Vijaya Dashami: ರಂಭ, ಕರಂಭ ಎನ್ನುವ ದಾನವರು ಅಸಾಧ್ಯವಾದುದನ್ನು ಸಾಧಿಸಲು ತಪಸ್ಸನ್ನು ಮಾಡಲು ನಿರ್ಧರಿಸುತ್ತಾರೆ. ಹಾಗೆ, ರಂಭನು ಅಗ್ನಿದೇವನ ಉಪಾಸನೆಯಲ್ಲಿ ತೊಡಗುತ್ತಾನೆ. ಕರಂಭನು ವರುಣನನ್ನು ಮೆಚ್ಚಿಸಲು, ಜಲದಲ್ಲಿ ಮುಳುಗಿ ತಪಸ್ಸನ್ನು ಆಚರಿಸಲು ಶುರುಮಾಡುತ್ತಾನೆ. ದಾನವರು, ಅಸುರರು ತಪಸ್ಸು ಮಾಡುತ್ತಾರೆಂಬ ಸುದ್ದಿ ತಿಳಿದ ಕೂಡಲೇ, ಸಹಜವಾಗಿ ದೇವಲೋಕದಲ್ಲಿರುವ ದೇವಗಣಕ್ಕೆ ಆತಂಕ ಶುರುವಾಗುತ್ತದೆ. ಆದ್ದರಿಂದ ದೇವಗಣದ ರಾಜ ಇಂದ್ರದೇವನು ಮೊಸಳೆಯ ರೂಪದಲ್ಲಿ ಬಂದು, ಜಲದಲ್ಲಿ ತಪಸ್ಸು ಮಾಡುತ್ತಿದ್ದ ಕರಂಭನನ್ನು ಕೊಂದುಬಿಡುತ್ತಾನೆ. ಕೂಡಲೇ ಅಗ್ನಿದೇವನ ಉಪಾಸನೆಯಲ್ಲಿ ತೊಡಗಿರುವ ರಂಭನನ್ನು ಸಂಹರಿಸಲು ಮುಂದಾಗುತ್ತಾನೆ. ಆದರೆ ಅಗ್ನಿದೇವನ ಕೃಪೆಯಿಂದ ರಂಭನು ಅಬಾಧಿತನಾಗುತ್ತಾನೆ. ಇಂದ್ರದೇವನಿಂದ ಯಾವುದೇ ಹಾನಿಗೆ ರಂಭನು ಗುರಿಯಾಗುವುದಿಲ್ಲ.
ಆದರೆ ತನ್ನ ಸಹೋದರ ಕರಂಭನು ಇಂದ್ರದೇವನಿಂದ ಮೃತನಾದ ವಿಷಯ ತಿಳಿದು, ರಂಭನು ತಾನು ಸಹ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಆದರೆ ಕೂಡಲೇ ಅಗ್ನಿದೇವನು ಪ್ರತ್ಯಕ್ಷನಾಗಿ, ಆತ್ಮಹತ್ಯೆ ಮಹಾಪಾಪವೆಂದು ರಂಭನಿಗೆ ತಿಳಿಸಿ, ಆತನಿಗಾಗಿ ಒಂದು ವರವನ್ನು ಕೊಡುವೆನೆಂದು ಹೇಳಿದ ಮೇಲೆ ರಂಭನು ಆತ್ಮಹತ್ಯೆ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾನೆ. ಆಗ ಅಗ್ನಿದೇವನು, “ನಿನಗೆ ಯಾವ ವರ ಬೇಕು, ಕೇಳು, ಅದನ್ನು ನಾನು ಕರುಣಿಸುತ್ತೇನೆ” ಎಂದು ರಂಭನಿಗೆ ಹೇಳಿದಾಗ, ರಂಭನು “ದೇವಲೋಕವನ್ನು, ಭೂಲೋಕವನ್ನು, ಪಾತಾಳಲೋಕವನ್ನು ಆಳುವಂತಹ ಪರಾಕ್ರಮಿಯಾದ ಮಗನನ್ನು ನಾನು ಪಡೆಯಬೇಕು, ನನ್ನ ಸಹೋದರನ ಸಾವಿಗೆ ಪ್ರತೀಕಾರವನ್ನು ನನ್ನ ಮಗನಿಂದ ನಾನು ಪಡೆಯಬೇಕು, ಈ ವರವನ್ನು ನನಗೆ ಕರುಣಿಸು” ಎಂದು ರಂಭನು ಅಗ್ನಿದೇವನಲ್ಲಿ ಯಾಚಿಸುತ್ತಾನೆ. ಅಗ್ನಿದೇವನು ಅವನ ತಪಸ್ಸನ್ನು ಮೆಚ್ಚಿ ವರವನ್ನು ಕರುಣಿಸುತ್ತಾನೆ.
