Kashi Yatra: ಪಂಜಾಬಿನ ಕುರುಕ್ಷೇತ್ರದಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ ಅಲ್ಲಿಂದ ದೆಹಲಿಗೆ ಬಸ್ಸಿನಲ್ಲಿ ತಲುಪಿ, ಅಂತು ಕಾಶಿಗೆ ಒಬ್ಬನೇ ಇಳಿದೆ. ತರಬೇತಿಯ ಸಮಯದ ಹತ್ತು ದಿನಗಳಲ್ಲಿ ಪರಿಚಯವಾದವರೊಡನೆ ” I m planning to visit kashi , would you like to join with me” ಅಂತ ಕೇಳಿದಾಗ “ವಾರಗಟ್ಟಲೆ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿವಿ ಮೊದಲು ಅವರನ್ನು ನೋಡಬೇಕು ಊರಿನ ಕಡೆ ಡೈರೆಕ್ಟ್ ಫ್ಲೈಟ್” ಅಂತ ಒಂದಷ್ಟು ಜನ.” ಹಿಮಾಚಲ ಇಲ್ಲಿಂದ ಹತ್ತಿರ ಅಲ್ಲಿಗೆ ಹೋಗೋಣ” ಅಂತ ಒಂದಷ್ಟು ಜನ. ಕೊನೆಗೆ ಯಾರು ಬಾರದೇ ಒಬ್ಬನೇ ಕಾಶಿಗೆ ಬಂದಿಳಿದೆ.
ಉತ್ತರ ಭಾರತದ ಬಸ್ಸುಗಳಲಿ ಪ್ರಯಾಣಿಸುವಾಗ ನಮ್ಮ KSRTC ಬಸ್ಸನ್ನೂ ನೆನಪು ಹೊತ್ತು ಬರುತ್ತದೆ. ಅವು ನಮ್ಮ ಬಸ್ಸುಗಳ ಜೊತೆ ಮಾಪನ ಮಾಡಲಾರದಷ್ಟು ಕೆಳಸ್ತರದಲ್ಲಿವೆ. ಹೀಗೆ ಚಲಿಸುವ ಬಸ್ಸು,
ಅರೆಬರೆ ಹಿಂದಿ, ಬಸ್ಸಿನ ಮಧ್ಯದ ಊಟಕ್ಕೆ ಅಂತ ಸರ್ಕಲಲ್ಲಿ ನಿಲ್ಲಿಸಿದಾಗ ವಡಪಾವ್ ತಿನ್ನುತ್ತಿರುವಾಗಲೇ, ಕಾಶಿಯ ಬನಾರಸ್ ಹಿಂದೂ ಯೂನಿವರ್ಸಿಟಿ ಯಲ್ಲಿ MSc ಮಾಡಿದ ಸೀನಿಯರ ನೆನಪಾಗಿದ್ದು. ಫೋನ್ ಮಾಡಿದೆ, ನಾನು MSc ಮುಗಿಸಿ ಆಗಲೇ 4 ವರ್ಷವಾಯ್ತು ಕಣೋ. ಮದುವೆ ಆಗಿ ಒಂದು ಮಗು ಆಗಿ ಕೋಯಮತ್ತೂರ್ ನಲ್ಲಿ ಸೆಟ್ಲ್ ಆಗಿನಿ. ಆಗ ಮದುವೆಗೆ ಕರೆದರೆ ಬರಲಿಲ್ಲ, watsapp ಗೆ ಹಾಕಿರೋ ಕಾರ್ಡ್ ನೋಡದೆ ಇರೋನು ಈಗ ಫೋನ್ ಮಾಡಿಯ. ಅಂತ ಬೈದು ಕೊನೆಗೆ ಅವ್ರ ಫ್ರೆಂಡ್ನಾ ಫ್ರೆಂಡುಗೆ ಇರೋ ಪರಿಚಯದ ಒಬ್ಬರ ಫ್ರೆಂಡು ಅಂತ ಒಂದು ನಂಬರು ಕಳಿಸಿದಾಗ ನಮ್ಮ ಕಡೆ ಈಗಲೂ ಹೇಳೋ” ಬೈಯೋರ್ರಾ ಹತ್ರಾನೆ ಎರಡು ತುತ್ತು ಅನ್ನ ಹುಟ್ಟೋದು ” ಅನ್ನೋ ರೂಢಿ ಮಾತು ನೆನಪಾಗಿ ಬಿಡ್ತು.
