K.G. Rangayya: ಸೂಕ್ತಿಸೌರಭದ ಸುವಾಸನೆ – ಕಾವ್ಯಸುಧಾಪ್ರಿಯ ಕೆ.ಜಿ. ರಂಗಯ್ಯನವರ ಜೀವನಕಥೆ ಸಂಸ್ಕೃತ ಸೌಷ್ಠವವನ್ನು ಕನ್ನಡದಲ್ಲಿ ಅರಳಿಸಿದ ಶ್ರಮಿಕ ಕವಿ ಮಾಗಡಿ ತಾಲ್ಲೂಕಿನ ಕೆಂಕೆರೆ ಪಾಳ್ಯದ ಮಣ್ಣಿನಿಂದ ಬೆಳೆಯುತ್ತ ಬಂದ ಕಾವ್ಯಸುಧಾಪ್ರಿಯ ಕೆ.ಜಿ. ರಂಗಯ್ಯನವರ(K.G. Rangayy) ಜೀವನ ಪಥವು ಕೇವಲ ಒಬ್ಬ ಶಿಕ್ಷಕರ ಪ್ರಯಾಣವಲ್ಲ, ಅದು ಸಾಹಿತ್ಯದ ಹಸಿರು ಹೊನ್ನೆಲೆಯ ಮೇಲೆ ಸುಗಂಧ ಹರಡುವ ಬಿಸಿಲುಮಳೆ.
ಹದಿನಾಲ್ಕನೇ ವಯಸ್ಸಿನಲ್ಲೇ ಸುಕ್ಷೇತ್ರ ಸಿದ್ಧಗಂಗೆಯ ಆಶ್ರಯವನ್ನು ಪಡೆದ ರಂಗಯ್ಯ ಅವರು, ತುಮಕೂರಿನ ಪ್ರೌಢಶಾಲೆಯಿಂದ ಬಿ.ಎಸ್ಸಿ ಪದವಿಯವರೆಗಿನ ಎಂಟು ವರ್ಷಗಳ ವಿದ್ಯಾರ್ಥಿ ಜೀವನವನ್ನು ಅಲ್ಲಿಯೇ ಕಳೆದರು. ಆ ಅವಧಿಯಲ್ಲಿ ಸಂಸ್ಕೃತ ಪಾಠಶಾಲೆಯ ಕಠಿಣ ನಿಯಮಾವಳಿಗಳಡಿ ಶಿಸ್ತುಬದ್ಧವಾಗಿ ಸಂಸ್ಕೃತವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿದ ಅನುಭವವೇ ಅವರ ಜೀವನದ ಆಧಾರವಾಗಿತ್ತು.
ಅರ್ಥ ತಿಳಿಯದಿದ್ದರೂ ಶ್ಲೋಕಗಳನ್ನು ಕಂಠಪಾಠ ಮಾಡುವ ಅಭ್ಯಾಸ, ಭಾನುವಾರಗಳಲ್ಲಿ ನಡೆಯುತ್ತಿದ್ದ ಪಾಠ ಸ್ಪರ್ಧೆಗಳು ಮತ್ತು ಗುರುಗಳ ಪ್ರೋತ್ಸಾಹ ಇವರನ್ನು ಸಾಹಿತ್ಯ ಲೋಕದತ್ತ ದೂಡಿತು. ಕೇವಲ ನೆನಪಿನ ಬಲದಿಂದ ನೂರುಗಿಂತಲೂ ಹೆಚ್ಚು ಶ್ಲೋಕಗಳನ್ನು ಕಂಠಸ್ಥಗೊಳಿಸಿಕೊಂಡ ಬಾಲರಂಗಯ್ಯ, ಮುಂದಿನ ದಿನಗಳಲ್ಲಿ ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಆರಿಸಿಕೊಂಡರು.
