( ಪತ್ರ ಹದಿನೆಂಟು)ಮಗಳೇ,
Letters to Daughter: ನಿನಗೆ ಎರಡೂವರೆ ವರ್ಷವಿದ್ದಾಗ ಪುಟ್ಟದೊಂದು ಸೈಕಲ್ಲು ತಂದಾಯ್ತು. ಮೂರುಚಕ್ರದ್ದಲ್ಲ. ಬರೋಬ್ಬರಿ ನಾಲ್ಕು ಚಕ್ರದ್ದು. ಆಯ್ಕೆ ನಿನ್ನದೇ ಏನೋ ಒಂದು ಕೆಲಸ ಆಗಲೇಬೇಕು ಅಂದರೆ ಹೇಗೆ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ತಮ್ಮನಿಗೆ ನೀನೇ ಮಾದರಿ. ಅದೆಂಥಾ ಹಟ, ಅದೆಂಥಾ ಶ್ರದ್ಧೆ! ನನಗೂ ಅನ್ನಿಸುವುದಿದೆ. ನಾನೂ ಮತ್ತೊಮ್ಮೆ ಹೈಸ್ಕೂಲು ವಿದ್ಯಾರ್ಥಿನಿಯಾಗಿ ನಿನ್ನಂತೆ ಓದಿ ಬರೆದು ಮಾಡಬೇಕೆಂದು. ಅದು ಆಗದ ಕಥೆ ಬಿಡು. ಓದುವುದಕ್ಕೆ ಸಾಕಷ್ಟಿದೆ, ಮಾಡಲೇ ಬೇಕಾದ ಕೆಲಸಗಳೂ ಸಾಕಷ್ಟಿವೆ. ಸಮಯವನ್ನು ಹೊಂದಿಸಿಕೊಳ್ಳಲಾಗದೇ ಅದೆಷ್ಟನ್ನೋ ಬಾಕಿ ಉಳಿಸಿದ್ದೇನೆ.
ಇದನ್ನೂ ಓದಿ: Letters to Daughter: ಮಕ್ಕಳು ದೊಡ್ಡವರಾಗುತ್ತಾ ಆಗುತ್ತಾ ಹೆತ್ತವರು ಸಣ್ಣವರಾಗುತ್ತಾ ಸಾಗುವ ಪರಿಯಿದು
ಹೌದು, ನೀನು ಸೈಕಲ್ಲು ಕಲಿತ ಕತೆ ನನಗೆ ಯಾವಾಗಲೂ ನೆನಪಿಗೆ ಬರುತ್ತದೆ. ನಿನಗೆ ಎರಡೂವರೆ ವರ್ಷವಿದ್ದಾಗ ಪುಟ್ಟದೊಂದು ಸೈಕಲ್ಲು ತಂದಾಯ್ತು. ಮೂರುಚಕ್ರದ್ದಲ್ಲ. ಬರೋಬ್ಬರಿ ನಾಲ್ಕು ಚಕ್ರದ್ದು. ಆಯ್ಕೆ ನಿನ್ನದೇ, ಎಂದಿನಂತೆ ಪಿಂಕ್ ಕಲರು. ಆಗ ನಾವಿದ್ದ ಮನೆಯ ಹಾಲ್ ಬಹಳ ದೊಡ್ಡದಿತ್ತು, ಜತೆಗೆ ನಮ್ಮಲ್ಲಿ ಎರಡು ಕುರ್ಚಿ ಒಂದು ಮೇಜು ಬಿಟ್ಟರೆ ಬೇರೆ ಪೀಠೋಪಕರಣಗಳಿರಲಿಲ್ಲ.
