Mythological Tales: ಶಿಬಿ ಎಂಬ ಚಂದ್ರವಂಶದ ರಾಜನಿದ್ದನು. ಧರ್ಮಪ್ರಜ್ಞೆಯುಳ್ಳವನೂ ದಯಾಪರನೂ ಆಗಿದ್ದ ಅವನು ಭರತಖಂಡದಲ್ಲಿಯೇ ಹೆಸರುವಾಸಿಯಾಗಿದ್ದವನು. ತನ್ನ ದಕ್ಷ ಆಡಳಿತ, ನ್ಯಾಯಪರತೆ,ಸತ್ಯಶೀಲತೆ ಜನಪರ ಸೇವೆಗಳಿಂದ ಹಾಗೂ ಶೌರ್ಯಗಳಿಂದ ಚಕ್ರವರ್ತಿ ಪಟ್ಟಕೇರಿದವನು.ಇಂದ್ರನಿಗೂ ಪ್ರತಿಸ್ಪರ್ಧಿಯಾಗಬಲ್ಲ ಶ್ರೇಷ್ಠೊತ್ತಮನು.
ಇದನ್ನೂ ಓದಿ: ಪ್ರಬಲ ‘ಬುಧಾದಿತ್ಯ’ ರಾಜಯೋಗ: 12 ತಿಂಗಳ ಬಳಿಕ ಸೂರ್ಯ ಬುಧನಿಂದ ಈ ರಾಶಿಗಳಿಗೆ ಭಾರಿ ಅದೃಷ್ಟ ಒಲಿಯಲಿದೆ
ಒಂದು ದಿನ ಉದ್ಯಾನವನದಲ್ಲಿ ಶಿಬಿ ಚಕ್ರವರ್ತಿಯು ಕುಳಿತುಕೊಂಡಾಗ ಒಂದು ಪಾರಿವಾಳ ಪಕ್ಷಿಯು ಒಮ್ಮೆಲೇ ಅವನ ತೊಡೆಯ ಮೇಲೆ ಬಂದು ಕುಳಿತುಕೊಳ್ಳುತ್ತದೆ.ಅದನ್ನು ಕಂಡ ಶಿಬಿ ಚಕ್ರವರ್ತಿಗೆ ಪಾರಿವಾಳವು ಭಯಗೊಂಡು ಬಂದಿದೆ, ಅದು ತನ್ನ ಅಭಯವನ್ನೂ ರಕ್ಷಣೆಯನ್ನೂ ಯಾಚಿಸಿ ಬಂದಿರಬೇಕೆಂದು ಅನಿಸುತ್ತದೆ.
ಅಷ್ಟರಲ್ಲೇ ಅಲ್ಲಿಗೆ ಗಿಡುಗವೊಂದು ಬಂದು ಪಾರಿವಾಳದೆಡೆಗೆ ಆಕ್ರಮಿಸಲು ಪ್ರಯತ್ನಿಸುತ್ತದೆ. ಪರಿಸ್ಥಿತಿಯ ಅರಿವಾದ ರಾಜನಿಗೆ ಗಿಡುಗವು ಪಾರಿವಳವನ್ನು ಬೇಟೆಯಾಡಲು ಓಡಿಸಿಕೊಂಡು ಬಂದಿರುವಾಗ ಪಾರಿವಾಳವು ಜೀವಭಯದಲ್ಲಿ ತಾನಿದ್ದಲ್ಲಿ ಬಂದಿದೆ, ಅದನ್ನು ಕಾಪಾಡಬೇಕು ಎಂದು ನಿಶ್ಚಯಿಸುತ್ತಾನೆ.
ಗಿಡುಗವು ಪಾರಿವಾಳದೆಡೆ ನೆಗೆದು ಬಿಡಬೇಕು ಎಂದಾಗಲೆಲ್ಲ ಶಿಬಿ ಚಕ್ರವರ್ತಿಯು ಅದನ್ನು ತಡೆಯುತ್ತಾನೆ. ಇದ ಕಂಡು ಕೋಪಗೊಂಡ ಗಿಡುಗವು, ‘ರಾಜನ್, ಆ ಪಕ್ಷಿ ನನ್ನ ಬೇಟೆ ಅದು ನನ್ನ ಇಂದಿನ ಆಹಾರ,ಅದನ್ನು ಬಿಟ್ಟುಬಿಡು ಅದನ್ನು ತಿಂದು ನನ್ನ ಬಳಲಿಕೆಯನ್ನು ನೀಗಿಸಿಕೊಂಡು ಬದುಕುತ್ತೇನೆ.
