(ಪತ್ರ ಹದಿನಾರು) ಮಗಳೇ,
Letters to Daughter: ತೆವಡೇಹಳ್ಳಿಯಲ್ಲಿ ಯಕ್ಷಗಾನ ಇತ್ತು. ಅಂದೇಕೋ ನೀನು ಪಾತ್ರ ಮಾಡಿರಲಿಲ್ಲ. ಮೇಕಪ್ ಮಾಡಿಕೊಳ್ಳುತ್ತಿದ್ದವರಿಗೆ ಸಲಹೆ ಕೊಡುತ್ತಿದ್ದೆ. ‘ಬೇಸ್ ಸ್ಯಾಚುರೇಷನ್ ಬಂದಿಲ್ಲ. ಇನ್ನೊಂದು ಸ್ವಲ್ಪ ಸರಿಯಾಗಿ, ಮೆಲುವಾಗಿ ತಟ್ಟಿಕೊಳ್ಳಬೇಕು, ಬ್ಲೆಂಡ್ ಮಾಡಬೇಕು’ ಅಂತ ನೀನೆಂದಾಗ ಅಲ್ಲಿದ್ದವರೆಲ್ಲರೂ ಬೆರಗಾಗಿ ಘೊಳ್ಳನೆ ನಕ್ಕುಬಿಟ್ಟಿದ್ದರು. ‘ಯಕ್ಷಗಾನ ಕಲಾವಿದರಿಗೆ ಈ ಸ್ಯಾಚುರೇಷನ್ ಅಂತೆಲ್ಲ ಹೇಳಿದರೆ ಗೊತ್ತೇ ಆಗಲಿಕ್ಕಿಲ್ಲ ಖುಷೀ, ಗಾಬರಿಯಾದಾರು’ ಅಂತ ಶಶಾಂಕಪ್ಪಚ್ಚಿ ಹೇಳಿದ್ದರು. ನೀನು ಹುಸಿಮುನಿಸಿನಿಂದ ಕೆನ್ನೆಯುಬ್ಬಿಸಿ ನನ್ನತ್ತ ನೋಡಿದ್ದೆ.
ಇದನ್ನೂ ಓದಿ: Letters to Daughter: ಮಗಳೇ, ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ
ಹೌದು ಮಗೂ, ಬಣ್ಣಗಳ ವಿಷಯದಲ್ಲಿ ನೀನು ಎಂದೂ ರಾಜಿಮಾಡಿಕೊಳ್ಳುವವಳಲ್ಲ. ಬಣ್ಣಗಳೊಂದಿಗಿನ ನಿನ್ನ ನಂಟು ಪ್ರಾರಂಭವಾದಾಗ ನಿನಗಿನ್ನೂ ಒಂದೂವರೆ ವರ್ಷ. ಕ್ರೇಯಾನ್ ಹರಡಿಕೊಂಡು ತೊದಲುಭಾಷೆಯಲ್ಲಿ ಬನ್ಣ ಎನ್ನುತ್ತಿದ್ದೆ. ನೀನು ತಂಟೆತಕರಾರಿಲ್ಲದೇ ಸುಮ್ಮನೇ ಇದ್ದೀಯಾ ಎಂದರೆ ಬಣ್ಣಗಳನ್ನು ಮಾತನಾಡಿಸುತ್ತಿದ್ದೀಯ ಎಂದೇ ಅರ್ಥಮಾಡಿಕೊಳ್ಳಬಹುದಿತ್ತು. ಫ್ಯಾನ್ಸಿ ಸ್ಟೋರ್ ಗೆ ಹೋದಾಗ ಬಣ್ಣಬಣ್ಣದ ಕ್ಲಿಪ್ಪುಗಳನ್ನು ನೋಡಿ ನೀನು ಖುಷಿ ಪಡುವುದನ್ನು ಗಮನಿಸಿ ನಿನಗಾಗಿ ಕ್ರೇಯಾನ್ ಬಾಕ್ಸ್ ತೆಗೆದುಕೊಂಡಿದ್ದು ಮೊದಲಬಾರಿಗೆ! ಡ್ರಾಯಿಂಗ್ ಪುಸ್ತಕ ತುಂಬಾ ಗೆರೆಗಳನ್ನೆಳೆದಿದ್ದೆ. ಒಂದೇ ದಿನಕ್ಕೆ ಪುಸ್ತಕದ ಪುಟಗಳು ಮುಗಿದು ಹೋಗುವ ಹಾಗೆ!
