Ganesha Chaturthi: ವರ್ಷಕ್ಕೆ ನೂರಾರು ಹಬ್ಬಗಳು ಬಂದು ಹೋಗುತ್ತಿರುತ್ತದೆ. ಹಾಗೆ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಮಹತ್ವವಿರುತ್ತದೆ. ಹಿಂದೂ ಪುರಾಣದ ಪ್ರಕಾರ ನೂರಾರು ಹಬ್ಬಗಳು ಅದಕ್ಕೆ ಅದರದೇ ಆದ ವಿಶೇಷತೆ ಇದ್ದರೂ ಕೂಡ ಮುಕ್ಕೋಟಿ ದೇವತೆಗಳಲ್ಲಿ ಮೊದಲು ಪೂಜೆಗೆ ಅರ್ಹನಾದ ಗಣೇಶನ ಹಬ್ಬಕ್ಕೆ(Ganesha Chaturthi) ಅವನ ಪೂಜೆಗೆ ವಿಶೇಷವಾದ ಮಹತ್ವವಿದೆ. ಯಾವ ಹಬ್ಬಕ್ಕೂ ಇಲ್ಲದ ಒಂದು ವಿಶೇಷತೆ ಈ ಗೌರೀ ಗಣೇಶ ಹಬ್ಬಗಳಿಗಿವೆ. ಅದೇನೆಂದರೆ, (ಪುರಾಣದ ಪ್ರಕಾರ)
ಆ ಜಗದಂಬಿಕೆಯಾದ, ಹರನ ಮಡದಿ ಪಾರ್ವತೀದೇವಿ(Parvati Devi) ತಾನು ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಬರುತ್ತಾಳೆ ಭಾದ್ರಪದ ಶುಕ್ಲದ ಈ ಮಾಸದಲ್ಲಿ. ಪಾರ್ವತೀ ದೇವಿ(Parvati Devi), ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥಿವೀ ಎಂದೂ ಹೆಸರಿದೆ. (ಪೃಥಿವೀ ಎಂದರೆ ವ್ಯಾಪಿಸಿರುವವಳು ಎಂದರ್ಥ). ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ, ಪರಶಿವನನ್ನು ಪ್ರಾರ್ಥಿಸುತ್ತಾಳೆ.
ಇದನ್ನೂ ಓದಿ: ಗೀತಾಸಾರ: ಶ್ರೀ ಕೃಷ್ಣ ಪರಮಾತ್ಮ ಹೇಳಿದ ಜೀವನ ಸೂತ್ರಗಳು
