(ಪತ್ರ ಹದಿಮೂರು) ಮಗಳೇ,
Letters to Daughter: ನಿನ್ನೆ ನೀನು ತೋರಿಸಿದ ಪಂಗಾ ಹಿಂದಿ ಸಿನೆಮಾ ನನಗೆ ಬಹಳ ಇಷ್ಟವಾಯ್ತು ಮಗೂ. ರಾಷ್ಟ್ರೀಯ ಮಹಿಳಾ ಕಬಡ್ಡಿ ತಂಡದ ನಾಯಕಿಯಾಗಿದ್ದ ಜಯಾ ನಿಗಮ್ (ಕಾಲ್ಪನಿಕ ಪಾತ್ರ) ತಾಯಿಯಾದ ಬಳಿಕ ಅನಿವಾರ್ಯವಾಗಿ ಮಗು ಅಥವಾ ಕಬಡ್ಡಿ ಎಂಬ ಆಯ್ಕೆ ಎದುರಾದಾಗ ಮಗುವನ್ನು, ಮನೆಯನ್ನು ನೆಚ್ಚಿಕೊಂಡು ಗಂಡ ಮಗುವಿನೊಂದಿಗೆ ಸಂತೋಷವಾಗಿ ಇದ್ದವಳು ಏಳು ವರ್ಷಗಳ ಬಳಿಕ ಮರಳಿ ತಂಡಕ್ಕೆ ಆಯ್ಕೆಯಾಗುವ ಕಥೆ. ಅವಳು ಎದುರಿಸುವ ಕಷ್ಟಗಳು ಬಹುಶಃ ಎಲ್ಲಾ ಮಹಿಳಾ ಆಟಗಾರರ ಸಂಕಟವೇ. ಅದರಲ್ಲಿನ ಎರಡು ಸನ್ನಿವೇಶಗಳು ನನಗೆ ಬಹಳ ಆಪ್ತವೆನಿಸಿದವು ಮಗೂ.
ಇದನ್ನೂ ಓದಿ: Letters to Daughter: ಮಗಳೇ, ಬದಲಾಗಬೇಕು ನೀವು, ಕಾಲದೊಂದಿಗೆ ಚಲಿಸುತ್ತಾ ಇರಬೇಕು
ಯಾವ ಮಗುವಿಗಾಗಿ ತನ್ನ ಉನ್ನತ ಭವಿಷ್ಯವನ್ನು ಬದಿಗೊತ್ತಿದಳೋ, ಅದೇ ಮಗು ತನ್ನ ಆಟೋಟ ಸ್ಪರ್ಧೆಯ ದಿನ ಅಮ್ಮ ಬರಲಿಲ್ಲ ಎಂಬ ಕಾರಣಕ್ಕೆ ಅಮ್ಮನಲ್ಲಿ ಸಿಟ್ಟಾಗಿ ‘ಯಾವಾಗ ನೋಡಿದರೂ ನಿನಗೆ ನಿನ್ನ ಕೆಲಸವೇ ಆಯ್ತು. ನನ್ನ ಗೆಳೆಯರೆಲ್ಲರ ಅಮ್ಮಂದಿರು ಬಂದಿದ್ದರು. ನಿನಗೆ ಮಾತ್ರ ಬರುವುದಕ್ಕಾಗಲಿಲ್ಲ. ನನಗಾಗಿ ಏನು ಮಾಡಿದ್ದೀಯಾ ನೀನು?’ ಎಂದು ಕೇಳುವ ಸನ್ನಿವೇಶ ಒಂದು.