ಸಂಜೆ ಮನೆಗೆ ಬಂದ ಸೈಕಲ್ಲನ್ನು ನೀನು ಒಂದು ಕ್ಷಣವೂ ಬಿಟ್ಟಿರಲಾರೆ ಎಂಬಂತೆ ನಡೆದುಕೊಂಡೆ. ನಮಗೊಂದು ಸೋಜಿಗ. ಆದರೆ ನಿಜವಾಗಿಯೂ ನಿನ್ನ ಹಟವೇನು, ಯಾಕೆ ಎಂಬುದು ನನಗೆ ನಿಜವಾಗಿ ಅರ್ಥವಾದದ್ದು ಮರುದಿನ ಬೆಳಗ್ಗೆ. ನಾನು ಬೇಗನೇ ಎದ್ದು ಅಡುಗೆ ಕೆಲಸ ಮುಗಿಸಿಕೊಳ್ಳೋಣ ಅಂದುಕೊಳ್ಳುವಷ್ಟರಲ್ಲಿ ನೀನು ದಡಬಡಿಸಿ ಎದ್ದು ಬಂದೆ. ನನ್ನ ಕೈಹಿಡಿದು ಎಳೆದುಕೊಂಡು ನಿನ್ನ ಸೈಕಲ್ಲು ಹತ್ತಿ ಕೂರಿಸಲು ಹೇಳಿದೆ. ನಿನಗೋ ಪೆಡಲ್ ಮಾಡಲು ಬಾರದು.
ಒಂದೋ ಎರಡೂ ಪೆಡಲ್ಲನ್ನು ಒಟ್ಟಿಗೇ ಮೆಟ್ಟುತ್ತಿದ್ದೀ. ಇಲ್ಲವೇ ಕಾಲು ಮೇಲಿಟ್ಟು ಕುಳಿತುಬಿಡುತ್ತಿದ್ದಿ. ಅಂತೂ ನಿನ್ನ ಮನವೊಲಿಸಿ ತಿಂಡಿ ತಿಂದ ಮೇಲೆ ಅಭ್ಯಾಸ ಮಾಡೋಣವೆಂದು ಕರೆತಂದದ್ದಾಯ್ತು. ತಗೋ..ತಿಂಡಿ ಆದ ಕೂಡಲೇ ಮತ್ತದೇ ಕತೆ. ಅಂತೂ ಮಧ್ಯಾಹ್ನ ಹನ್ನೆರಡು ಗಂಟೆಗಾಗುವಾಗ ನಿನಗೆ ಸೈಕ್ಲಿಂಗ್ ಅಭ್ಯಾಸ ಆಯ್ತು. ಮನೆತುಂಬ ನೀನು ಸುತ್ತಿದ್ದೇ ಸುತ್ತಿದ್ದು. ಹಿಡಿದ ಕೆಲಸದಲ್ಲಿ ನಿನಗಿರುವ ಛಲ ಕಂಡು ಅಪ್ಪ ಜಂಭ ಮಾಡಿದ್ದೇ ಮಾಡಿದ್ದು- ‘ನನ್ನ ಮಗಳು’ ಅಂತ! (ಹೌದಪ್ಪಾ ರಾತ್ರಿ ಎದ್ದು ನಿದ್ದೆ ಮಾಡದೇ ಅತ್ತು ರಗಳೆ ಮಾಡುವಾಗ ಮಾತ್ರ ನನ್ನ ಮಗಳು ಅಲ್ವಾ, ಅಂತ ನಾನೂ ಕಣ್ಣುಕೊಂಕಿಸಿದೆ ಎನ್ನು).
