ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಹಿನ್ನೆಲೆ ರಾಷ್ಟೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ, ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಆಗಸ್ಟ್ 26 ರಂದು ಎಸ್ ಐ ಟಿ ಅಧಿಕಾರಿಗಳು ಬುರುಡೆ ಶೋಧ ಪ್ರಕರಣದ ಮುಂದುವರಿದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ ಒಂದು ಬಂದೂಕು ಹಾಗೂ ಎರಡು ತಲವಾರು ವಶಕ್ಕೆ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವ ಹಕ್ಕುಗಳ ಆಯೋಗಕ್ಕೆ ತಿಮರೋಡಿ ದೂರು!
ಇತ್ತ ಪೊಲೀಸರು ಅಧಿಕಾರ ದುರುಪಯೋಗ ಪಡಿಸಿಕೊಂಡು ನನ್ನ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ ಎಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.
‘ ನನ್ನ ವಿರುದ್ಧ ಬ್ರಹ್ಮಾವರ, ಕಾರ್ಕಳ, ಬೆಳ್ತಂಗಡಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದೆ. ಸುಳ್ಳು ಆರೋಪ ಹೊರಿಸಿ ರಾಜಕೀಯ ದುರುದ್ದೇಶದಿಂದ ನನ್ನ ಧ್ವನಿ ಅಡಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ನನಗೆ ನನ್ನ ಕುಟುಂಬಕ್ಕೆ ಹಾಗೂ ಸಂಘಟನೆಯ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಿ ಹೋರಾಟಗಾರರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಬೇಕು’ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ತಿಮರೋಡಿ ದೂರು ಸಲ್ಲಿಸಿದ್ದಾರೆ.
