(ಪತ್ರ ಹನ್ನೊಂದು) ಮಗಳೇ,
Letters to Daughter: ಮೊನ್ನೆಯಿಂದ ಪರೀಕ್ಷೆಗಿನ್ನು ಎಷ್ಟು ದಿನಗಳು ಬಾಕಿಯುಳಿದಿವೆ ಅಂತ ಲೆಕ್ಕ ಹಾಕುತ್ತಿದ್ದೀ ಅಲ್ವಾ? ಅದಾಗಲೇ ಎರಡು ಪರೀಕ್ಷೆಗಳೂ ಮುಗಿದು ಹೋದವು. ಒಂದೆಡೆ ಒಂಭತ್ತನೇ ಕ್ಲಾಸು ಮುಗಿದೇ ಹೋಯಿತು ಎಂಬ ಸಂಭ್ರಮವೂ ನಿನ್ನದೇ. ಇಲ್ಲಿಯವರೆಗೆ ಪಾಠ ಮಾಡಿದ ಶಿಕ್ಷಕರ ಪೈಕಿ ಕೆಲವರು ಹತ್ತನೆಯ ತರಗತಿಗೆ ಪಾಠ ಮಾಡುವುದಿಲ್ಲವಂತೆ ಎಂಬ ಬೇಸರವೂ ನಿನ್ನದೇ.
ಇದನ್ನೂ ಓದಿ: ಗೀತಾಸಾರ : ಬಾಂಧವ್ಯ ಏಕೆ ದುಃಖಕ್ಕೆ ಕಾರಣವಾಗುತ್ತದೆ ಗೊತ್ತಾ?
ಪರೀಕ್ಷೆಯ ಸಮಯವೇನೂ ಭಾರೀ ವಿಶೇಷವಲ್ಲ ನಮಗೆ. ಕಿರುಪರೀಕ್ಷೆಗಳಿಂದ ತೊಡಗಿ ವಾರ್ಷಿಕ ಪರೀಕ್ಷೆಯವರೆಗೆ ಅದೊಂದು ನಿರಂತರ ಪ್ರಕ್ರಿಯೆ. ಶಾಲೆಗೆ ಹೋಗುವುದು ಅಂದರೆ ಪಾಠ, ಪಠ್ಯೇತರ ಚಟುವಟಿಕೆಗಳು, ನಡುನಡುವೆ ಪರೀಕ್ಷೆ ಸೋಲು ಗೆಲುವು ಎಲ್ಲವೂ ಇರಲೇಬೇಕು. ಇದನ್ನು ಹೇಳುವಾಗ ಎಲ್ಲೋ ಕೇಳಿದ ಜೋಕೊಂದು ನೆನಪಾಯಿತು.
ಒಂದು ಮಗು ಒಂದನೇ ತರಗತಿ ಪಾಸಾಗಿ ಎರಡನೇ ತರಗತಿಗೆ ಉತ್ತೀರ್ಣಗೊಂಡಿತAತೆ. ಅಂದರೂ ಅದಕ್ಕೆ ಅಳು. ಯಾಕೆ ಗೊತ್ತಾ, ತಾನು ಪಾಸಾದೆ, ತನಗೆ ಕಲಿಸಿದ ಟೀಚರ್ ಮಾತ್ರ ಒಂದನೇ ತರಗತಿಯಲ್ಲಿಯೇ ಉಳಿದರು ಅಂತ. ನಮ್ಮಂಥ ಶಿಕ್ಷಕರ ಪಾಡು ಇದುವೇ. ಪ್ರತೀವರ್ಷವೂ ಅದೇ ಪಾಠ, ಅದೇ ಪದ್ಯ. ಅಂದರೂ ಅದನ್ನು ನವೀಕರಿಸಿಕೊಂಡು ಬೋಧಿಸುವ ಕುಶಲತೆಯೊಂದು ಶಿಕ್ಷಕರಿಗಿರುತ್ತದೆ.
ಇದನ್ನೂ ಓದಿ: Letters to Daughter: ಮಗಳೇ, ‘ಊಟಕ್ಕಾತು ಬಟ್ಳು ಮಡುಗು’ ಎಂಬ ಅಮ್ಮನ ಕರೆಗೆ ಕಾಯುತ್ತಿದ್ದ ದಿನಗಳವು..!