ಇದನ್ನೂ ಓದಿ: ಗೀತಾಸಾರ: ಶ್ರೀ ಕೃಷ್ಣ ಪರಮಾತ್ಮ ಹೇಳಿದ ಜೀವನ ಸೂತ್ರಗಳು

ಶಿಬಿ : ಶರಣಾಗಿ ಬಂದವರನ್ನು ರಕ್ಷಿಸುವುದು ರಾಜನಾದ ನನ್ನ ಧರ್ಮ. ನಾನು ಇದರ ರಕ್ಷಕ.
ಗಿಡುಗ : ನೀನು ಪ್ರಕೃತಿ ಧರ್ಮವನ್ನು ಉಲ್ಲಂಘಿಸುತ್ತಿದ್ದಿಯೆ.ಅದು ಪ್ರಾಕೃತಿಕವಾಗಿ ನನಗಾಗಿ ಇರುವ ಆಹಾರ, ಅದನ್ನು ತಡೆಯುವ ನೀನು ಅದ್ಹೇಗೆ ಧರ್ಮ ರಕ್ಷಕನಾಗುವೆ ?
ಶಿಬಿ: ಪಾರಿವಾಳವು ನನ್ನ ಬಳಿಬರುವ ಮುಂಚೆಯೇ ನೀನು ಅದನ್ನು ಕಬಳಿಸಿದ್ದರೆ ನಾನು ನಿನ್ನನ್ನು ತಡೆಯುತ್ತಿರಲಿಲ್ಲ ಆದರೆ ಅದು ನನ್ನ ರಕ್ಷಣೆಯನ್ನರಸಿ ಬಂದಮೇಲೆ ನಾನು ಅದನ್ನು ಕಾಪಾಡಲೇಬೇಕು.ಅದರ ಪ್ರಾಣ ಉಳಿಸಬೇಕು.
ಇದು ರಾಜಧರ್ಮ.
ಗಿಡುಗ : ಅದರ ಪ್ರಾಣ ಏನೊ ಉಳಿಸುವೆ ಆದರೆ ಆಹಾರವಿಲ್ಲದೆ ಉಪವಾಸದಿಂದ ನರಳಿ ನಾನು ಸತ್ತರೆ ಅದರ ಪಾಪ ನಿನಗಂಟುವುದಿಲ್ಲವೆ ?ಅದು ಧರ್ಮವೆ ?
ಶಿಬಿ: ಪಾಪ ಪುಣ್ಯ ಗಳ ಲೆಕ್ಕ ಹೇಳುವ ನೀನು ಈ ಪಾಪದ ಹಕ್ಕಿಯನ್ನು ಕೊಲ್ಲಲು ಯಾಕೆ ಬಂದಿರುವೆ ?
ಗಿಡುಗ : ರಾಜನ್,ಇಡೀ ಸಾಮ್ರಾಜ್ಯದಲ್ಲಿ ನಿನ್ನನ್ನು ಸತ್ಯವಂತನೆಂದೂ ಧರ್ಮಪರಿಪಾಲಕನೆಂದೂ ಕರೆಯುತ್ತಾರೆ ಆದರೆ ಹೀಗೆ ನನ್ನ ಆಹಾರವನ್ನರಸಿ ನಾನು ಬಂದರೆ ಅದನ್ನು ಧಿಕ್ಕರಿಸುವ ನೀನು ಇನ್ನಾವ ಧರ್ಮಪರಿಪಾಲಕನೊ?
ಶಿಬಿ :ಅದು ಈಗ ನನ್ನ ಅಧೀನದಲ್ಲಿದೆ ಅದರ ರಕ್ಷಣೆ ನನ್ನ ಹೊಣೆ.
ಗಿಡುಗ : ನೀನು ರಾಜನಿರಬಹದು ಆದರೆ ನಿನ್ನ ಅಧಿಕಾರ ಪ್ರಾಣಿ ಪಕ್ಷಿಗಳ ಮೇಲಿಲ್ಲ.
ಪರಿಸರದಲ್ಲಿ ಜರಗುವ ಸಹಜ ಸಂಗತಿಗಳನ್ನು ಅಡ್ಡಿಪಡಿಸಿ ಒಂದನ್ನು ಉಳಿಸಿ ಇನ್ನೊಂದನ್ನು ಸಾಯಿಸುವ ನಿನ್ನ ಧರ್ಮಾಚರಣೆ ಅದೆಂತಹದು ?