“ಒಡೆಯಾ, ತಾಯಿಯ ಮನೆಗೆ ಹೋಗಿಬರುತ್ತೇನೆ, ಅಜ್ಞೆ ಕೊಡಿ” ಎಂದು ಹೇಳುತ್ತಾ ತನ್ನ ಮಾತನ್ನು ಮುಂದುವರಿಸುತ್ತಾಳೆ ಗೌರಿ.. ಒಡೆಯ ಭಾದ್ರಪದ ಶುದ್ಧ ತಿಥಿ ನಾಳೇ ದಿನ ನನ್ನ ತವರಿಗೆ ಹೋಗುವ ಮನಸ್ಸು ಆಗಿದೆ, ತವರಿಗೆ ಹೋಗಿ ನನ್ನ ಹೆತ್ತವರನ್ನು ನೋಡಿಕೊಂಡು ನನ್ನ ತವರಿನಲ್ಲಿ ಇದ್ದು ಬರುವ ಇಚ್ಛೆಯಾಗಿದೆ ಒಪ್ಪಿಗೆ ಕೊಡಿ ಒಡೆಯ ನನ್ನ ತವರು ಮನೆಗೋಗಿ ಬರುವೆ ಎಂದು ತಾಯಿ ಜಗಜ್ಜನನಿ ಪಾರ್ವತಿದೇವಿಯು ಪರಮೇಶ್ವರನ ಹತ್ತಿರ ಭಿನಯಿಸಿಕೊಳ್ಳುತ್ತಾಳೆ. ಜಗದೊಡೆಯ ಸರಸ ಹೃದಯದ ಗೌರೀ ವಲ್ಲಭ ಮಂದಹಾಸದಿಂದ ನುಡಿಯುತ್ತಾನೆ,
ಸತಿ “ನೀ ಹೋದರೆ ನನ್ನನ್ನು ನೋಡಿಕೊಳ್ಳುವರ್ಯಾರು” ನನ್ನ ಈ ಕೈಲಾಸವನ್ನು ಪೂರೆಯುವವರು ಯಾರು ಎಂದು.. ಕೇಳುತ್ತಾನೆ ನಾಟಕದ ಸೂತ್ರಧಾರಿ ಪರಮೇಶ್ವರ. ಜಗಜ್ಜನನಿ ಆದಿಶಕ್ತಿಯು ಅಚ್ಚರಿಯಿಂದ . “ಜಗದ ರಕ್ಷಣೆಯನ್ನು ಮಾಡುವ ನಿಮ್ಮನ್ನು ನಾನು ನೋಡಿಕೊಳ್ಳಬೇಕೆ,.. ಜಗವನ್ನೇ ನೋಡಿಕೊಳ್ಳುವ ನಿಮ್ಮ ಈ ತಾಣ ಕೈಲಾಸವನ್ನು ನೋಡಿಕೊಳ್ಳುವುದಕ್ಕೆ ನಾನು ಇರಲೇಬೇಕು ” ಇದು ಎಂತಹ ವಿನೋದದ ಮಾತು ಒಡೆಯ…ಮೂರು ದಿನದ ಮಟ್ಟಿಗೆ ಕಳುಹಿಸಿಕೊಡಿ” ನನ್ನ ತವರಿಗೆ ಹೋಗಿ ಬರುವೆ ಎಂದು ಗೌರಿ ಪ್ರಾರ್ಥಿಸುತ್ತಾಳೆ.
ಇದನ್ನೂ ಓದಿ: ಗೀತಾಸಾರ: ಒತ್ತಡ ರಹಿತ ಬದುಕು, ಯಶಸ್ವಿ ವೃತ್ತಿ ಜೀವನಕ್ಕೆ ದಾರಿ
ಪಟ್ಟುಬಿಡದ ಪರಮೇಶ್ವರ..”ದೇವಿ ನೀನು ಅಲ್ಲಿಗೆ ಹೋದರೇ ಇಲ್ಲಿ ನನಗಾರುಂಟು”ಕಳಿಸುವ ಇಚ್ಛೆಯಿಲ್ಲದೇ ಪರಮೇಶ್ವರ ನುಡಿಯುತ್ತಾನೆ…ಪಾರ್ವತಿಯು “ಸ್ವಾಮಿ ನಾನು ಹೆಚ್ಚು ಕಾಲ ಭೂಮಿಯಲ್ಲಿ ಇರುವುದಿಲ್ಲ ಮೂರು ದಿನವಿದ್ದು ನಿಮ್ಮ ಪಾದದ ಸೇವೆಗೆ ತಿರುಗಿ ನಾ ಬರುವೆ.”