ಕಾಶಿ ತಲುಪಿ,(Kashi Yatra) ಇಳಿಯುವಾಗಲೇ ಮಧ್ಯರಾತ್ರಿ 12:00 ಗಂಟೆ. ಆಟೋದವರ ನೂಕಾಟ ನೋಡಿದಾಗ, ಹೋಟೆಲ್ ರವರು ಪೈಪೋಟಿ ನೋಡಿದಾಗ ಮೆಜೆಸ್ಟಿಕ್ ಆಗಲಿ. ಕಾಶಿ ಆಗಲೀ ವ್ಯತ್ಯಾಸ ವಿಲ್ಲವೆನಿಸಿತ್ತು. ಬಹುಶಃ ವ್ಯಾಪಾರವೊಂದೇ ಇಡೀ ಭಾರತದಲ್ಲಿ ಬದಲಾಗದ ಅಂಶ ಮತ್ತು ಭಾರತವನ್ನು ಒಗ್ಗೂಡಿಸುವ ಏಕತೆಯ ಅಂಶ ಅನಿಸಿತ್ತು. ಅಂತು ಇಂತು ನಮ್ಮ ಮದನ್ ಮೋಹನ ಮಾಳವೀಯ ರವರ 100 ವರ್ಷಗಳ ಇತಿಹಾಸ ವಿರುವ ಬನಾರಸ್ ಹಿಂದೂ ಕಾಲೇಜಿನ ಹಾಸ್ಟೆಲಿನಲ್ಲಿ ಮುಟ್ಟಿ ಮಲಗುವ ಹೊತ್ತಿಗೆ ರಾತ್ರಿ ಎರಡು ಗಂಟೆ ದಾಟಿತ್ತು.
ಮರುದಿನ ಮುಖ ಮಾರ್ಜನ ಮಾಡಿಕೊಂಡು ಸ್ನಾನಕ್ಕೆ ಘಾಟ್ ಗೆ ಹೋಗಲು ತೀರ್ಮಾನಿಸಿ , ಉಬರ ಬುಕ್ ಮಾಡಿ ತೆರಳಿದೆ. ಕಾಶಿಯಲ್ಲಿ ಬರೋಬ್ಬರಿ 84 ಘಾಟ್ಗಳು(ಐತಿಹ್ಯವಾದ ಗಂಗಾ ಸ್ನಾನ ತೀರದ ದಡಗಳು) ಇವೆ. 84 ಘಾಟ್ಗಳಲ್ಲಿ ಮಣಿಕಾರ್ಣಿಕ ಘಾಟ್ ಬಗ್ಗೆ ಓದಿ ತಿಳಿದಿದ್ದ ಕಾರಣ ಮೊದಲು ಅಲ್ಲಿಗೆ ಹೋಗೋಣ ಅಂತ ನಿರ್ಧರಿಸಿ ಹೊರಟೆ. ಕಾಶಿಯು ಗಲ್ಲಿಗಳ ಊರು. ಒಂದು ಗಲ್ಲಿಯ ಮುಕ್ತಾಯದೊಡನೆ. ಮತ್ತೊಂದು. ಹೀಗೆ ಅಲ್ಲಿನ ಗಲ್ಲಿಗಳ ವ್ಯೂಹಕಾರ ಬೇಧಿಸುವುದೂ ಹೊಸಬರಾಗಿದ್ದಾರೆ ಕಷ್ಟ. ನಾನು ಹೊಸಬನೇ, ಆದರೆ ಈ ಕಷ್ಟ ಮಣಿಕರ್ಣಿಕಕೆ ದಾರಿಗೆ ಅಷ್ಟೇನೂ ಅನ್ವಯಿಸುವುದಿಲ್ಲ. ಕಾರಣವೆಂದರೆ ಮಣಿಕಾರ್ಣಿಕ ಹೋಗುವಾ ತಿರುವು ಹಿಡಿದು ಹೋಗುವಾಗ ನಿಮ್ಮ ಅಕ್ಕ ಪಕ್ಕ ಹರೇ ರಾಮ ಎನ್ನುತ್ತಾ ಹೆಣವನ್ನು ಮುಚ್ಚಿಟ್ಟು ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿ ನಿಮಗೆ ಕಾಣಸಿಗುತ್ತದೆ. ಅದನ್ನು ಹಿಂಬಾಲಿಸಿದರೆ ಸಾಕು, ಮಣಿಕಾರ್ಣಿಕ ಘಾಟ್ನಾ ನೀವು ತಪ್ಪಿಲ್ಲದೆ ತಲುಪಿರುತ್ತೀರಿ.