ಹೀಗೆ ಹೋಗುತ್ತಿರಬೇಕಾದರೆ ಮಹಿಷಿ ಎಂಬ ಎಮ್ಮೆಯ ರೂಪದಲ್ಲಿರುವ ಅಸುರೆಯನ್ನು ನೋಡಿದ ರಂಭನಿಗೆ ಅವಳ ಮೇಲೆ ಪ್ರೇಮಾಂಕುರವಾಗುತ್ತದೆ. ಅವಳ ಜೊತೆ ವಿವಾಹವಾದ ಮೇಲೆ ಹುಟ್ಟಿದ ಮಗುವೇ ಮಹಿಷಾಸುರ. ಮಹಿಷಿ ಎಮ್ಮೆಯ ರೂಪದಲ್ಲಿದ್ದು ಮತ್ತು ಆಕೆ ಅಸುರ ಕುಲದವಳಾದ್ದರಿಂದ, ಅವನಿಗೆ ಮಹಿಷಾಸುರನೆಂದು ಹೆಸರು ಬರುತ್ತದೆ. ಮಹಿಷಾಸುರ ಬೆಳೆಯುತ್ತಾ, ಬೆಳೆಯುತ್ತಾ ದೈವದ ದ್ವೇಷಿಯಾಗುತ್ತಾನೆ. ಮೂರೂ ಲೋಕವನ್ನು ಆಳಬೇಕೆಂದು ನಿರ್ಧರಿಸಿ, ಪಾತಾಳಲೋಕವನ್ನು, ಭೂಲೋಕವನ್ನು ಮತ್ತು ಸ್ವರ್ಗಲೋಕದ ದೇವತೆಗಳನ್ನು ಸೋಲಿಸಿ, ಮೂರು ಲೋಕಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ ಮಹಿಷಾಸುರನು ಬ್ರಹ್ಮೋಪಾಸನೆಯಲ್ಲಿ ತೊಡಗಿ ಉಗ್ರತಪಸ್ಸನ್ನು ಆಚರಿಸುತ್ತಾನೆ.
ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು, “ನಿನಗೆ ಯಾವ ವರ ಬೇಕು, ಕೇಳು” ಎಂದಾಗ, ಮಹಿಷಾಸುರನು “ನನಗೆ ಸಾವೇ ಬರಬಾರದು, ನಾನು ಮೃತ್ಯುಂಜಯನಾಗಬೇಕು” ಎಂಬ ವರವನ್ನು ಕೇಳುತ್ತಾನೆ. ಆದರೆ ಬ್ರಹ್ಮದೇವನು, “ಆ ಒಂದು ವರವು ಯಾರಿಗಾದರೂ ಅಸಾಧ್ಯ, ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು, ಆಗ ನಿನಗೆ ಲಭಿಸುವುದು” ಎನ್ನುತ್ತಾನೆ. ಮಹಿಷಾಸುರ ಅದು ಸರಿ ಎನಿಸಿ, ನನಗೆ ಸಾವೇ ಬರಬಾರದು. ಒಂದು ವೇಳೆ ಬಂದರೂ, ಒಂದು ಹೆಣ್ಣಿನ ಮೂಲಕ ಮಾತ್ರ ಬರಬೇಕು. ಇಲ್ಲದಿದ್ದರೆ ಯಾವುದೇ ಜೀವ, ನಿರ್ಜೀವ ವಸ್ತು, ದೇವರು, ಮಾನವರು, ದಾನವರು ಯಾರಿಂದಲೂ ಸಾವು ಬರಕೂಡದು. ಹೀಗೆ ಕರುಣಿಸು ಎಂದು ಬ್ರಹ್ಮನನ್ನು ಯಾಚಿಸುತ್ತಾನೆ. ಕೂಡಲೇ ಬ್ರಹ್ಮನು, “ನಿನಗೆ ಈ ವರವನ್ನೇನೋ ಕರುಣಿಸುತ್ತೇನೆ, ಆದರೆ ಹೆಣ್ಣಿನಿಂದ ಹೊರತಾಗಿ ಬೇರೆ ಯಾರಿಂದಲೂ ಸಾವು ಬರಬಾರದೆಂದು ನೀನು ಕೇಳಿದ ಉದ್ದೇಶವೇನು ಎಂದು ನನಗೆ ಗೊತ್ತಾಗಲಿಲ್ಲ,” ಎಂದು ಮಹಿಷಾಸುರನನ್ನು ಕೇಳುತ್ತಾನೆ. ಆಗ ಮಹಿಷಾಸುರನು, “ಹೆಣ್ಣು ದುರ್ಬಲೆ. ಆಕೆ ಮಾತ್ರ ನನ್ನನ್ನು ಏನು ಮಾಡಿಯಾಳು? ಆಕೆಯಿಂದ ನನಗೆ ಸಾವಂತೂ ಬರುವುದಿಲ್ಲ. ಕನಸಿನಲ್ಲಿಯೂ ಸಾಧ್ಯವಿಲ್ಲ. ಆದ್ದರಿಂದ ಹೆಣ್ಣನ್ನು ಹೊರತುಪಡಿಸಿ ಬೇರೆ ಯಾವುದರಿಂದಲೂ ನನಗೆ ಸಾವು ಬರಬಾರದು ಎಂದರೆ ನನಗೆ ಸಾವೇ ಬರುವುದಿಲ್ಲ ಎಂದರ್ಥ,” ಎನ್ನುತ್ತಾನೆ. ಬ್ರಹ್ಮನು “ಮುಗುಳ್ನಕ್ಕು” ಆ ವರವನ್ನು ಕರುಣಿಸಿ, ತಥಾಸ್ತು ಎನ್ನುತ್ತಾನೆ.
ನಂತರ ಮಹಿಷಾಸುರನು ಹಿಂಸಾ ರೂಪಿ ಆಗುತ್ತಾನೆ. ಮೂರು ಲೋಕಗಳನ್ನು ತುಂಬಾ ಹಿಂಸೆಯಿಂದ, ಕ್ರೂರತೆಯಿಂದ ಆಳಲು ಶುರುಮಾಡುತ್ತಾನೆ. ಆಗ ಈ ಭಯಂಕರ ದುರಾಡಳಿತವನ್ನು ಕಂಡ ದೇವತೆಗಳು ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಈ ಬಂಧನಕ್ಕೆ ಮುಕ್ತಿ ಕರುಣಿಸಿರಿ,ಮಹಿಷಾಸುರನಿಂದ ದೇವಲೋಕವನ್ನು ಬಿಡುಗಡೆಗೊಳಿಸಿ ಲೋಕಕಂಠಕನಾದ ಮಹಿಷನನ್ನು ಸಂಹರಿಸಿ ಎಂದು ಕೇಳುತ್ತಾರೆ. ಆಗ ಬ್ರಹ್ಮ, ವಿಷ್ಣು, ಮಹೇಶ್ವರರು,ಮಹಿಷ ಈಗ ಬಲಿಷ್ಠ ಹಾಗೂ ಬ್ರಹ್ಮ ದೇವನಿಂದ ವರ ಪಡೆದಿದ್ದಾನೆ ಆತನನ್ನು ಕೊಲ್ಲಲು ನಮ್ಮಿಂದಲೂ ಸಾಧ್ಯವಾಗದು ಆತನನ್ನು ಕೊಲ್ಲಲು ಜಗನ್ಮಾತೆಯೇ ಅವತಾರವೆತ್ತಬೇಕು ಎಂದು ಹೇಳುತ್ತಾರೆ.