ಮೂಲ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನಡೆದಿದ್ದರೂ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಮುಂದುವರೆಸಿದ ಅವರು, ಪಾಠಪುಸ್ತಕಗಳ ಗಡಿಗಳೊಳಗೇ ಸೀಮಿತವಾಗದೆ ಹಿಂದಿ ಭಾಷೆಯತ್ತಲೂ ಆಕರ್ಷಿತರಾಗಿ, ‘ರಾಷ್ಟ್ರಭಾಷಾ’, ‘ವಿಶಾರದ’ ಹಾಗೂ ‘ರಾಜಭಾಷಾ ವಿದ್ವಾನ್’ ಪದವಿಗಳನ್ನು ಗಳಿಸಿದರು.
ಸಂಸ್ಕೃತದಲ್ಲಿ ‘ವಿದ್ವತ್’ ಪಡೆಯಬೇಕೆಂಬ ಅವರ ಉತ್ಕಟ ಬಯಕೆ ಕನಸಾಗಿಯೇ ಉಳಿದರೂ, ಆ ಕನಸು ಅವರ ಜೀವನದ ಬರೆಹಗಳನ್ನು ಆವರಿಸಿ ಅನುವಾದ ಸಾಹಿತ್ಯದ ಅಂಗಳದಲ್ಲಿ ಅಳಿಯದ ಗುರುತು ಮೂಡಿಸಿತು. 1964ರಲ್ಲಿ ಅವರ ಮೊದಲ ಕವನಗಳು ನಿಯತಕಾಲಿಕಗಳಲ್ಲಿ ಪ್ರಕಟವಾದವು. ಅದೇ ಕ್ಷಣದಿಂದ ಕಾವ್ಯದ ಹಾದಿಯಲ್ಲಿನ ಅವರ ಹೆಜ್ಜೆ ನಿಂತಿಲ್ಲ. ಇನ್ನೂರಕ್ಕೂ ಹೆಚ್ಚು ಕವನಗಳು ವಿವಿಧ ಪತ್ರಿಕೆಗಳಲ್ಲಿ ಅಚ್ಚುಗೊಂಡವು, ಹನ್ನೊಂದು ಪುಸ್ತಕಗಳು ಓದುಗರ ಮನಗೆದ್ದವು. ಕನ್ನಡ, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ರಚಿಸಲಾದ ಈ ಕವನ ಸಂಕಲನಗಳು, ಅನುವಾದಿತ ಭಾವಗೀತೆಗಳೊಂದಿಗೆ ಕನ್ನಡ ಸಾಹಿತ್ಯಕ್ಕೆ ಹೊಸ ಸುವಾಸನೆ ತಂದವು.
ಇದನ್ನೂ ಓದಿ: Mahesh Shetty Thimarodi: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಹಿನ್ನೆಲೆ | ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲು |
ಅನುವಾದವೆಂದರೆ ಮೂಲದ ಪ್ರತಿಬಿಂಬ, ಆದರೆ ಪ್ರತಿಬಿಂಬಕ್ಕೂ ಜೀವವಿದ್ದರೆ ಮಾತ್ರ ಅದು ಕಂಗೊಳಿಸುತ್ತದೆ. ಮೂಲ ಪದ್ಯಗಳ ಛಂದಸ್ಸನ್ನು ಮತ್ತೊಂದು ಭಾಷೆಯಲ್ಲಿ ಕಾಪಾಡಿ, ಹೊಸ ರಸವನ್ನು ತುಂಬುವುದು ಅತಿದೊಡ್ಡ ಸವಾಲು. ಇಂತಹ ಸವಾಲನ್ನು ಸವಿದು, ಸಾವಿರಕ್ಕೂ ಹೆಚ್ಚು ಸಂಸ್ಕೃತ ಸುಭಾಷಿತಗಳನ್ನು ಕನ್ನಡಕ್ಕೆ ಸರಳ ಚೌಪದಿಗಳಲ್ಲಿ ತಂದುಕೊಟ್ಟವರು ರಂಗಯ್ಯ.(K.G. Rangayya) ಅವರ ಪದ್ಯಾನುವಾದದಲ್ಲಿ ಕೇವಲ ಭಾಷೆಯ ಪಾಂಡಿತ್ಯವಲ್ಲ, ಜೀವಾಳ ತುಂಬಿದ ಕವಿಶಕ್ತಿಯೂ ಇತ್ತು. “ಕವಿತಾ ವನಿತಾ ಚೈವ–ಸ್ವಯಮಾಗತಾ ವರಾ” ಎಂಬಂತೆ, ಕಾವ್ಯ ಅವರಿಗೆ ಸ್ವಯಮಾಗತವಾಗಿಯೇ ಹರಿದುಬಂದಿತ್ತು.