ನಮ್ಮ ಊರುಗಳಲ್ಲಿ ನಿಂತು ಯೋಚಿದಾಗ ಈ ಉಪಾಯ ಅಪಶಕುನ ಎನಿಸಬಹುದು ಆದರೆ ಇಲ್ಲಿ ಇದು ಮಾರ್ಗ ತೋರುವ ಶುಭ ಶಕುನ. ಏಕೆಂದರೆ ಕಾಶಿಯಲ್ಲಿ(Kashi Yatra) ಸಾವನ್ನು ಸಂಭ್ರಮದಿಂದ ಕಾಣಲಾಗುತ್ತದೆ. ಸಾವಿನ ಸೂತಕ ವಾಗಲಿ..ಭಯವಾಗಲಿ ಈ ಗಲ್ಲಿಯಲ್ಲಿರುವ ಬಿಡ ಅಂಗಡಿಗಳಿಗೆ ಇಲ್ಲ…ಹರಿಯುವ ಗಂಗೆಗಂತೂ ಮೊದಲೇ ಇಲ್ಲ. ಹಾಗಾಗಿ ನಮ್ಮಂತ ಯಾತ್ರಿಕರಿಗೂ ಮೊದಲು ದಿಗಿಲಾದರೂ ಅನಂತರ ಹೊಂದಿಕೊಂಡು ಬಿಡುತ್ತೇವೆ.
ಪ್ರತಿದಿನ ಸಾವಿರಾರು ಹೆಣಗಳು ಕಾಶಿಯ ಈ ಮಹಾ ಸ್ಮಶಾನದಲ್ಲಿ ಬಂದು ದಹನಗೊಳುತ್ತವೆ. ಶಿವನ ಹೆಂಡತಿ ಸತಿಯ ಕಿವಿಯ ಆಭರಣ ಬಿದ್ದಿರುವ ಜಾಗವೇ ಮಣಿ( ಆಭರಣ)ಕರ್ಣಿಕ ( ಕಿವಿ) ಘಾಟ್ ಆಗಿದೆ ಎಂಬೂದು ಇಲ್ಲಿನ ಸ್ಥಳ ಪುರಾಣ ಇಲ್ಲಿ ಆಭರಣ ಎನ್ನುವುದು ಲೌಕಿಕ ವಿಷಯವಾದರೂ. ಇಲ್ಲಿನ ದೃಶ್ಯಗಳು ಮಾತ್ರ ಅಲೌಕಿಕ ಪ್ರಪಂಚದ ವಿಷಯವಸ್ತುಗಳನ್ನು ಧ್ಯಾನಿಸುವಂತೆ ಮಾಡುತ್ತದೆ. ತಾವು ಕಾಶಿಯಲ್ಲಿ ಪ್ರಾಣ ಬಿಡಬೇಕೆಂದು ಅಥವಾ ಪ್ರಾಣ ಬಿಟ್ಟರೆ ಕಾಶಿಯಲ್ಲಿ ಸಂಸ್ಕಾರ ಮಾಡಬೇಕೆಂದು ಆಕಾಂಕ್ಷೆ ಹೊತ್ತ ಜನರ ಶವಗಳನ್ನು ರಾಮ ನಾಮ ದೊಂದಿಗೆ ಹೊತ್ತುಕೊಂಡು ಬಂದು ಗಂಗೆಯಲ್ಲಿ ಮುಳುಗಿಸಿ, ಸುಟ್ಟು..ಉಳಿದ ಬೂದಿಯನ್ನು ಮತ್ತೆ ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ.
ಇಲ್ಲಿ ಸತ್ತರೆ ಸ್ವತಃ ಶಿವನೇ ರಾಮ ತಾರಕತ್ ಮಂತ್ರ ನುಡಿಯುತ್ತಾನೆ ಎಂಬ ನಂಬಿಕೆಯಿದೆ. ಯಾವುದೋ ಊರಿನಲ್ಲಿ ಹುಟ್ಟಿ, ಯಾವುದೋ ನದಿಯ ನೀರು ಕುಡಿದು ಬೆಳೆದ ದೇಹವನ್ನು ಇಲ್ಲಿ ಗಂಗೆ ಕ್ಷಣ ಮಾತ್ರದಲ್ಲಿ ತನ್ನದಾಗಿಸಿಕೊಳ್ಳುತಾಳೆ. ಉರಿವ ಬೆಂಕಿಯ ಪಕ್ಕ ತಣ್ಣಗೆ ಹರಿಯುವ ಗಂಗೆ ಎರಡು ವಿರುದ್ಧ ವಸ್ತುಗಳು ಪರಸ್ಪರ ಜೋಡಿಯಾಗಿ ಬದುಕುತ್ತಿರುವ ಸ್ಥಳ ಅನ್ನಿಸಿಬಿಟ್ಟಿತು.