ಅಮ್ಮನಿಗೆ ಅದೆಷ್ಟು ನೋವಾಗಿರಬೇಡ ಹೇಳು? ಗಂಡ-ಮಗನಿಗಾಗಿ ಸ್ವತಃ ದಣಿದು ಬಂದ ಅವಳೇ ಚಪಾತಿ ಲಟ್ಟಿಸುತ್ತಾ ಅಳು ನುಂಗಲಾರದೇ ಬಿಕ್ಕುತ್ತಾಳಲ್ಲ? ಅಂಥ ಬಿಕ್ಕಳಿಕೆಯ ನೋವನ್ನು ಅನುಭವಿಸಿದ ಅಮ್ಮಂದಿರು ಅದೆಷ್ಟು ಮಂದಿ ಇದ್ದಾರೋ ಏನೋ! ಅಡುಗೆ ಮನೆಯ ಸಿಂಕುಗಳಿಗಷ್ಟೇ ಗೊತ್ತಿದ್ದೀತು. ಇರಲಿ, ಅದೇ ನೆಪವಾಗಿ ಅಮ್ಮ ತಮಗೀರ್ವರಿಗಾಗಿ ಮಾಡಿದ ತ್ಯಾಗವನ್ನು ಅಪ್ಪ ಮಗುವಿಗೆ ತಿಳಿಸಿ ಹೇಳಿದ ಬಳಿಕ ಮಗು ಅಮ್ಮನ ವಯಸ್ಸನ್ನು ಅಪ್ಪನಲ್ಲಿಯೇ ಕೇಳಿ ತಿಳಿದುಕೊಂಡು ‘32ರ ಹರೆಯದಲ್ಲಿ ಅವಳು ಮತ್ತೆ ಆಟಗಾರ್ತಿಯಾಗುವುದು ಸಾಧ್ಯವಿಲ್ಲವಾ?’ ಎಂಬ ಕುತೂಹಲ ತೋರುವುದು ಜಯಾ ನಿಗಮ್ ಮತ್ತೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಆರಂಭದಲ್ಲಿ ಮಗುವಿನ ಸಮಾಧಾನಕ್ಕೆಂದು ಅಭ್ಯಾಸದ ನಾಟಕದಲ್ಲಿ ತೊಡಗಿಸಿಕೊಂಡದ್ದಾದರೂ ಅದು ಅವಳು ಕಳೆದುಕೊಂಡ ಅಂತರAಗದ ಆನಂದವನ್ನು ಅವಳಿಗೆ ಮರಳಿ ಕೊಡುತ್ತದೆ.
ಅವಳು ತನ್ನ ಗಂಡನಲ್ಲಿ ‘ನನಗೆ ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ. ಮಗುವಿನ ಬೆಳವಣಿಗೆಯನ್ನು ಕಂಡಾಗಲೂ ಸಂತೋಷವಾಗುತ್ತದೆ. ಆದರೆ ನನ್ನನ್ನು ನಾನು ನೋಡಿಕೊಂಡಾಗ ದುಗುಡ ಆವರಿಸಿಕೊಳ್ಳುತ್ತದೆ. ಆ ನೋವನ್ನು ಮರೆಸುವುದು ಕಬಡ್ಡಿ ಮಾತ್ರ’ ಎನ್ನುತ್ತಾಳಲ್ಲ.. ನಾನು ನನಗರಿವಿಲ್ಲದೇ ಆ ಪಾತ್ರವಾದೆ ಅನಿಸಿತು ಮಗಳೇ, ಯಾಕೆ ಗೊತ್ತಾ? ನಮಗೆ ಅತ್ಯಂತ ಇಷ್ಟವಾದ ಹವ್ಯಾಸವನ್ನು, ಯಾವುದರ ಮೂಲಕ ನಮ್ಮ ಶಾಲೆಯಲ್ಲಿ, ಕಾಲೇಜಿನಲ್ಲಿ, ಸಮಾಜದಲ್ಲಿ ನಮಗೊಂದು ಮನ್ನಣೆಯಿತ್ತೋ, ಹೆಮ್ಮೆಯಿತ್ತೋ ಅದನ್ನು ಬಿಟ್ಟು ಏನೂ ಅಲ್ಲದಂತೆ ಬದುಕುವ ನೋವೇನೆಂಬುದು ನನಗೆ ಗೊತ್ತು.
ಇದನ್ನೂ ಓದಿ: Letters to Daughter: ಮಗಳೇ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ
ಕಂದಾ, ಮಂಗಳೂರಿನಿAದ ತುಮಕೂರಿಗೆ ಬಂದಾಗ ನನ್ನ ನಮ್ಮ ಯಕ್ಷಗಾನವೆಂಬ ಪ್ರಪಂಚ ಅಲ್ಲೇ ಉಳಿದುಕೊಂಡಿತ್ತು. ವರ್ಷದಲ್ಲೆರಡು ಆಟವೂ ಇಲ್ಲದಂಥ ಊರಿಗೆ ಬಂದಿದ್ದೆವು. ನನ್ನೊಳಗೆ ಅದಾವ ಬಗೆಯ ಸಂಕಟ ಮಡುಗಟ್ಟಿತ್ತೆಂಬುದನ್ನು ಬಹುಶಃ ಪದಗಳಲ್ಲಿ ವಿವರಿಸಲಾರೆ.
