(ಪತ್ರ ಹದಿನೇಳು) ಮಗಳೇ,
Letters to Daughter: ನಿನ್ನೊAದಿಗೆ ಮೊನ್ನೆ ಮಾಲ್ಗೆ ಬಂದಾಗ ನಿಜಕ್ಕೂ ನನಗನ್ನಿಸಿದ್ದೇನು ಎಂಬುದನ್ನು ಹೇಳಬೇಕಿತ್ತಲ್ಲ! ನಿಜವಾಗಿ ಹೇಳಬೇಕೆಂದರೆ ‘ನಾನು ಇಲ್ಲಿಗೆ ಸಲ್ಲದವಳು’ ಎಂಬುದಷ್ಟೇ ನನಗರ್ಥವಾಯಿತು. ಅಲ್ಲಿಯ ಅಬ್ಬರ, ಆಡಂಬರ ಎಲ್ಲದಕ್ಕಿಂತಲೂ ನಾನು ಬಲುದೂರ. ಹೆಚ್ಚೇಕೆ, ಅಲ್ಲಿಗೆ ಬರುವ ಜನರ ಶೋಕಿ, ತಮ್ಮ ಶರೀರದ ಗಾತ್ರಕ್ಕೆ ಒಂದಿನಿತೂ ಒಪ್ಪದ ಬಟ್ಟೆ. ಆಧುನಿಕತೆಯ ಹೆಸರಿನಲ್ಲಿ ಶರೀರವನ್ನು ಬೇಕುಬೇಕಾದಂತೆ ಕಾಣಿಸುವ ಜನರ ಪರಿ..ಅಬ್ಬಾ! ಯಾವಾಗ ಅಲ್ಲಿಂದ ಹೊರಗೆ ಬಂದೇನೋ ಅನ್ನಿಸಿಬಿಟ್ಟಿತ್ತು.
ಇದನ್ನೂ ಓದಿ: Letters to Daughter: ಮಗಳೇ, ಬಣ್ಣಗಳೊಂದಿಗಿನ ನಿನ್ನ ನಂಟು ಪ್ರಾರಂಭವಾದಾಗ ನಿನಗಿನ್ನೂ ಒಂದೂವರೆ ವರ್ಷ
ಆದರೆ ಎಲ್ಲವನ್ನೂ ನಿರಾಕರಿಸುತ್ತಾ ಸಾಗುವ ದಾರಿ ಎಲ್ಲಿಯವರೆಗೆ ಮಗೂ? ಕಡೆಯಪಕ್ಷ ಇಂಥಿAಥಾ ಸಂಗತಿಗಳಿವೆ ಎಂಬುದರ ಅರಿವಿಗಾದರೂ ನಿಮ್ಮೊಂದಿಗೆ ಬರಲೇ ಬೇಕಲ್ಲ? ಮಗಳೇ, 35 ವರ್ಷಗಳ ಹಿಂದೆ ನಿಡ್ಲೆಯ ಶಾಲೆಯ ಎದುರಿಗಿದ್ದ ಪುಟ್ಟ ಅಂಗಡಿಯೇ ನಮ್ಮೆದುರಿನ ಬೃಹತ್ ಪ್ರಪಂಚ.
ಅಲ್ಲಿಯ ಗಾಜಿನ ಬಾಟಲಿಗಳಲ್ಲಿ ತುಂಬಿಕೊAಡಿರುವ ಕಡ್ಲೆ, ಒಂದೆರಡು ಬಗೆಯ ಚಾಕಲೇಟುಗಳು, ಕಟ್ಲಿಸ್ ಇತ್ಯಾದಿ ಅಷ್ಟೇ. ಅವುಗಳ ಬಗೆಗೆ ನಮಗೆ ಮುಗಿಯದ ಕುತೂಹಲ. ನಮ್ಮ ಸಂತೋಷವೆಲ್ಲಾ ಆ ಬಾಟಲಿಗಳೊಳಗೆ ಇದ್ದಂಥ ಭಾವ. ದಿನಗಳುರುಳುತ್ತಾ ಉರುಳುತ್ತಾ ಹತ್ತು ಹದಿನೈದು ವರ್ಷಗಳಲ್ಲಿ ಸೂಪರ್ ಮಾರ್ಕೆಟ್ಗಳು ಶುರುವಾದವು.
