
(ಪತ್ರ ನಾಲ್ಕು) ಮಗಳೇ,
ಅಚ್ಚರಿಯೇನಿಲ್ಲ ಅಲ್ವಾ? ನಾನೂ ಅಕ್ಕಂದಿರೂ ಚಿಕ್ಕವರಿದ್ದಾಗ ದಿನಂಪ್ರತಿ ‘ಅಮ್ಮ ನಾಳೆ ಎಂತ ತಿಂಡಿ?’ ಅಂತ ಕೇಳುವುದಿತ್ತು, ಥೇಟು ನಿಮ್ಮಿಬ್ಬರಂತೆ! ನಮಗೆ ಕುತೂಹಲ, ಅಮ್ಮ ಏನು ಮಾಡಿಕೊಡುತ್ತಾಳೋ ಅಂತ. ನಮ್ಮ ಕಣ್ಣಿನಲ್ಲಿ ಜಿನುಗುವ ಆಸೆಗೆ ಪ್ರತಿಯಾಗಿ ಸ್ಪಂದಿಸುವುದಕ್ಕೆ ಅಮ್ಮ ತುಂಬಾ ಪ್ರಯತ್ನ ಪಡುತ್ತಿದ್ದಳು.
ನಾನು ಹೈಸ್ಕೂಲಿಗೆ ಬರುವವರೆಗೂ ನಮ್ಮ ಮನೆಯಲ್ಲಿ ಕಟ್ಟಿಗೆ ಒಲೆಯ ಅಡುಗೆಯೇ. ಉರಿಯದೇ ಸತಾಯಿಸುವ ಕಟ್ಟಿಗೆ, ಸೀಮೆ ಎಣ್ಣೆ ದೀಪಕ್ಕೆ ತಿಂಗಳ ಕೊನೆಗೆ ಉಳಿದುಕೊಂಡ ಕೊಂಚವೇ ಸೀಮೆಎಣ್ಣೆ, ಅಡುಗೆಮನೆಯ ಭಯವೆನಿಸುತ್ತಿದ್ದ ಕತ್ತಲು, ಕಡೆದೂ ಕಡೆದೂ ತಾನೇ ನುಣ್ಣಗಾದ ಅವಸ್ಥೆಯಲ್ಲಿ ಅರೆಯಬೇಕಾದ ತೆಂಗಿನಕಾಯಿಯನ್ನೋ, ಅಕ್ಕಿಯನ್ನೋ ನುಣ್ಣಗೆ ಮಾಡಬೇಕಾದರೆ ಬಹುಸಮಯ ತೆಗೆದುಕೊಳ್ಳುತ್ತಿದ್ದ ಅರೆಯುವ ಕಲ್ಲು, ಮಣ್ಣಿನ ನೆಲ, ಸೋಗೆಯ ಮಾಡು.. (ಇದರ ಕುರಿತು ವಿವರವಾಗಿ ಇನ್ನೊಮ್ಮೆ ಹೇಳುವೆ) ಇಷ್ಟೆಲ್ಲದರ ನಡುವೆಯೂ ಅಮ್ಮ ನಗುನಗುತ್ತಾ ಇರುತ್ತಿದ್ದಳು. ಮಲ್ಲಿಗೆ ಲೀಲಕ್ಕ ಎಂದರೆ ಮುಖದ ತುಂಬ ಅರಳು ನಗೆಯನ್ನೇ ಹೊತ್ತು ಬಾಳಿದವಳು.
ಇದನ್ನೂ ಓದಿ: Letters to Daughter: ಮಗಳೇ, ಕಾಣುವುದಾದರೆ ದೊಡ್ಡ ಕನಸುಗಳನ್ನೇ ಕಾಣಬೇಕು!