ಅದಿರಲಿ. ಹೇಳಬೇಕಾದುದು ಇಷ್ಟೇ ಮಗು. ಈ ಪರೀಕ್ಷೆಗಳು ಅಂತಲ್ಲ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಇಂದು ಮಕ್ಕಳು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಚೆನ್ನಾಗಿ ಓದಬೇಕು, ಅಂಕಗಳನ್ನು ಪಡೆದುಕೊಳ್ಳಬೇಕು ಎಂಬುದೇನೋ ನಿಜವೇ. ಹಾಗೆಂದು ಅಂಕಗಳ ಹಿಂದೆ ಯಾವತ್ತೂ ಓಡಬೇಡಿ. ಬದುಕು ನಮ್ಮನ್ನು ನೋಡುವುದು ಅಥವಾ ಪರೀಕ್ಷಿಸುವುದು ಬೇರೆಬೇರೆ ಹಂತದಲ್ಲಿ ಬೇರೆ ಬೇರೆ ಥರ ಇದ್ದೇ ಇರುತ್ತದೆ.
ನಿನಗ್ಗೊತ್ತಾ, ವಾಯುಸೇನೆಯಲ್ಲಿ ಪೈಲಟ್ ಆಗಬೇಕೆಂದುಕೊAಡ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅದು ಸಾಧ್ಯವಾಗದೇ ಇದ್ದುದರಿಂದ ಮುಂದೆ ಕ್ಷಿಪಣಿಮಾನವ ಎನಿಸಿಕೊಳ್ಳುವ ಎತ್ತರಕ್ಕೆ ಬೆಳೆದರು. ಇಂಗ್ಲಿಷ್ ನಲ್ಲಿ ಬಿ.ಎ. ಆನರ್ಸ್ ಮಾಡಬೇಕೆಂದಿದ್ದ ಆರ್.ಕೆ. ನಾರಾಯಣ್ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣರಾಗಿದ್ದರು. ಮುಂದೆ ಇಂಗ್ಲಿಷ್ ಸಾಹಿತ್ಯ ಓದುವವರಿಗೆ ಪಠ್ಯವಾಗುವಂಥ ಕಾದಂಬರಿಗಳನ್ನು, ಕಥೆಗಳನ್ನು ಬರೆದರು.
ಎಷ್ಟೋ ಸಲ ಅಂದುಕೊಳ್ಳುತ್ತೇನೆ, ಒಂದು ಮಾರ್ಕು ಹೋಯ್ತು ಎಂದು ಅಳುವ ಮಕ್ಕಳಿಗಿಂತ ನೂರಕ್ಕೆ ಮೂವತ್ತೆöÊದು ತೆಗೆದುಕೊಂಡು ತಾನು ಪಾಸಾದೆ ಎಂದು ಸಂಭ್ರಮಿಸುವ ಮನಸ್ಥಿತಿ ದೊಡ್ಡದು ಅಂತ. ಫಸ್ಟ್ ರ್ಯಾಂಕ್ ರಾಜು ಸಿನೆಮಾ ನೋಡಿದ್ದೀಯಲ್ವಾ? ಹಾಗೆಂದು ಅನಗತ್ಯ ಅಂಕಗಳನ್ನು ಕಳೆದುಕೊಳ್ಳುವ ಕೆಲಸವೂ ಮಾಡಬೇಡ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಂದಾಗ ಒಂದೊAದೂ ಅಂಕವೂ ಅತೀ ಅಮೂಲ್ಯವಾಗುತ್ತದೆ.
ಇದನ್ನೂ ಓದಿ: Letters to Daughter: ಮಗಳೇ, ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ‘ನನಗೆ ಸಮಾನತೆ ಬೇಕು’ ಅಂತ!
