Mahabharata Story: ಹದಿನೆಂಟು ದಿನಗಳ ಸುದೀರ್ಘ ಕುರುಕ್ಷೇತ್ರದ ಯುದ್(Mahabharata Story) ಮುಗಿದಿದೆ. ಕೌರವರೆಲ್ಲರೂ ರಣಾಂಗನದಲ್ಲಿ ಮಡಿದು ಒಬ್ಬರೂ ಇಲ್ಲವಾಗಿ, ಪಾಂಡವರು ಭರತ ಖಂಡದ ಸಾಮ್ರಾಟರಾಗಿದ್ದಾರೆ. ಯುಧಿಷ್ಠಿರ ಚಕ್ರವರ್ತಿಯಾಗಿ ರಾಜ್ಯಭಾರ ನಡೆಸಿದ್ದಾನೆ. ಯುಧಿಷ್ಠಿರನ ಇನ್ನೊಂದು ಹೆಸರೇ ಧರ್ಮರಾಯ.
ಧರ್ಮಕ್ಕೆ ಅನ್ವರ್ಥಕನಾದ್ದರಿಂದ ಯುಧಿಷ್ಠಿರನಿಗೆ ಧರ್ಮರಾಯ ಎಂಬ ಹೆಸರು ಬಂತು. ಧರ್ಮ ದೇವತೆಯಾದ ಸಾಕ್ಷಾತ್ ಯಮನ ಅವತಾರವೇ ಯುಧಿಷ್ಠಿರ. ಅಂತಹ ಧರ್ಮರಾಯನಂತಹ ಧರ್ಮರಾಯನೇ ಒಂದೂ ಸುಳ್ಳನ್ನಾಡದ ಸತ್ಯವಂತನೇ ಕೆಲವು ಬಾರಿ ತಪ್ಪು ಮಾಡಿ ಅಪರಾಧಿಯಾಗಿ ನಿಲ್ಲುತ್ತಾನೆ. ಆದರೂ ತನ್ನ ತಪ್ಪುಗಳನ್ನು ಅರಿತು ಸದಾ ಧರ್ಮದ ದಾರಿಯಲ್ಲಿ ನಡೆಯುವುದರಿಂದಲೇ ಅವನು ನಮ್ಮ ನಡುವೆ ಇಂದಿಗೂ ಪ್ರಸ್ತುತ. ಧರ್ಮರಾಯ ತಪ್ಪಾಗಿ ನಡೆದು ಭೀಮನಿಂದ ಪಾಠ ಕಲಿತ ಒಂದು ಘಟನೆ ಹೀಗಿದೆ.
(Mahabharata Story) ಯುಧಿಷ್ಠಿರ ರಾಜ ದರ್ಬಾರಿನಲ್ಲಿ ರಾಜಾಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಆಸ್ಥಾನದ ಪ್ರಮುಖರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾನೆ. ಆಗ ಅಲ್ಲಿಗೆ ಒಬ್ಬ ಬ್ರಹ್ಮಚಾರಿ ಬಂದು, “ಮಹಾರಾಜ, ನಾನು ಒಂದು ಯಾಗವನ್ನು ಮಾಡುತ್ತಿದ್ದೇನೆ. ಆದರೆ ಯಾಗಕ್ಕೆ ಬೇಕಾದ ಅಗತ್ಯ ವಸ್ತುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ನನ್ನ ಬಳಿ ಸಾಮರ್ಥ್ಯವಿಲ್ಲ. ಆದ್ದರಿಂದ ತಾವು ದಯಮಾಡಿ ನನಗೆ ಸಹಾಯ ಮಾಡಿ” ಎಂದು ಕೇಳಿಕೊಳ್ಳುತ್ತಾನೆ. ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಯುಧಿಷ್ಠಿರ, ಬ್ರಹ್ಮಚಾರಿಯನ್ನು ಗಣನೆಗೇ ತೆಗೆದುಕೊಳ್ಳದೆ, “ನಾನು ಸದ್ಯ ಕಾರ್ಯನಿರತನಾಗಿದ್ದೇನೆ. ಆದ್ದರಿಂದ ನಾಳೆ ಬಾ, ನಿನಗೆ ಖಂಡಿತ ಸಹಾಯ ಮಾಡುತ್ತೇನೆ” ಎಂದು ಬ್ರಹ್ಮಚಾರಿಗೆ ಹೇಳಿ ಕಳುಹಿಸಿ ಬಿಡುತ್ತಾನೆ.