ನಮ್ಮ ಪ್ರಶ್ನೆಗೆ ಅಮ್ಮನ ಉತ್ತರ ‘ತೆಳ್ಳವು ಮಾಡುವ ಅಕ್ಕಾ?’ ಒಕ್ಕೊರಲಿನಿಂದ ನಮ್ಮ ಮೂವರ ಉತ್ತರ ‘ತೆಳ್ಳವು ಬೇಡಾ..’ ಈಗ ನಿಮ್ಮದೂ ಅದೇ ಪ್ರತಿಕ್ರಿಯೆ ನನಗೆ! ಇತಿಹಾಸ ಮರುಕಳಿಸಲೇ ಬೇಕಲ್ಲ? ತೆಳ್ಳವು ಸುಲಭ, ಆರೋಗ್ಯಕ್ಕೆ ಹಾಳಲ್ಲ, ಬೆಲ್ಲದ ಪಾಕ, ತುಪ್ಪ ಜತೆಗಿದ್ದರೆ ಅಮೃತ. ಬಿಡುವಿದ್ದರೆ ಕಾಯಿಹಾಲು ಅಥವಾ ಬೆಲ್ಲ ತೆಂಗಿನಕಾಯಿಸುಳಿ.. ಮಾವಿನ ಕಾಯಿ ಇದ್ದಾಗ ಚಟ್ನಿ! ಆಹಾ ಅದಕ್ಕಿಂತ ರುಚಿಕರ ತಿಂಡಿ ಲೋಕದಲ್ಲಿ ಯಾವುದಿರುವುದಕ್ಕೆ ಸಾಧ್ಯ? ಹೀಗೆಲ್ಲ ಅಂದುಕೊಳ್ಳುವುದು ಈಗ, ನಿಮ್ಮೆದುರು ಭಾಷಣ ಬಿಗಿಯುವಾಗ! ಆದರೆ ಅದು ಸತ್ಯ, ಯಾಕೆಂದರೆ ಅಮ್ಮ ಸುಳ್ಳು ಹೇಳುವುದಿಲ್ಲ. ಮಣಿಕಾಂತ್ ಮಾಮ ಮಾತ್ರ ಅಮ್ಮ ಹೇಳಿದ ಎಂಟು ಸುಳ್ಳುಗಳನ್ನು ಬರೆದೇ ಬರೆದರು, ಅದು ಬೇರೆ ಸಂಗತಿ!
ಮಗಳೇ, ನಮಗೆ ತೆಳ್ಳವಿಗೆ ಹೆಚ್ಚಾಗಿ ಇರುತ್ತಿದ್ದುದು ಹಿಂದಿನ ದಿನ ಮಿಕ್ಕಿದ ಕೊದಿಲು, (ನನಗೆ ಸಕ್ಕರೆ,) ಮಂಗಳೆದನ ಹಾಲು ಕೊಡುತ್ತಿದ್ದ ಸಮಯದಲ್ಲಿ ಗಟ್ಟಿಮೊಸರು. ಅಂದರೂ ತೆಳ್ಳವಿನ ಬಗ್ಗೆ ಒಂದು ಬಗೆಯ ಅನಾದರ, ಯಾಕೆಂದರೆ ವಾರದಲ್ಲಿ ಮೂರು ದಿನ ತೆಳ್ಳವೇ! ಉದ್ದಿನ ದೋಸೆಯೆಂದರೆ ಅಪರೂಪ.
ಅನ್ನದ ಒಗ್ಗರಣೆ ಮಾಡಿದರೆ ನಮಗೆ ಅತ್ಯಾಪ್ತ. ಆದರೆ ಅಮ್ಮ ಮಾಡುತ್ತಿರಲಿಲ್ಲ. ಯಾಕೆ ಗೊತ್ತಾ, ಬೆಳ್ಳಂಬೆಳಗ್ಗೆ ಅನ್ನ ಉಣ್ಣುವುದಕ್ಕೆ ನನ್ನ ಅಜ್ಜ ಮತ್ತು ಅಪ್ಪನಿಗೆ ಹಿತವಾಗುತ್ತಿರಲಿಲ್ಲ. ಈಗ ನನಗೇ ದಿನಬೆಳಗಾದರೆ ನೀವೆನ್ನುವ ‘ರೈಸ್ ಐಟಮ್’ ಸಾಕಾಗಿ ಹೋಗಿದೆ. ಚಪಾತಿ ಮಾಡೋಣವೆಂದರೆ ಬೆಳಗ್ಗಿನ ಧಾವಂತದಲ್ಲಿ ಆಗುವುದೇ ಇಲ್ಲ. ಏನು ಮಾಡೋಣ? ಆಫೀಸಿಗೆ ಹೋಗಲೇ ಬೇಕಾದ ಅಮ್ಮಂದಿರ ಹಣೆಬರಹ.. ಮಕ್ಕಳಿಗಿಷ್ಟವಾದದ್ದನ್ನು ಸಮಾಧಾನದಿಂದ ಮಾಡಿಕೊಡುವ ಆಸೆ ಅದಮ್ಯ. ಆದರೆ ಸಮಯ ಸಮ್ಮತಿಸುವುದಿಲ್ಲ.
