Dhruva Pole Star: ಉತ್ಥಾನಪಾದ ಎಂಬ ರಾಜನಿಗೆ ಸುರುಚಿ ಮತ್ತು ಸುನೀತಿ ಎಂಬ ಇಬ್ಬರು ಪತ್ನಿಯರು. ಸುರುಚಿಯ ಮಗ ‘ಉತ್ತಮ’ನಾದರೆ, ಸುನೀತಿಯ ಮಗ ‘ಧ್ರುವ’. ಉತ್ಥಾನಪಾದ ರಾಜನು ಸುನೀತಿಗಿಂತ ಸುರುಚಿಯ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿದ್ದನು. ಸುರುಚಿಯು ನೋಡಲು ಸುಂದರವಾಗಿದ್ದರಿಂದ ಅವಳು ಪಟ್ಟದರಾಣಿಯಾಗಿ ರಾಜನ ಜೊತೆ ಅರಮನೆಯಲ್ಲಿ ವಾಸಿಸುತ್ತಿದ್ದಳು. ಸುನೀತಿಯನ್ನು ರಾಜನು ಅನಾದರದಿಂದ ನೋಡುತ್ತಿದ್ದನು. ಒಂದು ದಿನ ದರ್ಬಾರಿನಲ್ಲಿ ರಾಜ ಉತ್ಥಾನಪಾದನ ತೊಡೆಯ ಮೇಲೆ ಸುರುಚಿಯ ಮಗ ಉತ್ತಮನು ಕುಳಿತಿದ್ದನು. ಅದೇ ವೇಳೆಗೆ ಧ್ರುವನು ದರ್ಬಾರಿಗೆ ಬಂದನು. ರಾಜನ ತೊಡೆಯ ಮೇಲೆ ಕುಳಿತುಕೊಳ್ಳಲು ಬಯಸಿದ ಧ್ರುವನನ್ನು ಸುರುಚಿಯು ತಡೆದು ನಿಲ್ಲಿಸಿ, ರಾಜನ ತೊಡೆಯ ಮೇಲೆ ಕುಳಿತುಕೊಳ್ಳಲು ಅರ್ಹತೆ ಮತ್ತು ಯೋಗ್ಯತೆ ಬೇಕು ಎಂದು ಹೇಳಿ ಅವಮಾನಿಸುತ್ತಾಳೆ. ನಿನ್ನ ತಾಯಿಗೆ ಆ ಯೋಗ್ಯತೆ ಇಲ್ಲ ಸಿಂಹಾಸನದ ಮೇಲಿನ ಆಸೆಯನ್ನು ನೀನು ಬಿಟ್ಟುಬಿಡು ಎಂದು ಧ್ರುವನನ್ನು ಮೂದಲಿಸಿ ಕಳುಹಿಸಿಬಿಡುತ್ತಾಳೆ.
ಕೇವಲ ಐದು ವರ್ಷದ ಬಾಲಕನಾಗಿದ್ದ ಧ್ರುವ ಅಳುತ್ತಾ ತನ್ನ ತಾಯಿಯ ಬಳಿ ತೆರಳುತ್ತಾನೆ.ಅಳುತ್ತಾ ಬಂದ ಕಂದನನ್ನು ನೋಡಿ ಸುನೀತಿಯು ಸಮಾಧಾನಪಡಿಸಿ, ಅರಮನೆಯ ಯೋಗ್ಯತೆ ಮತ್ತು ಅರ್ಹತೆ ಬೇಕೆಂದರೆ ನೀನು ಶ್ರೀಮನ್ನಾರಾಯಣನ ಜಪವನ್ನು ಮಾಡು, ನಾರಾಯಣನನ್ನು ಸದಾ ಧ್ಯಾನಿಸುತ್ತಾ ಭಕ್ತಿ ಭಾವದಿಂದ ನಿನ್ನನ್ನು ಸಮರ್ಪಿಸಿಕೊ ಎಂದು ಹೇಳುತ್ತಾಳೆ. ಇದರಿಂದ ನಿನಗೆ ಇಡೀ ರಾಜ್ಯದ ಗೌರವ ಮತ್ತು ಆದರಗಳು ಲಭಿಸುತ್ತವೆ ಎಂದು ಧ್ರುವನಿಗೆ(Dhruva Pole Star) ಸಮಾಧಾನ ನೀಡುತ್ತಾಳೆ.