ಅವರ ಅನುವಾದಕೃತಿಗಳಲ್ಲಿ “ಸೂಕ್ತಿ ಸೌರಭ” ವಿಶಿಷ್ಟ ಸ್ಥಾನ ಪಡೆದಿದೆ. ಮೂರು ಭಾಗಗಳಾಗಿ ಹಂಚಲ್ಪಟ್ಟ ಈ ಗ್ರಂಥದಲ್ಲಿ ಪ್ರಥಮ ಭಾಗದಲ್ಲಿ ಸಂಸ್ಕೃತ ಪ್ರಾರ್ಥನಾ ಪದ್ಯಗಳ ಕನ್ನಡಾನುವಾದವಿದ್ದರೆ, ದ್ವಿತೀಯ ಭಾಗದಲ್ಲಿ ಸ್ವರಚಿತ ಕನ್ನಡ ಪ್ರಾರ್ಥನೆಗಳು, ಸಿದ್ಧಗಂಗೆಯ ಶಿವಕುಮಾರ ಮಹಾಶಿವಯೋಗಿಗಳ ಸ್ತುತಿ, ಸಿದ್ಧಲಿಂಗೇಶ್ವರ ಸುಪ್ರಭಾತ ಮುಂತಾದವುಗಳಿವೆ.
ಮೂರನೇ ಭಾಗದಲ್ಲಿ 407 ಸಂಸ್ಕೃತ ಸುಭಾಷಿತಗಳ ಕನ್ನಡಾನುವಾದಗಳಿದ್ದು, ಓದುಗರ ಮನಸ್ಸಿಗೆ ಜೀವನದ ದಾರಿದೀಪವಾಗುತ್ತವೆ. ಪ್ರತಿಯೊಂದು ಪದ್ಯವೂ ಸರಳ, ಸ್ಪಷ್ಟ ಹಾಗೂ ಹೃದಯಂಗಮವಾಗಿದೆ. “ಪದ್ಯಂ ವದ್ಯಂ, ಗದ್ಯಂ ಹೃದ್ಯಂ” ಎಂಬ ಹಳೆಯ ಮಾತನ್ನು ಮೀರಿ, ಪದ್ಯಾನುವಾದವನ್ನೇ ಅತ್ಯಂತ ಸುಲಲಿತವಾಗಿ ಮಾಡಿದ್ದಾರೆ.
