ಭಾಗ 1: ಅವನ ದೃಷ್ಟಿಯಿಂದ
Love Story: ಕನ್ನಡಿಯ ಮುಂದೆ ನಿಂತರೂ ಕಾಣಲಿಲ್ಲ ನಾ ನನಗೆ, ಕಂಡದ್ದು ನೀನೆ. ಅದು ಕೇವಲ ಮುಖವಲ್ಲ ಅದು ನೆನಪಿನ ಶಿಲ್ಪ. ನನ್ನೊಳಗೆ ಬದುಕುತ್ತಿದ್ದ ನೀನು, ನನ್ನ ಕಣ್ಣಿನೊಳಗೆ ನೆಲೆಸಿದ ಕನಸು.
ಆ ದಿನದ ಬೆಳಿಗ್ಗೆ ನೆನಪಿದೆ ಮಳೆಗಾಲದ ಸೂರ್ಯ, ಕಿಟಕಿಯ ಬಾಗಿಲು ತಡಕುತ್ತಿದ್ದ ಬೆಳಕು. ಕಾಲೇಜಿನ ಆಂಗಣದಲ್ಲಿ ಮಳೆಯ ಹನಿ ಬಿದ್ದು ನದಿಯಂತೆ ಹರಿಯುತ್ತಿತ್ತು. ನೀನು ಬಿಳಿ ದೂಪಟ್ಟೆಯೊಳಗೆ ನಿಂತು ನಗುತಿದ್ದೆ. ಆ ನಗು ನನ್ನ ಪ್ರಪಂಚದ ಮೊದಲ ಬೆಳಕು.
ಪ್ರೇಮವು ಅಂದರೆ ಕೇವಲ ಇಬ್ಬರು ಕಣ್ಣುಗಳು ಪರಸ್ಪರ ನೋಡುವ ಕ್ಷಣವಲ್ಲ. ಅದು ಶಬ್ದದೊಳಗೆ ಮೌನವನ್ನು ಹುಡುಕುವ ಪ್ರಯಾಣ. ನೀನು ಮಾತಾಡಿದ ಪ್ರತೀ ಪದದ ಹಿಂದೆಯೂ ಒಂದು ಮೌನ ಇತ್ತು. ಆ ಮೌನವೇ ನನ್ನ ಮನೆ.
ನಿನ್ನ ಜೊತೆಯಲ್ಲಿದ್ದ ಪ್ರತೀ ಕ್ಷಣದ ನಂತರವೂ, ನಾನು ನಿನ್ನನ್ನು ಹುಡುಕುತ್ತಿದ್ದೆ. ನಿನ್ನ ನಗುವಿನ ಹಿಂದೆ ಇರುವ ನೋವನ್ನು ಕಾಣುತ್ತಿದ್ದೆ. ನೀನು ಪ್ರತಿ ದಿನ ಹೇಳುತ್ತಿದ್ದೆ “ನನ್ನೊಳಗೆ ಎಷ್ಟು ದೀಪಗಳು ಬೆಳಗುತ್ತಿವೆ ಗೊತ್ತಾ? ಆದರೆ ಅವುಗಳಲ್ಲಿ ಒಂದೇ ನಿನ್ನ ಹೆಸರಿನದು.”(Love Story) ಆ ಮಾತು ನನ್ನ ಹೃದಯದ ಅಕ್ಷರವಾಗಿಬಿಟ್ಟಿತು.