ಒಂದು ದಿನ ನಿನಗೆ ಇಷ್ಟವಾಗಲೆಂದು ಶೃಂಗಾರ್ನ ಹನ್ನೆರಡು ಕಲರ್ ಇರುವ ಬೊಟ್ಟನ್ನು ತಂದಿದ್ದೆ. ಮರುದಿನ ನನ್ನ ಪಾಡಿಗೆ ನಾನು ಅಡುಗೆ ಕೆಲಸ ಮುಗಿಸಿ ಹೊರಬಂದು ನೋಡಿದರೆ ನೀನು ಮೈಕೈ ತುಂಬಾ ಆ ಬಣ್ಣಗಳನ್ನು ಬಳಿದುಕೊಂಡು ಪಿಳಿಪಿಳಿ ನೋಡುತ್ತಾ ಕುಳಿತಿದ್ದೆ. ‘ಇದೇನು ಕೆಲಸ ನಿಂದು?’ ಅಂದರೆ ಮುದ್ದಾಗಿ ‘ಬನ್ಣ…ಬಾಬೆ..’ ಅಂದೆ. ಅದಷ್ಟೂ ಬಣ್ಣಗಳನ್ನು ತೊಳೆದು ನಿನ್ನನ್ನು ಮೊದಲಸ್ವರೂಪಕ್ಕೆ ತರುವಲ್ಲಿ ನನಗೆ ಸಾಕಾಗಿ ಹೋಗಿತ್ತು.
ಅಷ್ಟು ಹೊತ್ತಿಂದ ನೀನು ಕಷ್ಟ ಪಟ್ಟು ಬರೆದುಕೊಂಡದ್ದನ್ನೆಲ್ಲ ನಾನು ತೊಳೆದೆನೆಂದು ನೀನು ಅಳುತ್ತಿದ್ದೆ. ಬಾಡಿಗೆ ಮನೆಯ ಗೋಡೆಗಳ ತುಂಬಾ ನಿನ್ನದೇ ಹೊಸ ಪೈಂಟಿಂಗ್! ಮಂಗಳೂರು ಬಿಟ್ಟು ತುಮಕೂರಿಗೆ ಬರುವಾಗ ಮನೆಗೆ ಪೈಂಟಿಂಗ್ ಮಾಡಿಸುವುದಕ್ಕೆಂದೇ ಹಣತೆರಬೇಕಾಯಿತೆಂಬುದು ಬೇರೇ ಸಂಗತಿ. ಅದಿರಲಿ, ಆದರೆ ನೀನು ಬಿಡಿಸಿದ ಆ ಚಿತ್ರಗಳಲ್ಲಿ ನಮ್ಮ ಕನಸುಗಳು ಅರಳಿಕೊಳ್ಳುತ್ತಿದ್ದವು. ನಮಗೆ ಅರಿವಿಲ್ಲದಂತೆ ಆ ಚಿತ್ರಗಳಲ್ಲಿ ನೂರು ಅರ್ಥಗಳು ಕಂಡಿದ್ದವು.