ಸ್ನಾನ, ದಹನಗಳನ್ನು ಅಲ್ಲಿನ ಯುವಕರು ಉತ್ಸಾಹದಿಂದ ಮಾಡುತ್ತಿದ್ದರು. ಸೌದೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು.. ಬಹುಶಃ ದಿನನಿತ್ಯ ಮಾಡುವ ಕರ್ಮದಲ್ಲಿ ಮನುಷ್ಯ ಭಾವನಸಕ್ತಿ ಕಳೆದುಕೊಳ್ಳುತ್ತಾನೊ ಏನೋ. ಪ್ರತಿದಿನ ರಕ್ತ ನೋಡುವ ಡಾಕ್ಟರಿಗೆ ರಕ್ತದ ಮೇಲೆ ಭಯವಾಗಲಿ, ಬೇಸರವಾಗಲಿ ಇರುವುದಿಲ್ಲ. ಅದರಂತೆ ದಿನ ನಿತ್ಯ ಹೆಣ ನೋಡುವ ಇವರಿಗೆ ಅವುಗಳ ಮೇಲೆ ಅದೇ ತರದ ನಿರ್ಭಾವುಕತೆ. ತಂದೆ ತಾಯಿ ಹೆಂಡತಿ ಮಕ್ಕಳನ್ನೂ ಪೋಷಿಸುವ ಜವಾಬ್ದಾರಿ ಎಲ್ಲ ಕಸುಬನ್ನು ಮುಲಾಜಿಲ್ಲದೆ ನಿರ್ವಹಿಸುವ ಪ್ರವೃತ್ತಿಯನ್ನು ಬೆಳೆಸುತ್ತದೆ.
ಎಲ್ಲರೂ ಮಾಡುವುದೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ ಪುರಂದರದಾಸರು ಒಮ್ಮೆ ಕಂಡು ಬಿಟ್ಟರು. ಅಲ್ಲಿ ಸ್ನಾನ ಮುಗಿಸಿ ಕರ್ನಾಟಕದ ಗಾಯಕ ವಿಜಯಪ್ರಕಾಶ ಹಾಡಿರುವ ಶಿವೋಹಂ ಹಾಡು ಹಾಕಿಕೊಂಡೂ ವಿಶ್ವನಾಥನ ದರ್ಶನಕ್ಕೆ ಹೊರಟೆ. ಶಿವೋಹಂ ಹಾಡು ಮೂಲತ ಆದ್ವೈತ ಸಿದ್ಧಾಂತದ ಮೇಲೆ ರಚಿಗೊಂಡ ಹಾಡು. ಅದ್ವೈತಗಳಾದ ಶಂಕರಾಚಾರ್ಯರ ಪ್ರಸಂಗ ಇಲ್ಲಿ ನೆನೆಯಲೇಬೇಕು. ಕಾಶಿಯಲ್ಲಿ ಶಂಕರಾಚಾರ್ಯರು ಕಾಶಿಯಲ್ಲಿ ತಿರುಗುವಾಗ ಸ್ಮಶಾನ ಕಾಯುವ ಚಂಡಾಲನೊಬ್ಬ ಎದುರಾದಾಗ ಲೋಕ ಶಿಷ್ಟಾಚಾರದಂತೆ ದೂರ ಸರಿದು ದಾರಿ ಬಿಡಲು ಕೇಳಿದಾಗ. ಕೇಳಿದ್ದು ಪಂಚಭೂತಗಳಿಂದ ಈ ಶರೀರಕ್ಕೆ ಅಥವಾ ಒಳಗಿರುವ ಆತ್ಮಕ್ಕ ಎಂದಾಗ ಶಂಕರರಾಚಾರ್ಯರ ಅಂತಹೃದಯ ಜಾಗೃತಗೊಂಡಿತಂತೆ. ಸಾಕ್ಷಾತ್ ಶಿವನೇ ಆ ರೂಪದಲ್ಲಿ ಬಂದು ಗುರುವಾದ ಎಂಬ ಕಥೆಯನ್ನು ಓದಿದ್ದೆ. ಪುರಾಣ ಪುನಃ ಘಟಿಸುವುದಿಲ್ಲ. ಅದು ನಮ್ಮಂತವರಿಗೆ. ಲಾಕರ್ ಗಳ ಕೊಡಿಸಲು ಚಪ್ಪಲಿ ಬಿಡಲು ಅಂಗಡಿಗಳ ಮಾಲೀಕರು ಪೈಪೋಟಿಯಂತೆ ಎದುರಾದರು.