ಅಲ್ಲಿ ನಮ್ಮಪ್ಪ ಮಾಡುತ್ತಿದ್ದಂತೆ ಬೇಕಾದ ದಿನಸಿಸಾಮಾನುಗಳ ಪಟ್ಟಿ ಬರೆದು ಅಂಗಡಿಯವರು ಕಟ್ಟಿಕೊಡುವವರೆಗೆ ಕಾದುಕೂರುವ ಪ್ರಮೇಯವೇ ಇಲ್ಲ. ಏನಿದ್ದರೂ ಬಾಸ್ಕೆಟ್ ತೆಗೆದುಕೊಂಡು ನಮಗೆ ಬೇಕಾದುವುಗಳನ್ನು ತೆಗೆದುಕೊಳ್ಳುತ್ತಾ ಹೋದರಾಯಿತು ಎನ್ನುವ ವ್ಯವಸ್ಥೆ ಬಂದಾಗ ನಮ್ಮ ಕಾಲೇಜು ದಿನಗಳಲ್ಲಿ ಚರ್ಚಾಸ್ಪರ್ಧೆಯೂ ಅದರ ಕುರಿತೇ.
ಇದನ್ನೂ ಓದಿ: Letters to Daughter: ಮಗಳೇ, ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ
ಬೇಕೆನ್ನುವವರು ಹಲವರು, ಬೇಡ, ಸ್ಥಳೀಯ ಅಂಗಡಿಯವರಿಗೆ ತೊಂದರೆಯಾಗುತ್ತದೆ ಎನ್ನುವವರು ಕೆಲವರು. ಯಾರು ಬಹುಮಾನ ತೆಗೆದುಕೊಂಡರೋ ಬಿಟ್ಟರೋ ಸೂಪರ್ ಮಾರ್ಕೆಟ್ಟುಗಳಂತೂ ಬಂದವು. ಈಗ ಅದಕ್ಕೂ ಮೀರಿದ ಮಾಲ್ಗಳು. ಬಹುಶಃ ಇವುಗಳ ಹೆಸರಿನಲ್ಲಿ ಯಾರೂ ಚರ್ಚಾಸ್ಪರ್ಧೆ ಮಾಡಿಲ್ಲವೇನೋ! ಅದಕ್ಕೇ ನಾವು ಮಾಡಬೇಕೀಗ! ಮಗಳೇ, ಏನೂ ತಿಳಿಯದ ಅಮ್ಮನಿಗೆ ತನಗೆ ತಿಳಿದದ್ದನ್ನು ತೋರಿಸಿ ಪರಿಚಯ ಮಾಡಿಸಿಕೊಡಬೇಕೆಂಬ ಕೌತುಕ ನಿನ್ನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಹೌದು ಕಂದಾ, ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ಹೆತ್ತವರು ಸಣ್ಣವರಾಗುತ್ತಾ ಸಾಗುವ ಪರಿಯಿದು. ನಮ್ಮ ಅರಿವಿನ ವಿಸ್ತಾರ ಬೇರೆ, ನಿಮ್ಮ ಅರಿವಿನ ಸಾಧ್ಯತೆಗಳೇ ಬೇರೆ. ಎರಡರ ಸಮ್ಮಿಶ್ರಣವಿದ್ದಾಗ ಎಲ್ಲವೂ ಚೆಂದ. ಬೇರುಗಳನ್ನು ಮರೆಯುವುದಕ್ಕಿಲ್ಲ, ಚಿಗುರುಗಳನ್ನು ಚಿವುಟಿ ಎಸೆಯುವುದಕ್ಕಿಲ್ಲ. ಸ್ವಯಂಚಾಲಿತ ಮೆಟ್ಟಿಲುಗಳ ಬಗ್ಗೆ ನನಗೆ ಸಣ್ಣಭಯ.