ಇದನ್ನೂ ಓದಿ: Letters to Daughter: ಮಗಳೇ, ಬಣ್ಣಗಳೊಂದಿಗಿನ ನಿನ್ನ ನಂಟು ಪ್ರಾರಂಭವಾದಾಗ ನಿನಗಿನ್ನೂ ಒಂದೂವರೆ ವರ್ಷ
ಯಾವುದೋ ಚಿತ್ರ ಮಾಡಬೇಕೆಂದು ನಿನ್ನ ಮನಸ್ಸಿಗೆ ಬಂದಾಗಲೂ ಅಷ್ಟೇ. ಅದನ್ನು ಪೂರೈಸದೇ ಊಟಕ್ಕಾಗಲೀ ತಿಂಡಿಗಾಗಲೀ ಬರಲೊಲ್ಲೆ. ನಮ್ಮ ಗೌರಮ್ಮಜ್ಜಿಯೂ ಇದ್ದದ್ದು ಹೀಗೆಯೇ. ಬೆಳಗ್ಗೆ ತಿಂಡಿಯೂ ತಿನ್ನದಂತೆ ಯಾವುದಾದರೂ ಕೆಲಸ ಹಿಡಿದರೆಂದುಕೋ. ಅದು ಪೂರ್ತಿಯಾಗುವವರೆಗೂ ಯಾವುದಕ್ಕೂ ಬರಲಾರರು. ಆ ಛಲ ಒಳ್ಳೆಯದೇ. ಆ ಬಗೆಯ ಲಹರಿ ಇದ್ದಾಗ ತೊಡಗಿಸಿಕೊಂಡ ಕೆಲಸ ಅತ್ಯಂತ ಸೊಗಸಾಗಿ ಮುಗಿಯುತ್ತದೆ. ಮಾಡಿದ ಕೆಲಸದಲ್ಲಿ ತೃಪ್ತಿಯೂ ಇರುತ್ತದೆ.
ಆದರೆ ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಅಜ್ಜಿ ಹೀಗೆ ತಿಂಡಿ ತಿನ್ನದೇ ಬಾಕಿಯಾದರೆ ನಮ್ಮಮ್ಮನ ಎಲ್ಲಾ ಕೆಲಸಗಳೂ ಬಾಕಿಯಾಗುತ್ತಿದ್ದವು! ಅಜ್ಜಿ ತಿಂಡಿ ತಿನ್ನದೇ ಅಮ್ಮ ತಿನ್ನುತ್ತಿರಲಿಲ್ಲ. ಅದು ಕ್ರಮವಲ್ಲ..! ಆದರೆ ಅಮ್ಮ ತಿಂಡಿ ತಿಂದ ಮೇಲೆ ಹಸುಗಳನ್ನು ಹುಲ್ಲುಮೇಯಲು ಬಿಡಬೇಕಿತ್ತು, ಹಟ್ಟಿಯಿಂದ ಸೆಗಣಿ ತೆಗೆದು, ಮರಳಿ ಹೊಸಸೊಪ್ಪು ಹಾಕಿ ಅಣಿಗೊಳಿಸಬೇಕಿತ್ತು. ಪಾತ್ರೆ, ಬಟ್ಟೆ ತೊಳೆಯುವ ಕೆಲಸ ಮಾಡಬೇಕಿತ್ತು..ಬಿಸಿಲೇರಿದರೆ ಅಮ್ಮನಿಗೆ ಕಷ್ಟವಾಗುತ್ತಿತ್ತು.
ಇದನ್ನೂ ಓದಿ: Letters to Daughter: ಮಗಳೇ, ಇಷ್ಟೂ ವರ್ಷಗಳಲ್ಲಿ ನಿನ್ನ ಪ್ರಗತಿಯನ್ನು ಕಂಡಾಗ ತುಂಬಾ ಆನಂದವಾಗುತ್ತದೆ
ಇಷ್ಟಾಗಿ ಮಧ್ಯಾಹ್ನದ ಊಟ ಸಮಯಕ್ಕೆ ಸರಿಯಾಗಿ ಆಗದೇ ಹೋದರೆ ಅಮ್ಮನಿಗೆ ಹೊಲಿಯುವುದಕ್ಕೆ ಸಿಗುವ ಸಮಯ ಕಡಿಮೆಯಾಗುತ್ತಿತ್ತು. ಇಲ್ಲಿ ಯೋಚನೆ ಮಾಡಬೇಕಾದ್ದು ಇದನ್ನೇ. ಎಲ್ಲರ ತಿಂಡಿ, ಊಟದಂಥಹ ಕೆಲಸಗಳು ಒಟ್ಟೊಟ್ಟಿಗೆ ಆದರೆ ಮನೆಯಲ್ಲಿ ಅಮ್ಮನಾಗಿರುವವರಿಗೆ ಬಿಡುವಿನ ಸಮಯವೆಂಬುದು ಕೊಂಚ ಒದಗುತ್ತದೆ. ಎಲ್ಲರೂ ತಮ್ಮತಮ್ಮ ಕೆಲಸ ಮುಗಿಸಿ ಬರುತ್ತೇವೆ ಅಂತ ಮಾಡಿದರೆ ಅಮ್ಮನೆಂಬ ಜೀವಕ್ಕೆ ಅಡುಗೆಮನೆಯಲ್ಲಿ ಕಾಯುವುದರಲ್ಲಿಯೇ ತಲೆ ಅರ್ಧ ಹಣ್ಣಾಗಿರುತ್ತದೆ.
