
ಕನಸಿನ ಬಗ್ಗೆ ಹೇಳುತ್ತಿದ್ದೆವಲ್ಲ, ನೀನು ಹುಟ್ಟುವ ವೇಳೆಗೆ ನಿನ್ನ ಕುರಿತ ನಮ್ಮ ಕನಸುಗಳೇನು ಸಣ್ಣದಿದ್ದವೇ ಹೇಳು? ಅಮ್ಮನಾಗುವ ಸಂಭ್ರಮದ ನಡುವೆಯೂ ‘ಇಷ್ಟು ಬೇಗನೇ ಬೇಕಿತ್ತಾ?’ ಎಂಬ ಅವರಿವರ ಮಾತುಗಳ ನಡುವೆ ನಿಜಕ್ಕೂ ಸೊರಗಿದ್ದೆ, ದಣಿದಿದ್ದೆ. ನೀನು ಹೊಟ್ಟೆಯಲ್ಲಿದ್ದುದು ಎಂಟೇ ತಿಂಗಳು! ಅಷ್ಟೂ ದಿನವೂ ನಿಲ್ಲದ ವಾಂತಿ. ಜತೆಗೆ ಯಥಾಪ್ರಕಾರ ಕಾಲೇಜು, ಇತರ ಕೆಲಸದ ಒತ್ತಡಗಳು.
ಇದನ್ನೂ ಓದಿ: Letters to Daughter: ದೇವರು ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ
ಮಗಳೇ, ಬರಿಯ ಕುಚ್ಚಿಲಕ್ಕಿ ಗಂಜಿ, ಸೌತೆಕಾಯಿಯ ಸಳ್ಳಿ, ಒಂದಿಷ್ಟೇ ಇಷ್ಟು ನಿಂಬೆಹುಳಿ ಉಪ್ಪಿನಕಾಯಿ. ಇದಷ್ಟೇ ಸೇರುತ್ತಿದ್ದುದು ಆಗ. ಪದೇಪದೇ ಆರೋಗ್ಯ ಹದಗೆಟ್ಟು ನಿನ್ನನ್ನುಳಿಸಿಕೊಳ್ಳುವಲ್ಲಿ ನಾವನುಭವಿಸಿದ ಸಂಕಟ ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಎಂಟನೇ ತಿಂಗಳು ಪೂರ್ತಿಯಾದ ದಿನ ಕಾಲೇಜಿಗೆ ರಜೆ ಕೊಟ್ಟು ಮನೆಗೆ ಬಂದೆ.
ಆ ಮಧ್ಯರಾತ್ರಿಯೇ ಆಸ್ಪತ್ರೆಗೆ ಹೋಗುವಂತಾಯಿತು. ಮಗಳೇ, ನೀನು ನಮ್ಮ ಬದುಕಿನ ಭಾಗ್ಯವಾಗಿಯೇ ಬಂದೆ. ನೀನು ಅಪ್ಪಟ ಟೀಚರ್ ಥರ ಪಾಠ ಮಾಡುವಾಗ ನನಗೆ ಒಳಗೊಳಗೆ ಗರ್ವ. ಯಾಕೆ ಗೊತ್ತಾ ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡು ಅಷ್ಟೂ ದಿನ ಪಾಠ ಮಾಡಿದ್ದೆನಲ್ಲ! ಅದೇ ಪ್ರಭಾವ ನಿನ್ನ ಮೇಲೂ ಆಗಿರಬೇಕಲ್ಲ.
ಮಗಳೇ, ಆ ಸಮಯದಲ್ಲಿ ನಿನ್ನ ಅಪ್ಪನಿಗೆ ತಾನು ಐಎಎಸ್ ಮಾಡಬೇಕೆಂಬ ಕನಸು ಬಹಳವಿತ್ತು. ಅದಕ್ಕೆ ಬೇಕಾದ ಸಹಕಾರ ಕೊಡುವುದಕ್ಕೆ ನನ್ನ ಆರೋಗ್ಯ ಸಹಕರಿಸಲಿಲ್ಲ. ಈಗಲೂ ಅದೊಂದು ಕೊರಗು ನನ್ನೊಳಗೆ ಇದೆ. ಅಪ್ಪನಿಗೋ ಬೆಳಗಾದರೆ ರಿಪೋರ್ಟಿಂಗ್, ಮಧ್ಯಾಹ್ನದಿಂದ ಸಬ್ ಎಡಿಟಿಂಗ್, ರಾತ್ರಿಯವರೆಗೆ ಪೇಜ್! ದಿನಪೂರ್ತಿ ಬ್ಯುಸಿ. ‘ನನಗೆ ಗಮನ ಕೊಡುತ್ತಿಲ್ಲ ನೀನು’ ಅಂತ ನಾನು ಜಗಳಾಡಿದ್ದೆಷ್ಟೋ! ಈಗಲೂ ಅಪ್ಪನ ಕುರಿತು ನಿನಗಿರುವ ಪೊಸೆಸಿವ್ ನೆಸ್ ನೋಡಿದರೆ ನನಗೆ ಆ ದಿನಗಳೆಲ್ಲ ಹಾಗೇ ನೆನಪಾಗುತ್ತವೆ.