“ಗಿಡುಗ ಪಕ್ಷಿಯೇ, ನೀನು ಯಾವದೊ ದೇವತೆಯೇ ಆಗಿರಬೇಕು ಇಲ್ಲವಾದಲ್ಲಿ ಇಂತಹ ಧರ್ಮಜ್ಞಾನದ ಮಾತು ನಿನ್ನಿಂದ ಬರಲಾರವು.ಪಾರಿವಾಳವನ್ನು ಬಿಟ್ಟು ಬೇರೆಯಾವುದೇ ಆಹಾರ ಕೇಳು ನಾನದನ್ನು ಕೊಡುತ್ತೇನೆ ಹಾಗಾದಲ್ಲಿ ಪಾರಿವಾಳದ ರಕ್ಷಣೆಯೂ ಆಗುತ್ತದೆ ಮತ್ತು ನಿನ್ನ ಆಹಾರವೂ ಸಿಕ್ಕಂತಾಗುತ್ತದೆ.
ಗಿಡುಗ: ನನಗೆ ಬೇಕಾದದ್ದು ಮಾಂಸ.ಪಾರಿವಾಳದ್ದಲ್ಲದೆ ಹೋದರೆ ನನ್ನ ತೂಕದಷ್ಟು ನಿನ್ನ ದೇಹದ ಮಾಂಸವನ್ನೇ ಕೊಡುವೆಯಾದರೆ ಹೇಳು ? ಇಲ್ಲವಾದರೆ ನಾನು ಹಸಿವಿನಿಂದ ನರಳಿ ಸಾಯುತ್ತೇನಷ್ಟೆ!
ಶಿಬಿರಾಜನು ‘ಸರಿ’ ಎಂದು, ಕೂಡಲೇ ತಕ್ಕಡಿ ತರಿಸಿ ಒಂದು ತಕ್ಕಡಿಯ ಭಾಗದಲ್ಲಿ ಗಿಡುಗವನ್ನೂ ಇನ್ನೊಂದು ತಕ್ಕಡಿಯ ಭಾಗದಲ್ಲಿ ತನ್ನ ತೊಡೆಯ ಮಾಂಸವನ್ನೂ ಕತ್ತರಿಸಿ ಇಡುತ್ತಾನೆ. ಗಿಡುಗದ ತೂಕವೇ ಜಾಸ್ತಿಯಾಗುತ್ತದೆ.
ತನ್ನ ದೇಹದ ಅರ್ಧದಷ್ಟು ಮಾಂಸವನ್ನು ಇಟ್ಟರೂ ಆಗಳು ಗಿಡುಗದ ತೂಕವೇ ಜಾಸ್ತಿಯಾಗುತ್ತದೆ. ಶಿಬಿ ಚಕ್ರವರ್ತಿಯು ಆಗ ತಾನೇ ಆ ತಕ್ಕಡಿಯ ಮೇಲೆ ಕುಳಿತುಕೊಳ್ಳುತ್ತಾನೆ.ಆಗಲೂ ಗಿಡುಗದ ತೂಕವೇ ಜಾಸ್ತಿಯೇರುತ್ತದೆ.ಆಗ ಗಿಡುಗನ ರೂಪದಲ್ಲಿದ್ದ ಇಂದ್ರದೇವನೂ, ಪಾರಿವಾಳದ ರೂಪದಲ್ಲಿದ್ದ ಅಗ್ನಿದೇವನೂ ತಮ್ಮ ನಿಜರೂಪಲ್ಲಿ ಪ್ರತ್ಯಕ್ಷರಾಗಿ
‘ಇತ್ತ ಮಾತಿಗೆ ಬದ್ದನಾಗಿ ಅಭಯ ನೀಡಿದ ಪಕ್ಷಿಯ ಜೀವ ಉಳಿಸಲು ಸ್ವತಃ ನಿನ್ನ ಜೀವವನ್ನೇ ಕೊಡಲು ಬಯಸಿದ ನಿನ್ನ ಧರ್ಮಪಾಲನೆಗೆ ನಾವು ಶರಣಾಗಿದ್ದೇವೆ.ನಿನ್ನ ಕೀರ್ತಿ ಅಜರಾಮರವಾಗಲಿ’
ಎಂದು ಹರಸಿ ಮಾಯವಾಗುತ್ತಾರೆ. ಶಿಬಿ ಚಕ್ರವರ್ತಿಯು ಹೀಗೆ ಯುಗಯುಗಳಿಂದಲೂ ತನ್ನ ಧರ್ಮ ಅನುಷ್ಠಾನಕ್ಕೆ ಹೆಸರುವಾಸಿಯಾದವನು.ಈ ಕಥೆಯನ್ನು ಪಾಂಡವರು ವನವಾಸದಲ್ಲಿದ್ದಾಗ ಗುರು ಲೋಮಶರು ಧರ್ಮರಾಯನಿಗೆ ಹೇಳುತ್ತಾರೆ.