ಅಪ್ಪನಿಗೋ ಕೂತಲ್ಲಿ ನಿಂತಲ್ಲಿ ಯಕ್ಷಗಾನದ ಪದಗಳನ್ನು ಕೇಳುವ ಅಭ್ಯಾಸ. ಮಲಗಿಕೊಳ್ಳಬೇಕಾದರೂ ಯಕ್ಷಗಾನ ಪದ ಬೇಕು! ನನಗೋ ಅದನ್ನು ಕೇಳಿದರೆ ‘ಇನ್ನೆಲ್ಲಿಯ ಯಕ್ಷಗಾನ’ ಎಂಬ ವಿಷಾದ. ಪದ್ಯಗಳನ್ನು ಕೇಳಿದರೆ ಒಂದು ಬಗೆಯ ಮಾನಸಿಕ ಯಾತನೆ. ಅಪ್ಪ ಯಕ್ಷಗಾನ ಪದ್ಯ ಹಾಕಿಕೊಂಡರೆ ಒಂದೋ ಆಫ್ ಮಾಡು ಎನ್ನುತ್ತಿದ್ದೆ, ಇಲ್ಲವೇ ಅಲ್ಲಿಂದೆದ್ದು ಹೊರಗೆ ಹೋಗಿಬಿಡುತ್ತಿದ್ದೆ. ‘ಯಕ್ಷಗಾನವೆಂದರೆ ಜೀವ ಎಂಬAತಿದ್ದ ಇವಳೇಕೆ ಹೀಗಾಡುತ್ತಾಳೆ’ ಎಂಬ ಗೊಂದಲ ಅಪ್ಪನಿಗೆ ಮೂಡಿದ್ದಿರಬಹುದು. ಆದರೆ ಅದಕ್ಕೆ ಸ್ಪಂದಿಸುವ ಸಂದರ್ಭ ಇರಲಿಲ್ಲ.
ಮನೆಯಲ್ಲಿ ನೀನೂ ತಮ್ಮನೂ ಎಳೆಯ ಮಕ್ಕಳು, ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದ ಅಜ್ಜಿ, ವಯೋಸಹಜ ದಣಿವಿನ ಅಜ್ಜ, ತನ್ನ ಕನಸಿನ ಪತ್ರಿಕೋದ್ಯಮ ವಿಭಾಗವನ್ನು ಚೆನ್ನಾಗಿ ಕಟ್ಟುವ ಗುರಿಯನ್ನು ಮೈಮನಸಿನ ತುಂಬಾ ತುಂಬಿಕೊAಡಿದ್ದ ಅಪ್ಪ.. ನನ್ನ ಪ್ರಪಂಚ ಇಷ್ಟಕ್ಕೇ ಸೀಮಿತವಾಗಿತ್ತು ಕಂದಾ. ಇದರ ನಡುವೆ ಯಕ್ಷಗಾನವನ್ನು ನನಗೆ ಗೊತ್ತಿಲ್ಲದೇ ಬಹಳ ದೂರ ಮಾಡಿಕೊಂಡಿದ್ದೆ. ಜತೆಗೆ ಒಮ್ಮೆ ಆರ್ಥಿಕ ಸ್ವಾತಂತ್ರö್ಯವನ್ನು ಅನುಭವಿಸಿದ ಬಳಿಕ ಅದನ್ನು ಕಳೆದುಕೊಂಡು ಬದುಕುವುದು ಕಷ್ಟವೆನಿಸಿತ್ತು ಪುಟ್ಟಾ.
ಇದನ್ನೂ ಓದಿ: Letters to Daughter: ಮಗಳೇ, ‘ಊಟಕ್ಕಾತು ಬಟ್ಳು ಮಡುಗು’ ಎಂಬ ಅಮ್ಮನ ಕರೆಗೆ ಕಾಯುತ್ತಿದ್ದ ದಿನಗಳವು..!