ಎಷ್ಟೆಂದರೆ ಮಗಳೇ, ನಿನಗಿನ್ನೂ ಒಂದು ವರ್ಷವಾಗುವ ಮೊದಲು ನೀನು ರಾತ್ರಿ ಹತ್ತುಗಂಟೆಯವರೆಗೂ ಅಪ್ಪ ಬರುವದನ್ನೇ ಎದುರು ನೋಡುತ್ತಾ ಕಾದುಕುಳಿತಿರುತ್ತಿದ್ದೆ. ಎಷ್ಟೇ ನಿದ್ದೆ ಬಂದರೂ ಮಲಗಲೊಲ್ಲದೆ. ನಮ್ಮ ಮನೆಯ ರಸ್ತೆಯ ತಿರುವಿನಲ್ಲಿ ಅಪ್ಪನ ಸ್ಕೂಟರ್ ನ ಬೀಪ್ ಬೀಪ್ ಕೇಳಿದ ತಕ್ಷಣ ಮಲಗಿ ನಿದ್ರಿಸುತ್ತಿದ್ದ ದಿನಗಳೂ ಇದ್ದವು. ಒಂದೆರಡು ಬಾರಿ ಅಪ್ಪ ಬರುವುದು ಮತ್ತೂ ತಡವಾದಾಗ ಪೇಪರನ್ನೇ ದಿವಾನದ ಪೂರ್ತಿ ಹರಡಿ ಅದರ ಮೇಲೆ ಮಲಗಿದವಳು ನೀನು.
ಮಗಳೇ, ಅಪ್ಪ ತನ್ನ ಕನಸಿನಂತೆ ಪತ್ರಕರ್ತನಾಗಿ ಮುಂದುವರೆಯುವ ಬದಲು ಪತ್ರಿಕೋದ್ಯಮದ ಮೇಷ್ಟ್ರಾಗುವ ನಿರ್ಧಾರ ತೆಗೆದುಕೊಂಡದ್ದೂ ನಿನಗಾಗಿಯೇ. ನಿನ್ನೊಂದಿಗೆ ಕೊಂಚವಾದರೂ ಸಮಯ ಕಳೆಯುವ ಅನುಕೂಲ ಒದಗಬೇಕಿದ್ದರೆ ಅದು ಈ ನಿರ್ಧಾರದಿಂದ. ನೀನು ಬಂದ ಮೇಲೆ ಬದುಕು ಎಷ್ಟೆಲ್ಲ ಬದಲಾಯಿತು! ನಿಜವೇ, ಅಪ್ಪಂದಿರು ತಮ್ಮ ಬಿಗುಮಾನ ಬಿಟ್ಟು ಬಾಗಬೇಕಾದರೆ ಮಗಳಂದಿರೇ ಬೇಕು. ನನ್ನಪ್ಪನಾದರೂ ಅಷ್ಟೇ, ನಿನ್ನಪ್ಪನಾದರೂ ಅಷ್ಟೇ. ಅಮ್ಮ, ಸೋದರಿಯರು, ಪತ್ನಿ ಹೀಗೆ ಯಾರ ಮಾತಿಗೆ ಬಗ್ಗದಿದ್ದರೂ ಮಗಳ ಮಾತಿಗೆ ಬೆಲೆ ಕೊಟ್ಟೇ ಕೊಡುತ್ತಾರೆ! ಅದು ಕಾರಣವಿಲ್ಲದ ವಿಸ್ಮಯ.
ಕಂದಾ, ಅಪ್ಪ ಮೇಷ್ಟ್ರಾಗಿದ್ದ ಕಾರಣಕ್ಕೆ ನಾನೂ ಉಪನ್ಯಾಸಕಿಯಾಗಬಯಸಿದೆ. ಕೃಷಿಕುಟುಂಬದ ಹಿನ್ನೆಲೆಯಿಂದ ಬಂದ ಅಪ್ಪ ಪತ್ರಿಕೋದ್ಯಮವನ್ನು ನೆಚ್ಚಿಕೊಂಡರು. ಇದೆರಡೂ ಅಲ್ಲದ ಇನ್ನೇನೋ ನಿನ್ನ ಆಯ್ಕೆ ಆಗುತ್ತದೆ ಮುಂದಕ್ಕೆ. ನೀನೇ ಕೆಲವು ಬಾರಿ ಹೇಳುತ್ತೀಯಲ್ಲ.. ‘ಎಲ್ಲರಿಗೂ ಅವರವರದೇ ಆದ ವೈಯುಕ್ತಿಕ ಗುರಿಗಳು, ಆಸಕ್ತಿಗಳು ಇರುತ್ತವೆ. ಬೇರೆಯವರ ಕನಸಿಗಾಗಿ ಯಾರೂ ದುಡಿಯುವುದಲ್ಲ’ ಅಂತ. ಅದು ನಿಜವೇ. ನಿನ್ನ ಯೋಚನೆಯ ಪ್ರಬುದ್ಧತೆ ಒಳ್ಳೆಯದೇ.
ಅಂದರೂ ಮಕ್ಕಳ ಕುರಿತು ಕನಸನ್ನೇ ಕಟ್ಟಿಕೊಳ್ಳದ ಮಂದಿ ಇರುವುದಕ್ಕಿಲ್ಲಮ್ಮಾ.. ನಿನ್ನ ಕುರಿತು, ತಮ್ಮನ ಕುರಿತು ನಮಗೆ ಬಲುದೊಡ್ಡ ಕನಸಿದೆ. ಮುಂದೊಂದು ದಿನ ಹೇಳುವೆ.
ಇಂತೀ ಅಮ್ಮ