ಕುತೂಹಲದಿಂದ ಧ್ರುವನು, ‘ಶ್ರೀಮನ್ನಾರಾಯಣ ಯಾರು? ಎಂದು ಕೇಳುತ್ತಾನೆ. ಶ್ರೀಮನ್ನಾರಾಯಣ ಎಂದರೆ ಭಗವಂತ. ಆತನನ್ನು ಪ್ರಾರ್ಥಿಸಿದರೆ ನಿನ್ನ ಅಪೇಕ್ಷೆಗಳು ಈಡೇರುತ್ತವೆ ಎಂದು ಸುನೀತಿ ವಿವರಿಸುತ್ತಾಳೆ. ಇದನ್ನು ಕೇಳಿದ ಧ್ರುವ ಆಲೋಚನೆಗೆ ಕೂರುತ್ತಾನೆ.ದಿನವೆಲ್ಲಾ ಅದೇ ಆಲೋಚನೆಯಲ್ಲಿ ಮುಳುಗಿದ್ದ ಧ್ರುವನನ್ನು ಕಂಡು ಸುನೀತಿ ಗಾಬರಿಗೊಳ್ಳುತ್ತಾಳೆ. ತಾನು ಸಮಾಧಾನಿಸಲು ಏನೋ ಹೇಳಿಬಿಟ್ಟೆ ಆದರೆ ಮಗ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನಲ್ಲ ಎಂದು ಚಿಂತಾಕ್ರಾಂತಳಾಗುತ್ತಾಳೆ. ಆದರೆ ಧ್ರುವನು ಹಿಡಿದ ಹಠವನ್ನು ಬಿಡುವುದೇ ಇಲ್ಲ, ತಾನು ಶ್ರೀಮನ್ನಾರಾಯಣನ ಧ್ಯಾನವನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿ ಕಾಡಿನತ್ತ ಹೊರಟು ಹೋಗುತ್ತಾನೆ. ದಾರಿಯಲ್ಲಿ ಋಷಿಮುನಿಗಳನ್ನು ಭೇಟಿಯಾದ ಧ್ರುವನು, ತಾನು ಶ್ರೀಮನ್ನಾರಾಯಣನ ಧ್ಯಾನ ಮತ್ತು ತಪಸ್ಸು ಮಾಡಬೇಕು, ತಪಸ್ಸು ಮಾಡುವುದು ಹೇಗೆ ಎಂದು ತಿಳಿಸಿಕೊಡಿ ಎಂದು ಕೇಳುತ್ತಾನೆ. ಐದು ವರ್ಷದ ಬಾಲಕನಾದ ಧ್ರುವನನ್ನು ಕಂಡ ಋಷಿಮುನಿಗಳು ನಿರ್ಲಕ್ಷಿಸಿ, ಅವಗಣನೆ ಮಾಡಿ ಮುಂದೆ ಸಾಗುತ್ತಾರೆ. ಇದರಿಂದ ನಿರಾಸೆಗೊಂಡ ಧ್ರುವ ಬೇಸರದಿಂದ ಮುಂದೆ ಸಾಗುತ್ತಾನೆ.
ಕಾಡಿನ ನಟ್ಟನಡುವೆ ಬೇಸರದಿಂದ ಕುಳಿತಿರುವ ಧ್ರುವನ ಬಳಿ ಮುನಿಗಳೊಬ್ಬರು ಬರುತ್ತಾರೆ ಹಾಗೂ ಬಾಲಕ ಧ್ರುವನನ್ನು(Dhruva Pole Star) ಕೇಳುತ್ತಾರೆ, ‘ಮಗೂ, ನೀನೇಕೆ ಬೇಸರದಿಂದ ಕುಳಿತುಕೊಂಡಿರುವೆ ನನ್ನಿಂದ ಏನಾದರೂ ಸಹಾಯ ಆಗಬಹುದಾದರೆ ಮಾಡುವೆನು ಏನೆಂದು ತಿಳಿಸು’. ಎನ್ನುತ್ತಾರೆ! ಆಗ ಬಾಲಕ ಧ್ರುವ ಹೇಳುತ್ತಾನೆ, ‘ಮುನಿವರ್ಯ ನಾನು ಆ ಭಗವಂತನ ಕುರಿತು ತಪಸ್ಸನ್ನು ಆಚರಿಸಬೇಕೆಂದು ಅಂದುಕೊಂಡಿದ್ದೇನೆ ಆದರೆ ತಪಸ್ಸನ್ನು ಹೇಗೆ ಆಚರಿಸಬೇಕು ಎಂದು ನನಗೆ ತಿಳಿದಿಲ್ಲ ಅದನ್ನು ನೀವು ತಿಳಿಸಿಕೊಟ್ಟರೆ ನನಗೆ ತುಂಬಾ ಉಪಕಾರವಾದೀತು’ ಎಂದು ನಮ್ರವಾಗಿ ಕೇಳಿಕೊಳ್ಳುತ್ತಾನೆ, ಧ್ರುವ(Dhruva Pole Star).