ಅಪ್ಪ ಮತ್ತು ನನ್ನ ನಡುವೆ ಅದೆಷ್ಟೇ ಗಾಢವಾದ ಪ್ರೀತಿಯ ಬಂಧವಿದ್ದರೂ ನನಗೆ ದುಡ್ಡು ಬೇಕೆಂದು ಕೇಳುವುದು ಕಸಿವಿಸಿಯ ಸಂಗತಿಯಾಗಿತ್ತು. ಒಂದೆಡೆಯಲ್ಲಿ ನನಗೆ ಆದಾಯದ ಮೂಲವಿಲ್ಲ ಎಂಬ ಕಾರಣಕ್ಕೆ ನನಗರಿವಿಲ್ಲದೇ ನನ್ನ ಸ್ವಾಭಿಮಾನ ಕುಸಿಯುತ್ತಿತ್ತು. ಇನ್ನೊಂದೆಡೆಯಲ್ಲಿ ಸದಾ ಹೆಮ್ಮೆಯನ್ನು ತುಂಬಿಕೊಡುತ್ತಿದ್ದ ಯಕ್ಷಗಾನದಿಂದ ನಾನು ದೂರವಿದ್ದೆ. ‘ನನ್ನ ಬದುಕಿನ ಸಾಧನೆಯೇನು? ಈ ಪರಿಸ್ಥಿತಿ ಎಲ್ಲಿಯವರೆಗೆ?’ ಎಂಬ ಚಿಂತೆ ಕುಟುಕುತ್ತಿತ್ತು.
ಅಂತೂ ಅನಿವಾರ್ಯತೆಯೊಂದು ಸೃಷ್ಟಿಯಾಗಿ ನಾನು ಮರಳಿ ಉಪನ್ಯಾಸಕ ವೃತ್ತಿಗೆ ಬಂದೆ. ೨೦೧೪ರ ಸಪ್ಟೆಂಬರಿನಲ್ಲಿ ಯಕ್ಷದೀವಿಗೆಯೂ ಹುಟ್ಟಿಕೊಂಡಿತು. ನಿನಗೆ ಆರು ವರ್ಷ, ತಮ್ಮನಿಗೆ ಮೂರು. ೨೦೦೭ರಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗದ ಭಸ್ಮಾಸುರನ ಪಾತ್ರ ಮಾಡಿ ಬಣ್ಣತೆಗೆದ ಬಳಿಕ ೨೦೧೫ರಲ್ಲಿ ಮತ್ತೆ ಬಣ್ಣ ಹಚ್ಚಿದೆ ಕಂದಾ, ಎಂಟು ವರ್ಷಗಳ ಬಳಿಕ.
ನಿನಗೂ ತಮ್ಮನಿಗೂ ಅದರಿಂದ ತೊಡಕಾಗದಂತೆ ಪ್ರಯತ್ನ ನಡೆದಿತ್ತು. ಅಪ್ಪ ಯಕ್ಷದೀವಿಗೆಗೆ ಹೆಗಲು ಕೊಟ್ಟು ನಿಂತರು. ನೀವೂ ತೊಡಗಿಕೊಂಡಿರಿ. ಆಗ ಮನಸ್ಸು ಗಟ್ಟಿಮಾಡಿಕೊಳ್ಳದಿದ್ದರೆ ನಿನ್ನ ಅಮ್ಮ ಇಂದು ಹೀಗಿರುತ್ತಿರಲಿಲ್ಲ ಪುಟ್ಟಾ. ಅದರರ್ಥ ಇಂದು ನಾನೇನೋ ದೊಡ್ಡ ಸಾಧಕಿಯೆಂದಲ್ಲ. ಬೆಳೆಯಬೇಕಾದ ಎತ್ತರ ಇನ್ನೂ ಬಹಳ ದೂರವಿದೆ ನಿಜ. ಆದರೆ ಗುರಿ ಸ್ಪಷ್ಟವಿದ್ದು ಅದರೆಡೆಗೆ ಭದ್ರವಾದ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಮಾಧಾನವಿದೆಯಲ್ಲ.. ಅದೇ ನಮ್ಮನ್ನು ಆರೋಗ್ಯವಂತರನ್ನಾಗಿ ಇರಿಸಬಲ್ಲದು.
ಇದನ್ನೂ ಓದಿ: Letters to Daughter: ಮಗಳೇ, ಮೊನ್ನೆ ನೀನೇ ಅನ್ನುತ್ತಿದ್ದೆಯಲ್ಲ‘ನನಗೆ ಸಮಾನತೆ ಬೇಕು’ ಅಂತ!
