
ನವದೆಹಲಿ: ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ 3,000 ಮತಗಳನ್ನು ಖರೀದಿಸಿ ಗೆದ್ದಿದ್ದಾರೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಸಿರೋಯಾ, ಇಬ್ರಾಹಿಂ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಬ್ರಾಹಿಂ ಅವರು ದಶಕಗಳಿಂದ ಸಿದ್ದರಾಮಯ್ಯ ಅವರ ಆಪ್ತ ಮತ್ತು ಸಲಹೆಗಾರರಾಗಿದ್ದರು. ಇಬ್ರಾಹಿಂ ಹೇಳಿಕೆಯ ಪ್ರಕಾರ, ಅವರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ.ಬಿ. ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯನವರಿಗೆ 3,000 ಮತಗಳನ್ನು ಖರೀದಿಸಲು ಸಹಾಯ ಮಾಡಿದ್ದರು, ಇದರಿಂದಾಗಿ ಅವರು ಬಾದಾಮಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು.
ಕಡಿಮೆ ಅಂತರದ ಗೆಲುವು ಮತ್ತು ಇಬ್ರಾಹಿಂ ಅವರ ಪಾತ್ರ
2018ರ ಬಾದಾಮಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿನ ಅಂತರ ಕೇವಲ 1,696 ಮತಗಳು. ಇದು ಅಂದಿನ ಮುಖ್ಯಮಂತ್ರಿಯೊಬ್ಬರಿಗೆ ಅತ್ಯಂತ ಕಡಿಮೆ ಅಂತರವಾಗಿದೆ. ಆ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಮತಗಳ ಸಂಖ್ಯೆ 2,007 ಆಗಿತ್ತು, ಇದು ಗೆಲುವಿನ ಅಂತರಕ್ಕಿಂತ ಹೆಚ್ಚು. 2018ರಲ್ಲಿ ಇಬ್ರಾಹಿಂ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು ಮತ್ತು ಸಿದ್ದರಾಮಯ್ಯ ಅವರ ಚುನಾವಣೆಯ ಉಸ್ತುವಾರಿ ವಹಿಸಿದ್ದರು ಎಂದು ಸಿರೋಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮತಗಳನ್ನು ಹೇಗೆ ಮತ್ತು ಯಾರಿಂದ ಖರೀದಿಸಲಾಯಿತು ಎಂಬುದನ್ನು ಇಬ್ರಾಹಿಂ ಬಹಿರಂಗಪಡಿಸಬೇಕು. ಅಲ್ಲದೆ, ಮತಗಳ ಖರೀದಿಗೆ ಸಿದ್ದರಾಮಯ್ಯನವರೇ ಹಣ ನೀಡಿದ್ದು, ಹಣ ಪಾವತಿಗೆ ಆರು ತಿಂಗಳು ತೆಗೆದುಕೊಂಡಿದ್ದರು ಎಂದು ಇಬ್ರಾಹಿಂ ಹೇಳಿದ್ದಾರೆ. ಶಾಸಕ ಮತ್ತು ಮಾಜಿ ಕೇಂದ್ರ ಸಚಿವರೊಬ್ಬರು ಮಾಡಿರುವ ಈ ಗಂಭೀರ ಆರೋಪದ ಬಗ್ಗೆ ಚುನಾವಣಾ ಆಯೋಗವು ತನಿಖೆ ನಡೆಸಬೇಕು ಎಂದು ಸಿರೋಯಾ ಒತ್ತಾಯಿಸಿದ್ದಾರೆ.
ಇತರ ನಾಯಕರಿಗೂ ಅನುಮಾನ
2018ರ ಬಾದಾಮಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಅವರು ಕೂಡ 3,000 ಮತಗಳ ಖರೀದಿಯ ಬಗ್ಗೆ ಮಾಹಿತಿ ಹೊಂದಿರಬಹುದು ಎಂದು ಸಿರೋಯಾ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಚುನಾವಣೆಯಲ್ಲಿ ಶ್ರೀರಾಮುಲು ಸೋತಿದ್ದರು. ಒಂದು ವೇಳೆ ಈ ಮತ ಖರೀದಿ ನಡೆಯದೇ ಇದ್ದಿದ್ದರೆ, ಅವರು ಎರಡೂ ಕ್ಷೇತ್ರಗಳಲ್ಲಿ (ಮೊಲಕಾಲ್ಮೂರು ಮತ್ತು ಬಾದಾಮಿ) ಗೆಲ್ಲುತ್ತಿದ್ದರು ಎಂದು ಸಿರೋಯಾ ಹೇಳಿದ್ದಾರೆ.
