Unplanned Journey
Unplanned Trip: ಭಾಗ – 1 ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರಯಾಣ ಇಷ್ಟವಾಗುತ್ತದೆ. ಕೆಲವರಿಗೆ ಬಸ್, ಇನ್ನು ಕೆಲವರಿಗೆ ವಿಮಾನ, ಮತ್ತೊಬ್ಬರಿಗೆ ಬೈಕ್ ರೈಡಿಂಗ್, ಆದರೆ ನನಗೆ ಚಿಕ್ಕಂದಿನಿದಲೂ ರೈಲು ಪ್ರಯಾಣ ಎಂದರೆ ತುಂಬಾ ಇಷ್ಟ. ನಾನು ಚಿಕ್ಕವನಿದ್ದಾಗ ನನ್ನ ಅತ್ತೆಯ ಜೊತೆ ಅಕ್ಕನನ್ನು ನೋಡಲು ಬೆಂಗಳೂರಿಗೆ ರೈಲಿನಲ್ಲಿಯೇ ಹೋಗುತ್ತಿದ್ದೆವು ಅಂದಿನಿಂದ ಈ ರೈಲು ಪ್ರಯಾಣ ನನಗೆ ಆಪ್ತವಾದದ್ದು. ರೈಲು ನನಗೆ ಇಷ್ಟವಾಗಲು ಇನ್ನೂ ಕೆಲವು ಕಾರಣಗಳಿವೆ. ರೈಲು ಸಾಗುವ ಹಾದಿಯಲ್ಲಿ ಗುಂಡಿಗಳಿರುವುದಿಲ್ಲವಾದ್ದರಿಂದ ಎತ್ತಿ ಕುಕ್ಕುವುದಿಲ್ಲ, ಇನ್ನು ಅಪಘಾತದ ಪ್ರಮಾಣ ತೀರ ಕಡಿಮೆ, ಆರಾಮವಾಗಿ ನಿದ್ದೆಮಾಡಬಹುದು, ಮಧ್ಯೆ ಮಧ್ಯೆ ಚಿರುಮುರಿ, ಮಿಠಾಯಿ, ಮದ್ದೂರು ವಡೆ ತಿನ್ನಲು ಸಿಗುತ್ತವೆ. ಶೌಚಾಲಯ ಬಳಸಲು ಆರಾಮ,(ಸ್ವಚ್ಚತೆಯ ಬಗ್ಗೆ ಕೇಳಬಾರದು ಅಷ್ಟೇ) ಎಂಬುದು ನನಗೆ ರೈಲು ಪ್ರಯಾಣ ಇಷ್ಟವಾಗಲು ಮುಖ್ಯ ಕಾರಣಗಳು. ನಾನು ರೈಲು ಪ್ರಯಾಣದ ಬಗ್ಗೆ ಇಷ್ಟೆಲ್ಲ ಪೀಠಿಕೆ ಯಾಕೆ ಕೊಟ್ಟೆ ಅಂತ ನೀವು ತಿಳಿಯ ಬೇಕೆಂದರೆ ಅದಕ್ಕೆ ಉತ್ತರ ಮುಂದಿನ ಪ್ಯಾರದಲ್ಲಿದೆ.(Unplanned Journey)
ಅನೇಕ ಬಾರಿ ಪ್ಲಾನ್ ಮಾಡಿ ಟ್ರಿಪ್ ಹೋಗೋಣ ಎಂದುಕೊಂಡಾಗಲು, ಅದು ಸಾಧ್ಯವಾಗುತ್ತಿರಲಿಲ್ಲ. ಏನಾದರೂ ಒಂದು ಸಬೂಬು ಹೇಳಿ ಯಾರಾದರೂ ಒಬ್ಬರು ಕ್ಯಾನ್ಸಲ್ ಮಾಡಿ ಬಿಡುತ್ತಿದ್ದರು. ಆದರೆ ಈ ಬಾರಿ ಹಾಗೆ ಮಾಡೋದು ಬೇಡವೆಂದು 4 ಜನ ಮಾತ್ರ ಹೊರಟ್ಟಿದ್ದಾಯ್ತು. ನಾವು ಈ ಬಾರಿ ಹೋಗಬೇಕೆಂದು ಕೊಂಡದ್ದು ಕಡಲ ನಗರಿ ಮಂಗಳೂರಿಗೆ. ಅತ್ತ ಕಿರಣ ಚನ್ನಪಟ್ಟಣದಿಂದ ರೈಲು ಹತ್ತಿ ಬೆಂಗಳೂರಿನೆಡೆಗೆ ಬರುತ್ತಿದ್ದ. ಇನ್ನು ನರಸಿಂಹ ಬೆಂಗಳೂರಿನಲ್ಲಿಯೇ ಇದ್ದ. ನಾನು ಪ್ರವೀಣ ಮನೆಯಿಂದ ಹೊರಟು ತುಮಕೂರು ರೈಲು ನಿಲ್ದಾಣ ತಲುಪಿ ಅಲ್ಲಿ ಟಿಕೆಟ್ ಕೌಂಟರ್ ಬಳಿ 120 ರೂಪಾಯಿ ಕೊಟ್ಟು ಬೆಂಗಳೂರಿಗೆ ಟಿಕೆಟ್ ಪಡೆದು ಪ್ಲಾಟ್ ಫಾರಂ2 ರಲ್ಲಿ 4:30ಕ್ಕೆ ಬರುವ ಮೈಸೂರು ಎಕ್ಸ್ಪ್ರೆಸ್ ರೈಲಿಗಾಗಿ ಕಾಯುತ್ತಿದ್ದೆವು. ಅದೇ ವೇಳೆ ರೈಲು ಬಂತು, ಶನಿವಾರವಾದ್ದರಿಂದ ಅಷ್ಟೇನು ಜನ ಇರಲಿಲ್ಲ. ಸಿಟುಗಳು ಖಾಲಿ ಇದ್ದವು. ನಿಧಾನಕ್ಕೆ ರೈಲು ಸಾಗಲಾರಂಬಿಸಿತ್ತು.
ರೈಲು ಕ್ಯಾತ್ಸಂದ್ರ ರೈಲು ನಿಲ್ದಾಣಕ್ಕೆ ಬಂದು ತಲುಪಿದಾಗ ಒಮ್ಮೆ ಪ್ರವೀಣ Where is My Train ಆಪ್ ನಲ್ಲಿ ರೈಲು ಎಲ್ಲಿದೆ ಎಂಬುದನ್ನು ನೋಡಿದ. ಆಗಲೇ ಗೊತ್ತಾದದ್ದು ನಾವು Mysuru SF Express ಹತ್ತುವ ಬದಲು ತಪ್ಪಾಗಿ Yeshwantpur weekly SF Express ಹತ್ತಿದ್ದೇವೆ ಅಂತ. ಇನ್ನೇನು ಮಾಡೋದು ಹತ್ತಿದ್ದಾಗಿದೆ ಯಶವಂತಪುರದಲ್ಲಿ ಇಳಿದು, ನಂತರ ಮೆಜೆಸ್ಟಿಕ್ವರೆಗೂ Mysuru SF Express ಹತ್ತಿದರಾಯ್ತು ಅಂದುಕೊಂಡು ಹಾಗೆಯೇ ಮಾಡಿದೆವು. ಅಷ್ಟರಲ್ಲಿ ಕಿರಣ 3-4 ಬಾರಿ ಕರೆಮಾಡಿದ್ದ. ನಾನು ಬೆಂಗಳೂರಿಗೆ ಬಂದಾಯ್ತು, ಇನ್ನು ಯಾವಾಗ ನೀವು ಬರೋದು ಅಂತ ನಾಗರ ಹಾವಿನ ಹಾಗೆ ಬುಸುಗುಡುತ್ತಿದ್ದ. ಅವನನ್ನು ಸಮಾಧಾನ ಪಡಿಸುವಷ್ಟರಲ್ಲಿ ರೈಲು ಬೆಂಗಳೂರು ತಲುಪಿತ್ತು. ನಾವು ಇಳಿದು ಮುಂದೆ ಸಾಗುತ್ತಿದ್ದೆವು, ಆಗ ಅಲ್ಲಿಯೇ ಕುಳಿತ್ತಿದ್ದ ಕಿರಣ ಸಿಕ್ಕ. ಅಷ್ಟರಲ್ಲಿ ಎಲ್ಲರಿಗೂ ಹೊಟ್ಟೆ ಚೂರ್ ಎನ್ನಲಾರಂಭಿಸಿತ್ತು. ಬಳಿಕ ರೈಲು ನಿಲ್ದಾಣದಿಂದ ಹೊರಬಂದು ಅಲ್ಲಿಯೇ ಹೊರಭಾಗದಲ್ಲಿರುವ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮತ್ತೆ ಪುನಃ ನಮ್ಮ ಪ್ಲಾಟ್ ಫಾರಂಗೆ ಹಿಂದಿರುಗಿದೆವು.(Unplanned Trip)
