
ದೇವರಿಗೆ ಹೇಗೆ ಮೋಸ ಮಾಡಲಾಗುತ್ತ? ಎಂದು ಹುಬ್ಬೇರಿಸಬೇಡಿ. ದೇವರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ. ದೇವರ ಹೆಸರಲ್ಲಿ ಮೋಸ ವಂಚನೆ ಮಾಡುವವರಿರಬಹುದೆಂದು ನೀವು ವಾದಿಸಬಹುದು. ದೇವರೆ ಇಲ್ಲವೆನ್ನಲೂ ಬಹುದು. ಆದರೆ ಆ ದೇವರಿಗೂ ಮೋಸ ಮಾಡುವಂತ ಚಾಣಾಕ್ಷರು ನಮ್ಮಲ್ಲಿ ಇದ್ದಾರೆ.ಈ ಕಥೆಯನ್ನು ಓದಿದ ನಂತರ ಆ ಚರ್ಚೆಗೆ ಬರೋಣ:
ಒಬ್ಬ ಶ್ರೀಮಂತ ವ್ಯಕ್ತಿ ಒಂದು ಇಳಿಸಂಜೆ ಬೇಸರವಾಯಿತೆಂದು ಸಮುದ್ರತೀರಕ್ಕೆ ಹೋದ.ಒಂದು ದೋಣಿ ಏರಿ ಎಂಟು ಮೈಲಿ ಸಾಗಿದರೆ ಅಲ್ಲೊಂದು ಸುಂದರ ದ್ವೀಪವಿತ್ತು.ಅಲ್ಲಿಗೆ ಬಂದ ಶ್ರೀಮಂತ ವ್ಯಕ್ತಿ ಆ ಸೊಗಸಾದ ವಾತಾವರಣಕ್ಕೆ ಮರುಳಾದ.
ಇದನ್ನೂ ಓದಿ: Letters to Daughter: ಮಗಳೇ, ಪೂಜಿಸಲ್ಪಡುವ ಮೂರ್ತಿಯಾಗಬೇಕಿದ್ದರೆ ಕಲ್ಲು ಅದೆಷ್ಟು ಪೆಟ್ಟು ತಿನ್ನುತ್ತದಲ್ಲ!
ಅಲೆಗಳ ಏರಿಳಿತ, ತೊರೆಗಳ ಸದ್ದು,ಆ ಆಹ್ಲಾದಕರ ಗಾಳಿ, ಸುರ್ಯಾಸ್ತ ವೀಕ್ಷಣೆ ಎಲ್ಲವೂ ಶ್ರೀಮಂತ ವ್ಯಕ್ತಿಯ ಬೇಸರವನ್ನು ತೊಡೆದುಹಾಕಿ ಮನಸ್ಸನ್ನು ಉಲ್ಲಸಿತಗೊಳಿಸಿದವು.ಆತನ ಮನಸ್ಸು ಪ್ರಫುಲ್ಲವಾಯಿತು.ಆಗಲೇ ಅವನಿಗೆ ಒಂದು ಉಪಾಯ ಹೊಳೆಯಿತು.
ಆಗಾಗ್ಗೆ ಇಲ್ಲಿ ಬಂದು ವಿಶ್ರಾಂತಿ ಪಡೆಯಬಹುದೆಂದು, ಆ ದ್ವೀಪದ ಪಕ್ಕದಲ್ಲಿದ್ದ ಒಂದು ಜಾಗವನ್ನು ಖರೀದಿಸಿ ಅಲ್ಲಿ ಸುಂದರವಾದ ಮನೆಯೊಂದನ್ನು ಕಟ್ಟಿಸಲು ಶುರುಮಾಡಿದ.ಮನೆಯ ವಾಸ್ತುಶಿಲ್ಪ ಬಹಳವೇ ಚೆಂದವಾಗಿರುವಂತೆ ನೋಡಿಕೊಂಡ.
ಕಟ್ಟಡದ ಕಾಮಗಾರಿ ಎಲ್ಲವೂ ಮುಗಿಯಿತು.ಗೃಹಪ್ರವೇಶಕ್ಕೆ ತಾರೀಖು ನಿಗದಿಯಾಯಿತು.ಕೊನೆಯದಾಗಿ ಒಂದು ಸಲ ಮನೆಯನ್ನು ನೋಡಿ ಮೇಲುಸ್ತುವಾರಿ ಮಾಡಿ ಬರೋಣವೆಂದು ದೋಣಿ ಏರಿ ಹೊರಟ.ಇದ್ದಕ್ಕಿದ್ದಂತೆ ಚಂಡಮಾರುತ ಬೀಸಲು ಶುರುವಾಯಿತು. ದೋಣಿ ಜೋರಾಗಿ ಹೊಯ್ದಾಡಲು ಮೊದಲಾಯಿತು.