ಇದನ್ನು ಹೇಳುವಾಗ ನೆನಪಾಯಿತು. ನಾನು ಪಿಯುಸಿ ಸೇರಿದ ದಿನಗಳು. ಅಂತಿಮ ಪದವಿಯ ಫಲಿತಾಂಶ ಬಂದಿತ್ತು. ಒಬ್ಬ ವಿದ್ಯಾರ್ಥಿಗೆ ಕೇವಲ ಒಂದೇ ಒಂದು ಅಂಕದಲ್ಲಿ ವಿಶ್ವವಿದ್ಯಾಲಯದ ರ್ಯಾಂಕು ತಪ್ಪಿಹೋಗಿತ್ತು. ರ್ಯಾಂಕು ಪಡೆದ ಇತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಈ ಒಂದೇ ಮಾರ್ಕಿಗೆ ರ್ಯಾಂಕು ಕಳೆದುಕೊಂಡವರನ್ನೂ ಕೂರಿಸಿದ್ದರು. ಪ್ರತಿಯೊಬ್ಬರೂ ಕೂಡಾ ಆ ವಿದ್ಯಾರ್ಥಿಯನ್ನು ಉಲ್ಲೇಖಿಸುವಾಗ ಒಂದೇ ಒಂದು ಮಾರ್ಕಿಗೆ ರ್ಯಾಂಕು ಕಳೆದುಕೊಂಡ ಇವರಿಗೆ ಎಂದು ಸೇರಿಸುತ್ತಿದ್ದರು. ಬರುಬರುತ್ತಾ ಎಲ್ಲರೂ ಆ ವಿದ್ಯಾರ್ಥಿಯನ್ನು ಅದೇ ರೀತಿ ನೆನಪು ಮಾಡಿಕೊಳ್ಳುವುದು ರೂಢಿಯಾಯ್ತು. ನಾವು ಪಡೆಯುವ ರ್ಯಾಂಕುಗಳೆಲ್ಲ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ನಮ್ಮಲ್ಲಿ ಮತ್ತಷ್ಟು ಕನಸುಗಳನ್ನು ಅರಳಿಸಲು ನೆರವಾಗಬಹುದು ಎಂಬುದೇನೋ ನಿಜ. ಒಂದು ವೇಳೆ ನಿರೀಕ್ಷಿಸಿದ ಅಂಕಗಳು ಬಂದಿಲ್ಲವಾದರೆ ಅದಕ್ಕಾಗಿ ಕೊರಗುತ್ತಾ ಕೂರಬಾರದು ಅಷ್ಟೇ.
ಪರೀಕ್ಷೆಗೆ ಓದುವುದೆಂದರೆ ಸುಮ್ಮನೇ ಬಾಯಿಪಾಠ ಮಾಡುವುದಲ್ಲ. ಓದಿ ಅರ್ಥ ಮಾಡಿಕೊಂಡದ್ದು ಮರೆತುಹೋಗುವುದಿಲ್ಲ. ಕನ್ನಡವೇ ಆಗಲೀ, ಇಂಗ್ಲಿಷ್, ಸಮಾಜ ..ಯಾವುದೇ ಆಗಲೀ ವಿಷಯಗಳನ್ನು ಗ್ರಹಿಸಿಕೊಂಡು ಓದಿದರೆ ಮನಸ್ಸಿನಲ್ಲಿ ಉಳಿಯುತ್ತದೆ. ಓದಿ ಆಗಿಲ್ಲವೆಂಬ ಗೊಂದಲವನ್ನೋ ಚಿಂತೆಯನ್ನೋ ಇಟ್ಟುಕೊಳ್ಳುವುದೂ ಬೇಡ. ವರ್ಷಪೂರ್ತಿ ಕೇಳಿದ ಪಾಠಗಳಲ್ಲವೇ ಅವು? ಒಂದೆರಡು ಬಾರಿ ಪುಟ ಮಗುಚಿದರೆ ನೆನಪಾಗುತ್ತವೆ. ಕಷ್ಟವಾಗುವುದನ್ನು ಬರೆದು ಕಲಿತರೆ ಆಯಿತಲ್ಲ. ಇದನ್ನೆಲ್ಲ ನಿನಗೆ ವಿಶೇಷವಾಗಿ ಹೇಳಬೇಕಿಲ್ಲ ಅಲ್ವಾ?
ಇದನ್ನೂ ಓದಿ: Letters to Daughter: ಮಗಳೇ, ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಅಂತ ಒಂದು ಹಾಡಿದೆ
ಮಗಳೇ, ಪರೀಕ್ಷೆಯಲ್ಲಿ ಹೆಚ್ಚಿನವರಿಗೆ ಒಂದು ಭ್ರಮೆ ಇರುತ್ತದೆ. ಏನೆಂದರೆ ತುಂಬಾ ಪುಟ ಉತ್ತರ ಬರೆದವರಿಗೆ ತುಂಬಾ ಅಂಕಗಳು ಬರುತ್ತವೆ ಅಂತ. ಅದಕ್ಕಾಗಿ ಅತಿಹೆಚ್ಚು ಸಂಖ್ಯೆಯಲ್ಲಿ ಹೆಚ್ಚುವರಿ ಹಾಳೆಗಳನ್ನು ತೆಗೆದುಕೊಳ್ಳುವವರಿದ್ದಾರೆ. ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಕೆಲವು ಬಾರಿ ತುಂಬಾ ಬೇಸರವಾಗುತ್ತದೆ, ಯಾಕೆ ಗೊತ್ತಾ ಅನಗತ್ಯವಾಗಿ ಪುಟಗಳನ್ನು ಖಾಲಿ ಬಿಟ್ಟು, ಹೆಚ್ಚುವರಿ ಹಾಳೆಗಳಲ್ಲಿ ಒಂದೆರಡು ಸಾಲು ಬರೆದು ಕೊಡುವ ಮಕ್ಕಳ ಸಂಖ್ಯೆಯೇ ಹೆಚ್ಚು.