ಸ್ವಲ್ಪ ಹೊತ್ತಿನಲ್ಲೆ ನಾವು ಮಂಗಳೂರಿಗೆ ಹೋಗಬೇಕಿದ್ದ Kozhikode Express ರೈಲು ಪ್ಲಾಟ್ ಫಾರಂಗೆ ಬಂದಿತು. ಆಗ ನರಸಿಂಹನಿಗೆ ಕರೆ ಮಾಡಿ ಎಲ್ಲಿದ್ದ ಮಾರಾಯ ಇನ್ನು ಯಾವಾಗ ಬರೋದು ಎಂದು ಕೇಳಿದರೆ, ನೋಡ್ತೀನಿ, ಬರ್ತೀನಿ, ಎಂದು ಹೇಳುತ್ತಲೇ ಇದ್ದ ಅಷ್ಟರಲ್ಲಿ ಪ್ರವೀಣ ಇವನು ಬರೋದು ಡೌಟು ಬಿಡು ಅಂದ. ಆತ ಹೀಗೆನ್ನಲು ಕಾರಣ ಅನೇಕ ಬಾರಿ ನರಸಿಂಹ ಹಾಗೆಯೇ ಮಾಡಿದ್ದ ಎಂಬುದು. ನಾನು ಅಷ್ಟರಲ್ಲಿ ಹೋಗಿ ರಾತ್ರಿಗೆ ಇರಲಿ ಅಂತ ಸ್ವಲ್ಪ ಸ್ನಾಕ್ಸ್ ತೆಗೆದುಕೊಂಡು ಬಂದೆ. ಆದರೆ ಈ ಬಾರಿಯು ಅದೇ ಹಳೇ ಕ್ಯಾಸೆಟ್ ಮುಂದುವರೆಯಿತು. ಕೊನೆಯ ಗಳಿಗೆಯವರೆಗೂ ನೋಡ್ತೇನೆ, ಬರ್ತೇನೆ ಎಂದು ಹೇಳುತ್ತಲೇ ಇದ್ದ ನರಸಿಂಹ ಕೊನೆಗೆ ಕೈ ಎತ್ತಿದ. ಕನಿಷ್ಟ ಆತ ಮಧ್ಯಾಹ್ನ ಬರೊಲ್ಲವೆಂದಿದ್ದರೂ ಬೇರೆಯಾರನ್ನಾದರೂ ಕರೆ ತರುತ್ತಿದ್ದೆ ಅಂತ ಕಿರಣ ಸಿಡಿ-ಮಿಡಿಗೊಂಡ. ಎಲ್ಲರ ಮುಖದಲ್ಲೂ ಬೇಸರ ಆವರಿಸಿತ್ತು. ಇನ್ನೇನು ಆತನನ್ನು ಮನಸ್ಸಿನಲ್ಲಿಯೇ ಶಪಿಸಿಕೊಂಡು ಸಮ್ಮನಾದೆವು.
ರೈಲು ನಿಧಾನವಾಗಿ ತನ್ನದೆ ತಾಳ-ಮೇಳದ ಸದ್ದಿನಲ್ಲಿ ಬೆಂಗಳೂರನ್ನು ತೊರೆದು ಸಾಗಲಾರಂಬಿಸಿತ್ತು, ಗಾಳಿ ನವಿರಾಗಿ ಬೀಸುತ್ತಿತ್ತು, ಕಿಟಕಿಯ ಒಳಗಿನಿಂದ ಗಾಳಿ ಸುಯ್ ಗುಡುವ ಸದ್ದು. ಹೀಗೆ ನಾವು ಹರಟೆ ಹೊಡೆಯುತ್ತಿದ್ದಾಗ ಒಂದು ಸುಂದರ ಕುಟುಂಬ(ಗಂಡ-ಹೆಂಡತಿ ಇಬ್ಬರು ಮಕ್ಕಳು ಅದರಲ್ಲಿ ಮೊದಲ ಮಗು ಹೆಣ್ಣು ಎರಡನೆಯ ಮಗು ಗಂಡು) ನಾವಿದ್ದಲಿಗೆ ಬಂದಿತ್ತು. ಅದರಲ್ಲಿ 2ನೇ ಮಗುವಿಗೆ ಇನ್ನು 2 ವರ್ಷ ಇರಬಹುದು. ಅವರು ರೈಲು ಹತ್ತಿದಾಗ ಮಗು ಇನ್ನು ಮಲಗಿತ್ತು.