ಪುಟ್ಟಾ, ನನ್ನಪ್ಪ ಪಟ್ರಮೆಯ ಅನಾರು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗಿನ ಶಾಲಾ ವಾರ್ಷಿಕೋತ್ಸವದ ಒಂದು ಫೋಟೋ ನಮ್ಮ ಆಲ್ಬಂನಲ್ಲಿ ಇತ್ತು. ವೇದಿಕೆಯಲ್ಲಿ ಕೈಕಟ್ಟಿ ಕುಳಿತು ಭಾಷಣ ಮಾಡುತ್ತಿದ್ದವರನ್ನು ಅಪ್ಪ ನೋಡುತ್ತಿದ್ದ ಚಿತ್ರ ಅದು. ನಾನೂ ಅದೇ ರೀತಿಯಲ್ಲಿ ವೇದಿಕೆಯಲ್ಲಿ ಕುಳಿತುಕೊಳ್ಳಬೇಕೆಂಬ ಆಸೆ ಪುಟಿಯುವುದಕ್ಕೆ ನನಗೆ ಆ ಫೋಟೋ ಸಾಕಿತ್ತು ಮಗೂ.
ಅಪ್ಪನ ದಾರಿಯಲ್ಲಿ ಮುಂದೆ ಬಂದು ನಾನೂ ಉಪನ್ಯಾಸಕಿಯಾದೆನೆಂಬುದು ನಿಜ. ಬದುಕಿಗೆ ಬೇಕಾದ ಆತ್ಮವಿಶ್ವಾಸವನ್ನೂ ಸ್ವಾಭಿಮಾನವನ್ನೂ ಯಕ್ಷಗಾನ ತುಂಬಿಕೊಟ್ಟಿದೆಯೆAಬುದು ನಿಜ. ಆದರೆ ಪುಟ್ಟಾ, ಕೆಲವು ತಿಂಗಳ ಹಿಂದೆ ಹತ್ತಾರು ಕಾರ್ಯಕ್ರಮಗಳ ನಡುವೆ ನಾನು ಬ್ಯುಸಿಯಾದೆನೆಂದು ‘ನಿನಗೆ ಯಕ್ಷಗಾನ ಒಂದಿದ್ದರೆ ಸಾಕು. ಮತ್ಯಾರೂ ಬೇಡ, ಏನೂ ಬೇಡ’ ಎಂದು ಸಿಟ್ಟುಮಾಡಿಕೊಂಡು ಮೆಟ್ಟಿಲನ್ನು ಧಪಧಪನೆ ಹತ್ತಿಕೊಂಡು ಹೋದೆಯಲ್ಲ. ಒಂದು ಮಾತು ಹೇಳಲಾ? ನಿಮಗೆ ಕೊಡುವ ಸಮಯವನ್ನು ಕಿತ್ತು ಯಕ್ಷಗಾನಕ್ಕೆ ಕೊಡುತ್ತಿದ್ದನೇನೋ ಅಂತ ನನಗೂ ಹಲವಾರು ಬಾರಿ ಅನ್ನಿಸಿದೆ. ಆದರೆ ಮಗಳೇ, ಅದಲ್ಲವಾದರೆ ನಾನೇನು ಮಾಡುತ್ತಿದ್ದೆ ಹೇಳು? ಮುಗಿಯದ ಮನೆಗೆಲಸ, ಸಂಜೆಯಾದರೆ ಅಕ್ಕಪಕ್ಕದವರೊಂದಿಗೆ ಒಂದಿಷ್ಟು ಹರಟೆ.ಸಂಜೆಯ ವೇಳೆಗೆ ಸೀರಿಯಲ್ಲುಗಳು. ಹೀಗೆ ಹಚ್ಚಿಕೊಳ್ಳುವ ಸಾಧ್ಯತೆ ಇತ್ತಲ್ಲವೇ ಮಗೂ? ಅದರಿಂದ ಯಾರಿಗೂ ಏನೂ ಪ್ರಯೋಜನವಿರುತ್ತಿರಲಿಲ್ಲ. ಮನೆಯೊಳಗೆ ಈಗಿರುವ ನೆಮ್ಮದಿಯೂ ಇರುತ್ತಿರಲಿಲ್ಲ.