.. ನನ್ನನ್ನು ಕಳಿಸಿಕೊಡಿ. ಮಡದಿಯ ವಿನಂತಿಗೆ ಮನಸೋತು ಪರಮೇಶ್ವರ ಹೋಗಿ ಬಾ ಗೌರಿ ಎಂದು ಹೋಗುವುದಕ್ಕೆ ಅನುಮತಿ ನೀಡುತ್ತಾನೆ… ನಂತರ ತನ್ನ ಪ್ರೇಮದ ಮಡದಿಯ ಮೇಲಿನ ಪ್ರೀತಿಯಿಂದಲೂ, ಅವಳಿಗೆ ತವರಿನ ಮೇಲೆ ಇರುವ ಅಭಿಮಾನವನ್ನು ತಿಳಿದಿದ್ದರಿಂದಲೂ ಮತ್ತೊಂದು ಮಾತನ್ನು ಹೇಳುತ್ತಾರೆ -ಪರಮೇಶ್ವರ…
ಪರಮೇಶ್ವರ ಮಂದಹಾಸದಿಂದ ಸತಿ ನಿನ್ನನ್ನು ಬಿಟ್ಟು ನನಗೆ ಇರುವುದು ಬಹಳ ಕಷ್ಟ. ಆದರೂ ನಿನ್ನ ವಿನಂತಿಗೆ ಮನಸೋತು ಒಪ್ಪಿಗೆ ನೀಡುತ್ತಿದ್ದೇನೆ. “ಮೂರು ದಿನ ಅಂತಷ್ಟೇ ಅಲ್ಲ, ಐದು ದಿನ ಅಥವಾ ಏಳು ದಿನವಾದರೂ ನಿನ್ನ ತವರಿನಲ್ಲಿ ನೀನು ಇದ್ದು ಬಾ. ನಾನು ನಿನ್ನ ದಾರಿಯನ್ನು ಕಾಯುವೆ. ನೀ ಹೊರಡು, ನಾನು ಗಣಪತಿಯ ಸಮೇತನಾಗಿ ಬರುತ್ತೇನೆ, ನಿನ್ನನ್ನು ಕರೆದೊಯ್ಯಲು ಎಂದು ಹೇಳುತ್ತಾನೆ. ಪಾರ್ವತಿಯು ಪರಮಾನಂದದಿಂದ ತನ್ನ ತವರಿಗೆ ಹೋಗುವ ಸಂಭ್ರಮದಲ್ಲಿ ತಯಾರಿಯನ್ನು ಮಾಡಿಕೊಂಡು ತನ್ನ ಪತಿಯ ಜೊತೆ ನಂದಿಯನ್ನು ಏರಿ, ತನ್ನ ತವರು ಮನೆಯಾದ ಮೇನಕೆ, ಹಿಮವಂತರ ಮನೆಗೆ ಉತ್ಸಾಹದಿಂದ ಹೋಗುತ್ತಾಳೆ ತಾಯಿ ಗೌರಿ.. ಪರಮೇಶ್ವರ ತನ್ನ ಪತ್ನಿಯ ಉತ್ಸಾಹವನ್ನು ಕಂಡು ಮಂದಹಾಸದಿಂದ ತಮ್ಮ ಮಾವನ ಮನೆಯಲ್ಲಿ ಗೌರಿಯನ್ನು ಬಿಟ್ಟು ಬರುತ್ತಾರೆ ರುದ್ರದೇವರು.
ಹೆಂಡತಿಯನ್ನು ಬೀಳ್ಕೊಡುವಾಗ –
ವರಸಾಲಿಗ್ರಾಮದ ನರಸಿಂಹಮೂರ್ತಿಯ
ಪರಮಹರಭಕ್ತರ ಮನೆಯೊಳಗಿದ್ದು
ಸಿರಿಯ ಸಂಪತ್ತುಗಳ ವರವನೇ ನೀಡಿ ಸಡಗರದಿಂದ ನೀನೋಡಾಡಿ ಬೇಗ ಬಾರೇ
ಎಂದು ಆದೇಶಿಸುತ್ತಾರೆ.