ದೂರ ಸರಿಯಿರಿ ಎಂದರು ಬಿಡದೆ ಹೂ ಬುಟ್ಟಿ ಕೊಟ್ಟು..ಲಾಕರ್ ನಲ್ಲಿ ಮೊಬೈಲ್ ಇಡಿಸಿ..ಹಣ ಬಂದ ಮೇಲೆ ಕೋಡಿ ಎಂದು ಹೇಳಿ ಕಳುಹಿಸಿದರು…ಬಹುಶಃ ದೇವರನ್ನು ನೋಡಲೂ ನಾವು ಈ ವ್ಯಾಪಾರಿಗಳನ್ನೂ ಎದುರಿಸಬೇಕು ಇಲ್ಲ ಅವರಿಗೆ ಶರಣಾಗಬೇಕು..ಸಾಲು ಹಿಡಿದು ನಿಂತು ದರ್ಶನಕ್ಕೆ ಮುಗಿಸಿ ಬರುವಾಗ ಸಂಜೆ ದಾಟಿತ್ತು.. ಕಾಶಿಯಲ್ಲಿ ದಿನ ಬೆಳಕಿನಲ್ಲಿ ಒಂದು ನೋಟವಾದರೆ ಸಂಜೆಯಲ್ಲಿ ಮತ್ತೊಂದು ಲೋಕ ತೆರೆದುಕೊಳ್ಳುಕೊಳ್ಳುತ್ತದೆ.
ರಿಕ್ಷಾಗಳು ಗಂಗರಾತಿಗಾಗಿ ದಶಾಶ್ವಮೇಧ ಘಾಟ್ ನ ದಿಕ್ಕಿನಲ್ಲಿ ಒಂದೇ ಸಮನೆ ಪ್ರಯಾಣಿಕರನ್ನು ಹೊತ್ತು ಚಲಿಸಲಾರಂಭಿಸುತ್ತಾವೆ. ಸದ್ದು ಗದ್ದಲದ ಟ್ರಾಫಿಕ್ ದಾಟಿ ಬಂದರೆ ಶಾಂತೆಯಾಗಿ ಕತ್ತಲ ಬೆಳಕಲ್ಲಿ ಗಂಗೆ ಹರಿಯುತಾಳೆ. ಹರಿವ ತಟದಲ್ಲಿ ಗಂಗರಾತಿಯ ದೃಶ್ಯ ಮನೋಹರವಾದದ್ದು. ನಾನಿದ್ದದು ಬನಾರಸ್ ಹಿಂದೂ ವಿಶ್ವವಿದ್ಯಾಲಯವಾದದಿಂದ ಸಮೀಪವಿರುವ ಆಸಿ ಘಾಟಿನಲ್ಲಿ (ಆಸಿ ನದಿಯು ಗಂಗೆಯನ್ನು ಸೇರುತ್ತದೆ) ಕುಳಿತು ಗಂಗರತಿ ನೋಡಿದಾಗ ಇಂದೊಂದು ಜನರನ್ನು ನದಿಗೆ ಬೆಸೆಯುವ ಹಬ್ಬವೆನಿಸಿತು.” ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ ರಾಮ ರಾಮ “ಎಂಬ ಹಾಡಿನಂತೆ ಕಾಶಿ ಕೇವಲ ಶೈವರ ಅಷ್ಟೇ ಅಲ್ಲದೆ ವೈಷ್ಣವಿರಿಗೂ ಪ್ರಿಯವಾದದ್ದು.