ಇದನ್ನೂ ಓದಿ: Lesson in Morality: ಹೆಣ್ಣೇ, ನಿನ್ನ ದೇಹ ಕೇವಲ ಫ್ಯಾಷನ್ ವಸ್ತುವಲ್ಲ, ಅದು ದೇಗುಲ
‘ಕಾವ್ಯಸುಧಾಪ್ರಿಯ’ ಎಂಬ ಕಾವ್ಯನಾಮವನ್ನು ಹೊಂದಿದ ರಂಗಯ್ಯ, ಅದನ್ನು ಕೇವಲ ಕಾವ್ಯಪ್ರಿಯತೆಗೆ ಸೀಮಿತಗೊಳಿಸಲಿಲ್ಲ. ಬೋಧಕನಾಗಿಯೂ, ಕವಿಯಾಗಿಯೂ, ಅನುವಾದಕರಾಗಿಯೂ, ಹಾಸ್ಯ ಬರಹಗಾರನಾಗಿಯೂ ತಮ್ಮ ಪಾದಚಿಹ್ನೆಗಳನ್ನು ಮೂಡಿಸಿದರು. ಅವರ ಹಾಸ್ಯ ಕಥೆಗಳು ‘ನಗೆಮುಗುಳು’, ‘ಹಾಸ್ಯಲೋಕ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ನಗುವಿಗೆ ಕಾರಣವಾದವು. ಗಂಭೀರ ವಿಮರ್ಶಾತ್ಮಕ ಲೇಖನಗಳು ‘ಸಿದ್ಧಗಂಗಾ’ ಮಾಸಪತ್ರಿಕೆಯಲ್ಲಿ ಅಚ್ಚುಗೊಂಡು ವಿದ್ವತ್ತಿನ ಮೆಚ್ಚುಗೆಯನ್ನು ಪಡೆದವು. ಅವರ ಕೆಲವು ಕವಿತೆಗಳು ಬಹುಮಾನ, ಪ್ರಶಸ್ತಿಗಳನ್ನೂ ತಂದುಕೊಟ್ಟವು.
ಅಧ್ಯಾಪಕರಾಗಿ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಬೋಧಿಸುತ್ತಿದ್ದರೂ, ಕವಿತೆಯ ಸುಗಂಧವು ಅವರ ಬೋಧನೆಯಲ್ಲಿ ಬೆರೆತು ಹೋಗಿತ್ತು. ಸಿದ್ಧಗಂಗಾ ಸಂಸ್ಥೆಯ ಪ್ರೌಢಶಾಲೆಯಲ್ಲಿ ಅವರು ಜನಪ್ರಿಯ ವಿಜ್ಞಾನ ಶಿಕ್ಷಕರಾಗಿದ್ದು, ನಂತರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಶಿಸ್ತು, ಶ್ರಮ, ಅಧ್ಯಯನ ನಿಷ್ಠೆ ಇವರ ಜೀವನದ ನಿಜವಾದ ಅಳತೆಗೋಲುಗಳು. ಅಂದುಕೊಂಡುದನ್ನು ಅಚ್ಚುಕಟ್ಟಾಗಿ ನೆರವೇರಿಸುವ ಗುಣ, ಅವರು ಬರೆದ ಪ್ರತಿಯೊಂದು ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ.
ನವಪಲ್ಲವ, ಹುಡುಗಾಟ, ಪುಷ್ಪಕಾಶಿ, ಕಾವ್ಯದ್ರುಮ ಮುಂತಾದ ಕವನ ಸಂಕಲನಗಳ ಮೂಲಕ ಅವರು ಕನ್ನಡ ಸಾಹಿತ್ಯದ ಹೂವುಗಳನ್ನು ಅರಳಿಸಿದರು. ಸುಭಾಷಿತ ಸಂಗ್ರಹದ ಹಾದಿಯಲ್ಲಿ ಅವರು ಕಂಡುಕೊಂಡ ಸೊಗಸು, ಓದುಗರಿಗೂ ಸುಗಂಧವಾಗಿ ತಲುಪಿತು. “ಸೂಕ್ತಿ ಸೌರಭ”ದಲ್ಲಿ ಅವರು ಆಯ್ದುಕೊಂಡ ಪ್ರತಿಯೊಂದು ಸುಭಾಷಿತವೂ ಬದುಕಿಗೆ ದಾರಿದೀಪ. ಸಂಸ್ಕೃತ ಸಾಹಿತ್ಯದ ಪ್ರೌಢಿಮೆ ಮತ್ತು ಭಾಷಾ ಸೌಷ್ಠವಕ್ಕೆ ಅವರು ತಲೆಬಾಗಿದರು, ಅದನ್ನು ಕನ್ನಡದಲ್ಲಿ ಬಿತ್ತಿದರು.