ಸಾಲಿಗ್ರಾಮದ ಸಾನ್ನಿಧ್ಯವಿರುವ, ನರಸಿಂಹನನ್ನು ಅರ್ಥಾತ್ ಶ್ರೀಹರಿಯನ್ನು ಆರಾಧಿಸುವ ಶ್ರೇಷ್ಠ ಶಿವಭಕ್ತರ ಮನೆಯಲ್ಲಿ ನೀನಿದ್ದು ಅವರ “ಬಾಳ ಬಡತನವ ಬಿಡಿಸಿ ಐಶ್ವರ್ಯಗಳ ಕೊಟ್ಟು” ಬದುಕಿನ ಬವಣೆಗಳನ್ನು ಕಳೆದು, ಸಿರಿ ಸಂಪತ್ತುಗಳನ್ನು ಅವರಿಗೆ ಕರುಣಿಸಿ, ಪ್ರೀತಿಯ ಮಗಳಾಗಿ ಅವರ ಮನೆಯಲ್ಲಿ ಓಡಾಡಿಕೊಂಡು ನೀನು ಬೇಗ ಬಂದುಬಿಡು ಎಂದು ಭಕ್ತರಿಗೆ ವರಪ್ರದಳಾಗುವಂತೆ ತಿಳಿಸುತ್ತಾರೆ. (ಇದೇ ಕಾರಣಕ್ಕೆ ಸ್ವರ್ಣಗೌರಿಯ ವ್ರತದಂದು ಸಾಂಪ್ರದಾಯವನ್ನು ಬಲ್ಲ ಸ್ಮಾರ್ತರ ಮನೆಗಳಲ್ಲಿ ಮೊದಲಿಗೆ ನರಸಿಂಹರೂಪದ ಶ್ರೀಹರಿಗೆ ಪೂಜೆ ಸಲ್ಲಿಸಿ ಆ ಬಳಿಕ ಸ್ವರ್ಣಗೌರಿಯನ್ನು ಪೂಜಿಸುವ ಐತಿಹ್ಯ ಇದೆ..)
ಇದನ್ನೂ ಓದಿ: ಈತನ ರಾಮಭಕ್ತಿಯ ಕಂಡು ಆಂಜನೇಯನೆ ಮಾರುಹೋಗಿದ್ದ!
ತನ್ನ ಮಡದಿಯನ್ನು ಮಾವನ ಮನೆಯಲ್ಲಿ ಬಿಟ್ಟು ಕೈಲಾಸಕ್ಕೆ ಬಂದ ಪರಮೇಶ್ವರನಿಗೆ ಪಾರ್ವತಿಯ ನೆನಪು ಅತಿ ಹೆಚ್ಚಾಗಿ ಕಾಡುತ್ತದೆ.. ತನ್ನ ನಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮಾರನೆಯ ದಿವಸವೇ ಗಣಪತಿಯನ್ನು ಗೌರಿಯ ತವರು ಮನೆಗೆ ಕಳುಹಿಸುತ್ತಾರೆ. ಹೀಗಾಗಿ ತೃತೀಯಾ ತಿಥಿಯಂದು ಗೌರೀ ಹಬ್ಬ. ಅದರ ಮಾರನೆಯ ದಿವಸ ಚತುರ್ಥೀಯಂದು ಗಣಪತಿಯ ಹಬ್ಬವನ್ನು ನಾವು ಆಚರಿಸುತ್ತೇವೆ…
ತಾಯಿಯ ಮನೆಗೆ ಮಗಳು ಬಂದಂತೆ, ಸಮಗ್ರ ಜಗತ್ತಿನ ತಾಯಿಯಾದ ಗೌರೀದೇವಿ ನಮ್ಮ ಮನೆಗೆ ಮಗಳಾಗಿ ಬರುತ್ತಾಳೆ. ಮನೆಗೆ ಬಂದ ನಮ್ಮ ಮಗಳು ಹೊರಡುವಾಗ ನಿಮ್ಮ ಮನೆ ಚೆನ್ನಾಗಿರಲಿ ಎಂದು ಹರಸಿದರೇ, ತವರು ಮನೆ ಸುಖ ಸಂತೋಷಗಳಿಂದ, ಸಿರಿ ಸಂಪತ್ತುಗಳಿಂದ ಕೂಡುತ್ತದೆ, ಅಂತಹುದರಲ್ಲಿ ಜಗಾಮಿನಿಯಾದ ಪಾರ್ವತೀದೇವಿ ಅನುಗ್ರಹ ಮಾಡಿದಲ್ಲಿ ನಾವು ಸಾತ್ವಿಕವಾದ ಸಂಪತ್ತಿನಿಂದ ಭರಿತರಾಗುತ್ತೇವೆ, ಸಾಧನೆಯ ಮಾರ್ಗದಲ್ಲಿ ನಡೆಯುತ್ತೇವೆ.