ಇದನ್ನೂ ಓದಿ: Letters to Daughter: ಮಗಳೇ, ನನ್ನ ಹೊಟ್ಟೆಯನ್ನೊಮ್ಮೆ ಮೆಲ್ಲಗೆ ಸವರಿ ಅಮ್ಮಾ ಇದು ನಿನ್ನ ಬಾಬೆ ಅಲ್ಲ, ಎನ್ನ ಬಾಬೆ ಎಂದಿದ್ದೆ
ಎಲ್ಕೆಜಿ, ಯುಕೆಜಿ ದಿನಗಳಲ್ಲೂ ಯಾವ ಹೋಮ್ ವರ್ಕಿಗೂ ನೀನು ನಮ್ಮನ್ನು ಜತೆಗೆ ಕೂರಲು ಬಿಟ್ಟವಳಲ್ಲ. ಯಾಕೆಂದರೆ ಬಣ್ಣಗಳ ಕುರಿತಾಗಿ ನಿನಗೆ ಸಲಹೆ ಕೊಡಬಂದರೆ ನಿನಗೆ ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ಕಾರಣ ಏನು ಗೊತ್ತಾ? ನಿನ್ನಷ್ಟು ಸ್ಪಷ್ಟವಾಗಿ, ನಿಖರವಾಗಿ ಬಣ್ಣಗಳನ್ನು ನಾನಾಗಲೀ ಅಪ್ಪನಾಗಲೀ ಹೇಳುತ್ತಿರಲಿಲ್ಲ. ನಮಗೆ ಗೊತ್ತಿದ್ದುದು ಬರೇ ಹನ್ನೆರಡು ಬಣ್ಣಗಳ ಕ್ರೇಯಾನ್ ಬಾಕ್ಸ್. ನೀನು ಅದೆಲ್ಲೋ ಇಪ್ಪತ್ತನಾಲ್ಕು ಬಣ್ಣಗಳ ಬಾಕ್ಸ್ ಬರುತ್ತವೆಂದು ಪತ್ತೆ ಮಾಡಿದ್ದೆ.
ಸ್ಕೆಚ್ ಪೆನ್, ಬಣ್ಣದ ಪೆನ್ಸಿಲ್, ವಾಟರ್ ರ್ಸ್, ಅಕ್ರಿಲಿಕ್ ಪೇಂಟಿಂಗ್.. ಅಬ್ಬಬ್ಬಾ ಎಲ್ಲವೂ ನಿನ್ನ ಸಂಗ್ರಹದಲ್ಲಿವೆ. ನಿನ್ನ ಸ್ಟಡೀಟೇಬಲ್, ರ್ಸ್ ಜೋಡಿಸಿಕೊಂಡ ಬಾಕ್ಸ್ ಎಲ್ಲವೂ ಅದೆಷ್ಟು ಚೊಕ್ಕ! ಅದರಿಂದ ಒಂದೇ ಒಂದು ವಸ್ತು ಸ್ಥಾನಪಲ್ಲಟವಾದರೂ ನಿನಗೆ ಗೊತ್ತಾಗಿಬಿಡುತ್ತದೆ. ಅಲ್ಲಿಂದ ಯಾವುದೇ ವಸ್ತು ಬದಲಿದರೂ ಮೊದಲ ಆರೋಪಿ ತಮ್ಮನೇ! ‘ಎಲ್ಲದಕ್ಕೂ ನಾನೇ ಕಾರಣವಾ? ನಾನು ತೆಗೆದೇ ಇಲ್ಲ’ ಅವನು ಹೇಳುವ ಧ್ವನಿಯಲ್ಲಿಯೇ ಅದು ಅವನಲ್ಲಿ ಇದೆಯೋ ಇಲ್ಲವೊ ಅಂತ ನಿನಗೆ ಗೊತ್ತಾಗಿಬಿಡುತ್ತದೆ. ನೀನು ಅವನನ್ನು ವಿಚಾರಣೆ ನಡೆಸುವ ಪರಿಯೇ ನಮಗೊಂದು ವಿಸ್ಮಯ.