ಪುಟಗಳನ್ನು ಹಾಳು ಮಾಡುವ ಮಕ್ಕಳನ್ನು ಕಂಡರೆ ನನಗೆ ಕಸಿವಿಸಿಯಾಗುತ್ತದೆ. ಹೋಗಲಿ ಬಿಡು ಅಂದುಕೊಳ್ಳೋಣ ಎಂದರೆ ನಾನು ಓದುತ್ತಿದ್ದ ಕಾಲೇಜಿನಲ್ಲಿ ಇದ್ದ ಮೇಷ್ಟ್ರೊಬ್ಬರು ನೆನಪಾಗುತ್ತಾರೆ. ಮಕ್ಕಳ ಪರೀಕ್ಷಾ ಪತ್ರಿಕೆಗಳಲ್ಲಿ ಖಾಲಿ ಬಿಟ್ಟಿದ್ದ ಹಾಳೆಗಳನ್ನು ಅವರು ನೀಟಾಗಿ ಕತ್ತರಿಸಿ ಇಟ್ಟುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಮೌಲ್ಯಮಾಪನ ಮಾಡುವಾಗ ಖಾಲಿ ಬಿಟ್ಟ ಹಾಳೆಗಳಿಗೆ ಕೆಂಪುಶಾಯಿಯಲ್ಲಿ ಗುರುತು ಹಾಕಿಬಿಡುವುದು ಕ್ರಮ. ಹಾಳೆಯಂತೂ ವ್ಯರ್ಥವೇ. ಅದರ ಬದಲು ಕತ್ತರಿಸಿ ಇಟ್ಟುಕೊಳ್ಳುವ ಈ ಮೇಷ್ಟ್ರನ್ನು ಎಲ್ಲರೂ ಆಡಿಕೊಂಡು ನಗುತ್ತಿದ್ದರು- ಜಿಪುಣ ಅಂತ.
ಮಗಳೇ, ಬಹುಶಃ ತನ್ನ ಬಾಲ್ಯದ ದಿನಗಳಲ್ಲಿ ವಿದ್ಯಾರ್ಥಿದೆಸೆಯಲ್ಲಿ ಪುಸ್ತಕಕ್ಕಾಗಿ, ಬರೆಯುವ ಹಾಳೆಗಳಿಗಾಗಿ ಕಷ್ಟಪಟ್ಟವರು ಅವರು ಇದ್ದಿರಬೇಕು ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು. ಆದರೆ ಅವರದ್ದು ನಿಜಕ್ಕೂ ಒಳ್ಳೆಯ ಕೆಲಸ ಅಂತ ಅರ್ಥವಾದ್ದು ನಾನು ಶಿಕ್ಷಕಿಯಾದ ಮೇಲೆಯೇ. ಆದರೆ ಅದೇ ರೀತಿ ಕತ್ತರಿಸಿ ಇಟ್ಟುಕೊಳ್ಳಲು ನನಗೆ ಸಣ್ಣಸಂಕೋಚ ಅಡ್ಡಿ ಬರುತ್ತದೆ. ಮಗಳೇ, ಚೆನ್ನಾಗಿ ಪರೀಕ್ಷೆಯಲ್ಲಿ ಉತ್ತರ ಬರೆ. ನೀನು ತೋರಿದ ಶ್ರದ್ಧೆಗೆ ಭಗವಂತ ಪ್ರತಿಫಲ ಕೊಟ್ಟೇ ಕೊಡುತ್ತಾನೆ.
ಇಂತೀ ಆಶೀರ್ವಾದಗಳೊಂದಿಗೆ,
ಅಮ್ಮ