ಹೀಗಾಗಿ, ಈ ಸ್ವರ್ಣಗೌರೀ ವ್ರತವನ್ನು ವಿನಾಯಕ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಶುದ್ಧವಾದ ಕ್ರಮದಲ್ಲಿ ಮಾಡಬೇಕು. ಶ್ರೀಹರಿ-ಗುರುಗಳು ಮೆಚ್ಚುವಂತೆ ಆಡಂಬರವಿಲ್ಲದೇ, ಭಕ್ತಿಯಿಂದ ಮಾಡಬೇಕು. ಮದುವೆಯಾಗಿ ಹೋಗಿ ಗಂಡನ ಮನೆಯನ್ನು ಬೆಳಗುತ್ತಿರುವ ಸಂತಸದ ಚಿಲುಮೆಯಾದ ಮಗಳು ಬಂದಾಗ ಎಷ್ಟು ಸಂತೋಷ ಸಡಗರ ಪಡುತ್ತೇವೆಯೋ ಅದರ ಸಾವಿರಪಟ್ಟು ಸಂತೋಷ ಸಡಗರದಿಂದ ನಾವು ಗೌರೀಹಬ್ಬವನ್ನು ಆಚರಿಸಬೇಕು. ಕಾರಣ, ಜಗದಂಬೆ ಮಗಳಾಗಿ ಬರುತ್ತಿದ್ದಾಳೆ, ವರಗೌರಿಯಾಗಿ ಬರುತ್ತಿದ್ದಾಳೆ.
ತೃತೀಯಾ ತಿಥಿಯೇ ಯಾಕೆ ಸ್ವರ್ಣಗೌರೀವ್ರತ?
ಈ ಪ್ರಶ್ನೆಗೆ ಶ್ರೀ ವರಾಹದೇವರು ವರಾಹಪುರಾಣದಲ್ಲಿ ನಮಗೆ ಉತ್ತರ ನೀಡಿದ್ದಾರೆ. ಪರಮಾತ್ಮ ಒಂದೊಂದು ತಿಥಿಯನ್ನು ಒಬ್ಬೊಬ್ಬ ದೇವತೆಗೆ ನೀಡಿದಾಗ ತನ್ನ ಪ್ರೀತಿಯ ತಂಗಿಯಾದ ಪಾರ್ವತಿಗೆ (ಪರಮಾತ್ಮನ ಯಜ್ಞ, ಕಪಿಲ ರೂಪಗಳಿಗೆ ಸತೀರೂಪದ ಗೌರೀದೇವಿ ತಂಗಿಯಾಗಬೇಕು. ಯಜ್ಞ ಮತ್ತು ಕಪಿಲನ ಅಮ್ಮಂದಿರು ಸತಿಯ ಅಮ್ಮ ಪ್ರಸೂತಿಯ ಅಕ್ಕಂದಿರು)
”ಪ್ರಾದಾಂ ತೃತೀಯಾಂ ಪಾರ್ವತ್ಯೆ ಗಣೇಶಾಯ ಚತುರ್ಥಿಕಾಮ್’
ತನ್ನ ತಂಗಿಯಾದ ಪಾರ್ವತಿಗೆ ತೃತೀಯಾ ತಿಥಿ ನೀಡಿದ ಕಾರಣಕ್ಕೇ, ಕಾರ್ತೀಕ ಶುದ್ಧ ತೃತೀಯಾದಂದು (ದೀಪಾವಳಿಯ ನಂತರ) ಅಣ್ಣತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗಿ ಅವರ ಕೈಯಿಂದ ಮಾಡಿದ ಅಡಿಗೆಯನ್ನು ಉಂಡು ಅವರಿಗೆ ಉಡುಗೊರೆ ನೀಡಿ ಬರುತ್ತಾರೆ.