ಕೆಳಗೆ ಧುಮಕೋಣವೆಂದುಕೊಂಡರೆ ಈಜು ಬರುವುದಿಲ್ಲ.ಅದು ತನ್ನ ಕೊನೆಗಾಲವೆಂದು ತಿಳಿದುಹೋಯಿತು.ಆಗಲೇ ಆತನಿಗೆ ಹೊಳೆದದ್ದು ‘ಸಂಕಟ ಬಂದರೆ ವೆಂಕಟರಮನ’ ಎಂದು ಕೂಡಲೇ ಪ್ರಾರ್ಥಿಸಿದ “ಓ ದೇವರೆ ನನ್ನನ್ನು ದಡ ಸೇರಿಸಿದರೆ ನನ್ನ ಹೊಸ ಮನೆಯನ್ನು ಮಾರಿದ ದುಡ್ಡನ್ನೆಲ್ಲ ನಿನ್ನ ಹುಂಡಿಗೇ ಹಾಕುವೆ”. ತಕ್ಷಣವೇ ಚಂಡಮಾರುತ ಸ್ತಬ್ದವಾಯಿತು.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ವಿಶೇಷ: ಸ್ತ್ರೀಲೋಲ ಎಂದು ಕರೆಸಿಕೊಂಡ ಲೋಕೋದ್ಧಾರಕ
ಅವನು ಜಾಗೃತನಾದ.ಮನಸ್ಸಲ್ಲೆ ಅಂದುಕೊಂಡ ‘ ಸುಮ್ಮನೆ ದೇವರನ್ನು ಪ್ರಾರ್ಥಿಸದೆ ಅಷ್ಟೊಂದು ದುಡ್ಡು ಕೊಡುವೆನೆಂದು, ಚಂಡಮಾರುತ ತಾನಾಗೇ ನಿಂತುಬಿಟ್ಟಿತು’. ಆ ಕೂಡಲೇ ಮತ್ತೆ ದೋಣಿ ಮೊದಲಿಗಿಂತ ಜೋರಾಗಿ ಹೊಯ್ದಾಡಲು ಶುರುವಿಟ್ಟಿತು. ಶ್ರೀಮಂತ ವ್ಯಕ್ತಿಗೆ ಪರಿಸ್ಥಿತಿಯ ಅರಿವಾಗಿ ‘ ಓ ದೇವರೆ ತಮಾಷೆ ಮಾಡಿದೆ’ ದಯವಿಟ್ಟು ನನ್ನನ್ನು ಉಳಿಸು ನನ್ನ ಮಾತನ್ನು ನಾನು ತಪ್ಪುವುದಿಲ್ಲ’ ಎಂದು ಪ್ರಾರ್ಥಿಸಿದ.ಕೂಡಲೇ ಅವನು ದಡ ಸೇರಿದ್ದ.
ಇಷ್ಟೊಂದು ಆಸೆಪಟ್ಟು ಕಟ್ಟಿಸಿದ ಸುಂದರವಾದ ಮನೆಯನ್ನು ಮಾರಬೇಕಲ್ಲ ಎಂದು ವ್ಯಥೆಪಟ್ಟ.ಮಾರನೆ ದಿನ ಗೃಹಪ್ರವೇಷ.ಊರಲ್ಲಿನ ಎಲ್ಲ ಶ್ರೀಮಂತ ವರ್ಗದವರು ಬಂದಿದ್ದರು.ನಿಸರ್ಗದ ಮಡಿಲಲ್ಲಿ ಭವ್ಯವಾದ ಮನೆಯನ್ನು ನೋಡಿ ದಿಂಙ್ಮೂಢರಾದರು.
ಎಷ್ಟೇ ಖರ್ಚಾಗಲಿ ಈ ತರಹದ್ದೊಂದು ಮನೆ ನಮಗೂ ಒಂದಿದ್ದರೆ ಚೆನ್ನ ಎಂದುಕೊಂಡರು.ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಶ್ರೀಮಂತ ವ್ಯಕ್ತಿ ಹೇಳಿದ ‘ ಈ ಮನೆಯನ್ನು ನಾನು ಮಾರುತ್ತಿದ್ದೇನೆ ‘ಒಂದುನೂರು ರೂಪಾಯಿಗೆ’ ಎಂದು ಘೋಷಿಸಿಬಿಟ್ಟ.ನೆರೆದಿದ್ದ ಜನರೆಲ್ಲ ಬೆರಗಾದರು.ಇಷ್ಟು ಕಷ್ಟಪಟ್ಟು ಖರ್ಚುಮಾಡಿ ಕಟ್ಟಿಸಿದ ಮನೆಯನ್ನು ಕೇವಲ ನೂರುರೂಪಾಯಿಗೆ ಮಾರುತ್ತಾನಲ್ಲ ಈ ಮೂರ್ಖ, ಎಂದುಕೊಂಡರು.