ಕೋವಿಡ್ ಲಾಕ್ ಡೌನ್ ಅವಧಿಯಲ್ಲಂತೂ ನೀನು ಅದೆಷ್ಟು ಚಿತ್ರಗಳನ್ನು ಬಿಡಿಸಿದೆಯೋ.. ದಿನವೂ ನನ್ನ ಸ್ಟೇಟಸ್ನಲ್ಲಿ ನೀ ಬರೆದ ಚಿತ್ರಗಳು. ನೀನಾಗಿ ಹುಡುಕಿಕೊಂಡ, ಮಹಿಮಕ್ಕಾ ತೋರಿಸಿಕೊಟ್ಟ ಯುಟ್ಯೂಬ್ ಕ್ಲಾಸುಗಳು ಅದೆಷ್ಟು! ಈಗ ನಿಧಾನವಾಗಿ ಪೆನ್ಸಿಲ್ ಸ್ಕೆಚ್ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದೀ. ನೀನೇನೇ ಚಿತ್ರ ಬರೆದರೂ ಅದು ನನಗೆ ಮುದ್ದಾಗಿಯೇ ಇರುತ್ತದೆ.
ಡ್ರಾಯಿಂಗ್ ಎಂಬುದು ನನಗೆ ದಕ್ಕದೇ ಹೋದ ಒಂದು ಸಂಗತಿ. ಗೆರೆಗಳು ನೀನೆಂದಂತೆ ಕೇಳುತ್ತವೆ, ನೀನೆದಂತೆ ಬಾಗುತ್ತವೆ. ನಾನು ಯಾವ ಗೆರೆಯನ್ನೂ ನನಗೆ ಬೇಕಾದಂತೆ ಬರೆಯಲಾರೆ ಎಂಬುದಕ್ಕೇ ನನಗೆ ಇಂದಿನವರೆಗೂ ಯಕ್ಷಗಾನದ ಮುಖವರ್ಣಿಕೆ ಕಲಿಯಲಾಗಲೇ ಇಲ್ಲ. ನೀನು ನಿನ್ನಷ್ಟಕ್ಕೆ ಮೇಕಪ್ ಮಾಡಿಕೊಳ್ಳುವುದನ್ನು ನೋಡುವಾಗ ಅದೆಷ್ಟು ಹಿತವೆನ್ನಿಸುತ್ತದೆ ಗೊತ್ತಾ ಮಗೂ..
ಕಣ್ಣಿನ ತುಂಬಾ, ಮನಸಿನ ತುಂಬಾ ಚೆಂದದ ಬಣ್ಣಗಳು ಸದಾ ಇರಲಿ ಅಂತಷ್ಟೇ ಹಾರೈಸಬಲ್ಲೆ. ಬದುಕಿನ ತುಂಬ ಭರವಸೆ ನೀಡುವ ಬಣ್ಣಗಳ ಒಡನಾಟವಿರಲಿ. ನಿನ್ನ ಈ ಹದಿವಯಸ್ಸಿನಲ್ಲಿ ಕಾಡುವ ಬಣ್ಣಗಳೂ ಇರುತ್ತವೆ ಮಗೂ. ಅವುಗಳ ಬಗ್ಗೆ ಎಚ್ಚರವಿರಲಿ ಅಷ್ಟೇ. ಹೆತ್ತವರಾಗಿ ನಮಗಿರುವ ಧೈರ್ಯವೆಂದರೆ ಬಣ್ಣಗಳ ನಡುವೆ ಸತ್ಯ ಮಿಥ್ಯಗಳನ್ನು ನೀನು ಸರಿಯಾಗಿಯೇ ಗುರುತಿಸಬಲ್ಲೆಯೆಂಬುದು.