ನಾವು ಪ್ರೀತಿಯನ್ನು ಹೇಳಿಕೊಳ್ಳಲಿಲ್ಲ. ಆದರೆ ಆ ಹೇಳದ ಪ್ರೀತಿ ನದಿಯಂತೆ ಹರಿಯುತ್ತಿತ್ತು. ನಿನ್ನ ಕಣ್ಣಿನೊಳಗೆ ನೀರು ತುಂಬಿದಾಗ, ನನ್ನ ಹೃದಯ ಬಿಸಿಯಾದಂತೆ ತೋರಿತ್ತು.ನಿನ್ನ ನಗು ನನ್ನ ನಾಡಿಯ ನಾದವಾಗಿತ್ತು. ಮೂರು ವರ್ಷಗಳ ಕಾಲೇಜು, ಮೂವರು ಜನರ ಪ್ರಪಂಚ ನಾನು, ನೀನು, ಮತ್ತು ಸಮಯ. ಸಮಯವೇ ನಮ್ಮಲ್ಲಿ ಮಧ್ಯೆ ಬಂದು ಕುಳಿತ ಮೂರನೇ ವ್ಯಕ್ತಿ.(Love Story)
ಭಾಗ 2: ಅವಳ ದೃಷ್ಟಿಯಿಂದ
ನನ್ನೊಳಗೆ ಪ್ರೇಮ ಮೊಳಕೆಯೊಡೆದ ದಿನ, ಕಿಟಕಿಯಾಚೆ ಮಳೆ ಬೀಳುತ್ತಿತ್ತು. ಅವನ ಕಣ್ಣುಗಳಲ್ಲಿ ಮೌನದ ಕವನ.
ಅವನ ನೋಟದೊಳಗೆ ಒಂದು ವಿಶ್ವವಿತ್ತು ಅದು ನಾ ಅರಿತುಕೊಳ್ಳದ ಭಾವದ ನದಿ.
ಅವನ ಮಾತು ಕಡಿಮೆ, ಆದರೆ ಕಣ್ಣುಗಳಲ್ಲಿ ಸಾವಿರ ಕಥೆಗಳು. ಅವನು ಬಣ್ಣ ಬಣ್ಣದ ಆಕಾಶದ ಕಡೆಯಿಂದ ಬಂದ ಗಾಳಿಯಂತಿದ್ದ ಸಿಹಿ, ಮೃದು, ಆದರೆ ಹಿಡಿಯಲು ಅಸಾಧ್ಯ.
ಒಮ್ಮೆ ಅವನು ಹೇಳಿದ್ದ: “ನೀನು ನನಗೆ ಹೆಸರಲ್ಲ, ನೀನು ನನಗೆ ಹಾದಿ.” ಆ ಮಾತು ನನ್ನ ಮನದೊಳಗೆ ಚಿಹ್ನೆಯಾದಂತೆ ಉಳಿಯಿತು. ನಮ್ಮ ಪ್ರೀತಿ ಹೂಗಳಂತೆ ಅರಳಲಿಲ್ಲ, ಅದು ಬೆಳಕಿನಂತೆ ಚಿಮ್ಮಿತು — ಕ್ಷಣ ಮಾತ್ರ, ಆದರೆ ಅನಂತವಾಗಿ.
ನನ್ನೊಳಗೆ ಅವನು ನೆಲೆಸಿದಾಗ, ನಾನು ನನ್ನನ್ನೇ ಕಳೆದುಕೊಂಡೆ. ಕನ್ನಡಿಯ ಮುಂದೆ ನಿಂತಾಗ ನನ್ನ ಮುಖ ಕಾಣಿಸಲಿಲ್ಲ ಕಂಡದ್ದು ಅವನ ಕಣ್ಣು. ಅದು ಪ್ರೇಮವಲ್ಲವೆ? ಒಂದು ಅಸ್ತಿತ್ವದ ಕರಗುವಿಕೆ? ಒಂದು ದಿನ ಅವನು ದೂರ ಹೋದ. ಕಾರಣವಿಲ್ಲದ ದೂರ. ಅವನ ಕಾಗದದ ಚೀಟಿ ಮಾತ್ರ ಬಂತು — “ಕಾಲವು ನನ್ನ ಕೈಯಿಂದ ತಪ್ಪಿಹೋಯ್ತು, ಆದರೆ ನೀನು ನನ್ನೊಳಗೇ ಉಳಿದೆಯೆ.”
ನಾನು ನಗಿದೆ. ನಗುವಿನೊಳಗೆ ಬಿರುಕು ಇತ್ತು. ಆದರೆ ಆ ಬಿರುಕುಗಳೊಳಗೆ ಬೆಳಕು ಹೊಳೆಯುತ್ತಿತ್ತು.