ನಮ್ಮ ಕೆಲಸಗಳನ್ನು ಯೋಚಿಸಿಕೊಳ್ಳುವಾಗಲೇ ಮನೆಯ ಎಲ್ಲ ಚಟುವಟಿಕೆಗಳನ್ನೂ ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು ಮಗೂ. ಅದು ನಾನಾದರೂ ಅಷ್ಟೇ, ನೀನಾದರೂ ಅಷ್ಟೇ. ಬೇರೆಲ್ಲ ಕೆಲಸಗಳ ತೊಂದರೆಯೇನಿಲ್ಲ. ಆದರೆ ತಿಂಡಿ ಊಟವೆಂಬುದು ಜತೆಯಲ್ಲಿಯೇ ಆಗಬೇಕು.
ಇದನ್ನೂ ಓದಿ: Letters to Daughter: ಮಗಳೇ, ನನ್ನ ಹೊಟ್ಟೆಯನ್ನೊಮ್ಮೆ ಮೆಲ್ಲಗೆ ಸವರಿ ಅಮ್ಮಾ ಇದು ನಿನ್ನ ಬಾಬೆ ಅಲ್ಲ, ಎನ್ನ ಬಾಬೆ ಎಂದಿದ್ದೆ
ಇದರಿಂದ ಕನಿಷ್ಟ ಅಷ್ಟು ಹೊತ್ತಿನ ಸಮಯವನ್ನು ಒಟ್ಟಿಗೇ ಕಳೆದಿರುತ್ತೇವೆ. ತಟ್ಟೆ ಜೋಡಿಸುವುದೋ ಲೋಟದಲ್ಲಿ ನೀರು ಇಡುವುದೋ ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಕ್ಕಳು ಮಾಡಿದರೆ ಖುಷಿ ಅಲ್ಲವಾ? ಈ ರೀತಿಯಲ್ಲಿ ಕೆಲಸಗಳನ್ನು ಹಂಚಿಕೊಳ್ಳುವುದನ್ನು ಕಲಿಯಬೇಕು ಮಗೂ. ನಮಗರಿವಿಲ್ಲದೇ ಆ ಕೆಲಸಗಳು ನಮ್ಮದೇ ಆಗುತ್ತವೆ, ಅದರಲ್ಲೊಂದು ಸೊಗಸೂ ಇರುತ್ತದೆ.
ಕಳೆದ ವರ್ಷ ಅಶೋಕಮಾವನ ನೇತೃತ್ವದಲ್ಲಿ ತುಮಕೂರಿನಲ್ಲಿ ತಾಳಮದ್ದಳೆ ಸಪ್ತಾಹ ಆದಾಗ ಅವರು ನಮ್ಮ ಮನೆಯಲ್ಲಿದ್ದರಲ್ಲ.. ಕೆಲವು ದಿನ ನನಗೆ ಕಾಲೇಜಿಂದ ಬೇಗ ಬರಲಾಗದೇ ಇದ್ದಾಗ ನೀನೂ ಸಂವೃತನೂ ಸೇರಿ ಅನ್ನ ಸಾರು ಮಾಡಿ ಊಟ ಬಡಿಸಿದಿರೆಂಬುದನ್ನು ಅಶೋಕಮಾವ ಎಷ್ಟು ಸಂಭ್ರಮಿಸಿಕೊಂಡು ಹೇಳಿದರು ಗೊತ್ತಾ, ಈಗಲೂ ಸಿಕ್ಕಿದಷ್ಟೂ ಸಲ ಹೇಳುತ್ತಾರೆ. ಅದನ್ನು ಕೇಳುವಾಗೆಲ್ಲ ಮನಸ್ಸಿಗೆ ಹಿತವೆನಿಸುತ್ತದೆ ಪುಟ್ಟಾ, ಕೇವಲ ಅಂಕದ ಹಿಂದೆ ಓಡದೇ ನಿಜಾರ್ಥದಲ್ಲಿ ಬದುಕನ್ನು ಅರ್ಥಮಾಡಿಕೊಳ್ಳುವತ್ತ ನಿಮ್ಮ ಚಿತ್ತ ನೆಟ್ಟಿದೆಯಲ್ಲ ಎಂಬುದರ ಬಗ್ಗೆ ಸಮಾಧಾನ.