ನಂತರ ಒಮ್ಮೆ ಮಧ್ಯದಲ್ಲಿ ಎದ್ದು ಅಮ್ಮನನ್ನು ಮಾತನಾಡಿಸತೊಡಗಿತು. ನನಗೂ ಏಕೋ ನಿದ್ದೆ ಹತ್ತುತಿರಲಿಲ್ಲ ಹಾಗೆಯೇ ಹೊರಳಾಡುತ್ತಿದ್ದೆ. ಆ ಮುಗ್ಧ ಮನಸ್ಸಿನ ಕಂದ ಅಮ್ಮನೊಡನೆ ಅಮ್ಮ ನೀರು ಕೊಡ, ಇನ್ನು ಎಷ್ಟುದೂರ ಹೊಪದು? ಅಪ್ಪಾ ನೀ ಬಾ ಇಲ್ಲಿ. ಎಂದು ಎಷ್ಟು ಚೆಂದವಾಗಿ ಕರೆಯುತ್ತಿತ್ತು. ಏನೇನೊ ಪ್ರಶ್ನೆ ಕೇಳುತ್ತಿತ್ತು. ಅಮ್ಮ ಸಮಾಧಾನದಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತಿರಿಸಿ ಕೊನೆಗೆ ಮಲಗ ನೀ… ಭೂತ ಬರುತ್ತೆ ನಿನ್ನನ್ನ ಹಿಡಿದು ಕೊಡ್ತೀನಿ ಅಂತ ಮುಗ್ದವಾಗಿ ಗದರಿಸಿ ಮಗುವನ್ನು ಮಲಗಿಸಿದರು. ಆದರೆ ಅದು ಸ್ವಲ್ಪ ಹೊತ್ತು ಮಲಗಿದಂತೆ ನಟಿಸಿ ಮತ್ತೆ ಪುನಃ ಮತ್ತದೇ ಪ್ರಶ್ನೆ ಕೇಳಲಾರಂಭಿಸಿತು. ಈ ಸಂಭಾಷಣೆ ಹಾದಿಯುದ್ದಕ್ಕೂ ಮುಂದುವರೆದಿತ್ತು. ಅದರ ನಡು ನಡುವೆ ಅಮ್ಮ ಮಗು ಇಬ್ಬರಿಗೂ ಕೆಮ್ಮು. ಅವರು ಇಳಿದು ಹೋಗುವವರೆಗೂ ಕೆಮ್ಮಿನ ಶಬ್ದ ಆಗಾಗ ಕಿವಿಗೆ ಬೀಳುತ್ತಿತ್ತು. ಅವರು ಕೊನೆಗೆ ಕುಕ್ಕೆ ಸುಬ್ರಹ್ಮಣ್ಯ ಸ್ಟೇಷನ್ ನಲ್ಲಿ ಇಳಿದುಕೊಂಡರು. ಅದೇಕೊ ಗೊತ್ತಿಲ್ಲ ಅವರು ಹೋಗುವ ವರೆಗೂ ಅವರನ್ನೆ ನೋಡುತ್ತಾ ಕುಳಿತಿದ್ದೆ. ಇನ್ನೇನು ಮಲಗೋಣ ಎಂದು ಬ್ಯಾಗನ್ನೆ ತಲೆದಿಂಬು ಮಾಡಿಕೊಂಡೆ, ನಿಧಾನವಾಗಿ ನಿದ್ರಾದೇವಿ ಆವರಿಕೊಳ್ಳುತ್ತಿದ್ದಳು, ಆದರೆ ಆ ಸೆಖೆಯಲ್ಲದ ಸೆಖೆಗೆ(ಹಬೆಗೆ) ನಿದ್ದೆ ಎಲ್ಲಿ ಮಾಯವಾಯ್ತೋ ಗೊತ್ತಿಲ್ಲ..! ರಾತ್ರಿಯೆಲ್ಲಾ ಒಂದು ರೀತಿಯ ಅರೆ ಬರೆ ಜಾಗರಣೆ.(Unplanned Trip)
ಮುಂದುವರೆಯುತ್ತದೆ>>>>>>>>