ಇದನ್ನೂ ಓದಿ: Letters to Daughter: ಮಗಳೇ, ಬದುಕಿನಲ್ಲಿ ಅತ್ಯಂತ ಅಮೂಲ್ಯವಾದ ಅನುಭವವೆಂದರೆ ಮುದ್ದು ಕಂದಮ್ಮಗಳ ಅಪ್ಪುಗೆಯಂತೆ!
ಮಗಳೇ, ನನಗೆ ಅರ್ಥವಾಗುತ್ತದೆ, ‘ದಿನಾ ದೋಸೆ ತೆಗೆದುಕೊಂಡು ಹೋದರೆ ಶಾಲೆಯಲ್ಲಿ ಎಲ್ಲರೂ ನಗುತ್ತಾರೆ, ಇವತ್ಯಾವ ದೋಸೆ? ಅಂತಲೇ ಕೇಳುತ್ತಾರೆ..ನನ್ನ ಗೆಳತಿಯ ಅಮ್ಮ ದಿನಕ್ಕೊಂದು ಬಗೆ ತಿಂಡಿ ಕೊಡುತ್ತಾರೆ ಗೊತ್ತಾ? ಒಂದಿನ ಬಿಸಿಬೇಳೆಬಾತ್, ಪುಲಾವ್, ಚಿತ್ರಾನ್ನ, ಪುಳಿಯೋಗರೆ..’ ನೀನು ಮುನಿಸಿನಿಂದ ಮಾತನಾಡುತ್ತಿದ್ದರೆ ನಾನು ನಗುತ್ತೇನೆ, ಯಾಕೆ ಗೊತ್ತಾ? ನಾವು ಉದ್ದಿನದೋಸೆ, ಮೊಸರುದೋಸೆ, ಉಪ್ಪುಮೆಣಸು ದೋಸೆ, ಸೌತೆಕಾಯಿ ದೋಸೆ..ಮಾಡಿದ ಹಾಗೆ ನಮ್ಮ ತುಮಕೂರಿನವರು ಅನ್ನದಲ್ಲಿಯೇ ಹಲವು ವಿಧಗಳನ್ನು ಮಾಡುತ್ತಾರೆ, ಅಷ್ಟೇ! ನಮ್ಮೂರಿನ ತಿಂಡಿಯನ್ನು ನಾವೇ ಮರೆತರೆ ಹೇಗೆ?
ಶ್ರಾವ್ಯನ ಅಮ್ಮ ಅಕ್ಕಿರೊಟ್ಟಿ, ರವೆರೊಟ್ಟಿ ಮಾಡಿಕೊಡುತ್ತಾರೆ.. ಅಂತ ನೀನೆಂದಾಗ ನಾನೂ ಒಂದರೆಕ್ಷಣ ನನ್ನ ಬಾಲ್ಯಕ್ಕೆ ಹೋಗಿ ಬಂದೆ. ಅವರಂತೆ ರೊಟ್ಟಿ ಮಾಡಲು ನನಗೆ ಬರದು. ಅಜ್ಜಿ ಇದ್ದಾಗ ಅಪರೂಪಕ್ಕೆ ರೊಟ್ಟಿ ಮಾಡಹೊರಟರೆ ಅಂದು ಇಡಿಯ ದಿನ ಅಸಹನೆ ಕಟ್ಟಿಟ್ಟ ಬುತ್ತಿ! ನಾನೇನೇ ಮಾಡಿದರೂ ರೊಟ್ಟಿ ಗಟ್ಟಿಯೇ ಆಗುತ್ತಿತ್ತಲ್ಲ, ಅಜ್ಜಿಗೋ ಹಲ್ಲುನೋವು, ಜಗಿಯಲಾಗದು. ‘ಹಾಳೆಕಡೆಯಂಥ ರೊಟ್ಟಿ ಮಾಡುತ್ತಾಳಪ್ಪ’ ಅಂತ ಅಜ್ಜಿ ಗೊಣಗಾಡಿದರೆ ಅಜ್ಜ ನನ್ನ ಪರವಾಗಿ ನಿಲ್ಲುತ್ತಿದ್ದರು! ರೊಟ್ಟಿ ಮತ್ತೆಂತ ತೆಳ್ಳವಿನ ಹಾಗಿರುವುದು ಸಾಧ್ಯವಾ?- ಹುಸಿನಗೆ ಬೀರುತ್ತಿದ್ದರು. ಆ ನಗೆಯ ಹಿಂದೆ ಅಜ್ಜನ ಹಲ್ಲುನೋವು ಅಣಕಿಸುತ್ತಿತ್ತು.