ಆದರೆ ಶ್ರೀಮಂತ ವ್ಯಕ್ತಿ ಇನ್ನೊಂದು ಮಾತು ಜೋಡಿಸಿದ.’ಮನೆಗೆ ನೂರು ರೂಪಾಯಿ ಮಾತ್ರ ಆದರೆ ಈ ಮನೆಯನ್ನು ಕಟ್ಟುವಾಗಿನಿಂದ ಇದರ ಕಾವಲಿಗಾಗಿ ವಿದೇಶದಿಂದ ವಿಶೇಷವಾದ ತಳಿಯ ನಾಯಿಮರಿಯೊಂದನ್ನು ತಂದು ಸಾಕಿದ್ದೇನೆ,ಈ ಮನೆಯ ಜೊತೆಗೆ ನಾಯಿಮರಿಯನ್ನೂ ಖರೀದಿಸಿದರೆ ಮಾತ್ರ ಮನೆಯ ವ್ಯವಹಾರ ಸಾಧ್ಯ ಇಲ್ಲದಿದ್ದರೆ ಇಲ್ಲ,ನಾಯಿಮರಿಯ ಬೆಲೆ ಒಂದುಕೋಟಿ ರೂಪಾಯಿ’ ಎಂದ.
ಸೇರಿದ ಜನರೆಲ್ಲ ಈ ಶ್ರೀಮಂತನೊಬ್ಬ ಹುಚ್ಚನೇ ಇರಬೇಕು. ಮನೆಗೆ ಕೇವಲ ನೂರುರೂಪಾಯಿಯಂತೆ, ನಾಯಿಮರಿಗೆ ಕೋಟಿರೂಪಾಯಂತೆ’ ಎಂದು ಗೊಣಗತೊಡಗಿದರು.ಆದರೆ ಕೆಲವರು ಮಾತ್ರ ‘ಹಣ ನಾಯಿಮರಿಗೆ ಕೊಟ್ಟರೇನು ಅಥವಾ ಮನೆಗೆ ಕೊಟ್ಟರೇನು ? ಇಂಥ ಅವಕಾಶ ಮತ್ತೆ ಸಿಗಲಾರದು ಇವತ್ತೇ ಖರೀದಿಸಿಬಿಡೋಣ ಎಂದು, ಕೂಡಲೇ ವ್ಯವಹಾರ ಮುಗಿಸಿದರು.
ಶ್ರೀಮಂತ ವ್ಯಕ್ತಿ ಮಾತ್ರ ತನ್ನನ್ನು ಮುಳುಗುವುದ ಕಾಪಾಡಿ ರಕ್ಷಿಸಿದ ದೇವರನ್ನು ಪ್ರಾರ್ಥಿಸಿ ಮತ್ತೂ ತಾನು ದೇವರಿಗೆ ಕೊಟ್ಟ ಮಾತನ್ನು ನೆರವೇರಿಸಲು ದೇವಸ್ತಾನಕ್ಕೆ ಹೋಗಿ ” ಓ ದೇವರೆ ನೀನು ದಯಾಮಯಿ ನನ್ನ ಜೀವ ಉಳಿಸಿದ ಕರುಣಾಮಯಿ, ಕೊಟ್ಟ ಮಾತಿನಂತೆ ನನ್ನ ಮನೆಯನ್ನು ಮಾರಿದ ಹಣ ನೂರು ರೂಪಾಯಿಯನ್ನು ನಿನಗೆ ಅರ್ಪಿಸುತ್ತಿದ್ದೇನೆ,ಇಗೋ ಒಪ್ಪಿಸಿಕೊ” ಎಂದು ನೂರು ರೂಪಾಯಿಯನ್ನು ಹುಂಡಿಗೆ ಹಾಕಿದ.
ಈಗ ಹೇಳಿ ದೇವರಿಗೆ ಮೋಸ ಮಾಡುವವರು ನಮ್ಮ ನಡುವೆ ಇದ್ದಾರಾ ? ಇಲ್ಲವ ?