ಮಾಗಡಿ ತಾಲ್ಲೂಕಿನ ಕುದೂರು ಗ್ರಾಮ ದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಸಂದರ್ಭವು, ಅವರ ಸಾಹಿತ್ಯ ಪ್ರಾಮುಖ್ಯತೆಯ ಮತ್ತೊಂದು ಸಾಕ್ಷಿಯಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದರೂ, ಅವರು ಪಡೆದ ಪಾಂಡಿತ್ಯವು ಮತ್ತು ಬರೆದ ಬರಹಗಳು ನಾಡಿನ ಸಾಹಿತ್ಯದಲ್ಲಿ ಒಂದು ಅಧ್ಯಾಯವಾಗಿ ಉಳಿದಿವೆ.
ಸೆಪ್ಟೆಂಬರ್ 8ರಂದು ಅವರು ಶಿವೈಕ್ಯರಾದರು. ಆದರೆ ಅವರ ಜೀವನ ಪಯಣವು ಕೇವಲ ಅಂತ್ಯಗೊಂಡಿಲ್ಲ. ಅವರ ಕವನಗಳಲ್ಲಿ, ಅನುವಾದಿತ ಸುಭಾಷಿತಗಳಲ್ಲಿ, ಹಾಸ್ಯ ಬರಹಗಳಲ್ಲಿ, ಬೋಧಿಸಿದ ಪಾಠಗಳಲ್ಲಿ, ಇಂದಿಗೂ ಅವರು ಜೀವಂತ. ಸಾಹಿತ್ಯವನ್ನು ಪ್ರೀತಿಸಿದವರು, ಸಂಸ್ಕೃತವನ್ನು ಕೊಂಡಾಡಿದವರು, ಕನ್ನಡಕ್ಕೆ ಸುವಾಸನೆ ತಂದವರು, ವಿದ್ಯಾರ್ಥಿಗಳಿಗೆ ಜ್ಞಾನ ಹಂಚಿದವರು—ಇಂತಹ ಕೆ.ಜಿ. ರಂಗಯ್ಯ(K.G. Rangayya) (ಕಾವ್ಯಸುಧಾಪ್ರಿಯ)ರವರ ಬದುಕು ಕಾವ್ಯದಂತೆಯೇ ಹರಿದು ಹೋಗಿದೆ.
ಅವರ ಹೆಸರನ್ನು ಉಚ್ಚರಿಸುವಾಗಲೇ ‘ಸೂಕ್ತಿ ಸೌರಭ’ದ ಪರಿಮಳ ಮನಸ್ಸನ್ನು ತೇವಗೊಳಿಸುತ್ತದೆ. ಕನ್ನಡ, ಸಂಸ್ಕೃತ, ಹಿಂದಿ, ಆಂಗ್ಲ ನಾಲ್ಕು ಭಾಷೆಗಳ ಪಾಂಡಿತ್ಯವುಳ್ಳವರು, ಆದರೆ ಸರಳತೆಯೇ ಅವರ ನಿಜವಾದ ಆಭರಣ. ಅವರು ಬರೆದ ಪ್ರತಿಯೊಂದು ಸಾಲು, ಕೇವಲ ಪದಗಳ ಸೇರ್ಪಡೆ ಅಲ್ಲ; ಅದು ಜೀವನದ ಪಾಠ, ಬದುಕಿನ ಸಂದೇಶ. ಅಂತಹ ಕಾವ್ಯಸುಧಾಪ್ರಿಯ ರಂಗಯ್ಯನವರು ನಮ್ಮ ಸಾಹಿತ್ಯ ಭವನದ ದೀಪಸ್ತಂಭ. ಅವರ ಪಯಣವು ನಿಂತಿದ್ದರೂ, ಅವರ ಸೂಕ್ತಿಸೌರಭವು ಸದಾ ಸುಗಂಧ ಹರಡುತ್ತಲೇ ಇರುತ್ತದೆ.