ಬಾಲ್ಯ ಎಂದೆನಲ್ಲ? ನಮ್ಮ ಮನೆಯಲ್ಲಿ ಚಪಾತಿ ಎಂಬುದು ಬಲುವಿರಳ ಆಗ. ಅದನ್ನು ಮಾಡಬೇಕೆಂದರೆ ಬಲು ಕಷ್ಟ. ಚಪಾತಿ ಲಟ್ಟಿಸುವ ಮಣೆಯಿಲ್ಲ. ಮರದ ಮಣೆಯನ್ನು ತೊಳೆದು ಶುಚಿಗೊಳಿಸಿ ಚಪಾತಿ ಮಾಡುವುದೆಂದರೆ ಹರಸಾಹಸ! ನನಗಿಂತ ಮೂರು ವರ್ಷ ಚಿಕ್ಕವಳು ಪ್ರತಿಮಾ ಅಂತ ಶಾಲೆಗೆ ಬರುತ್ತದ್ದಳು. ಅವಳಿಗೆ ಪ್ರತಿದಿನವೂ ಬುತ್ತಿಗೆ ಚಪಾತಿ ಸಕ್ಕರೆ ರೋಲ್. ಅವಳು ತಿನ್ನುವುದನ್ನು ನೋಡುವಾಗ ನನಗೆ ಆಸೆಯಾಗುತ್ತಿದ್ದ ದಿನಗಳಿದ್ದವು.
ಇದನ್ನೂ ಓದಿ: Letters to Daughter: ದೇವರು ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೋ ಅವರಿಗಷ್ಟೇ ಮಗಳನ್ನು ಕರುಣಿಸುತ್ತಾನಂತೆ
ನಮ್ಮನೆಯಲ್ಲೂ ಅಮ್ಮ ದಿನವೂ ಚಪಾತಿ ಮಾಡುವಂತಿದ್ದರೆ! ಮಗಳೇ, ಆ ದಿನವೂ ಬಂತು. ಯಾಕೆ ಗೊತ್ತಾ? ಅಮ್ಮನಿಗೆ ಸಣ್ಣಗೆ ಶುಗರ್ ಶುರುವಾಗಿತ್ತು. ಹಂಬಲಿಸಿದ್ದೆಲ್ಲವೂ ಸಿಗುತ್ತದೆ ಮಗಳೇ ಬದುಕಿನಲ್ಲಿ, ಕೊಂಚ ತಡವಾಗಿ ಅಷ್ಟೇ. ಆದರೆ ಹಂಬಲಿಸಿದಾಗಲೇ ಸಿಕ್ಕಿದಾಗ ಆಗುವ ಸಂತೋಷ ತಡವಾಗಿ ಸಿಕ್ಕಿದಾಗ ಆದೀತಾ.. ನಾವು ಪ್ರಯತ್ನಿಸಬೇಕು ಅಷ್ಟೇ.
ಅದಿರಲಿ ಮಗಳೇ, ಆಗೀಗ ನಾನು ಬೈಯುವುದಿದೆ ನಿಮಗೆ.. ‘ಬಿಸಿಬಿಸಿಯಾಗಿ ಮಾಡಿಕೊಡುವಾಗ ಕಿರಿಕಿರಿ ಮಾಡಿಕೊಳ್ಳದೇ ತಿನ್ನಬೇಕು.’ ಅಂತ. ನನ್ನೊಳಗಿನ ಆತಂಕ ಕೆಲವೊಮ್ಮೆ ನನಗೇ ಅರ್ಥವಾಗದು ಕಂದಾ.. ನಿಮ್ಮ ಮುಂದಿನ ವಿದ್ಯಾಭ್ಯಾಸ, ಬಳಿಕ ಉದ್ಯೋಗ ಅಂತ ನೀವು ಬೇರೆ ಊರಿಗೆ ಹೋಗುವ ಸಂದರ್ಭ ಬಂದಾಗ.. ಹೇಗಿದ್ದೀತೋ ಅನಿಸಿಬಿಡುತ್ತದೆ. ಆದರೆ ಅದೂ ಬದುಕಿನ ಅನುಭವದ ಭಾಗವೇ. ನಿಜಾರ್ಥದಲ್ಲಿ ಶಿಕ್ಷಣವನ್ನು ಪಡೆಯಬೇಕಾದರೆ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಗೆ ಹೋಗಲೇಬೇಕಂತೆ.
ಸರಿ, ನಾಳೆಗೆ ತೆಳ್ಳವು ಕಾಯಿಹಾಲು ಮಾಡೋಣವಾ?
ಇಂತೀ ಅಮ್ಮ