ನೀನು ಕೈಹಿಡಿದು ದರದರನೇ ಅದರತ್ತ ಕರೆದೊಯ್ಯುವುದರಲ್ಲಿದ್ದರೆ ನಾನು ಸಾಂಪ್ರದಾಯಿಕವಾಗಿ ಮೆಟ್ಟಿಲುಗಳನ್ನೇರುವುದರಲ್ಲಿದ್ದೆ. ನೀನು ಬಿಡಬೇಕಲ್ಲ.. ಸರಿ, ಜೋಪಾನವಾಗಿ ಏರಿದ್ದಾಯ್ತು. ಅದು ನನಗೇನೂ ಹೊಸ ಅನುಭವವಲ್ಲ. ಆದರೆ ಪ್ರತೀಬಾರಿಯೂ ಹೊಸಬಗೆಯ ಅನುಭವವಾಗುವುದು ಸುಳ್ಳಲ್ಲ. ಒಂದೊAದೇ ಮಹಡಿಯಲ್ಲಿ ಏನೇನಿದೆ ಅಂತ ತೋರಿಸುತ್ತಾ ನೀನು ಓಡು ನಡಿಗೆಯಲ್ಲಿದ್ದರೆ ನಿನ್ನನ್ನೇ ಹಿಂಬಾಲಿಸಿದ ನಾನು ನಿಜಕ್ಕೂ ದಣಿದಿದ್ದೆ. ಮನೆಯಲ್ಲಿ ಸುಸ್ತು ಎನ್ನುವ ನೀನು ಅಲ್ಲಿ ಉತ್ಸಾಹದ ಬುಗ್ಗೆಯಾಗಿದ್ದೆ.
ಇದನ್ನೂ ಓದಿ: Letters to Daughter: ಮಗಳೇ, ನನ್ನ ಹೊಟ್ಟೆಯನ್ನೊಮ್ಮೆ ಮೆಲ್ಲಗೆ ಸವರಿ ಅಮ್ಮಾ ಇದು ನಿನ್ನ ಬಾಬೆ ಅಲ್ಲ, ಎನ್ನ ಬಾಬೆ ಎಂದಿದ್ದೆ
ಮಗಳೇ, ಅಲ್ಲಿ ಒಂದೆಡೆ ನೀರಿಗೆ ಕಾಲುಚಾಚಿ ಒಂದಿಬ್ಬರು ಕುಳಿತಿದ್ದರಲ್ಲ..ಮೀನುಗಳು ಅವರ ಕಾಲಿಗೆ ಕಚಗುಳಿಯಿಡುತ್ತಾ ಸ್ವಚ್ಛಗೊಳಿಸುತ್ತಿದ್ದವಲ್ಲ? ವಿಶಾಲವೇ ಆಗಿದ್ದ ನದಿಯಲ್ಲಿ ಅದೇ ರೀತಿ ಕಾಲುನೀಡಿ ಕುಳಿತುಕೊಳ್ಳುವ ಭಾಗ್ಯ ನಮಗೆ ನಮ್ಮ ಬಾಲ್ಯದಲ್ಲೂ ಇತ್ತು. ಅಮ್ಮ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದರೆ ನಾವು ಅಕ್ಕತಂಗಿಯರು ನೀರಿಗೆ ಕಾಲೊಡ್ಡಿ ಕುಳಿತುಬಿಡುತ್ತಿದ್ದೆವು. ಆ ದಿನಗಳೆಲ್ಲ ಅದು ಹೇಗೆ ಮರೆಯಾದವೋ..
ಅಲ್ಲಿರುವ ತಿನಿಸುಗಳ ಕಥೆಯಾದರೂ ಅಷ್ಟೇ. ಎಷ್ಟೊಂದು ದುಬಾರಿ! ಅಲ್ಲಿ ಐದು ಮಂದಿ ಹೋಗಿ ಒಂದು ಹೊತ್ತಿಗೆ ಖರ್ಚು ಮಾಡುವ ದುಡ್ಡಲ್ಲಿ ಮನೆಯಲ್ಲಿ ಹತ್ತು ದಿನ ಎರಡು ಹೊತ್ತು ಉಣ್ಣಬಹುದು ಪುಟ್ಟಾ. ನಾನು ಹೀಗೆಂದರೆ ನಿನಗೆ ಬೇಸರವಾದೀತೋ ಏನೋ, ಜಿಪುಣತನದಿಂದ ಹೇಳುತ್ತಿರುವುದಲ್ಲ. ಅದು ವಾಸ್ತವ. ಒಂದು ತೆಳ್ಳಗಿನ ಚಪಾತಿಯೊಳಗೆ ಸೌತೆಕಾಯಿ, ಪನೀರ್.