ಬ್ರಹ್ಮಚಾರಿಯು ನಿರಾಸೆಯಿಂದ ನೇರವಾಗಿ ಭೀಮನಿದ್ದಲಿಗೆ ಬಂದು, ನಡೆದಿದ್ದೆಲ್ಲವನ್ನೂ ಹೇಳಿದ ಮೇಲೆ, ಭೀಮನು ಬ್ರಹ್ಮಚಾರಿಗೆ ಅಗತ್ಯವಿದ್ದ ಸಹಾಯ ಮಾಡಿ ಆತನನ್ನು ಬೀಳ್ಕೊಡುತ್ತಾನೆ. ಕೂಡಲೇ ಭೀಮನು ಊರಿನ ಮುಖ್ಯದ್ವಾರದ ಬಳಿ ಇರುವ ಸ್ಥಳಕ್ಕೆ ಬಂದು ಘಂಟಾನಾದ ಮಾಡಿ ಜಯಭೇರಿಯನ್ನು ಬಾರಿಸುತ್ತಾನೆ. ಜಯಭೇರಿಯ ಶಬ್ದ, ವಾದ್ಯ ಘೋಷಗಳ ಸದ್ದು ಕೇಳಿದ ಪುರಜನರೆಲ್ಲ ಆ ಸ್ಥಳಕ್ಕೆ ಆಗಮಿಸಿ, “ಏನೋ ವಿಶೇಷವಾದ ಘಟನೆ ಘಟಿಸಿರಬೇಕು, ಆದ್ದರಿಂದಲೇ ಜಯಭೇರಿಯನ್ನು ಮೊಳಗಿಸಿದ್ದಾರೆ” ಎಂದು ಕುತೂಹಲದಿಂದ ನೋಡುತ್ತಿರುತ್ತಾರೆ. ಅದು ತಿಳಿದ ಧರ್ಮರಾಯನು ಸಹ ಊರ ಮುಖ್ಯದ್ವಾರದ ಬಳಿ ಬರುತ್ತಾನೆ. ಊರ ಪಂಡಿತನೊಬ್ಬ ಭೀಮನಿಗೆ ಕೇಳುತ್ತಾನೆ, “ಯುವರಾಜ, ಯಾವ ವಿಶೇಷ ಘಟನೆ ಬಗ್ಗೆ ತಿಳಿಸುವುದಕ್ಕೆ ಈ ಕರೆ ಘಂಟೆಯನ್ನು ಬಾರಿಸಿದ್ದೀರೆಂದು ತಿಳಿಯಬಹುದೇ?”
ಆಗ ಭೀಮ ಹೇಳುತ್ತಾನೆ, “ಈ ರಾಜ್ಯದ ಸಾಮ್ರಾಟ್ ಅರ್ಥಾತ್ ನನ್ನ ಅಣ್ಣ,ಧರ್ಮರಾಜ ಕಾಲವನ್ನೇ ಮೀರಿದ ವ್ಯಕ್ತಿಯಾಗಿದ್ದಾನೆ, ಕಾಲವನ್ನೂ, ಸಾವನ್ನೂ ಗೆದ್ದಿದ್ದಾನೆ ಎಂದು ನಿಮಗೆಲ್ಲ ತಿಳಿಸುವುದಕ್ಕೆ ಈ ತುರ್ತು ಕರೆ ಕೊಟ್ಟಿರುವೆನು.
ಇದ ಕೇಳಿ ಆಶ್ಚರ್ಯಗೊಂಡ ಧರ್ಮರಾಯ ಭೀಮನಿಗೆ ಕೇಳುತ್ತಾನೆ: “ಭೀಮಾ, ನೀನು ಏನು ಹೇಳುತ್ತಿದ್ದೀಯೆ ಎನ್ನುವುದರ ಪರಿವು ನಿನಗಿದೆಯೇ? ಕಾಲವನ್ನು, ಮೃತ್ಯುವನ್ನೂ ಯಾರೂ ಜಯಿಸಲಿಕ್ಕೆ ಸಾಧ್ಯವಿಲ್ಲ.” ಇದು ಸರಿಯಷ್ಟೇ!.