ಇದನ್ನರಿತ ಮುನಿಗಳು ‘ಮಗೂ ತಪಸ್ಸನ್ನು ಆಚರಿಸುವ ವಿಧಾನ ಮುಖ್ಯವಲ್ಲ ಭಕ್ತಿ ಮತ್ತು ಶ್ರದ್ಧೆ ಮುಖ್ಯ. ಆದರೂ ನಿನಗೆ ಒಂದು ಮಂತ್ರವನ್ನು ಹೇಳುತ್ತೇನೆ. ಅದನ್ನು ಮನಸ್ಸಿನಲ್ಲಿ ಪಠಣ ಮಾಡುತ್ತಾ ತಪಸ್ಸನ್ನು ಆಚರಿಸಿದರೆ ಭಗವಂತ ನಿಜವಾಗಿಯೂ ಮೆಚ್ಚುವನು’ ಎಂದು ಹೇಳಿ ” ಓಂ ನಮೋ ಭಗವತೇ ವಾಸುದೇವಾಯ”ಎನ್ನುವ ಮಂತ್ರವನ್ನು ಧ್ರುವನಿಗೆ ಹೇಳಿಕೊಟ್ಟು ಆ ಮುನಿಗಳು ಹೊರಡಲು ಅನುವಾಗುತ್ತಾರೆ ಆದರೆ ಆಗ ಬಾಲಕ ಧ್ರುವ ಕೇಳುತ್ತಾನೆ ‘ಮುನಿಗಳೇ ನಿಮ್ಮ ನಾಮಧೇಯವನ್ನು ತಿಳಿಸಿದರೆ ನಾನು ನಿಮ್ಮನ್ನು ಸದಾಕಾಲ ಸ್ಮರಿಸಿಕೊಳ್ಳುತ್ತೇನೆ. ಎನ್ನುತ್ತಾನೆ! ಆಗ ಮುನಿಗಳು ‘ನನ್ನನ್ನು ದೇವಲೋಕದಲ್ಲಿ ನಾರದ ಎಂದು ಕರೆಯುತ್ತಾರೆ’ ಎಂದು ಹೇಳಿ ಹೊರಟು ಹೋಗಿಬಿಡುತ್ತಾರೆ. ‘ಓಂ ನಮೋ ಭಗವತೇ ವಾಸುದೇವಾಯ’ ಎನ್ನುವ ಮಂತ್ರವನ್ನು ಮನಸ್ಸಿನಲ್ಲಿಯೇ ಜಪಿಸುತ್ತಾ ಕುಳಿತ ಧ್ರುವನು ಬೇಸಿಗೆ ಮಳೆ ಚಳಿ ಎನ್ನದೆ ತಪಸ್ಸನ್ನು ಆಚರಿಸಲು ಅಚಲವಾಗಿ ಕೂರುತ್ತಾನೆ. ಅನ್ನ ಆಹಾರ ನೀರುಗಳಿಂದ ಮುಕ್ತನಾಗಿ ಕೇವಲ ಗಾಳಿಯನ್ನು ಸೇವಿಸುತ್ತಾ ತಪಸ್ಸನ್ನು ಆಚರಿಸುತ್ತಿದ್ದ ಬಾಲಕನನ್ನು ಕಂಡ ಶ್ರೀಮನ್ನಾರಾಯಣ ಪ್ರತ್ಯಕ್ಷನಾಗಿ ಬಾಲಕನನ್ನು ಧ್ಯಾನದಿಂದ ಎಚ್ಚರಿಸುತ್ತಾನೆ.