ಇನ್ನೇನೋ ಒಂದೆರಡು ಬಗೆ ತುಂಬಿ ಓವನ್ನಲ್ಲಿಟ್ಟು ಬಿಸಿಮಾಡಿಕೊಟ್ಟದ್ದಕ್ಕೆ 250 ರೂಪಾಯಿಯೆಂದರೆ ಹೊಟ್ಟೆ ಉರಿಯುವುದಿಲ್ವಾ ಹೇಳು! ಮನೆಯಲ್ಲಿ ಮಾಡುವ ಚಪಾತಿ ಪಲ್ಯ ಅದಕ್ಕಿಂತ ರುಚಿಯಾಗಿರುವುದಿಲ್ವಾ! ನಾನು ಹಳೆಯ ಕಾಲದವಳು ಎನಿಸೀತೇನೋ ನಿನಗೆ.
ಇದನ್ನೂ ಓದಿ: Letters to Daughter: ಮಗಳೇ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ
ಆದರೆ ಮಗಳೇ, ಹೊಸ ಹೆಸರಿನಲ್ಲಿ ಜನರ ಜೇಬನ್ನು ಖಾಲಿ ಮಾಡುವ ತಂತ್ರಗಳಷ್ಟೇ ಇವೆಲ್ಲ. ಆರೋಗ್ಯಕ್ಕಾದರೂ ಅದರಿಂದ ಹಿತವೇ ಎಂದುಕೊAಡರೆ ಅಲ್ಲಿ ತಿನ್ನುತ್ತಿದ್ದವರ ಶರೀರದ ಗಾತ್ರಗಳನ್ನು ಗಮನಿಸಿದೆಯಲ್ಲ..ಯಾರನ್ನೂ ಆಡಿಕೊಳ್ಳುವುದಲ್ಲ, ಆದರೆ ಈ ಬಗೆಯ ಕೆಮಿಕಲ್ಗಳನ್ನು ತಿಂದೇ ಹಾಗಾಗಿದ್ದಾರೋ ಅನಿಸಿತು.
ಅಂಥಕಡೆಗಳಿಗೆ ಹೋದಾಗೆಲ್ಲ ಅಪ್ಪ ಹೇಳುತ್ತಿರುತ್ತಾರಲ್ಲ..ಇದು ಕೊಳ್ಳುಬಾಕತನವನ್ನು ಪ್ರಚೋದಿಸುತ್ತದೆ ಅಂತ. ನಿಜಕ್ಕೂ ಅದೇ ಆಗುವುದು. ಒಂದು ತೆಗೆದುಕೊಳ್ಳುವಲ್ಲಿ ಐದನ್ನು ಕೊಳ್ಳುವಂತಹ ಆಫರ್ಗಳು ಅಲ್ಲಿರುತ್ತವೆಯಲ್ಲ. ಕೊಂಡುಕೊಳ್ಳಬೇಕೆAದು ಯೋಚನೆಯೇ ಮಾಡದ ವಸ್ತುಗಳೂ ನಮ್ಮ ಬಾಸ್ಕೆಟ್ಟಿನಲ್ಲಿ ಕುಳಿತು ನಗುತ್ತಿರುತ್ತವೆ.
ಕಾಲದ ಮಹಾಪ್ರವಾಹವೊಂದು ನಮ್ಮನ್ನು ಬೇರಿನಿಂದಲೇ ಕಿತ್ತು ಮುಂದೆ ಸೆಳೆಯುವಂಥ ಓಟ ಇದು. ಬೇರಿಗೆ ಕಚ್ಚಿಕೊಂಡಿರುವ ಪ್ರಯತ್ನವನ್ನು ನಾವು ಮಾಡದೇ ಹೋದರೆ ಪ್ರವಾಹದಲ್ಲಿ ಸಿಲುಕಿ, ಹೊಡೆತಗಳನ್ನು ತಿಂದು ಹೇಳಹೆಸರಿಲ್ಲದಂತಾದೇವು.
ನಮ್ಮೊಳಗಿನ ಪ್ರಜ್ಞೆ ಜಾಗೃತವಾಗಿರಬೇಕು ಮಗೂ..
ಆಶೀರ್ವಾದಗಳೊಂದಿಗೆ,
ಅಮ್ಮ