ಆಗ ಭೀಮ ಹೇಳುತ್ತಾನೆ: “ಅಣ್ಣ, ಬ್ರಹ್ಮಚಾರಿಯೊಬ್ಬ ಬಂದು ಭಿಕ್ಷೆ ಕೇಳಿದರೆ, ನಾಳೆ ಬಾ ಕೊಡುತ್ತೇನೆ ಎಂದು ಹೇಳಿರುವೆ ಅಲ್ಲವೇ? ಇದರ ಅರ್ಥ : ಇವತ್ತು ಎನ್ನುವುದನ್ನು ನೀನು ಜಯಿಸಿರುವೆ. ನಾಳೆ ಏನು ನಡೆಯುವುದು ಎಂಬುದನ್ನೂ ಕಾಲಜ್ಞಾನದಿಂದ ಅರಿತಿರುವೆ, ಆದ್ದರಿಂದಲೇ ಅಲ್ಲವೇ ನೀನು ಆತನಿಗೆ ನಾಳೆ ಬಾ ಎಂದು ಹೇಳಿದ್ದು? ನಾಳೆಯವರೆಗೂ ನೀನು ಜೀವಂತವಾಗಿಯೇ ಇರುವೆ. ನಾಳೆ ಬ್ರಹ್ಮಚಾರಿಗೆ ಭಿಕ್ಷೆ ಖಂಡಿತವಾಗಿ ಕೊಡುವೆ ಎಂದ ಮೇಲೆ, ಒಂದು ವೇಳೆ ಇಂದು ಆ ಮೃತ್ಯು ನಿನ್ನ ಬಳಿ ಬಂದರೂ ನೀನದನ್ನು ಜಯಿಸುವೆ ಎಂದೇ ಅರ್ಥವಲ್ಲವೇ? ಅದಕ್ಕೇ ರಾಜ್ಯದ ಜನತೆಗೂ ನಿನ್ನ ಈ ವಿಶಿಷ್ಠ ಶಕ್ತಿಯ ಬಗ್ಗೆ ತಿಳಿಯಲಿ ಎಂದು ನನ್ನ ಪ್ರಯತ್ನ.”
ಧರ್ಮರಾಯನಿಗೆ ತನ್ನ ತಪ್ಪಿನ ಅರಿವಾಗಿ, ನಾಳೆ ಎಂಬುದಿಲ್ಲ, ವರ್ತಮಾನದಲ್ಲಿ ಜೀವಿಸಬೇಕು ಎಂದು ಅರ್ಥವಾಗಿ ತಾನು ಬ್ರಹ್ಮಚಾರಿಯೊಂದಿಗೆ ನಡೆದುಕೊಂಡ ಕುರಿತು ವಿಷಾದಿಸುತ್ತಾನೆ. ತನ್ನ ತಪ್ಪನ್ನು ಅರಿಕೆ ಮಾಡಿಸಿಕೊಟ್ಟ ಭೀಮನಿಗೆ ಕ್ಷಮೆ ಕೋರಿ ಕೃತಜ್ಞತೆ ತಿಳಿಸುತ್ತಾನೆ.ಕಾಲವನ್ನು ಮೀರಿದ ಸಾವನ್ನು ಗೆದ್ದ ವ್ಯಕ್ತಿ ಈ ಭೂಮಿಯ ಮೇಲೆ ಇರಲಾರರು. ನಮ್ಮ ಸಮಯ ಬಂದಾಗ ಇಲ್ಲಿಂದ ನಡೆದು ಹೋಗುತ್ತಿರಬೇಕು ಅಷ್ಟೇ! ನಾಳೆ ಮಾಡುವೆ ಎಂದು ಯಾವುದನ್ನೂ ಮುಂದೂಡದೆ ಆಯಾ ಕಾರ್ಯವನ್ನು ಆಗಲೇ ಮಾಡಬೇಕು ಎನ್ನುವುದು ಈ ಕಥೆಯ ಆಶಯ(Mahabharata Story)