ಇದನ್ನೂ ಓದಿ: Letters to Daughter: ಮಗಳೇ, ಯಾವುದೇ ಪರೀಕ್ಷೆಯೂ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ
ಈಗ ಶಾಲೆಗೆ ರಜೆ. ಹಾಗೆಂದು ಬೆಳಗ್ಗೆ ಎಂಟುಗAಟೆವರೆಗೆ ನಿದ್ದೆ ಮಾಡಬೇಕಿಲ್ಲ ಮಗಳೇ, (Letters to Daughter) ಮಕ್ಕಳ ಸಂಭ್ರಮದ ನಗೆಯಿದ್ದರೆ ಮಾತ್ರ ಮನೆಯೆಲ್ಲ ಬೆಳಕಿರುತ್ತದೆ ಮಗೂ. ಬೆಳಗ್ಗೆ ಆರೂವರೆಯೊಳಗೆ ಎದ್ದುಬಿಡಿ. ದಿನನಿತ್ಯದ ಕೆಲಸಗಳನ್ನು ಪೂರೈಸಿ ಎಲ್ಲರೂ ಒಟ್ಟಿಗೇ ತಿಂಡಿ ತಿಂದಾದರೆ ನಾವು ಕಾಲೇಜಿಗೆ ನೆಮ್ಮದಿಯಿಂದ ಹೊರಡುವುದು ಸಾಧ್ಯವಾಗುತ್ತದೆ.
ನಾನು ಹೊರಡುವವರೆಗೂ ನೀವಿಬ್ಬರೂ ಎದ್ದೇ ಇರದಿದ್ದರೆ ದಿನವೆಲ್ಲ ಮನಸ್ಸು ಕಸಿವಿಸಿಯೆನಿಸುತ್ತದೆ. ಶಾಲೆಗೆ ರಜೆ ಇದ್ದಾಗ ಮಕ್ಕಳನ್ನು ಎಬ್ಬಿಸುವುದೇ ಕಷ್ಟ! ಯಾವ ಅಮ್ಮಂದಿರನ್ನು ಬೇಕಾದರೂ ಕೇಳಿ ನೋಡು. ಆದರೆ ಮಗೂ, ಬೆಳಗ್ಗೆ ಬೇಗ ಎದ್ದಷ್ಟೂ ನಾವು ಖುಷಿಖುಷಿಯಾಗಿ ಇರುವುದು ಸಾಧ್ಯವಾಗುತ್ತದೆ. ಅಲ್ಲದಿದ್ದರೆ ಒಂದು ಬಗೆಯ ಜಡತ್ವವೇ ಆವರಿಸಿಕೊಂಡಿರುತ್ತದೆ.
ಮಕ್ಕಳ ಸಂಭ್ರಮದ ನಗೆಯಿದ್ದರೆ ಮಾತ್ರ ಮನೆಯೆಲ್ಲ ಬೆಳಕಿರುತ್ತದೆ ಮಗೂ(Letters to Daughter).
ಇಂತೀ ಆಶೀರ್ವಾದಗಳೊಂದಿಗೆ
ಅಮ್ಮ