ಪ್ರಕಟಿತ ಕೃತಿಗಳು
- ನವಪಲ್ಲವ – ಕವನ ಸಂಕಲನ (2008)
- ಪುಷ್ಪಕಾಶಿ – ಕವನ ಸಂಕಲನ (2010)
- ಹುಡುಗಾಟ – ಮಕ್ಕಳ ಪದ್ಯಗಳು (2011)
- ಕಾವ್ಯದ್ರುಮ – ಕವನ ಸಂಕಲನ (2012)
- ದಿನಕ್ಕೊಂದು ಸುಭಾಷಿತ – 366 ಸಂಸ್ಕೃತ ಶ್ಲೋಕಗಳ ಭಾವಾನುವಾದ ಸಂಗ್ರಹ (2013)
- ದರ್ಪಣ – ಇಂಗ್ಲಿಷ್ ಪದ್ಯಗಳ ಭಾವಾನುವಾದ ಸಂಗ್ರಹ (2014)
- ಕಂಬನಿ – ಹಿಂದಿ ಕವಿ ಶ್ರೀ ಜಯಶಂಕರ ಪ್ರಸಾದರ ಆಂಸೂ ಲಘುಕಾವ್ಯದ ಕನ್ನಡ ಭಾವಾನುವಾದ (2014)
- ಪಂಚವಟೀ – ಹಿಂದಿ ಕವಿ ಮೈಥಿಲೀಶರಣ ಗುಪ್ತರ ಪಂಚವಟೀ ಖಂಡಕಾವ್ಯದ ಕನ್ನಡ ಭಾವಾನುವಾದ (2014)
- ರೋಚಕ ಕಥೆಗಳು – ಪೌರಾಣಿಕ, ಜಾನಪದ, ದಾಸಪರಂಪರೆಯ 9 ಕಥನ ಕವನ ಸಂಗ್ರಹ (2015)
- ಮನೋರಥ – ಕವನ ಸಂಕಲನ (2016)
- ಸೂಕ್ತಿಸುಧೆ – 105 ಸಂಸ್ಕೃತ ಶ್ಲೋಕಗಳ ಭಾವಾನುವಾದ (2021)
- ಸೂಕ್ತಿ ಸೌರಭ – (2025)
ನನ್ನ ಹಾಗೂ ಗುರುಗಳ ಒಡನಾಟ
ರಂಗಯ್ಯ ಸರ್ ಅವರ ಜೊತೆಗಿನ ನನ್ನ ಪರಿಚಯ ಬಹಳ ದೀರ್ಘಕಾಲದದ್ದಲ್ಲ. ಕೇವಲ ನಾಲ್ಕು ತಿಂಗಳುಗಳಷ್ಟೇ ಆಗಿರಬಹುದು. ಆದರೆ ಆ ಕಡಿಮೆ ಅವಧಿಯಲ್ಲೇ ಅವರು ತಮ್ಮ ಜ್ಞಾನದಲ್ಲಿ ನನ್ನನ್ನು ಮುಳುಗಿಸಿದರು. ಸಾಹಿತ್ಯದ ವಿಚಾರವಾಗಿ ಇನ್ನು ಹೆಚ್ಚು ಮಾತನಾಡಲೇ ಬೇಕೆಂದೆನಿಸಿತ್ತು. ಸಮಯ ಇಲ್ಲವಾದರೂ ಸಮಯ ಮಾಡಿಕೊಂಡು ಅವರೊಂದಿಗೆ ಹೋಗಿ ಮಾತಾಡಬೇಕು ಎಂದು ಅವರ ಗೃಹದ ಬಳಿ ಹೋಗಿದ್ದೂ ಉಂಟು.