ಬಿಂದು ಮಾಧವ ದೇವಸ್ಥಾನಾ ವೈಷ್ಣವ ಸಂಪ್ರದಾಯ ದ ಪ್ರಸಿದ್ಧವಾದ ದೇವಸ್ಥಾನ.. ಇಲ್ಲಿದೆ… ವೈಷ್ಣವ ಪಠಣ ಸೂಕ್ತಿ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಇಲ್ಲಿಯೇ ರಾಮಾಚರೀತಾ ಮಾನಸ ಬರೆದಿದ್ದು. (ಹಾಗಾಗಿ ರಾಮ ತುಳಸಿ ಘಾಟ್ ಸಹ ಇದೆ). ಕಬೀರರ ಊರು ಕಾಶಿಯ ಆಗಿದೆ. ಹೀಗೆ ಕಾಶಿಯಿಂದ ಮರಳಿ ಬರಲು ರೈಲು ಸಿಕ್ಕದೆ. ಬಸ್ಸಿನ ಸಹವಾಸ ಬೇಡವೆಂದು ಫ್ಲೈಟ್ ಲೀ ಬಂದಿಳಿದೆ. ಆದರೆ ಫೋಟೋ ವನ್ನು ಸ್ಟೇಟಸ್ ಲೀ ಇಟ್ಟಾಗ ಹತ್ತಿರದವರೊಬ್ಬರು ಕಾಶಿಗೆ ಹೋದ್ರೆ ಏನಾದ್ರೂ ಬಿಟ್ಟು ಬರಬೇಕು ಏನು ಬಿಟ್ಟು ಬಂದೆ? ಎಂದು ಕೇಳಿದಾಗ ಏನು ಬಿಟ್ಟಿರಬಹುದಾಗಿತ್ತು ಎಂಬ ಯೋಚನೆ ಕೊರೆಯಲು ಶುರುವಾಯಿತು. ಬ್ರಹ್ಮಚಾರಿಯಾಗಿರುವ ನಾನು ಏನು ತಾನೆ ಬಿಟ್ಟು ಬರಲಿ. ಕಾಮವನ್ನೇ, ಕ್ರೋಧವನ್ನೇ, ಮದ ಮಾತ್ಸರ್ಯವನ್ನೇ. ಬಹುಶಃ ಇವೆಲ್ಲವೂ ಮಿತವಾಗಿ ಜೀವನದಲ್ಲಿ ಬೇಕಲ್ಲವೆ? ಇನ್ನೂ ವಸ್ತುಗಳನ್ನು ಬಿಟ್ಟು ಬರುವುದು ನನಗೆ ನಂಬಿಕೆ ಇಲ್ಲದ್ದು. ಏನನ್ನು ಬಿಟ್ಟು ಬರುವುದೂ ಎಂದು ಯೋಚಿಸಿದಾಗ, ಬಹುಶಃ ಅದನ್ನು ಬದಲಿಸಿ ಏನನ್ನು ಕಲಿತುಬರುವುದು ಎಂಬುದು ಸೊಗಸಾದ ಅರ್ಥ ನೀಡಬಹುದು..ನನ್ನ ಪೀಳಿಗೆಯವರಿಗೆ ದಕ್ಕಬಹುದು.
ಪ್ರೀತಿಯನ್ನು, ತಾಳ್ಮೆಯನ್ನು ಸೆಟೆದು ನಿಲ್ಲುವ ಶಕ್ತಿಯನ್ನು ಕಾಶಿಯಿಂದ ಕಲಿಯಬೇಕು. ಪ್ರಪಂಚವೇ ಮುಳುಗಿದರು ಕಾಶಿಯನ್ನು ತೇಲಿಸುತ್ತೇನೆ ಎನ್ನುವ ಶಿವಪುರಾಣದ ವಾಕ್ಯವೇ ಸಾಕು. ಶಿವನಿಗೆ ಕಾಶಿಯ ಮೇಲಿರುವ ಪ್ರೀತಿಯನ್ನು ತೋರಿಸಲು ಆ ಪ್ರೀತಿಗೆ ಮಧ್ಯಯುಗೀನ ದಾಳಿಕೋರರಾ ಆಕ್ರಮಣವನ್ನು ಸಹಿಸುವ ಶಕ್ತಿಯಿದೆ. ನಾಶಪಡಿಸಿದ ಮೇಲು ಎದ್ದು ನಿಲ್ಲುವ ಮತ್ತದೇ ಹಳೆ ಗತಕ್ಕೆ ಮತ್ತೆ ಮತ್ತೆ ಮರಳುವ ಶಕ್ತಿ ಇದೆ.. ಅದು ಲಯದ ಪ್ರದೇಶವಲ್ಲ. ಮತ್ತೆ ಮತ್ತೆ ಹೊಸ ಹುಟ್ಟು ಪಡೆಯುವ ಪ್ರದೇಶ.
ದುರುಗೇಶ ಅಂಕುಂ
ಸಹಾಯಕ ತೋಟಗಾರಿಕೆ ಅಧಿಕಾರಿ