ಭಾಗ 3: ಅವನ ದೃಷ್ಟಿಯಿಂದ
ಹತ್ತಾರು ವರ್ಷಗಳ ನಂತರವೂ ಆ ಕನ್ನಡಿ ಎದುರು ನಿಂತಾಗ, ನನ್ನೊಳಗಿನ ಪ್ರತಿಬಿಂಬ ಇನ್ನೂ ನೀನೇ.
ಜೀವನ ನನಗೆ ಹಲವು ನೋಟಗಳು, ಹಾದಿಗಳು ಕೊಟ್ಟಿದೆ. ಆದರೆ ಹಾದಿಯ ಮೊದಲ ಹೆಜ್ಜೆ ನಿನ್ನ ಹೆಸರಿನಲ್ಲೇ ಬರೆದಿತ್ತು.
ಪ್ರೇಮ ಅಂದರೆ ಒಟ್ಟಿಗೆ ಇರುವುದಲ್ಲ, ಅದು ಅಂತರದಲ್ಲೂ ಆತ್ಮದ ಸಂಗಮ. ನಿನ್ನಿಂದ ದೂರವಾಗಿದ್ದರೂ, ನಾನು ನಿನ್ನೊಳಗೆ ಬದುಕುತ್ತಿದ್ದೆ. ನಿನ್ನ ನೆನಪು ನನ್ನ ಉಸಿರಿನ ಭಾಗವಾಗಿದೆ.
ಒಮ್ಮೆ, ಹಳೆಯ ಪುಸ್ತಕದೊಳಗೆ ನಿನ್ನ ಚೀಟಿ ಸಿಕ್ಕಿತು. ಅದರಲ್ಲಿ ನೀನು ಬರೆದಿದ್ದೆ. “ನಿನ್ನ ಪ್ರೀತಿ ನನ್ನೊಳಗೆ ಉಳಿಯಲಿ, ಅದು ಇರಲಿ ನನ್ನ ಬದುಕಿನ ಅಕ್ಷರ. ಆ ಅಕ್ಷರಗಳು ಮಸಕಾದ ಕಾಗದದ ಮೇಲೆ ಜೀವಂತವಾಗಿದ್ದವು.
ನಾನು ಆ ಅಕ್ಷರಗಳನ್ನೆ ಓದಿದಾಗ, ನನ್ನೊಳಗೆ ಮಳೆ ಶುರುವಾಯಿತು.
ಅದು ಕಣ್ಣೀರು ಅಲ್ಲ — ಅದು ನೆನಪಿನ ಹನಿ.
ಭಾಗ 4: ಅವಳ ದೃಷ್ಟಿಯಿಂದ
ಅವನಿಂದ ದೂರವಾದ ನಂತರವೂ, ನನ್ನ ಹೃದಯ ಅವನ ಹೆಸರನ್ನು ಮಂತ್ರದಂತೆ ಜಪಿಸುತ್ತಿತ್ತು.
ಕಾಲ ಬದಲಾಗಿದೆ, ಜೀವನ ಬದಲಾಗಿದೆ, ಆದರೆ ಪ್ರೇಮವು — ಅದು ಬದಲಾಗದ ದೀಪ.
ಒಮ್ಮೆ ಕನಸಿನಲ್ಲಿ ಅವನನ್ನು ಕಂಡೆ.
ಅವನು ಕನ್ನಡಿಯ ಮುಂದೆ ನಿಂತಿದ್ದ.
ಅವನ ಕಣ್ಣಿನೊಳಗೆ ನನ್ನ ಮುಖ.
ಅವನು ನಗುತ್ತಿದ್ದ.
ನಾನು ಕೇಳಿದೆ — “ಇನ್ನೂ ನನ್ನನ್ನು ಹುಡುಕುತ್ತೀಯಾ?”