2006ರ ಚಾಮುಂಡೇಶ್ವರಿ ಉಪಚುನಾವಣೆಯ ಬಗ್ಗೆಯೂ ಪ್ರಶ್ನೆ
ಸಿ.ಎಂ. ಇಬ್ರಾಹಿಂ ಅವರು 2018ರ ಬಾದಾಮಿ ಚುನಾವಣೆಯ ಬಗ್ಗೆ ಮಾತ್ರವಲ್ಲದೆ, 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಗ್ಗೆಯೂ ಮಾತನಾಡಬೇಕು ಎಂದು ಸಿರೋಯಾ ಆಗ್ರಹಿಸಿದ್ದಾರೆ. ಆ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರ ಗೆಲುವಿನ ಅಂತರ ಕೇವಲ 257 ಮತಗಳು. ಆ ಸಮಯದಲ್ಲಿಯೂ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತರಾಗಿದ್ದರು ಮತ್ತು ಅವರ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು. ಕಾಂಗ್ರೆಸ್ ಸೇರಿದ ನಂತರ ಸಿದ್ದರಾಮಯ್ಯ ಅವರ ಮೊದಲ ಚುನಾವಣೆ ಇದಾಗಿತ್ತು. ಅಂದು ಕೂಡ ಮತಗಳನ್ನು ಖರೀದಿಸಲಾಗಿತ್ತೇ? ಆಗ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅವರ ಗೆಲುವನ್ನು ನಿರ್ವಹಿಸಲಾಯಿತೇ? ಆ ಚುನಾವಣಾ ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಯಾರು? ಎಂಬುದರ ಬಗ್ಗೆ ಇಬ್ರಾಹಿಂ ಅವರು ಸ್ಪಷ್ಟಪಡಿಸಬೇಕು ಎಂದು ಸಿರೋಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿಯಿಂದ ಸರ್ಕಾರಕ್ಕೆ ತಲೆನೋವು
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಬಗ್ಗೆ ಬೇಕಾಬಿಟ್ಟಿ ಆರೋಪಗಳನ್ನು ಮಾಡಿ ತಾವೇ ಹಾವಿನ ಬುಟ್ಟಿಯನ್ನು ತೆರೆದಿದ್ದಾರೆ ಎಂದು ಸಿರೋಯಾ ಟೀಕಿಸಿದ್ದಾರೆ. ಇದರಿಂದ ಅವರ ಪಕ್ಷದ ಸದಸ್ಯರು ಮತ್ತು ಮುಖ್ಯಮಂತ್ರಿಗಳೇ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಸರ್ಕಾರವನ್ನೇ ಅಸ್ಥಿರಗೊಳಿಸಿದ ರಾಹುಲ್ ಗಾಂಧಿಯವರಿಗೆ ಧನ್ಯವಾದ ಹೇಳಬೇಕು. ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಅಭ್ಯಾಸವುಳ್ಳ ಅವರು ಈ ಬಾರಿ ದೊಡ್ಡ ಕಲ್ಲನ್ನೇ ಎಳೆದುಕೊಂಡಿದ್ದಾರೆ ಎಂದು ಸಿರೋಯಾ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿಯವರ ಮಾತನ್ನು ವಿರೋಧಿಸಿದ್ದರಿಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಲಾಗಿದ್ದು, ಇದು ಕರ್ನಾಟಕದಲ್ಲಿ ಕಾಂಗ್ರೆಸ್ ಪತನದ ಆರಂಭವಾಗಿದೆ ಎಂದು ಸಿರೋಯಾ ಹೇಳಿದ್ದಾರೆ.