ದೇವತೆಗಳ ಸಮ್ಮುಖದಲ್ಲಿ ತಮ್ಮ ತಪಶಕ್ತಿಯಿಂದ ಪಾರ್ವತಿ ದೇವಿಯ ಅವತಾರವಾದ ಶ್ರೀ ಆದಿಶಕ್ತಿಯನ್ನು ತ್ರಿಮೂರ್ತಿಗಳು ಉದ್ಭವಿಸುತ್ತಾರೆ. ಆ ಮೂಲಕ ಎಲ್ಲ ದೇವತೆಗಳ ಒಂದೊಂದು ಗುಣಗಳನ್ನು ಶಕ್ತಿಯಾಗಿ ಪಡೆದ ಆದಿಶಕ್ತಿಯು ಮಹಿಷಾಸುರನ ಮೇಲೆ ಯುದ್ಧಕ್ಕೆ ಹೋಗಲು ಅಣಿಯಾಗುತ್ತಾಳೆ. ಹತ್ತು ಕೈಗಳುಳ್ಳ ಆದಿಶಕ್ತಿಯು ವಿಷ್ಣುವಿನಿಂದ ಶ್ರೀ ಚಕ್ರವನ್ನು, ಶಿವನಿಂದ ತ್ರಿಶೂಲವನ್ನು, ವರುಣನಿಂದ ಅಸ್ತ್ರಗಳನ್ನು, ಅಗ್ನಿ ದೇವನಿಂದ ಶಸ್ತ್ರಗಳನ್ನು ಪಡೆದುಕೊಂಡು ಮಹಿಷಾಸುರನೊಂದಿಗೆ ಯುದ್ಧ ಮಾಡುತ್ತಾಳೆ.
ಮಹಿಷಾಸುರನು ಅವನ ಇಚ್ಛೆಯಂತೆ ತನ್ನ ರೂಪವನ್ನು ಬದಲಿಸಿಕೊಳ್ಳಬಲ್ಲವನಾಗಿರುತ್ತಾನೆ. ಒಂದು ಬಾರಿ ಸಿಂಹವಾಗಿ ರೂಪತಾಳಿ ಯುದ್ಧ ಮಾಡಿದರೆ, ಇನ್ನೊಂದು ದಿನ ಆನೆಯಾಗಿ ರೂಪತಾಳಿ ಯುದ್ಧ ಮಾಡುತ್ತಾನೆ. ಇನ್ನೊಂದು ದಿನ ಎಮ್ಮೆಯಾಗಿ ಯುದ್ಧ ಮಾಡಿದರೆ, ಇನ್ನೊಂದು ದಿನ ರಾಕ್ಷಸನಾಗಿ ಯುದ್ಧ ಮಾಡುತ್ತಿರುತ್ತಾನೆ. ಪ್ರತಿ ದಿನವೂ ಸಂಹರಿಸಿದಾಗಲೂ ಮಾರನೇ ದಿನ ಇನ್ನೊಂದು ರೂಪತಾಳಿ ಬಂದು ಆದಿಶಕ್ತಿ ಎದುರು ನಿಲ್ಲುತ್ತಿರುತ್ತಾನೆ.