ಕಂದಾ, ನಿನಗೆ ಅಮ್ಮ ಹತ್ತಿರವೇ ಬೇಕೆನ್ನಿಸಿದ ಹೊಟ್ಟೆನೋವಿನ ದಿನಗಳವು. ನಾನು ಸಿಗದ ದುಃಖವನ್ನು ಯಕ್ಷಗಾನದ ಮೇಲಿನ ಮುನಿಸಾಗಿ ಬದಲಿಸಿಕೊಳ್ಳುವ ಪ್ರಯತ್ನ ಮಾಡಿದೆಯೆಂಬುದು ನನಗರ್ಥವಾಯಿತು. ನನ್ನಂತಹ ಅಮ್ಮಂದಿರ ಕಥೆ ಬಹುಶಃ ಇದುವೇ. ಎಲ್ಲವನ್ನೂ ಬಿಟ್ಟು ಮನೆಯಲ್ಲಿ ಇದ್ದುಬಿಡೋಣ ಅಂತ ಅನೇಕ ಸಲ ಅನ್ನಿಸುತ್ತದೆ. ಆದರೆ ಆ ಧೈರ್ಯವಿಲ್ಲ ಮಗೂ. ಯಾಕೆ ಗೊತ್ತಾ? ಇನ್ನೂ ಮೂರು ವರ್ಷಗಳಲ್ಲಿ ನೀನೂ ತಮ್ಮನೂ ನಿಮ್ಮ ಆಯ್ಕೆಯ ಅಧ್ಯಯನದಲ್ಲಿ ಬ್ಯುಸಿ ಆಗಿಬಿಡುತ್ತೀರಿ. ಅಪ್ಪ ಎರಡೆರಡು ವಿಭಾಗದ ಹೊಣೆಗಾರಿಕೆಯ ನಡುವೆ ಬ್ಯುಸಿ ಇದ್ದೇ ಇರುತ್ತಾರೆ. ಆಗ ನಾನೇನು ಮಾಡಲಿ ಎಂಬ ಭಯವಾಗುತ್ತದೆ.
ಹೆಣ್ಣುಮಕ್ಕಳು ಎಲ್ಲ ನೋವನ್ನೂ ಸಹಿಸಿಕೊಳ್ಳಬಲ್ಲೆವು ಕಂದಾ, ಒಂಟಿತನವನ್ನಲ್ಲ! ನನ್ನನ್ನು ಸಹಜವಾಗಿ ಇರಗೊಡುವುದು ಇದೇ ಬರೆವಣಿಗೆ ಮತ್ತು ಯಕ್ಷಗಾನ. ಈಗ ಅದರಿಂದ ದೂರವಾದರೆ ಮತ್ತೆ ಆ ಕ್ಷೇತ್ರಕ್ಕೆ ನಾನೂ ಬೇಕಾಗುವುದಿಲ್ಲ ಮಗೂ. ಮನಸ್ಸು ಹಂಬಲಿಸಿದರೂ ಶರೀರ ಕೇಳುವುದಿಲ್ಲ ಎಂಬ ಸ್ಥಿತಿ ಬರುತ್ತದೆ. ಯಕ್ಷಗಾನವೂ ಕ್ರೀಡೆಯಷ್ಟೇ ಶಾರೀರಿಕ ಬಲವನ್ನು ನಿರೀಕ್ಷಿಸುತ್ತದೆ.
ಮಗಳೇ, ಮನೆಮಂದಿಗೆ ಕೊಡಬೇಕಾದ ಸಮಯ ಹೊಂದಿಸಿಕೊAಡೇ ನನ್ನ ಕನಸುಗಳನ್ನು ಅರಳಿಸಿಕೊಳ್ಳುವ ಪ್ರಯತ್ನ ನನ್ನದು. ನಮ್ಮ ಬದುಕಿನಲ್ಲಿ ನನಸಾದ ಕನಸುಗಳು ನೀನೂ ತಮ್ಮನೂ. ನಿಮ್ಮ ಪುಟ್ಟ ಕೈಗಳಿಂದ ಖೋ ಕೊಡುತ್ತಿದ್ದರಷ್ಟೇ ಮುಂದಿನ ಓಟ ಸಾಧ್ಯ.
ಅಮ್ಮನನ್ನು ಅರ್ಥ ಮಾಡಿಕೊಳ್ಳುತ್ತೀಯಲ್ಲ?
ಇಂತೀ ಅಮ್ಮ