ಒಟ್ಟಾರೆ ತೃತೀಯಾ ತಿಥಿ ಪಾರ್ವತೀದೇವಿಯ ಅಧೀನ. ಪ್ರತೀಮಾಸದ ತೃತೀಯಾದಂದೂ ಗೌರಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಭಾದ್ರಪದಮಾಸದ ತೃತೀಯಾದಂದು ಸ್ವರ್ಣಗೌರೀವ್ರತವನ್ನು ಆಚರಿಸಬೇಕು ಎಂಬ ವಾಡಿಕೆ ಇದೆ..
ಗೌರೀದೇವಿಯ ಪ್ರತಿಮೆ
ಸ್ವರ್ಣಗೌರೀ ವ್ರತದಲ್ಲಿ(Swarna Gowri Vrata) ಮಣ್ಣಿನ ಗೌರೀದೇವಿಯ ಪ್ರತಿಮೆಯನ್ನು ಮಾಡಿಸಬೇಕು. (ಗಣೇಶನ ಪ್ರತಿಮೆಗಳು ಕಲರಿಲ್ಲದೇ ದೊರೆಯುತ್ತವೆ, ಗೌರೀ ಪ್ರತಿಮೆ ಮಾತ್ರ ದೊರೆಯುವದೇ ಇಲ್ಲ. ಆದರೆ ಹಳ್ಳಿಗಳಲ್ಲಿನ ಕುಂಬಾರರ ಮನೆಗೆ ಹೋಗಿ, ಪ್ರತಿಮೆಯಾಗಬೇಕಾದರೇ ಕೇವಲ ಮಣ್ಣಿನ – ಇನ್ನೂ ಕೆಮಿಕಲ್ಲಿನ ಬಣ್ಣ ಬಳಿಯದ – ಪ್ರತಿಮೆಯನ್ನು ತಂದಿಟ್ಟುಕೊಳ್ಳುವದು ಅತ್ಯಂತ ಸೂಕ್ತ)
ಇದು ಸ್ವರ್ಣಗೌರೀವ್ರತ,(Swarna Gowri Vrata) ಸ್ವರ್ಣ ಎಂದರೆ ಬಂಗಾರ. ಬಂಗಾರದಲ್ಲಿ ಪ್ರತಿಮೆಯನ್ನು ಮಾಡಿ, ಪೂಜಿಸಿ ಆ ಬಳಿಕ ಪ್ರತೀನಿತ್ಯವೂ ಗೌರೀಶಂಕರರ ಆರಾಧನೆಯನ್ನು ಮಾಡುವ ಸದ್ಭಕ್ತರಿಗೆ ದಾನ ಮಾಡುವದೂ ಸಹ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದರಿಂದ ಎಂದಿಗೂ ಕುಂದಿಲ್ಲದ ಸಂಪತ್ತು ನಮ್ಮದಾಗುತ್ತದೆ. ಶಕ್ತಿಯಿದ್ದಲ್ಲಿ ಹಾಗೆ ಮಾಡಬಹುದು.