ಅವನು ಹೇಳಿದ — “ಹುಡುಕುವುದಿಲ್ಲ, ಏಕೆಂದರೆ ನೀನು ನನ್ನೊಳಗೇ ಇದ್ದೀಯ.”ಕನಸು ಮುಗಿಯಿತು. ಆದರೆ ಆ ಮಾತು ನನಗೆ ಶಾಶ್ವತವಾಗಿ ಉಳಿಯಿತು. ಅಂದು ಬೆಳಿಗ್ಗೆ ಕನ್ನಡಿಯ ಮುಂದೆ ನಿಂತಾಗ ನಾನು ನಗಿದೆ. ಅಲ್ಲಿ ನನ್ನ ಮುಖವೂ ಇತ್ತು, ಅವನ ಕಣ್ಣಿನ ನೋಟವೂ ಇತ್ತು. ಅದು ಪ್ರೇಮದ ಪರಿಪೂರ್ಣ ಪ್ರತಿಬಿಂಬ.
ಅವರ ಆತ್ಮಗಳ ಮೌನ
ಕಾಲದ ನದಿ ಹರಿಯುತ್ತಿತ್ತು. ಒಂದು ದಿನ, ಹಳೆ ಕಾಲೇಜು ಆವರಣದ ಪಕ್ಕದಲ್ಲಿರುವ ಮರವೊಂದರ ಕೆಳಗೆ ಇಬ್ಬರ ಆತ್ಮಗಳು ಭೇಟಿಯಾದವು — ಕನಸಿನೊಳಗೆ, ನೆನಪಿನ ಅಂತರಾಳದಲ್ಲಿ.
ಅವನು ಕೇಳಿದ: “ನೀನು ಇನ್ನೂ ನಿನ್ನನ್ನು ಹುಡುಕುತ್ತಿದ್ದೀಯಾ?”
ಅವಳು ನಗುತಾಳೆ: “ಇಲ್ಲ, ನಿನ್ನಲ್ಲಿ ನನ್ನನ್ನು ಕಂಡುಕೊಂಡೆ.”
ಮಳೆ ಬಿತ್ತು. ಹೂಗಳು ಅರಳಿದವು. ಕನ್ನಡಿ ಒಡೆದಿತು, ಆದರೆ ಅದರ ತುಂಡುಗಳಲ್ಲಿ ಇಬ್ಬರ ಮುಖಗಳು ಪ್ರತಿಫಲಿಸಿದವು. ಅದು ಪ್ರೇಮದ ಅಂತ್ಯವಲ್ಲ. ಅದು ಪ್ರೇಮದ ಶಾಶ್ವತ ರೂಪ. ಭಾವದಿಂದ, ಮೌನದಿಂದ, ಭರವಸೆಯಿಂದ ತುಂಬಿದ.
ಪ್ರೇಮ ಎಂದರೆ ಎರಡು ಜೀವಗಳ ಸಂಗಮವಲ್ಲ; ಅದು ಎರಡು ಆತ್ಮಗಳ ನಡುವೆ ನಡೆಯುವ ನಿಶ್ಶಬ್ದ ಸಂಭಾಷಣೆ.
ನೀನು ನನ್ನೊಳಗೆ, ನಾನು ನಿನ್ನೊಳಗೆ — ಇದು ಪ್ರೇಮದ ಪರಿಪೂರ್ಣ ರೂಪ.
ಕನ್ನಡಿಯ ಮುಂದೆ ನಿಂತರೂ ಕಾಣಲಿಲ್ಲ ನಾ ನನಗೆ, ಕಂಡದ್ದು ನೀನೆ — ಏಕೆಂದರೆ,
ಅಷ್ಟರಮಟ್ಟಿಗೆ ಆವರಿಸಿದ್ದೆ ನೀ ನನ್ನ, ಓ ನನ್ನ ಹೆಣ್ಣೆ.
ಕಥೆ ಅಂತ್ಯವಾದರೂ ಪ್ರೇಮದ ನಾದ ಮುಗಿಯುವುದಿಲ್ಲ. ಅದು ಜೀವದೊಳಗೆ ಉಳಿದ ಮೌನ ಸಂಗೀತ.
~ಲಿಖಿತ್ ಹೊನ್ನಾಪುರ