ಒಂಬತ್ತು ದಿನಗಳ ಸತತ ಯುದ್ಧಗಳ ನಂತರ, ಹತ್ತನೆಯ ದಿನ ಎಮ್ಮೆಯ ರೂಪದಲ್ಲಿ ಬಂದ ಮಹಿಷಾಸುರನನ್ನು ಶ್ರೀ ಆದಿಶಕ್ತಿಯು ಸಂಹರಿಸುತ್ತಾಳೆ. ಆ ದಶಮಿ ದಿನವೇ ಇಂದು ನಾವು ಆಚರಿಸುತ್ತಿರುವ ವಿಜಯದಶಮಿ. ಇದು ಕೇವಲ ಒಂದು ಹೆಣ್ಣಿನಿಂದ ಯಾವ ಸಾವು ಬಂತು ಎಂಬ ಗರ್ವದಿಂದ ಕೂಡಿದ ಮಹಿಷಾಸುರನಿಗೆ ಆದಿಶಕ್ತಿಯು ಹೆಣ್ಣಿನಿಂದಲೇ ಈ ಜಗತ್ತು ನಡೆಯುತ್ತಿದೆ ಎಂಬ ಸತ್ಯವನ್ನು ತೋರಿಸುತ್ತಾಳೆ. ಅಷ್ಟೇ ಅಲ್ಲದೆ, ಮಹಿಷಾಸುರನು ಒಂದೊಂದು ದಿನ ಒಂದೊಂದು ಅವತಾರವನ್ನು, ಒಂದೊಂದು ರಾಕ್ಷಸಿ ರೂಪವನ್ನು ತಾಳುವಂತೆ ನಮ್ಮ ಮನಸ್ಸಿನಲ್ಲಿರುವ ಆಸೆಗಳು ಪ್ರತಿದಿನವೂ ಒಂದೊಂದು ರೂಪ ತಾಳುತ್ತವೆ. ಅದಕ್ಕೆ ಮನಸ್ಸಿನ ನಿಯಂತ್ರಣ ಇಲ್ಲದಿದ್ದರೆ ಏನಾಗುತ್ತದೆ ಎಂಬ ಅರಿವು ನಮಗಿರಬೇಕು. ಇಲ್ಲದಿದ್ದರೆ ಸಾಕ್ಷಾತ್ ಭಗವದ್ರೂಪಿ ಆದಿಶಕ್ತಿಯೇ ಬಂದು ಮಹಿಷಾಸುರನನ್ನು ಸಂಹರಿಸಿದಂತೆ ಮನೋನಿಗ್ರಹವನ್ನು ಮಾಡಬೇಕಾಗುತ್ತದೆ.
ನಮ್ಮ ಪ್ರತಿಯೊಂದು ಹಬ್ಬಗಳ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇದೆ ಮತ್ತು ಆ ಪೌರಾಣಿಕ ಹಿನ್ನೆಲೆಯ ಹಿಂದೆ ಒಂದು ಉದ್ದಾತ್ತವಾದ ಸಂದೇಶವಿರುತ್ತದೆ. ಆ ಸಂದೇಶವನ್ನು ಅರಿತರೆ, ನಮ್ಮ ಬದುಕಿನ ದಾರಿ ಸುಗಮವಾಗುತ್ತದೆ ಮತ್ತು ಸತ್ಯ, ಶುದ್ಧತೆಯ ಪಥದಿಂದ ಕೂಡಿರುತ್ತದೆ. ಹಾಗೆಯೇ, ಈ ವಿಜಯದಶಮಿಯನ್ನು(Vijaya Dashami) ಆಚರಿಸಲು ಇನ್ನೂ ಒಂದು ಕಾರಣವಿದೆ. ರಾಮ-ರಾವಣರ ಯುದ್ಧ ಕೊನೆಗೊಂಡು, ಹತ್ತನೆಯ ದಿನವೇ, ಅಂದರೆ ದಶಮಿ ದಿನವೇ ಶ್ರೀರಾಮನು ರಾವಣನ ಸಂಹಾರವನ್ನು ಮಾಡುತ್ತಾನೆ.ರಾವಣನನ್ನು ಕೊಂದ ಶ್ರೀರಾಮನನ್ನು ಆರಾಧಿಸಲು ವಿಜಯೋತ್ಸವದ ದ್ಯೋತಕವಾಗಿ, ಈ ವಿಜಯದಶಮಿಯನ್ನು(Vijaya Dashami) ನಾವೂ ಅತ್ಯಂತ ಸಂಭ್ರಮ ಹಬ್ಬವಾಗಿ ಆಚರಿಸುತ್ತೇವೆ.