“ಬಾಲಕ ನಿನ್ನ ಶ್ರದ್ಧೆ ಮತ್ತು ಆಳವಾದ ನಂಬಿಕೆ ಭಕ್ತಿಗಳಿಗೆ ನಾನು ಮೆಚ್ಚಿರುವೆನು ನಿನಗೆ ಯಾವ ವರ ಬೇಕು ಕೇಳು” ಎಂದು ಹೇಳಿದಾಗ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಧ್ರುವನು ಆ ದಿವ್ಯಾನಂದದಲ್ಲಿ ಯಾವ ವರವನ್ನೂ ಕೇಳಲು ಇಚ್ಛಿಸದೆ ನಿನ್ನ ದರ್ಶನ ಭಾಗ್ಯ ಒಂದು ನನ್ನಲ್ಲಿ ದಿವ್ಯಾನುಭವವನ್ನು ಮೂಡಿಸಿದೆ ಅದಕ್ಕಿಂತ ಹೆಚ್ಚಿನದೇನನ್ನೂ ನಾನು ಕೇಳಲಾರೆ ಎಂದು ಭಾವಪರವಶನಾಗುತ್ತಾನೆ. ಆಗ ಅವನ ನಿರಾಸೆಯುಕ್ತ ಮನಕ್ಕೆ ಆ ಮುಗ್ಧತನಕ್ಕೆ ಮೆಚ್ಚಿದ ಭಗವಂತ ನೀನು ನಿನ್ನ ಅರಮನೆಯಲ್ಲಿ ನಿನ್ನ ತಂದೆ- ತಾಯಿಗಳಿಂದ ಆದರ ಗೌರವಗಳನ್ನು ಅಪೇಕ್ಷಿಸಿದ್ದೆ ,ಆದರೆ ಈ ಇಡೀ ಜಗತ್ತೇ ನಿನ್ನನ್ನು ಆ ಚಂದ್ರಾರ್ಕಲವಾಗಿ ಸ್ಮರಿಸುವಂತೆ ನಾನು ನಿನಗೆ ವರವನ್ನು ಕೊಡುತ್ತೇನೆ “ನೀನು ಬದುಕಿರುವ ಕಾಲವಷ್ಟು ರಾಜನಾಗಿ ಆಡಳಿತ ನಡೆಸು ಮತ್ತು ನಿನ್ನ ಕಾಲಾನಂತರ ನೀನು ನಿನ್ನದೇ ಧ್ರುವಲೋಕ ಎಂಬಲ್ಲಿ ಸೇರಿ ಆ ದಿಗಂತದಲ್ಲಿ ಯಾವತ್ತಿಗೂ ಧ್ರುವತಾರೆಯಾಗಿ ಮಿನುಗುತ್ತಿರು ಆ ಸಪ್ತರ್ಷಿಗಳು ಕೂಡ ನಿನಗೆ ಪ್ರದಕ್ಷಿಣೆ ಹಾಕುವರು ” ಎಂದು ಆ ಭಗವಂತ ಧ್ರುವನನ್ನು ಹರಸುತ್ತಾನೆ.
ಆಗ ಧ್ರುವನು ಹರುಷದಿಂದ ಇನ್ನೊಂದು ವರವನ್ನು ಆ ಭಗವಂತನಲ್ಲಿ ಯಾಚಿಸುತ್ತಾನೆ. ಭಗವಂತ ನೀನು ಇಂದು ನನ್ನನ್ನು ಪ್ರತ್ಯಕ್ಷನಾಗಿ ಹರಸಿರುವೆ ನಿಜ ಆದರೆ ನಿನ್ನನ್ನು ಸಾಕ್ಷಾತ್ಕಾರಿಸಿಕೊಳ್ಳುವ ಮಾರ್ಗವನ್ನು ನನಗೆ ತಿಳಿಸಿಕೊಟ್ಟಿದ್ದು ನನ್ನ ತಾಯಿ ಆದ್ದರಿಂದ ನಾನು ಧ್ರುವತಾರೆಯಾಗಿ ಮಿನುಗುವಂತೆಯೇ ನನ್ನ ಪಕ್ಕದಲ್ಲಿಯೇ ನನ್ನ ಅಮ್ಮ ಸುನೀತಿಯು ಕೂಡ ಒಂದು ನಕ್ಷತ್ರವಾಗಿ ಹೊಳೆಯುವಂತೆ ಆಶೀರ್ವದಿಸು! ಎಂದು ಕೇಳುತ್ತಾನೆ. ಆಗ ಭಗವಂತನು ತಥಾಸ್ತು ಎಂದು ಹೇಳಿ ಅದೃಶ್ಯನಾಗುತ್ತಾನೆ.
ದಿಕ್ಕುಗಳನ್ನು ತೋರಿಸುವ ತಾರೆಯಾಗಿ ಉತ್ತರ ಧ್ರುವದಲ್ಲಿ ಯಾವತ್ತಿಗೂ ಸ್ಥಿರವಾಗಿ ಹೊಳೆಯುವ ಎಲ್ಲ ನಕ್ಷತ್ರಗಳ ಪೈಕಿ ಅತ್ಯಂತ ಪ್ರಕಾಶಮಾನವಾಗಿ ಮಿನುಗುವ (Pole Star) ತಾರೆಯೇ ಧ್ರುವತಾರೆ. ಬಾಲಕ ಧ್ರುವನ ಈ ಕಥೆಯು ಅವಿರತ ಯತ್ನ ಶ್ರದ್ಧೆ ಮತ್ತೂ ನಂಬಿಕೆಗಳ ಫಲಿತಾಂಶ ಯಾವಾಗಲೂ ಫಲಪ್ರದವಾಗಿಯೇ ಇರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತದೆ.