ಇಲ್ಲದಿದ್ದರೆ ಚಿಂತೆಯಿಲ್ಲ. ನಮ್ಮ ದೇವರು, ನಮ್ಮ ದೇವತೆಯರು ಕರುಣಾಳುಗಳು, ಒಂದು ದಳ ತುಳಸಿಗೆ, ಒಂದು ಬಿಲ್ವಪತ್ರೆಗೆ, ಒಂದು ಹೂವಿಗೆ, ಒಂದು ಗರಿಕೆಗೆ, ಬಿಂದು ಗಂಗೋದಕಕ್ಕೆ ಒಲಿಯುವವರು. ಹೀಗಾಗಿ ಮಣ್ಣಿನಲ್ಲಿ ಪ್ರತಿಮೆಯನ್ನು ಮಾಡಿಸಿ, ಪೂಜಿಸಿ ಶುದ್ಧವಾದ ನೀರಿನಲ್ಲಿ ವಿಸರ್ಜಿಸುವದು ಶ್ರೇಷ್ಠ ಕ್ರಮ. ಅಷ್ಟೇ ಅಲ್ಲ, ನೀವು ಬಂಗಾರದಲ್ಲಿ ಗೌರಿಯ ಪ್ರತಿಮೆ ಮಾಡಿಸಿದರೂ, ಮಣ್ಣಿನಲ್ಲಿ ಒಂದು ಪ್ರತಿಮೆಯನ್ನು ಮಾಡಿಸಲೇಬೇಕು.

ಮಣ್ಣಿನಲ್ಲಿಯೇ ಯಾಕೆ ಮಾಡಬೇಕು?
ಅದ್ಭುತವಾದ ಉತ್ತರಗಳು ಇದಕ್ಕಿವೆ. ಪಾರ್ವತೀದೇವಿ(Parvati Devi) ಸಮಗ್ರ ಚರಾಚರವಸ್ತುಗಳ, ವಿಶೇಷವಾಗಿ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿವೀ ಎಂದು ಕರೆಸಿಕೊಳ್ಳುತ್ತಾಳೆ ಎಂದು ಶ್ರೀ ಮದಾಚಾರ್ಯರು ತಿಳಿಸುತ್ತಾರೆ. (ಪೃಥಿವೀ ಎಂದರೆ ವ್ಯಾಪಿಸಿರುವವಳು ಎಂದರ್ಥ. ಪೃಥು, ಪೃಥ್ವಿ, ಪೃಥಿವೀ = ವಿಶಾಲ ವ್ಯಾಪ್ತ.)
ಆ ತಾಯಿ ಪಾರ್ವತಿ, ತನ್ನವರ ಮೇಲೆ ಅನುಗ್ರಹ ಮಾಡಲು ಕೈಲಾಸದಿಂದ ಕೆಳಗಿಳಿದು ಬರುತ್ತಾಳೆ. ಮಳೆಗಾಲದ ಈ ಸಮಯದಲ್ಲಿ ಮಳೆಯ ಮುಖಾಂತರ ಧರೆಗಿಳಿದು ಮಣ್ಣಿನ ಕಣಕಣದಲ್ಲಿಯೂ ಅವಳು ವ್ಯಾಪಿಸಿರುತ್ತಾಳೆ. ಹೀಗಾಗಿ ಮಳೆ ಬಿದ್ದು ಮೆತ್ತಗಾದ ಕೆರೆಯ ಜೇಡಿ ಮಣ್ಣನ್ನು ತಂದು ಕುಂಬಾರರು ಪ್ರತಿಮೆಗಳನ್ನು ಮಾಡಬೇಕು.ಎಂದು ಇತಿಹಾಸವಿದೆ… ಇದರ ಆಧ್ಯಾತ್ಮಿಕ ಮುಖವನ್ನು ನೋಡೋಣ ಕೈಲಾಸದ ಪರ್ವತದಿಂದ ಮೇಘದ ರೂಪದಲ್ಲಿ ಹೊರಟ ಪಾರ್ವತೀದೇವಿ ಮಳೆಯಾಗಿ ಭೂಮಿಯನ್ನು ಸೇರುತ್ತಾಳೆ. ಹೀಗೆ, ಮಳೆಗಾಲದ ಈ ‘ಮಣ್ಣಿ’ನಲ್ಲಿ ಸ್ವಾಭಾವಿಕವಾಗಿ ಸುಗಂಧಮಯಳಾದ ಪಾರ್ವತೀದೇವಿಯ ಸನ್ನಿಧಾನವಿರುತ್ತದೆ.