ಸದಾ ಅಸನ್ಮುಖಿಯಾಗಿ ನಡೆಸಿದ ನಮ್ಮ ಚರ್ಚೆಗಳಲ್ಲಿ, “ತುಂಬಾ ಚೆನ್ನಾಗಿ ಬರೆಯುತ್ತೀಯ ಲಿಖಿತ್, ಹೀಗೆ ಮುಂದೆ ಸಾಗಬೇಕು” ಎಂಬ ಅವರ ಮಾತುಗಳು ನನಗೆ ನಂಬಿಕೆ ತುಂಬಿದವು. ನನ್ನ “ಭವರೋಗ ನಿವಾರಕ” ಮತ್ತು “ಕರ್ನಾಟ ಬಲ ಅಜೇಯಂ” ಪುಸ್ತಕಗಳನ್ನು ಓದಿ ತಮ್ಮ ಅಮೂಲ್ಯ ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಮನೆಯಲ್ಲಿ ಕುಳ್ಳಿರಿಸಿಕೊಂಡು ಬರಹವು ಜನರ ಹೃದಯವನ್ನು ಹೇಗೆ ಮುಟ್ಟಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದ ನೆನಪು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಕನ್ನಡ ಸಾಹಿತ್ಯ ಲೋಕಕ್ಕೆ 12 ಕೃತಿಗಳ ರೂಪದಲ್ಲಿ ಅಕ್ಷಯ ಕೊಡುಗೆಯನ್ನು ನೀಡಿದ ಕಾವ್ಯಸುಧಾ ಪ್ರಿಯರಾದ ಕೆ.ಜಿ. ರಂಗಯ್ಯ ಸರ್ ಅವರು ಶಿವೈಕ್ಯರಾದರು ಎನ್ನುವ ಸುದ್ದಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಇತ್ತೀಚೆಗಷ್ಟೇ ನನ್ನ ಪುಸ್ತಕದ ಕುರಿತು ಮಾತನಾಡಿ, ಅದರಲ್ಲಿನ ಅಕ್ಷರ ಲೋಪದ ಬಗ್ಗೆ ಮಾರ್ಗದರ್ಶನ ನೀಡಿದ ನೆನಪು ಇನ್ನೂ ಹಸಿಯಾಗಿಯೇ ಉಳಿದಿದೆ.
ಅವರೊಂದಿಗೆ ನಡೆದ ಸಂಭಾಷಣೆಗಳಲ್ಲಿ ಅನೇಕ ಅಮೂಲ್ಯ ಮಾಹಿತಿಗಳನ್ನು ತಿಳಿದುಕೊಂಡಿದ್ದೆ. “ಸೂಕ್ತಿ ಸೌರಭ” ಎಂಬ ಅನುವಾದ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮೂಲಕ ಬಿಡುಗಡೆಯಾಗಬೇಕೆಂಬ ಅವರ ಚಿಂತನೆ ಅವರ ಸಾಹಿತ್ಯಾಭಿಮಾನಕ್ಕೆ ಸಾಕ್ಷಿಯಾಗಿದೆ.
ಮತ್ತಷ್ಟು ವಿಶೇಷವೆಂದರೆ, ಅವರ ಎರಡು ಪುಸ್ತಕಗಳನ್ನು ಸ್ವಹಸ್ತಾಕ್ಷರದೊಂದಿಗೆ ನನಗೆ ನೀಡಿದರು. “ಮಿಕ್ಕ ಪುಸ್ತಕಗಳನ್ನೂ ಕೊಡುತ್ತೇನೆ” ಎಂದು ಭರವಸೆ ನೀಡಿದ ಆ ಕ್ಷಣ ನನ್ನ ಮನಸ್ಸಿಗೆ ಹತ್ತಿರವಾಗಿದೆ.