ಇದನ್ನೂ ಓದಿ: Letters to Daughter: ಮಗಳೇ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ
ಹದಿಮೂರರಿಂದ ಹದಿನೆಂಟರ ನಡುವಿನ ಎಷ್ಟೋ ಹೆಣ್ಣುಮಕ್ಕಳು ಈ ಹಂತದಲ್ಲಿ ಕೊಂಚ ಎಡವುತ್ತಾರೆ ಮಗೂ. ಈಗಂತೂ ಇನ್ಸ್ಟಾಗ್ರಾಂ, ಫೇಸ್ಬುಕ್ ಇತ್ಯಾದಿ ತಾಣಗಳಿವೆ. ಅವುಗಳ ಬಣ್ಣಕ್ಕೆ ಕಳೆದುಹೋದವರ ಬದುಕಿನಲ್ಲೊಂದು ಮಾಸದ ಕಲೆ ಉಳಿದುಬಿಡುತ್ತದೆ ಮಗೂ. ನೀನು ಬಿಡಿಸುವ ಚಿತ್ರ ಕೊಂಚ ತಪ್ಪಿತೆಂದು ಮೊನ್ನೆ ದುಃಖಿಸಿಕೊಂಡು ಹರಿದೆಸೆದೆಯಲ್ಲ.. ಅಷ್ಟಕ್ಕೆ ಯಾಕೆ ತಲೆಕೆಡಿಸಿಕೊಳ್ಳುತ್ತೀಯಾ ಎಂದು ಕೇಳಿದರೆ ನೀ ಕೊಟ್ಟ ಉತ್ತರ ನನಗೆ ಸಮಾಧಾನ ತಂದಿತು.
‘ಅಮ್ಮಾ.. ಬರೆಯುವ ಚಿತ್ರ ಸರಿಯಾಗಲಿಲ್ಲ, ಅಳಿಸಿ ತಿದ್ದಿ ಮಾಡಿದರೆ ಚೆನ್ನಾಗಿರುವುದಿಲ್ಲ ಅಂತ ಹರಿದೆಸೆದೆ. ಅದು ಹೋಗಲಿ ಬಿಡು, ಈಗ ಸ್ವಲ್ಪ ಮೂಡಾಫ್ ಆಗಿದೆ. ನಾಳೆ ಚೆನ್ನಾಗಿ ಮಾಡುತ್ತೇನೆ. ಇಷ್ಟು ಯೋಚಿಸಬಲ್ಲ ಮಗಳು ನೀನು ನನಗಿರುವುದು ನನ್ನ ಭಾಗ್ಯ ಪುಟ್ಟಾ. ಇನ್ನು ಕೆಲವು ವರ್ಷ ಕಳೆಯುವಷ್ಟರಲ್ಲಿ ಈ ಸಾಲಿಗಿರುವ ಅರ್ಥದ ಎತ್ತರವೇನು ಎಂಬುದು ನಿನಗೆ ಗೊತ್ತಾಗುತ್ತದೆ. ಸಾಧನೆಯ ದಾರಿಯಲ್ಲಿ ಹರಿದೆಸೆಯ ಬೇಕಾದ ಪುಟಗಳದೆಷ್ಟೋ ಇರುತ್ತವೆ. ಸರಿಯಾಗದೇ ಹೋದರೂ ಅದರಿಂದ ಕಲಿತ ಪಾಠಗಳಿಗಾಗಿ ಜೋಪಾನಮಾಡಬೇಕಾದವು ಇರುತ್ತವೆ. ಎಷ್ಟೋ ಸಲ ಬಣ್ಣಗಳು ತಪ್ಪುವುದಾ ಹೊಸ ಬಣ್ಣದ ಸೃಷ್ಟಿಯಾಗುವುದಾ ಎಂಬ ಗೊಂದಲ ನನಗಿದೆ. ನೋಡೋಣ. ಮುಂದೊಂದು ದಿನ ನೀನೇ ಇದಕ್ಕೆ ಉತ್ತರ ಹೇಳಬಲ್ಲೆಯೆಂಬುದು ನನ್ನ ಭರವಸೆ.
ಇಂತೀ ಆಶೀರ್ವಾದಗಳೊಂದಿಗೆ
ಅಮ್ಮ