ಕುಂಬಾರರು ಮಣ್ಣಿಗೆ ‘ನೀರು’ ಸೇರಿಸಿ ಪ್ರತಿಮೆ ಮಾಡಿದಾಗ ರೂಪಸಹಿತಳಾಗಿ ಪಾರ್ವತಿ ಸನ್ನಿಹಿತಳಾಗುತ್ತಾಳೆ. ಕುಂಬಾರರ ಮನೆಯಿಂದ ಆ ಪ್ರತಿಮೆಯನ್ನು ವಾದ್ಯಗಳ ಸಮೇತವಾಗಿ ತರುವಾಗ ‘ಗಾಳಿ’ಯಲ್ಲಿರುವ ಪಾರ್ವತೀದೇವಿ ಪ್ರತಿಮೆಯಲ್ಲಿ ಸೇರುತ್ತಾಳೆ. ನಾವು ಅದನ್ನು ಆರತಿಯೆತ್ತಿ ಮನೆಯೊಳಗೆ ತಂದಿಟ್ಟು ಪ್ರತಿಮೆಯ ಮುಂದೆ ದೀಪ ಹಚ್ಚಿದಾಗ ಅದರಲ್ಲಿನ ‘ಜ್ಯೋತೀ’ ರೂಪದಿಂದ ತಾಯಿ ಪ್ರತಿಮೆಯನ್ನು ಸೇರುತ್ತಾಳೆ.
ಆ ಬಳಿಕ ಮಾರನೆಯ ದಿವಸ ಪ್ರಾಣಪ್ರತಿಷ್ಠಾಪನೆಯ ಮಂತ್ರಗಳನ್ನು ಹೇಳಿದಾಗ ಅದರಲ್ಲಿ ‘ಆಕಾಶ’ಕ್ಕೆ ನಿಯಾಮಕಳಾದ ಪಾರ್ವತೀದೇವಿ(Parvati Devi) ಸನ್ನಿಹಿತಳಾಗುತ್ತಾಳೆ. ಹೀಗೆ, ಭೂಮಿ, ಜಲ, ವಾಯು, ಅಗ್ನಿ, ಆಕಾಶಗಳೆಂಬ ಪಂಚಭೂತಗಳಲ್ಲಿ ನೆಲೆನಿಂತ ತಾಯಿ ಪಾರ್ವತಿ ಪ್ರತಿಮೆಯಲ್ಲಿ ಸನ್ನಿಹಿತಳಾಗಿ ನಮ್ಮಿಂದ ಪೂಜೆಗೊಂಡು ಮತ್ತೆ ಕಡೆಯ ದಿವಸ ಮಂತ್ರಗಳನ್ನು ಹೇಳಿದಾಗ ಆಕಾಶದಲ್ಲಿ, ಹೊರಡುವಾಗ ಮಾಡುವ ಆರತಿಯಿಂದ ಅಗ್ನಿಯಲ್ಲಿ, ವಾದ್ಯಗಳ ಸಮೇತ ದಾರಿಯಲ್ಲಿ ಹೋಗುವಾಗ ವಾಯುವಿನಲ್ಲಿ ಮತ್ತು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರು ಭೂಮಿಗಳಲ್ಲಿ ಸೇರುತ್ತಾಳೆ.ಎಂದು ಪುರಾಣ ಕಥೆಗಳಿವೆ.

ಲಿಖಿತ್ ಹೊನ್ನಾಪುರ ,
ಮಾಗಡಿ ತಾಲೂಕು , ರಾಮನಗರ ಜಿಲ್ಲೆ