ಇನ್ನೂ ಒಂದು ಕನಸಾಗಿಯೇ ಉಳಿದುಬಿಟ್ಟದ್ದು—ಅವರ ಸಂದರ್ಶನ ಮಾಡಬೇಕೆಂಬ ನನ್ನ ಆಸೆ. ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸಬೇಕೆಂದು ಮನಸ್ಸು ಬಯಸಿತ್ತು.
ಅವರ ದೇಹ ನಮ್ಮೊಂದಿಗಿಲ್ಲದಿದ್ದರೂ, ಅವರ ಮಾತು, ಮಾರ್ಗದರ್ಶನ, ಕೃತಿಗಳು ಸದಾ ನಮ್ಮೊಂದಿಗೆ ಇರುತ್ತವೆ.ಗುರುಗಳು ಸದಾ ನನ್ನೊಂದಿಗೆ. ನೀವು ಸದಾ ನಮ್ಮೊಂದಿಗೆ.
ಕಾವ್ಯಸುಧಾ ಪ್ರಿಯ ಕೆ.ಜಿ. ರಂಗಯ್ಯ ಸರ್ ಅವರ ಸೇವೆಯನ್ನು ನೆನೆಸಿಕೊಳ್ಳುವಾಗ, ಕನ್ನಡ ಸಾಹಿತ್ಯ ಲೋಕದ ಪರವಾಗಿ ನಾನು ಕೆಲವು ವಿನಂತಿಗಳನ್ನು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳ ಮುಂದೆ ಇಡಲು ಬಯಸುತ್ತೇನೆ.
ಮೊದಲನೆಯದಾಗಿ, ಕನ್ನಡ ಸಾಹಿತ್ಯ ಸೇವೆಯನ್ನು ಅಳಿಸಲಾಗದ ಕೊಡುಗೆಯಾಗಿ ನೀಡಿದ ರಂಗಯ್ಯ ಸರ್ ಅವರಿಗೆ, ಕರ್ನಾಟಕ ಸರ್ಕಾರವು ಪ್ರತಿಷ್ಠಿತ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕು. ಇದು ಕೇವಲ ಅವರಿಗಲ್ಲ, ಸಾಹಿತ್ಯವನ್ನು ಪ್ರೀತಿಸುವ ಪ್ರತಿಯೊಬ್ಬ ಕನ್ನಡಿಗನಿಗೂ ನಿಜವಾದ ಗೌರವವಾಗುತ್ತದೆ.
ಎರಡನೆಯದಾಗಿ, ಅವರ “ಸೂಕ್ತಿ ಸೌರಭ” ಚೌಪದಿಗಳು ಗಂಭೀರ ಜ್ಞಾನ, ನೈತಿಕತೆ ಹಾಗೂ ಜೀವನ ಮಾರ್ಗದರ್ಶಕ ತತ್ವಗಳನ್ನು ಒಳಗೊಂಡಿವೆ. ಇಂತಹ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಇದರಿಂದ ಮುಂದಿನ ತಲೆಮಾರಿನ ವಿದ್ಯಾರ್ಥಿಗಳು ಅವರ ವಿಚಾರಧಾರೆಗಳನ್ನು ಅರ್ಥೈಸಿಕೊಂಡು ಜೀವನದ ಹಾದಿಯಲ್ಲಿ ಬೆಳಕನ್ನು ಕಾಣುವಂತಾಗುತ್ತದೆ.
ರಂಗಯ್ಯ(K.G. Rangayya) ಸರ್ ಅವರ ಸಾಹಿತ್ಯಸೇವೆಯ ನಿಜವಾದ ಕೃತಜ್ಞತೆ ಎಂದರೆ ಅವರ ಕೃತಿಗಳು ಜನಮನದಲ್ಲಿ ಶಾಶ್ವತವಾಗಿರಬೇಕು. ಅದಕ್ಕಾಗಿ ಈ ಎರಡು ಮನವಿಗಳನ್ನು ನಾನು ಹೃತ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.
~ ಲಿಖಿತ್ ಹೊನ್ನಾಪುರ
